ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

Published 7 ಮೇ 2024, 0:30 IST
Last Updated 7 ಮೇ 2024, 0:30 IST
ಅಕ್ಷರ ಗಾತ್ರ

ವಿಜಯಪುರ: ನೆತ್ತಿ ಸುಡುವ ಬಿಸಿಲಿನ ನಡುವೆ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮೇ 7ರಂದು ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಬರುವ ಮತದಾರರಿಗೆ ಯಾವುದೇ ತೊಂದರೆ ಆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.

‘ಮತಗಟ್ಟೆ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಆಯಾಸ ಆಗದಂತೆ ಕೂರಲು ಆಸನದ ವ್ಯವಸ್ಥೆ, ಫ್ಯಾನ್‌, ಏರ್‌ಕೂಲರ್‌, ಅಂಗವಿಕಲರಿಗೆ ವಿಲ್‌ಚೇರ್ ವ್ಯವಸ್ಥೆ, ಕುಡಿಯಲು ತಂಪಾದ ನೀರು, ಶೌಚಾಲಯ, ಅಂಬುಲೆನ್ಸ್‌ ವ್ಯವಸ್ಥೆ ಸೇರಿ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ’ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್‌ ತಿಳಿಸಿದ್ದಾರೆ.

ಪಕ್ಷಗಳಿಂದಲೂ ಕ್ರಮ:

ಮತದಾರರನ್ನು ಬೆಳಿಗ್ಗೆ 11ರ ಒಳಗೆ ಮತಗಟ್ಟೆಗೆ ಮತದಾರರನ್ನು ಕರೆತಂದು ಮತ ಹಾಕಿಸಲು ಕಾಂಗ್ರೆಸ್‌, ಬಿಜೆಪಿ ಸೇರಿ ಪಕ್ಷಗಳ ಬೂತ್‌ ಏಜೆಂಟರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಜೆ 4ರಿಂದ ಮತದಾನ ಮುಕ್ತಾಯದ ವರೆಗೆ ಮತದಾರರನ್ನು ಮತಗಟ್ಟೆಯತ್ತ ಕರೆತರಲು ಈಗಾಗಲೇ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರ ಮೂಲಕ ವಾಹನ, ಕುಡಿಯಲು ನೀರು, ಮಜ್ಜಿಗೆ, ತಂಪಾದ ಪಾನೀಯ ನೀಡಲು ವ್ಯವಸ್ಥೆ ಮಾಡಿಕೊಂಡಿವೆ.

45 ಡಿಗ್ರಿ ಸೆಲ್ಸಿಯಸ್‌ ದಾಟಿದ ಉಷ್ಣಾಂಶ:

ವಿಜಯಪುರದಲ್ಲಿ ಸೋಮವಾರ 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಜೊತೆಗೆ ಬಿಳಿಗಾಳಿಯೂ ಬೀಸುತ್ತಿದೆ. ಮೇ 7ರಂದು ಕೂಡ ಉಷ್ಣಾಂಶ ಗರಿಷ್ಠ ಮಟ್ಟದಲ್ಲಿ ಇರಲಿದೆ, ಬಿಸಿಗಾಳಿಯೂ ಬೀಸಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ಅಧಿಕ ಉಷ್ಣಾಂಶದ ಪರಿಣಾಮ ಮತದಾನ ಪ್ರಮಾಣವು ತಗ್ಗುವ ಸಾಧ್ಯತೆ ಇದೆ.

ವಿಜಯಪುರ ನಗರದ ಸೈನಿಕ ಶಾಲೆಯ ಮಸ್ಟರಿಂಗ್‌ ಕೇಂದ್ರದಿಂದ  ವಿದ್ಯುನ್ಮಾನ  ಮತಯಂತ್ರ ಹಾಗೂ ಇನ್ನಿತರ ಸಾಮಗ್ರಿ ಪಡೆದ ಚುನಾವಣಾ ಸಿಬ್ಬಂದಿ  ಬಿಸಿಲಿನ ನಡುವೆ ಮತಗಟ್ಟೆಯತ್ತ ಹೆಜ್ಜೆ ಹಾಕಿದರು
ವಿಜಯಪುರ ನಗರದ ಸೈನಿಕ ಶಾಲೆಯ ಮಸ್ಟರಿಂಗ್‌ ಕೇಂದ್ರದಿಂದ  ವಿದ್ಯುನ್ಮಾನ  ಮತಯಂತ್ರ ಹಾಗೂ ಇನ್ನಿತರ ಸಾಮಗ್ರಿ ಪಡೆದ ಚುನಾವಣಾ ಸಿಬ್ಬಂದಿ  ಬಿಸಿಲಿನ ನಡುವೆ ಮತಗಟ್ಟೆಯತ್ತ ಹೆಜ್ಜೆ ಹಾಕಿದರು

ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ ವಿದೇಶಿ ಪ್ರತಿನಿಧಿಗಳು

ಬೆಳಗಾವಿ: ಕಾಂಬೋಡಿಯಾ, ಮಾಲ್ಡೊವಾ, ನೇಪಾಳ, ಸೀಶೆಲ್‌ ಹಾಗೂ ಟ್ಯುನೀಷಿಯಾ ದೇಶಗಳ ಚುನಾವಣಾ ಆಯೋಗಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಸೋಮವಾರ ಬೆಳಗಾವಿಗೆ ಬಂದು, ಲೋಕಸಭಾ ಚುನಾವಣೆ ಸಿದ್ಧತೆಯನ್ನು ಕುತೂಹಲದಿಂದ ವೀಕ್ಷಿಸಿದರು.

ಇಲ್ಲಿನ ವನಿತಾ ವಿದ್ಯಾಲಯದಲ್ಲಿ ಸ್ಥಾಪಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ವಿದೇಶಿ ಪ್ರತಿನಿಧಿಗಳ ತಂಡಕ್ಕೆ ಮತಗಟ್ಟೆ ಸಿಬ್ಬಂದಿ ನಿಯೋಜನೆ, ಸ್ಟ್ರಾಂಗ್‌ರೂಮ್‌, ವಿದ್ಯುನ್ಮಾನ ಮತಯಂತ್ರಗಳ ವಿತರಣೆ, ಸಾರಿಗೆ ವ್ಯವಸ್ಥೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.

ನಂತರ ಮಾದರಿ ನೀತಿಸಂಹಿತೆ ಕೇಂದ್ರ, ವಾರ್ತಾ ಭವನದಲ್ಲಿ ಸ್ಥಾಪಿಸಿದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೇಂದ್ರಕ್ಕೂ ತಂಡ ಭೇಟಿ ನೀಡಿತು. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಜತೆ ಸಂವಾದ ನಡೆಸಿದರು. ತಮ್ಮ ದೇಶದ ಮತ್ತು ಭಾರತದ ಚುನಾವಣೆ ವ್ಯವಸ್ಥೆಗಿರುವ ವ್ಯತ್ಯಾಸದ ಕುರಿತು ಮಾತನಾಡಿದರು.

‘ಭಾರತದಲ್ಲಿ ಚುನಾವಣೆ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆಯುತ್ತದೆ. ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ಇಲ್ಲಿ ಅನುಸರಿಸುವ ವಿಧಾನದಿಂದ ಚುನಾವಣೆ ವೆಚ್ಚ ತಗ್ಗಿಸಬಹುದು. ಭಾರತ ಮತ್ತು ನೇಪಾಳದಲ್ಲಿ ನಡೆಯುವ ಚುನಾವಣೆಗೆ ಸಾಮ್ಯತೆಯಿದೆ. ಭಾರತೀಯರು ಚುನಾವಣೆ ಮೇಲಿಟ್ಟ ವಿಶ್ವಾಸ ಕಂಡು ಖುಷಿಯಾಗಿದೆ’ ಎಂದು ನೇಪಾಳದ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಥಾನೇಶ್ವರಬುಸಾಲ್ ತಿಳಿಸಿದರು.

ಕಾಂಬೋಡಿಯಾದ ರಾಷ್ಟ್ರೀಯ ಚುನಾವಣಾ ಮಂಡಳಿ ಸದಸ್ಯ ಹೆಲ್.ಸರಾಥ್, ಕಾಂಬೋಡಿಯಾದ ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯ‌ ಕಾರ್ಯದರ್ಶಿ ಹೌಟ್ ಬೋರಿನ್, ಮಾಲ್ಡೊವಾದ ಕೇಂದ್ರ ಚುನಾವಣಾ ಆಯೋಗದ ಸದಸ್ಯೆ ಡಾನಾ ಮಂಟೇನುವಾ, ಮಾಲ್ಡೊವಾದ ಕೇಂದ್ರ ಚುನಾವಣಾ ಆಯೋಗದ ಸ್ಥಳೀಯ ಜಿಲ್ಲಾ ಚುನಾವಣಾ ಪರಿಷತ್ ಮುಖ್ಯಸ್ಥ ಆ್ಯಡ್ರಿಯನ್ ಗಮರ್ತಾ ಎಸಾನು, ನೇಪಾಳದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ದಿನೇಶ್ ಕುಮಾರ್ ಥಾಪಾಲಿಯಾ, ಸೀಶೆಲ್‌ನ ಚುನಾವಣಾ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್, ಸೀಶೆಲ್‌ನ ಚುನಾವಣಾ ಆಯೋಗದ ಆಯುಕ್ತ ನೊರ್ಲಿಸ್ ನಿಕೋಲಸ್ ರೋಸ್ ಹೋರೌ, ಟ್ಯುನೀಷಿಯಾದ ಎಲೆಕ್ಷನ್ ಹೈಕಮಿಷನ್‌ನ ಮಾನಸ್ರೀ ಮೊಹ್ಮದ್ ತ್ಲಿಲಿ ಮತ್ತು ಎಲೆಕ್ಷನ್ ಹೈಕಮಿಷನ್‌ನ ಪ್ರಾದೇಶಿಕ ನಿರ್ದೇಶಕ ಜೆಲ್ಲಾಲಿ ನಬೀಲ್ ಈ ತಂಡದಲ್ಲಿದ್ದಾರೆ.

ಮಂಗಳವಾರ (ಮೇ 7) ಜಿಲ್ಲೆಯ ವಿವಿಧ ಮತಗಟ್ಟೆಗಳಿಗೂ ತೆರಳಿ, ಅವರು ಚುನಾವಣೆ ವ್ಯವಸ್ಥೆ ಅಧ್ಯಯನ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT