ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: 9 ನಾಮಪತ್ರ ಸಲ್ಲಿಕೆ

ಗಾಯತ್ರಿ ಸಿದ್ದೇಶ್ವರ, ಡಾ.ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಕೆ
Published 16 ಏಪ್ರಿಲ್ 2024, 5:30 IST
Last Updated 16 ಏಪ್ರಿಲ್ 2024, 5:30 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಎರಡನೇ ದಿನವಾದ ಏ.15ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಎಸ್. ಗಾಯಿತ್ರಿ, ಬಿಎಸ್‌ಪಿಯಿಂದ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿ ಪಕ್ಷದಿಂದ ಕೆ.ಎಚ್.ರುದ್ರೇಶ್, ಪಕ್ಷೇತರರಾಗಿ ಸುಭಾನ್ ಖಾನ್, ಟಿ.ಜಬೀನ್ ತಾಜ್, ಸಿ.ಎಂ. ಮಂಜುನಾಥಸ್ವಾಮಿ, ಕೆ.ಜಿ.ಅಜ್ಜಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ. ಏ.12ರಂದು 5 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈವರೆಗೆ 12 ಅಭ್ಯರ್ಥಿಗಳಿಂದ 15 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪತಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜೊತೆ ಲಿಂಗೇಶ್ವರ, ಗುರು ಬಕ್ಕೇಶ್ವರ್ ಹಾಗೂ ಆನೆಕೊಂಡದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ್, ಎ.ನಾಗರಾಜ್, ಅಯೂಬ್ ಪೈಲ್ವಾನ್, ಶೇಖರಪ್ಪ, ನಾಗಭೂಷಣ್ ಇದ್ದರು.

ಆ ಬಳಿಕ ಬಿಜೆಪಿ ಅಭ್ಯರ್ಥಿ ಜಿ.ಎಸ್. ಗಾಯತ್ರಿ ಅವರು ಪತಿ ಜಿ.ಎಂ. ಸಿದ್ದೇಶ್ವರ ಹಾಗೂ ಪುತ್ರಿ ಜಿ.ಎಸ್.ಅಶ್ವಿನಿ, ಪುತ್ರ ಜಿ.ಎಸ್. ಅನಿತ್‌ಕುಮಾರ್ ಅವರ ಜೊತೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ, ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಂಸದರ ಸಹೋದರ ಜಿ.ಎಂ.ಲಿಂಗರಾಜು, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್ ಇದ್ದರು.

‘18ರಂದು ಕಾಂಗ್ರೆಸ್‌ನಿಂದ ಮೆರವಣಿಗೆ

ಏ.18ರಂದು ಕಾಂಗ್ರೆಸ್‌ನಿಂದ ರ‍್ಯಾಲಿ ನಡೆಯಲಿದ್ದು, ಹಳೇಪೇಟೆ ದುರ್ಗಾಂಬಿಕಾ ಹಾಗೂ ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು ಪಿ.ಬಿ.ರಸ್ತೆಯಲ್ಲಿ ಒಟ್ಟುಗೂಡಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

19ರಂದು ಬಿಜೆಪಿ ಮೆರವಣಿಗೆ

ಏ.19ರಂದು ಬಿಜೆಪಿಯಿಂದ ಮತ್ತೊಂದು ಸುತ್ತಿನ ನಾಮಪತ್ರ ಸಲ್ಲಿಸಲಿದ್ದು, ಅಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಬೈರತಿ ಬಸವರಾಜ, ಮುರುಗೇಶ್ ನಿರಾಣಿ, ಮಾಧುಸ್ವಾಮಿ, ಶಾಸಕ ಜನಾರ್ದನ ರೆಡ್ಡಿ ಚಿತ್ರ ನಟಿ ಶ್ರುತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿ ಹೊರಬಂದರು. ಪತಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿ ಹೊರಬಂದರು. ಪತಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

‘ಜನರ ಸ್ಪಂದನೆ ಚೆನ್ನಾಗಿದೆ’

‘ಜನರ ಸ್ಪಂದನೆ ಉತ್ತಮವಾಗಿದ್ದು ಮಗಳು ತಾಯಿ ಅಕ್ಕ ತಂಗಿಯಂತೆ ನನ್ನನ್ನು ಕಾಣುತ್ತಿದ್ದಾರೆ. ನಗುಮುಖದಿಂದ ಸ್ವಾಗತಿಸುತ್ತಿದ್ದು ಗೆಲ್ಲುವುದರಲ್ಲಿ ಸಂದೇಹವಿಲ್ಲ. 30 ವರ್ಷಗಳಿಂದ ತೆರೆಯ ಹಿಂದೆ ಕೆಲಸ ನಿರ್ವಹಿಸುತ್ತಿದ್ದೆ. ಈಗ ತೆರೆಯ ಮುಂದೆ ಬಂದಿದ್ದೇನೆ. ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂಬ ನಂಬಿಕೆ ಜನರಲ್ಲಿದೆ’ ಎಂದು ಗಾಯತ್ರಿ ಸಿದ್ದೇಶ್ವರ ಹೇಳಿದರು.

‘ಶಿಸ್ತಿನ ಪಕ್ಷ ದುಡ್ಡಿನ ಪಕ್ಷವಾಗಿದೆ’

ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಾದ ಸೋಗಿ ಶಾಂತಕುಮಾರ್ ಎಲ್.ಡಿ.ಗೋಣೆಪ್ಪ ಸೌಮ್ಯ ನರೇಂದ್ರಕುಮಾರ್ ಜಯಮ್ಮ ಗೋಪಿನಾಯ್ಕ ಅವರು ಬಿಜೆಪಿಯಿಂದ ಬೇಸತ್ತು ಈಗಾಗಲೇ ಕಾಂಗ್ರೆಸ್ ಸೇರಿದ್ದು ಬಂದವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಶಿಸ್ತಿನ ಪಕ್ಷ ಈಗ ದುಡ್ಡಿನ ಪಕ್ಷವಾಗಿದೆ. ಆ ದೃಷ್ಟಿಕೋನದಲ್ಲಿ ಒಳ್ಳೆಯವರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ‘ಸದಸ್ಯರು ಹೋಗುತ್ತಾರೆ. ಮತದಾರರು ಹೋಗುವುದಿಲ್ಲ’ ‘ಮಹಾನಗರಪಾಲಿಕೆ ಸದಸ್ಯರು ಹೋಗುತ್ತಾರೆಯೇ ಮತದಾರರು ಹೋಗುವುದಿಲ್ಲ. ಅವರು ಕಾಂಗ್ರೆಸ್‌ಗೆ ಹೋಗಿದ್ದರಿಂದ ಹೆಚ್ಚಿನ ಮತಗಳು ಬಿಜೆಪಿಗೆ ಬರಲಿವೆಯೇ ಹೊರತು ಕಡಿಮೆಯಾಗುವುದಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ‘ಮುನಿಸಿಕೊಂಡಿರುವವರು ಈ ಚೆನ್ನಾಗಿದ್ದಾರೆ. ಒಟ್ಟಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಚುನಾವಣೆ ಮಾಮೂಲಿಯಾಗಿದ್ದು ವ್ಯತ್ಯಾಸವೇನೂ ಇಲ್ಲ. 6 ಚುನಾವಣೆಯಲ್ಲಿ ಗೆದ್ದಿದ್ದೇವೆ. 1ರಲ್ಲಿ ಸೋತಿದ್ದು ಈ ಬಾರಿ ಸುಲಭವಾಗಿ ಗೆಲ್ಲುತ್ತೇವೆ’ ಎಂದು ಹೇಳಿದರು. ಮಾಜಿ ಶಾಸಕ ಗುರುಸಿದ್ದನಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿ ‘ಈ ಬಗ್ಗೆ ಚರ್ಚೆ ಬೇಡ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದರು.

‘ಐದು ಗ್ಯಾರಂಟಿಗಳಿಂದ ನನಗೆ ಆಶೀರ್ವಾದ’

‘ಲೋಕಸಭಾ ಕ್ಷೇತ್ರ ದೊಡ್ಡದಾಗಿರುವುದರಿಂದ ಜವಾಬ್ದಾರಿ ಜಾಸ್ತಿ ಇದೆ. ರೈತರು ಮಹಿಳೆಯರು ಯುವಕರು ಎಲ್ಲರಿಗೂ ಅವರದ್ದೇ ಆದ ನಿರೀಕ್ಷೆ ಇದೆ. ಅವರ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 5 ಗ್ಯಾರಂಟಿಗಳು ಜನರಿಗೆ ತಲುಪುತ್ತಿದ್ದು ಮನಸ್ಸು ಪೂರ್ತಿಯಿಂದ ಆಶೀರ್ವದಿಸುತ್ತಿದ್ದಾರೆ. ಲೋಕಸಭಾ ಕ್ಷೇತ್ರದ 16 ಲಕ್ಷ ಮತದಾರರಲ್ಲಿ 8 ಲಕ್ಷ ಮಹಿಳೆಯರು ಇದ್ದು ಅವರ ಆಶೀರ್ವಾದ ಇದೆ. ಸರ್ವಜನಾಂಗದ ಶಾಂತಿಯ ತೋಟ ನಿಲುವಿನಿಂದ ಜಾತಿ ಧರ್ಮದ ಬಿಟ್ಟು ಪಕ್ಷಾತೀತವಾಗಿ ಬಹಳಷ್ಟು ಜನ ಬೆಂಬಲಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT