ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ನಗರದಲ್ಲೇ ಚುನಾವಣೆ ಬಹಿಷ್ಕಾರದ ಕೂಗು

ರೈಲ್ವೆ ಕೆಳ ಸೇತುವೆ ಕಾಮಗಾರಿಗೆ ಸಾರ್ವಜನಿಕರ ಒತ್ತಾಯ
ರಾಮಚಂದ್ರ ಸುತಾರ
Published 12 ಏಪ್ರಿಲ್ 2024, 5:16 IST
Last Updated 12 ಏಪ್ರಿಲ್ 2024, 5:16 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಚುನಾವಣಾ ಆಯೋಗವೂ ಭರ್ಜರಿಯಾಗಿಯೇ ಮತದಾನ ಜಾಗೃತಿ ಮೂಡಿಸುತ್ತಿದೆ. ಆದರೆ, ಕಲಬುರಗಿ ನಗರದ ಒಡಲಿನಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಮಾರ್ದನಿಸುತ್ತಿದೆ.

‘ನಗರದ ಶಕ್ತಿನಗರ, ಬಿದ್ದಾಪುರ ಕಾಲೊನಿ, ದತ್ತ ನಗರ, ಶ್ರಿಶೈಲ ನಗರ ಮತ್ತು ಎನ್‌ಜಿಒ ಕಾಲೊನಿಯಿಂದ ಗೋದುತಾಯಿ ನಗರ ಮತ್ತು ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡು ರೈಲ್ವೆ ಕೆಳ ಸೇತುವೆಗಳು ಮುಚ್ಚಿಹೋಗಿವೆ. ರೈಲ್ವೆ ಕೆಳ ಸೇತುವೆ 566/1 ಮತ್ತು 566/2 ಎರಡಕ್ಕೂ ಮಹಾನಗರ ಪಾಲಿಕೆಯವರು ಕೊಳಚೆ ನೀರು ಹರಿಸುತ್ತಿದ್ದು, ಬಿರುಬಿಸಿಲಲ್ಲೂ ಅದು ಕೆರೆಯಂತಾಗಿದೆ. ಇನ್ನು ಮಳೆಗಾಲದಲ್ಲಿ ನಮ್ಮ ಪರಿಸ್ಥಿತಿ ದೇವರೇ ಗತಿ. ಇದನ್ನು ಸರಿಪಡಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ’ ಎಂದು ಸ್ಥಳೀಯರಾದ ಆರ್.ಆರ್.ಕುಲಕರ್ಣಿ ತಿಳಿಸಿದರು.

‘ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಫೌಜಿಯಾ ತರನ್ನುಮ್‌ ಬಿ. ಅವರು 2018ರಲ್ಲಿ ಪಾಲಿಕೆ ಆಯುಕ್ತರಾಗಿದ್ದರು. ಆಗಿನಿಂದಲೂ ನಾವು ಮನವಿ ಮಾಡುತ್ತಿದ್ದೇವೆ. ಆದರೆ ಪ್ರಯೋಜನ ಮಾತ್ರ ಶೂನ್ಯ. ಇಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಬಡಾವಣೆಗಳು ರೋಗಗಳ ತಾಣವಾಗುತ್ತಿವೆ’ ಎಂದು ಅವರು ಬೇಸರಿಸಿದರು.

‘ಶಕ್ತಿ ನಗರ ಮತ್ತು ದತ್ತ ನಗರದ ಮಧ್ಯೆ ಹಾದು ಹೋಗಿರುವ ರೈಲ್ವೆ ಕೆಳ ಸೇತುವೆಯು ಸಾರ್ವಜನಿಕರಿಗೆ ಸಂಚಾರಕ್ಕೆ ಉಪಯೋಗವಾಗುವ ಬದಲು ಪಾಲಿಕೆಯ ಕೊಳಚೆ ನೀರಿನ ಕೆರೆಯಾಗಿ ಮಾರ್ಪಟ್ಟಿದೆ. ಶಕ್ತಿ ನಗರದ ಚರಂಡಿ ನೀರನ್ನು ತಂದು ಕೆಳಸೇತುವೆಗೆ ಜೋಡಿಸಲಾಗಿದೆ. ವಾಹನ ಸವಾರರು ಮತ್ತು ಜನರು ಮತ್ತೊಂದು ಬದಿಗೆ ಹೋಗಲಿಕ್ಕೆ ಆಗದ ಸ್ಥಿತಿ ನಿರ್ಮಾಣವಾಗಿದೆ. ನಾವು ಬಸ್‌ ನಿಲ್ದಾಣ ತಲುಪಬೇಕೆಂದರೆ ನಾಲ್ಕು ಕಿ.ಮೀ. ಸುತ್ತು ಹಾಕಿ ನ್ಯೂಜೇವರ್ಗಿ ರಸ್ತೆ ಮೂಲಕ ಹೋಗಬೇಕಿದೆ’ ಎಂದು ಸಾರ್ವಜನಿಕರ ಅಳಲು ತೋಡಿಕೊಂಡರು.

‘ಈ ಕುರಿತು ಹಲವು ಬಾರಿ ಪಾಲಿಕೆ ಸದಸ್ಯರಿಗೆ, ಶಾಸಕರಿಗೆ, ಸಚಿವರಿಗೆ, ಅಧಿಕಾರಿಗಳಿಗೆ ಹೇಳಿದರೆ ಈವರೆಗೆ ಯಾವುದೇ ಉಪಯೊಗವಾಗಿಲ್ಲ. ಇದರಿಂದ ಸುತ್ತಲೂ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ದುರ್ನಾತ ಹರಡಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇಲ್ಲಿನ ಜನರು ದುಡಿದಿದ್ದನ್ನು ಆಸ್ಪತ್ರೆಗೆ ಕೊಟ್ಟು ಬರುವಂತಾಗಿದೆ. ಹೀಗಾಗಿ ಪಾಲಿಕೆಯವರು ಕೆಳಸೇತುವೆಯಲ್ಲಿನ ಕೊಳಚೆ ನೀರು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ ಸ್ಥಳೀಯರು.

ಸೇತುವೆ ಸಲುವಾಗಿ ನಿವಾಸಿಗಳು ಎಷ್ಟೇ ಮನವಿ ಪತ್ರ ಕೊಟ್ಟರು ಪ್ರಯೊಜನವಾಗಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ನಾವು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲ್ಲ

-ಮಧುಸೂದನ ಶಾಸ್ತ್ರಿ ದತ್ತ ನಗರ ಕ್ಷೇಮಾಭಿವೃದ್ದಿ ಸಂಘ

ಇಲ್ಲಿ ಕೊಳಚೆ ನೀರು ನಿಲ್ಲುತ್ತಿರುವುದರಿಂದ ಬಡಾವಣೆಯ ಕೊಳವೆಬಾವಿಗಳಲ್ಲಿನ ನೀರೂ ಕಲುಷಿತವಾಗಿದೆ. ನಲ್ಲಿ ನೀರು ವಾಸನೆಯುಕ್ತವಾಗಿದೆ. ಜನ ಬೇಸತ್ತು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ

-ಆರ್.ಆರ್.ಕುಲಕರ್ಣಿ ಸ್ಥಳೀಯರು

100 ಮೀ. ಅಂತರದಲ್ಲೇ ಶಾಸಕ ಜಾಧವ ಮನೆ ಈ ಕೆಳ ಸೇತುವೆಯ ನೂರು ಮೀಟರ್‌ ಅಂತರದಲ್ಲೇ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರ ಪುತ್ರ ಅವಿನಾಶ್‌ ಜಾಧವ ನೂತನ ಮನೆ ನಿರ್ಮಿಸುತ್ತಿದ್ದಾರೆ. ಅವರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT