ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | 12 ರಲ್ಲಿ ನೇರ ಹಣಾಹಣಿ; 2 ಕಡೆ ತ್ರಿಕೋನ ಸ್ಪರ್ಧೆ

2 ನೇ ಹಂತ: 14 ಕ್ಷೇತ್ರಗಳ ಕಣ ಅಂತಿಮ
Published 22 ಏಪ್ರಿಲ್ 2024, 23:08 IST
Last Updated 22 ಏಪ್ರಿಲ್ 2024, 23:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯುವ ಅವಧಿ ಸೋಮವಾರ ಪೂರ್ಣಗೊಂಡಿದ್ದು, ಒಟ್ಟು 227 ಮಂದಿ ಕಣದಲ್ಲಿ ಉಳಿದಿದ್ದಾರೆ. 12 ಕ್ಷೇತ್ರಗಳಲ್ಲಿ ಕಾಂಗ್ರೆಸ್–ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದರೆ, ಎರಡೂ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಬಂಡಾಯ ಎದುರಿಸುತ್ತಿವೆ.

ಮೇ 7ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 12ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿ, ಏ.19ಕ್ಕೆ ಕೊನೆಗೊಂಡಿತ್ತು. ಒಟ್ಟು 335 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 272 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದವು. ಸೋಮವಾರ 45 ಮಂದಿ ನಾಮಪತ್ರಗಳನ್ನು ಹಿಂಪಡೆದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಬಂಡಾಯ ಸಾರಿ ಕಣಕ್ಕಿಳಿದಿದ್ದ ಶಿರಹಟ್ಟಿ ಫಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕಣದಲ್ಲಿ ಮುಂದುವರಿದಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಬಂಡಾಯ ಸಾರಿರುವ ಜಿ.ಬಿ. ವಿನಯಕುಮಾರ್‌ ಮನವೊಲಿಕೆಗೆ ಮಣಿಯದೇ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಂಘರ್ಷಕ್ಕೆ ಇಳಿದಿರುವ ಈಶ್ವರಪ್ಪ ಅವರಿಗೆ ಕಬ್ಬು ಹಿಡಿದಿರುವ ರೈತನ ಚಿನ್ಹೆ ದೊರಕಿದೆ.

ಒಳ ಬಂಡಾಯದ ಭೀತಿ: ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಒಳ ಬಂಡಾಯದ ಭೀತಿ ಎದುರಿಸುತ್ತಿವೆ. ಪಕ್ಷದ ಕೆಲವು ನಾಯಕರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಪಕ್ಷದ ನಾಯಕರಾದ ರಮೇಶ ಕತ್ತಿ ಮತ್ತು ಪ್ರಭಾಕರ ಕೋರೆ ಅವರು ಅಣ್ಣಾ ಸಾಹೇಬ ಜೊಲ್ಲೆ ಪರ ಪ್ರಚಾರದಿಂದ ದೂರ ಉಳಿದಿದ್ದಾರೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತ ಕುಮಾರ ಹೆಗಡೆ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌ ಅವರು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರಕ್ಕೆ ಬರುತ್ತಿಲ್ಲ. ಹೆಬ್ಬಾರ್‌ ಮಗ ಕಾಂಗ್ರೆಸ್‌ ಸೇರಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ನಡೆಸುತ್ತಿಲ್ಲ. ರಾಯಚೂರಿನಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಬಿ.ವಿ. ನಾಯಕ ಅವರು ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮೇಲೆ ಮುನಿಸಿಕೊಂಡಿದ್ದಾರೆ.

227: ಕಣದಲ್ಲಿ ಉಳಿದ ಒಟ್ಟು ಅಭ್ಯರ್ಥಿಗಳು
206 – ಪುರುಷರು; 21 – ಮಹಿಳೆಯರು

ಈ ಚುನಾವಣೆ ಯಾರಿಗೆ ಸವಾಲು?

* ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಮ್ಮ ಕುಟುಂಬದ ಸದಸ್ಯ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿಕೊಳ್ಳುವುದರ ಜತೆಯಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳೂ ಸೇರಿದಂತೆ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವ ಸವಾಲು

* ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ, ಜಗದೀಶ ಶೆಟ್ಟರ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದು, ಗೆದ್ದು ಪಕ್ಷದ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳಬೇಕಿದೆ

* ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಧಾರವಾಡದಲ್ಲಿ, ಭಗವಂತ ಖೂಬಾ ಬೀದರ್‌ನಲ್ಲಿ ಕಣದಲ್ಲಿದ್ದು, ತಮ್ಮ ಸಾಧನೆಗಳನ್ನು ಮತದಾರರ ಮುಂದಿಟ್ಟು ಗೆಲ್ಲಬೇಕಾದ ಸವಾಲು

* ಮಕ್ಕಳನ್ನು ಚುನಾವಣಾ ಕಣಕ್ಕಿಳಿಸಿರುವ ರಾಜ್ಯದ ಸಚಿವರಾದ ಸತೀಶ ಜಾರಕಿಹೊಳಿ (ಚಿಕ್ಕೋಡಿ), ಲಕ್ಷ್ಮಿ ಹೆಬ್ಬಾಳ್ಕರ (ಬೆಳಗಾವಿ), ಈಶ್ವರ ಖಂಡ್ರೆ (ಬೀದರ್‌), ಶಿವಾನಂದ ಪಾಟೀಲ (ಬಾಗಲಕೋಟೆ) ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಬೇಕಿದೆ

* ಪತ್ನಿಯನ್ನು ಕಣಕ್ಕಿಳಿಸಿರುವ ಎಸ್‌.ಎಸ್‌. ಮಲ್ಲಿಕಾರ್ಜುನ (ದಾವಣಗೆರೆ), ಅಕ್ಕನನ್ನು ಕಣಕ್ಕಿಳಿಸಿರುವ ಮಧು ಬಂಗಾರಪ್ಪ (ಶಿವಮೊಗ್ಗ) ಅವರು ತಮ್ಮ ಎದುರಾಳಿಗಳನ್ನು ಮಣಿಸಿ ತಮ್ಮ ಶಕ್ತಿ ತೋರಿಸಬೇಕಿದೆ

* ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಳಿಯನನ್ನು ಕಲುಬುರಗಿಯಲ್ಲಿ ಕಣಕ್ಕೆ ಇಳಿಸಿದ್ದಾರೆ. ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಗೆ ಅವರಿಗೆ ತಮ್ಮ ಸಾಮರ್ಥ್ಯವನ್ನು ಪಣಕ್ಕಿಡುವ ಸವಾಲು ಎದುರಾಗಿದೆ

* ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರಿಗೆ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ‘ಕೈ’ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಾದ ಸವಾಲು ಕೂಡ ಇದೆ

* ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಗೆಲ್ಲುವ ಸವಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT