ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದೊಡ್ಡ ಗಿಫ್ಟ್‌’ ಬಗ್ಗೆ ಶಾ ಮಾತಾಡಿದ್ದರೆ ಸಮಸ್ಯೆ ಆಗುತ್ತಿತ್ತೇನೋ?: ವಿ.ಸೋಮಣ್ಣ

Published 5 ಜೂನ್ 2024, 7:35 IST
Last Updated 5 ಜೂನ್ 2024, 7:35 IST
ಅಕ್ಷರ ಗಾತ್ರ

ಮೈಸೂರು: ‘ಸೋಮಣ್ಣ ಅವರೇ ನಿಮಗೆ ದೊಡ್ಡ ಗಿಫ್ಟ್‌ ಕಾದಿದೆ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಈ ಬಾರಿಯೂ ಹೇಳಿದ್ದರೆ ದೊಡ್ಡ ಸಮಸ್ಯೆ ಆಗುತ್ತಿತ್ತೇನೋ?’ ಎಂದು ತುಮಕೂರಿನ ಸಂಸದ ವಿ.ಸೋಮಣ್ಣ ತಿಳಿಸಿದರು.

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಮುಖಂಡ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಬುಧವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ವಿಧಾನಸಭಾ ಚುನಾವಣೆ ವೇಳೆ ವರುಣ ಹಾಗೂ ಚಾಮರಾಜನಗರದಲ್ಲಿ ನಾನು ಸ್ಪರ್ಧಿಸಿದ್ದ ವೇಳೆ, ದೊಡ್ಡ ಗಿಫ್ಟ್ ಬಗ್ಗೆ ಅಮಿತ್ ಶಾ ಮಾತನಾಡಿದ್ದರಿಂದ ಒಂದಿಷ್ಟು ಸಮಸ್ಯೆಯಾಯಿತು. ಅವರು ಈ ಬಾರಿ ಆ ಮಾತು ಆಡಲಿಲ್ಲ’ ಎಂದರು.

‘ಸಚಿವ ಸ್ಥಾನ ಕೊಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಇಂದಿನ ಪರಿಸ್ಥಿತಿ ಅರ್ಥವಾಗುತ್ತದೆ. ಅವಕಾಶ ಸಿಕ್ಕರೆ ಇನ್ನೂ ಹೆಚ್ಚಿನ ಕೆಲಸ ಮಾಡಬಹುದು. ಜೂನ್‌ 6ರಂದು (ಗುರುವಾರ) ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಆಗುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್– ಬಿಜೆಪಿಯವರು ಒಂದೇ ನ್ಯಾಣದ ಎರಡು ಮುಖದ ರೀತಿ ಕೆಲಸ ಮಾಡಿದರು. ಎಲ್ಲ ಕ್ಷೇತ್ರದಲ್ಲೂ ಸಮನ್ವಯ ಇತ್ತು. ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್‌ನವರು ಹೆಚ್ಚು ಕೆಲಸ ಮಾಡಿದರು. ಎಚ್‌.ಡಿ. ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ನಾಲ್ಕೈದು ಭಾರಿ ಬಂದು ದೊಡ್ಡ ಶಕ್ತಿ ನೀಡಿದರು. ಅವರಿಗೆ ಋಣಿ ಆಗಿರುತ್ತೇನೆ’ ಎಂದು ಹೇಳಿದರು.

‘ಜೆಡಿಎಸ್–ಬಿಜೆಪಿ ನಡುವಿನ ಸಮನ್ವಯ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ’ ಎಂದರು.

‘ಹನ್ನೊಂದು ತಿಂಗಳಿಂದ ನಾನೊಂದು ರೀತಿ ವನವಾಸದಲ್ಲಿದೆ. ಸದಾ ಕೆಲಸ ಮಾಡುವವನಿಗೆ ಕೆಲಸವೇ ಇಲ್ಲದಂತಾಗಿತ್ತು. ಈಗ ಅದು ದೂರಾಗಿದೆ. ತುಮಕೂರಿನ ಜನ ನನ್ನನ್ನು ಹೊರಗಿನವನು ಎಂದು ಭಾವಿಸಲಿಲ್ಲ. ಯಾರೋ ನಾಲ್ಕು ಜನ ನಾಯಕರು ಮಾತನಾಡಿದರೂ ತಲೆ ಕಡೆಸಿಕೊಳ್ಳಲಿಲ್ಲ. 2 ಲಕ್ಷ ಮತಗಳ ಮುನ್ನಡೆ ನಿರೀಕ್ಷಿಸಿದ್ದೆ. ಕೊಂಚ ಕಡಿಮೆಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT