ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ‘ವಿಜಯ’ದ ಋಣ ತೀರಿಸುವರೇ ಜಿಗಜಿಣಗಿ?

‘ಶೂನ್ಯ ಸಾಧನೆ’ ಆರೋಪ ಮುಕ್ತರಾಗಲು ಸುವರ್ಣ ಅವಕಾಶ
Published 6 ಜೂನ್ 2024, 4:56 IST
Last Updated 6 ಜೂನ್ 2024, 4:56 IST
ಅಕ್ಷರ ಗಾತ್ರ

ವಿಜಯಪುರ: ಸರಳ, ಸಜ್ಜನ ಎಂಬ ವೈಯಕ್ತಿಕ ವರ್ಚಸ್ಸು, ಶುದ್ಧ ರಾಜಕೀಯ ವ್ಯಕ್ತಿತ್ವ, ಆಯಾ ಚುನಾವಣೆ ವೇಳೆ ಎದ್ದ ಸಾಂದರ್ಭಿಕ ರಾಜಕೀಯ ಅಲೆಗಳ ಪರಿಣಾಮ ವಿಜಯಪುರ ಜಿಲ್ಲೆಯ ಜನರ ಮತಗಳಿಂದ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಹಿರಿಯ ರಾಜಕಾರಣಿ, ಸಂಸದ ರಮೇಶ ಜಿಗಜಿಣಗಿ ಅವರ ಮೇಲೆ ಜಿಲ್ಲೆಯ ಜನತೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ನಾನು ದಲಿತ ರಾಜಕಾರಣಿ; ನಾನು ಅಷ್ಟು ದೊಡ್ಡವನಲ್ಲ; ನಾನು ಈಗಾಗಲೇ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ’ ಎಂಬ ಹಳಸಲು ಸಬೂಬು ನೀಡದೇ, ಅಸಹಾಯಕ ಮಾತುಗಳನ್ನಾಡದೇ ಜಿಲ್ಲೆಯ ಜನತೆಯ ಋಣ ತೀರಿಸಲು ಈ ಬಾರಿ ದೆಹಲಿ ಮಟ್ಟದಲ್ಲಿ ಜಿಲ್ಲೆಯ ಪರವಾಗಿ ತಮ್ಮ ಹಿರಿತನದ ‘ಪ್ರಭಾವ’ ಬೀರುವ ಮೂಲಕ ಶಾಶ್ವತ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುವ ಮೂಲಕ ತಮ್ಮ ನಿರಂತರ ಗೆಲುವನ್ನು ಸಾರ್ಥಕಗೊಳಿಸಬೇಕಿದೆ. 

‘ಹೆದ್ದಾರಿ ಮಾಡಲಾಗಿದೆ, ರೈಲ್ವೆ ಮೇಲ್ಸೇತುವೆ ಮಾಡಲಾಗಿದೆ, ರೈಲ್ವೆ ಡಬ್ಲಿಂಗ್‌ ಮಾಡಲಾಗಿದೆ, ರೈಲ್ವೆ ವಿದ್ಯುದೀಕರಣ ಮಾಡಲಾಗಿದೆ, ಹೊಸ ರೈಲು ಓಡಿಸಲಾಗಿದೆ, ರೈಲು ನಿಲ್ದಾಣ ಮಾಡಲಾಗಿದೆ’ ಎಂಬುದು ಜಿಲ್ಲೆಗೆ ದೊಡ್ಡ ಕೊಡುಗೆಯಾಗದು. ಯಾರೇ ಸಂಸದರಿದ್ದರೂ, ಯಾವುದೇ ಪಕ್ಷದ ಸರ್ಕಾರ ಇದ್ದರೂ ಸಹಜವಾಗಿ ಆಗುವ ಕಾರ್ಯಗಳಾಗಿವೆ. ಇವುಗಳ ಹೊರತಾಗಿ ಜಿಲ್ಲೆಗೆ ಆಗಬೇಕಿರುವ ಘನ ಕಾರ್ಯಗಳು ಸಾಕಷ್ಟು ಇದ್ದು, ಈ ಸಂಬಂಧ ಸಂಸದ ರಮೇಶ ಜಿಗಜಿಣಗಿ ಅವರು ಗಮನ ಹರಿಸಬೇಕಿದೆ ಎಂಬುದು ಜಿಲ್ಲೆಯ ಮತದಾರರ ಒಕ್ಕೊರಲ ಆಗ್ರಹವಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ:

ವಿಜಯಪುರ ಐತಿಹಾಸಿಕ ನಗರ, ಹತ್ತು ಹಲವು ವಿಶ್ವ ಪ್ರಸಿದ್ಧ ಸ್ಮಾರಕಗಳ ತವರು, ಪ್ರತಿ ನಿತ್ಯ ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ನಗರವಾಗಿದೆ. ಆದರೆ, ನಗರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ವಾತಾವರಣ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯನ್ನು ತಂದು, ಅಭಿವೃದ್ಧಿ ಮಾಡುವ ಹೊಣೆ ನೂತನ ಸಂಸದರ ಮೇಲಿದೆ.

ಯುನೆಸ್ಕೊ ಪಟ್ಟಿಗೆ ಸೇರ್ಪಡೆ:

ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಬಾರಾ ಕಮಾನ್‌, ಇಬ್ರಾಹಿಂರೋಜಾವನ್ನು ವಿಶ್ವ ಸಂಸ್ಥೆಯ ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಜಿಗಜಿಣಗಿ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಸಂಬಂಧ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಯತ್ನಗಳು ಆರಂಭವಾಗಿಲ್ಲ. ಸಂಸದರು ಈ ಕ್ಷಣದಿಂದಲೇ ಪ್ರಯತ್ನ ನಡೆಸಿದರೆ ಯಶಸ್ಸು ಲಭಿಸುವುದರಲ್ಲಿ ಅನುಮಾನವಿಲ್ಲ.

ಯುಕೆಪಿ ಗೆಜೆಟ್‌ ನೋಟಿಫಿಕೇಶನ್‌:

ಕೃಷ್ಣಾ ನ್ಯಾಯಾಧೀಕರಣ (ಬ್ರಿಜೇಶ್‌ ಕುಮಾರ್‌ ಆಯೋಗ) ತೀರ್ಪು 2010 ರಲ್ಲಿ ನೀಡಿದ್ದರೂ ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿಲ್ಲ. ಇದರಿಂದ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಆದ್ಯತೆ ನೀಡಬೇಕು. ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿಸಲು ಪ್ರಯತ್ನ ನಡೆಸಬೇಕು.

ಉಡಾನ್‌ ಯೋಜನೆ:

ಈಗಾಗಲೇ ವಿಜಯಪುರ ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಿದ್ದು, ಶೀಘ್ರದಲ್ಲೇ ವಿಮಾನ ಹಾರಾಟಕ್ಕೆ ಮುಕ್ತವಾಗಲಿದೆ. ವಿಜಯಪುರ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಿ, ದೇಶದ ವಿವಿಧ ನಗರಗಳಿಗೆ ವಿಜಯಪುರದಿಂದ ವಿಮಾನಗಳು ಹಾರಾಟ ನಡೆಸಲು ಆದ್ಯತೆ ನೀಡಬೇಕಿದೆ. ಇದರಿಂದ ಜಿಲ್ಲೆಗೆ ಪ್ರವಾಸಿಗರನ್ನು, ಬಂಡವಾಳಶಾಹಿಗಳನ್ನು, ಉದ್ಯಮಿಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ.

ವಂದೇ ಭಾರತ್‌ ರೈಲು:

ರಾಜ್ಯ ರಾಜಧಾನಿ ಬೆಂಗಳೂರು, ವಾಣಿಜ್ಯ ನಗರ ಮುಂಬೈ, ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸುಲಭವಾಗಿ, ವೇಗವಾಗಿ ತಲುಪಲು ಅನುಕೂಲವಾಗುವಂತೆ ವಂದೇ ಭಾರತ್‌ ರೈಲನ್ನು ವಿಜಯಪುರ ಮಾರ್ಗವಾಗಿ ಓಡಿಸಲು ಸಂಸದರು ಆದ್ಯತೆ ನೀಡಬೇಕು ಎಂಬುದು ಜಿಲ್ಲೆಯ ಜನತೆ ಕಾತರವಾಗಿದೆ.

ಇವುಗಳಲ್ಲದೇ, ಸೈಕ್ಲಿಂಗ್‌ಗೆ ವಿಜಯಪುರ ಜಿಲ್ಲೆ ಹೆಸರುವಾಸಿಯಾಗಿದ್ದು, ಕೆಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರ ನೆರವಿನಿಂದ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ  ಹೈದರಾಬಾದ್‌ ಕರ್ನಾಟಕದ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು 371 ಜೆ ಸೇರ್ಪಡೆಗೆ, ವಿಜಯಪುರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ, ಐಐಎಂ, ಬೃಹತ್‌ ಕೈಗಾರಿಕೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಲು ಪ್ರಯತ್ನ ಮಾಡಬೇಕಿದ್ದು, ಜಿಗಜಿಣಗಿ ಅವರು ಆದ್ಯತೆ ನೀಡುವರೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಮುಂದಿನ ಐದು ವರ್ಷ ಜಿಲ್ಲೆಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ. ಯುನೆಸ್ಕೊ ಪಟ್ಟಿಗೆ ಗೋಳಗುಮ್ಮಟ ಸೇರ್ಪಡೆ ವಂದೇ ಭಾರತ್‌ ರೈಲು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉಡಾನ್‌ ಯೋಜನೆ ಜಾರಿ ಐಐಟಿ ಆರಂಭಕ್ಕೆ ಒತ್ತು ನೀಡುತ್ತೇನೆ

-ರಮೇಶ ಜಿಗಜಿಣಗಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT