ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2024 | ಕೈ, ಕಮಲಕ್ಕೆ ಮತಬ್ಯಾಂಕ್ ಉಳಿಸಿಕೊಳ್ಳುವ ಸವಾಲು

ವಿಧಾನಸಭೆ ಚುನಾವಣೆ: ಮತ ಗಳಿಕೆಯಲ್ಲಿ ಬಿಜೆಪಿ, ಶಾಸಕರಲ್ಲಿ ಕಾಂಗ್ರೆಸ್ ಮೇಲುಗೈ
Published 4 ಏಪ್ರಿಲ್ 2024, 6:08 IST
Last Updated 4 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆ ಪ್ರಚಾರ ಆರಂಭಗೊಂಡಿದ್ದು, ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಸತತವಾಗಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಬಿಜೆಪಿಗೆ ವಿಶ್ವಾಸ ಮೂಡಿಸಿದರೆ, ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದು ಕಾಂಗ್ರೆಸ್‍ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಜಿಲ್ಲೆಯ ಆರು, ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರ ಒಳಗೊಂಡ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿರುವುದು ಹೌದಾದರೂ ವಿಧಾನಸಭೆ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 3ರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ತಿರುವು ಪಡೆದಿತ್ತು. ಎಂಟೂ ಕ್ಷೇತ್ರಗಳಿಂದ ಬಿಜೆಪಿ 5,65,235 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ 5,16,720 ಮತ ಪಡೆದಿತ್ತು.

‘ಉತ್ತರ ಕನ್ನಡದಲ್ಲಿ ಕಳೆದ ನಾಲ್ಕು ಅವಧಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ. ವಿಧಾನಸಭೆ ಚುನಾವಣೆ ಮತ ಗಳಿಕೆ ಲೆಕ್ಕಾಚಾರ ಗಮನಿಸಿದರೂ ಬಿಜೆಪಿ ಮುನ್ನಡೆ ಸಾಧಿಸಿದೆ. ಇದು ಲೋಕಸಭೆ ಚುನಾವಣೆಯಲ್ಲಿಯೂ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

‘ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ಪರಿಸ್ಥಿತಿ ಭಿನ್ನವಾಗಿ ಇರುತ್ತವೆ. ಆದರೂ ಹೆಚ್ಚು ಶಾಸಕರು ಇರುವ ಪಕ್ಷದ ಅಭ್ಯರ್ಥಿಗೆ ಗೆಲ್ಲಲು ರಣತಂತ್ರ ರೂಪಿಸುವುದು ಸುಲಭ. ಪಕ್ಷವು ಅಧಿಕಾರದಲ್ಲಿ ಇರುವದರಿಂದ ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಸಾಧಿಸಬಹುದು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಸಾಂಪ್ರದಾಯಿಕ ಮತಗಳನ್ನು ಹೊಂದಿವೆ. ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಕ್ಷೇತ್ರಕ್ಕೆ ಅಭ್ಯರ್ಥಿಗಳ ವರ್ಚಸ್ಸು, ಚುನಾವಣೆ ವಿಷಯಗಳು ಭಿನ್ನವಾಗಿರುತ್ತವೆ. ಬಿಜೆಪಿ–ಜೆಡಿಎಸ್ ಜತೆಗಿನ ಮೈತ್ರಿಯೂ ಏರ್ಪಟ್ಟಿರುವುದೆ. ಹೀಗಾಗಿ, ಆಗಿನ ಮತ ಗಳಿಕೆಯನ್ನೇ ಆಧಾರವಾಗಿಟ್ಟು ಲೋಕಸಭೆ ಚುನಾವಣೆ ಫಲಿತಾಂಶ ವಿಶ್ಲೇಷಿಸಲಾಗದು. ಈ ಬಾರಿ ಎರಡೂ ಪಕ್ಷಗಳಿಂದಲೂ ಅನಿರೀಕ್ಷಿತ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವ ಕಾರಣ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳುವದರ ಜತೆಗೆ ಹೊಸ ಮತಗಳನ್ನು ಪಡೆಯುವುದು ಇಬ್ಬರಿಗೂ ಸವಾಲಿನ ಕೆಲಸ’ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕಿ–ಅಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT