ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರ, ಡಿಕೆಶಿ ವಿರುದ್ಧ ಪ್ರತ್ಯೇಕ ಎಫ್‌ಐಆರ್

ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನ * ಮತದಾರರಿಗೆ ಬೆದರಿಕೆ ಆರೋಪ
Published 20 ಏಪ್ರಿಲ್ 2024, 15:04 IST
Last Updated 20 ಏಪ್ರಿಲ್ 2024, 15:04 IST
ಅಕ್ಷರ ಗಾತ್ರ

ಬೆಂಗಳೂರು: ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮತದಾರರಿಗೆ ಬೆದರಿಕೆಯೊಡ್ಡಿದ್ದ ಆರೋಪದಡಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಿಚಕ್ಷಣಾ ದಳದ ಅಧಿಕಾರಿ ಅರ್ಜುನ್ ನೀಡಿರುವ ದೂರು ಆಧರಿಸಿ ವಿಜಯೇಂದ್ರ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿ ಹಾಗೂ ಮತದಾರರ ಹೇಳಿಕೆ ಆಧರಿಸಿ ಆರ್‌.ಎಂ.ಸಿ ಯಾರ್ಡ್‌ ಠಾಣೆ ಪೊಲೀಸರು, ಡಿ.ಕೆ. ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್:

‘ಬಿಜೆಪಿ ವತಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಿಜೆಪಿ4ಕರ್ನಾಟಕ’ ಖಾತೆ ತೆರೆಯಲಾಗಿದೆ. ‘ಪಾ‘ಕೈ’ಸ್ತಾನ್‌ ಸರ್ಕಾರದಿಂದ ತಾಲಿಬಾನ್ ಮಾದರಿ ಜಾತಿ’, ಲವ್ ಜಿಹಾದ್‌ಗೆ ಒಪ್ಪದಿದ್ದರೆ ಕೊಲೆ, ಕನ್ನಡ ಮಾತನಾಡಿದರೆ ನಟಿ ಕುಟುಂಬದ ಮೇಲೆ ಹಲ್ಲೆ’ ಸೇರಿದಂತೆ ಹಲವು ಪೋಸ್ಟ್‌ಗಳನ್ನು ಖಾತೆಯಲ್ಲಿ ಇತ್ತೀಚೆಗೆ ಪ್ರಕಟಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಈ ಪೋಸ್ಟ್‌ಗಳನ್ನು ಪ್ರಕಟಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಖಾತೆ ನಿರ್ವಹಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

‍ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ:

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಪ್ರಚಾರದ ವೇಳೆ, ಡಿ.ಕೆ. ಶಿವಕುಮಾರ್ ಅವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದ ಬಿಜೆಪಿ, ಅವರ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.

‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದಕ್ಕೆ ಹೋಗಿದ್ದರು. ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 2,510 ಮನೆಗಳಿವೆ. 6,424 ಮತದಾರರಿದ್ದಾರೆ. ನಿಮಗೆ ಸ್ವಾಧೀನ ಪ್ರಮಾಣ ಪತ್ರ(ಒಸಿ)  ಹಸ್ತಾಂತರವಾಗಿಲ್ಲ. ಕಾವೇರಿ ನೀರು ಸಂಪರ್ಕ ಸಿಕ್ಕಿಲ್ಲ. ಎರಡನ್ನೂ ನಾನು ನಿಮಗೆ ಕೊಡುತ್ತೇನೆ. ನೀವು ನನಗೆ ಏನು ಕೊಡುತ್ತೀರಿ ? ನಿಮ್ಮ ಅಕ್ಕಪಕ್ಕದ 2–3 ಬೂತ್‌ಗಳಲ್ಲಿ ನಮ್ಮ ಪರ ಮತಗಳಿವೆ. ಉಳಿದಿರುವುದು ನಿಮ್ಮ ಬೂತ್ ಮಾತ್ರ. ಈಗ ಹೇಳಿ ಹಕ್ಕು ಪತ್ರ ಹಾಗೂ ಕಾವೇರಿ ನೀರು ಬೇಕಾ ? ಬೇಡವಾ?’ ಎಂದು ಶಿವಕುಮಾರ್ ಪ್ರಶ್ನಿಸಿದ್ದರು ಎನ್ನಲಾಗಿತ್ತು.

‘ಚುನಾವಣೆ ವೇಳೆ ಶಿವಕುಮಾರ್ ಅವರು ಮತದಾರರಿಗೆ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿದ್ದ ಬಿಜೆಪಿಯವರು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಜೊತೆಗೆ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೇ ದೂರು ಆಧರಿಸಿ ಮಾಹಿತಿ ಸಂಗ್ರಹಿಸಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT