ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಹಡಗು ಮುಳುಗಿದೆ: ಡಿ.ಕೆ. ಶಿವಕುಮಾರ್

ಸಹೋದರ ಡಿ.ಕೆ. ಸುರೇಶ್ ಪರ ರಾಮನಗರದಲ್ಲಿ ಪ್ರಚಾರ
Published 24 ಏಪ್ರಿಲ್ 2024, 5:11 IST
Last Updated 24 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ರಾಮನಗರ: ‘ಜೆಡಿಎಸ್ ಮುಳುಗಿದ ಹಡಗಿನಂತಾಗಿದೆ. ದ್ವೇಷದ ರಾಜಕಾರಣ ಮಾಡುವ ಎಚ್‌.ಡಿ. ದೇವೇಗೌಡರು ಕೇವಲ ಮೂರು ಸ್ಥಾನಕ್ಕಾಗಿ ತಮ್ಮ ಪಕ್ಷವನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ಜಿಲ್ಲೆಯಲ್ಲಿರುವ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲದ ಕುಮಾರಸ್ವಾಮಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಮಂಗಳವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಮತಯಾಚಿಸಿ ಅವರು ಮಾತನಾಡಿದರು.

‘ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಕಾರ್ಯಕರ್ತರ ಕಥೆ ಏನಾಗಲಿದೆ ಎಂದು ಯೋಚಿಸದ ದೇವೇಗೌಡರು ಹಾಸನದಲ್ಲಿ ಮೊಮ್ಮಗ, ಮಂಡ್ಯದಲ್ಲಿ ಮಗ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಅಳಿಯನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರ ಕುಟುಂಬ ರಾಜಕಾರಣಕ್ಕೆ ಕಾರ್ಯಕರ್ತರು ಈಗಲೂ ಮೋಸ ಹೋಗದೆ, ನಮ್ಮೊಂದಿಗೆ ಬಂದು ಸುರೇಶ್ ಕೈ ಬಲಪಡಿಸಬೇಕು’ ಎಂದು ಆಹ್ವಾನ ನೀಡಿದರು.

‘ಕ್ಷೇತ್ರವನ್ನು ಪ್ರತಿನಿಧಿಸಿದ್ದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸುರೇಶ್ ರೀತಿ ಹೋರಾಡಿ ಏನಾದರೂ ಅಭಿವೃದ್ಧಿ ಮಾಡಿದ್ದಾರೆಯೇ? ಅಧಿಕಾರವಿದ್ದಾಗ ಏನು ಮಾಡದೆ, ಚುನಾವಣೆಗೆ ಬಂದಾಗ ಜನರ ಮುಂದೆ ಬರುತ್ತಾರೆ. ಗ್ರಾಮಾಂತರದಲ್ಲಷ್ಟೇ ಅಲ್ಲದೆ ಹಾಸನ, ಮಂಡ್ಯ, ಕೋಲಾರದಲ್ಲೂ ಜೆಡಿಎಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಹೇಳಿದರು.

‘ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಂಕಷ್ಟದಲ್ಲಿದ್ದ ಕುಟುಂಬಗಳ ಕಣ್ಣೊರೆಸುವ ಕೆಲಸ ಮಾಡಿದ್ದೇವೆ. ಮಹಿಳೆಯರ ಸ್ವಾವಲಂಬನೆಗೆ ಕಟಿಬದ್ದರಾಗಿದ್ದೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಅಪಪ್ರಚಾರ ಮಾಡುತ್ತಿದೆ. ಅವರು ರಾಜ್ಯಕ್ಕೆ ಕೊಟ್ಟಿದ್ದು ಚೊಂಬು’ ಎಂದು ಚೊಂಬು ಪ್ರದರ್ಶಿಸಿದರು.

ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ನಾರಾಯಣಗೌಡ, ಮಳವಳ್ಳಿ ಸೋಮಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಶಾಸಕ ಕೆ. ರಾಜು, ಮುಖಂಡರಾದ ಕೆ. ಶೇಷಾದ್ರಿ ಶಶಿ, ಸಯ್ಯದ್ ಜಿಯಾವುಲ್ಲಾ, ಕೆ. ರಮೇಶ್, ಸಿ.ಎನ್.‌ಆರ್. ವೆಂಕಟೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಾ. ದೀಪಾ ಮುನಿರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯರು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

Highlights - ಮಧ್ಯಾಹ್ನ 12.30ಕ್ಕೆ ನಡೆಯಬೇಕಿದ್ದ ಪ್ರಚಾರ ಸಭೆ ಸಂಜೆ 4ಕ್ಕೆ ಶುರು  ಡಿ.ಕೆ ಸಹೋದರರಿಗೆ ಸೇಬುಗಳಿಂದ ತಯಾರಿಸಿದ ಹಾರದ ಸ್ವಾಗತ ಗಂಟಲು ಸಮಸ್ಯೆಯಿಂದಾಗಿ ಹೆಚ್ಚು ಮಾತನಾಡದ ಸುರೇಶ್ ತೆರೆದ ವೇದಿಕೆಗೆ ಬಾರದೆ ಬಸ್ ಮೇಲೆಯೇ ಸಹೋದರರ ಭಾಷಣ

ನಾವು ನಿಮ್ಮ ಜಿಲ್ಲೆಯವರು. ಬದುಕಿದರೂ ಇಲ್ಲೇ ಸತ್ತರೂ ಇಲ್ಲೇ. ಅವರಂತೆ ಹೊರಗಿನವರಲ್ಲ. ನಿಮ್ಮ ಜೊತೆಗಿದ್ದು ಕಷ್ಟ–ಸುಖಗಳಿಗೆ ಸದಾ ಹೆಗಲು ಕೊಡುತ್ತೇವೆ

-ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

‘ಕ್ಷೇತ್ರಕ್ಕೆ ₹800 ಕೋಟಿ ಅನುದಾನ’

‘ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ₹800 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇವೆ. ರಸ್ತೆ ಚರಂಡಿ ಒಳಚರಂಡಿ ನಿರ್ಮಾಣಕ್ಕೆ ₹150 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಕರೆದಿದ್ದೇವೆ. ಅರ್ಕಾವತಿ ದಂಡೆಯನ್ನು ಉದ್ಯಾನವಾಗಿ ₹156 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದ್ದೇವೆ. ನಿವೇಶನರಹಿತರಿಗೆ ಸುಮಾರು 4 ಸಾವಿರ ನಿವೇಶನ ಹಂಚಲು ಈಗಾಗಲೇ 80 ಎಕರೆ ಗುರುತಿಸಲಾಗಿದೆ. ನಿರಂತರ ಕುಡಿಯುವ ನೀರು ಯೋಜನೆಯಡಿ ಸದ್ಯದಲ್ಲೇ ಮನೆ ಮನೆಗೆ ನೀರು ಹರಿಯಲಿದೆ’ ಎಂದು ಡಿ.ಕೆ. ಸುರೇಶ್ ಹೇಳಿದರು. ‘ನೀವು ಕೊಟ್ಟ ಅಧಿಕಾರದಿಂದ ಇದೆಲ್ಲವೂ ಸಾಧ್ಯವಾಯಿತು. ಈಗಾಗಲೇ ತಂದಿರುವ ಯೋಜನೆಗಳ ಜೊತೆಗೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಮತ್ತೊಮ್ಮೆ ನನ್ನನ್ನು ಸಂಸತ್ತಿಗೆ ಆರಿಸಿ ಕಳಿಸಬೇಕು. ನಿಮ್ಮ ಸೇವೆ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT