ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಹೊನ್ನಾಳಿ: ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕೀಯ

ಸಂಸದ ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಎದುರೇ ಅಸಮಾಧಾನ
Published 11 ಏಪ್ರಿಲ್ 2024, 23:29 IST
Last Updated 11 ಏಪ್ರಿಲ್ 2024, 23:29 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನಲ್ಲಿ ಬಿಜೆಪಿಯಲ್ಲಿನ ಬಣ ರಾಜಕೀಯ ಮತ್ತೆ ಸ್ಫೋಟಗೊಂಡಿದೆ. ಪಟ್ಟಣದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಾಲಯದ ಉದ್ಘಾಟನೆ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿಯ ಲೋಕಸಭೆ ಚುನಾವಣೆಯ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎದುರೇ ಕಾರ್ಯಕರ್ತರು ಪರಸ್ಪರ ಆಕ್ರೋಶ ವ್ಯಕ್ತಪಡಿಸಿ, ಬಣ ರಾಜಕೀಯದ ಬಗ್ಗೆ ಅಸಮಾಧಾನ ಹೊರಹಾಕಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಅವರ ಆಪ್ತರ ಕುರಿತು ರೇಣುಕಾಚಾರ್ಯ ಪರವಾಗಿದ್ದ ಕಾರ್ಯಕರ್ತರು ತೀವ್ರ ಅಸಮಾಧಾನ  ವ್ಯಕ್ತಪಡಿಸಿದರೆ, ಸಿದ್ದೇಶ್ವರ ಪರ ಕಾರ್ಯಕರ್ತರು ವಾಗ್ವಾದ ನಡೆಸಿದರು.

‘ತಾಲ್ಲೂಕಿನಲ್ಲಿ ರೇಣುಕಾಚಾರ್ಯರ ವಿರುದ್ಧ ಪಕ್ಷದ ಒಂದು ಬಣ ಕೆಲಸ ಮಾಡುತ್ತಿದೆ. ಅದರ ಹಿಂದೆ ಯಾರಿದ್ದಾರೆ?’ ಎಂದು ಕೆಲವು ಕಾರ್ಯಕರ್ತರು ಮುಖಂಡರನ್ನು ಪ್ರಶ್ನಿಸಿದರು.

‘ತಾಲ್ಲೂಕಿನ ಕುಂದೂರಿನಲ್ಲಿ ಕೆಲವರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕ್ಷೇತ್ರದ ಮಾಜಿ ಸಚಿವರಾದ ರೇಣುಕಾಚಾರ್ಯ ಗಮನಕ್ಕೆ ತಾರದೇ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಸಂಸದರ ಸೂಚನೆ ಇಲ್ಲದೇ, ಅವರ ಬೆಂಬಲ ಇಲ್ಲದೇ ಅವರ ಆಪ್ತ ಬಣ ತಾಲ್ಲೂಕಿನಲ್ಲಿ ಹೇಗೆ ಪ್ರಚಾರ ನಡೆಸಲು ಸಾಧ್ಯ? ಎಂದೂ  ಕೆಲವರು ಪ್ರಶ್ನಿಸಿದರು.

‘ಪಕ್ಷದಲ್ಲೇ ಇರುವವರು ಪ್ರತ್ಯೇಕವಾಗಿ ಪ್ರಚಾರ ನಡೆಸುವಂತೆ ಯಾರು ಸೂಚಿಸಿದರು?’ ಎಂದು ಅವರು ಏರುದನಿಯಲ್ಲೇ ಪ್ರಶ್ನಿಸಿದರು.

ಈ ವೇಳೆ ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದ ರೇಣುಕಾಚಾರ್ಯ, ‘ನಮ್ಮಲ್ಲಿ ಬಣ ರಾಜಕೀಯ ಇಲ್ಲ. ವೇದಿಕೆಯಲ್ಲಿ ಪಕ್ಷದ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಇದ್ದಾರೆ. ಹಲವು  ಪದಾಧಿಕಾರಿಗಳು ಇದ್ದಾರೆ. ನಮ್ಮದೇ ನಿಜವಾದ ಬಿಜೆಪಿ. ವಿಧಾನಸಭಾ ಚುನಾವಣೆಯಲ್ಲೂ ನನ್ನ ವಿರುದ್ಧ ಒಂದು ಗುಂಪು ಕೆಲಸ ಮಾಡಿತ್ತು. ಆ ಗುಂಪು ಹಗಲು ಒಂದು ಪಕ್ಷಕ್ಕೂ, ರಾತ್ರಿ ಇನ್ನೊಂದು ಪಕ್ಷಕ್ಕೂ ಕೆಲಸ ಮಾಡುತ್ತದೆ. ಇದೆಲ್ಲಾ ನಮ್ಮ ಹತ್ತಿರ ನಡೆಯುವುದಿಲ್ಲ’ ಎಂದು ಹೇಳಿದರು.

‘ನಿಮಗೂ ಮೋದಿ ಬೇಕು. ಅವರಿಗೂ ಮೋದಿ ಬೇಕು. ಇಬ್ಬರೂ ಪ್ರಚಾರ ಮಾಡಿ’ ಎಂದು ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದಾಗ ಕಾರ್ಯಕರ್ತರು ಒಪ್ಪಲಿಲ್ಲ.

‘ಆ ಗುಂಪಿನಲ್ಲಿ ಇರುವವರನ್ನು ಕರೆದು ಚರ್ಚಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ ಮನವೊಲಿಸಲು ಯತ್ನಿಸಿದರು. ಬಳಿಕ ರೇಣುಕಾಚಾರ್ಯ ಮಾಶನಾಡಿ, ‘ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಡಿ. ಅಭ್ಯರ್ಥಿ ಪರ ಪ್ರಚಾರಕ್ಕೆ ಸಹಕಾರ ಕೊಡಿ’ ಎಂದು ಸಮಾಧಾನ ಪಡಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಈ ವೇಳೆ ಮೂಕ ಪ್ರೇಕ್ಷಕರಾಗಿದ್ದರು. ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್‌ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ರೇಣುಕಾಚಾರ್ಯ ಬಂಡಾಯದ ಮುನ್ಸೂಚನೆ ನೀಡಿದ್ದರು. ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತಿತರರು ಬಂಡಾಯ ಶಮನಗೊಳಿಸಿದ್ದರು. ನಂತರ ಗುರುವಾರವಷ್ಟೇ ಮೊದಲ ಬಾರಿಗೆ ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿ ಪರ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT