ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ, ಮೋದಿ ಪಾದಕ್ಕೆ ಜೆಡಿಎಸ್ ಅಡವಿಟ್ಟರು: ಬಾಲಕೃಷ್ಣ

Published 20 ಮಾರ್ಚ್ 2024, 13:14 IST
Last Updated 20 ಮಾರ್ಚ್ 2024, 13:14 IST
ಅಕ್ಷರ ಗಾತ್ರ

ರಾಮನಗರ: ‘ಜೆಡಿಎಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಒಕ್ಕಲಿಗರು. ಇಡೀ ಸಮುದಾಯ ನಂಬಿದ್ದ ಪಕ್ಷವನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರ ಪಾದಕ್ಕೆ ಅಡವಿಟ್ಟು ಮುಗಿಸಿದ್ದಾರೆ. ಮುಂದೆ ಒಕ್ಕಲಿಗರು ಹಾಗೂ ಕುಮಾರಸ್ವಾಮಿ ಅವರ ಸ್ಥಿತಿಗತಿ ಏನಾಗಬೇಕು?’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಪ್ರಶ್ನಿಸಿದರು.

ತಾಲ್ಲೂಕಿನ ಜಾಲಮಂಗಲ ರಸ್ತೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ 2 ಸೀಟು ಪಡೆಯುವುದಕ್ಕೆ ತಿಣುಕಾಡುತ್ತಿದೆ. ಕುಮಾರಸ್ವಾಮಿ ಅವರು ಯಾವುದೇ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರ ಹಾಕುತ್ತಾರೆ. ಕಡೆಗೆ ಬೈದುಕೊಂಡು ಆಚೆ ಬರುತ್ತಾರೆ. ಇನ್ನೂ ಒಂದು ತಿಂಗಳಲ್ಲಿ ಮೋದಿ ಮತ್ತು ಅಮಿತ್ ಶಾ ಅವರನ್ನು ಹೇಗೆ ಬೈಯುತ್ತಾರೆಂದು ಕಾದು ನೋಡಿ’ ಎಂದು ವ್ಯಂಗ್ಯವಾಡಿದರು.

‘ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಲು ಸಾಧ್ಯವೇ? ಒಂದು ವೇಳೆ ಅವರ ಹೆಸರನ್ನು  ಘೋಷಣೆ ಮಾಡಿದರೆ, ಆಗ ನಾನೂ ಅವರನ್ನು ಬೆಂಬಲಿಸುತ್ತೇನೆ’ ಎಂದ ಅವರು, ‘ನಾನು ಬಿಜೆಪಿ ಶಾಸಕನಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಸಾಥ್ ಕೊಟ್ಟಿದ್ದೆ. ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಕೇವಲ 4 ಸಾವಿರವಿದ್ದಾಗ, ನಾನು 8 ಸಾವಿರ ಲೀಡ್ ಕೊಡಿಸಿದ್ದೆ’  ಎಂದು ‘ನಾನೇ ಸಾಕಿದ ಗಿಣಿ ನನ್ನನ್ನೇ ಹದ್ದಾಗಿ ಕುಕ್ಕಿದೆ’ ಎಂದು ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

‘ಶಿವರಾತ್ರಿ ಹಬ್ಬದ ಪ್ರಯುಕ್ತ ಕೆಲವೆಡೆ ಗಿಫ್ಟ್ ಕೊಟ್ಟಿದ್ದೇವೆ. ಚುನಾವಣಾ ನೀತಿ ಸಂಹಿತೆ ಬಂದಾಗ ನಿಲ್ಲಿಸಿದ್ದೇವೆ. ಇನ್ನೊಂದಿಷ್ಟು ಜನರಿಗೆ ಕೊಡಬೇಕಿದ್ದು, ಚುನಾವಣೆ ಮುಗಿದ ಬಳಿಕ ಕೊಡುತ್ತೇವೆ. ನೀತಿ ಸಂಹಿತೆ ಇದ್ದಾಗ ಹಂಚುವುದಕ್ಕೆ ನಾವೇನು ದಡ್ಡರಾ? ನಾವು ಸಂಪಾದನೆ ಮಾಡಿದ್ದರಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ಹಂಚುತ್ತೇವೆ. ಆರೋಪ ಮಾಡುವವರ ಬಳಿಯೂ ಹಣವಿದೆ. ಅವರೂ ಬಡವರಿಗೆ ಕೊಡಲಿ’ ಎಂದು ಸವಾಲು ಹಾಕಿದರು.

‘ರಾಮನಗರದಲ್ಲಿ ಸೀರೆ ಮತ್ತು ಡ್ರೆಸ್ ಪೀಸ್ ಸಿಕ್ಕಿರುವುದು ಜೆಡಿಎಸ್‌ನವರು ಸೃಷ್ಟಿಸಿರೋ ನಾಟಕ. ಸ್ಥಳೀಯ ಶಾಸಕರ ಹೆಸರಲ್ಲಿ ಬಿಲ್ ಹಾಕಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡಲು ಮಾಡಿರುವ ಗಿಮಿಕ್. ಗ್ರಾಮಾಂತರ ಕ್ಷೇತ್ರಕ್ಕೆ ಅರೆ ಸೇನಾಪಡೆ ನಿಯೋಜಿಸಬೇಕು ಎಂದು ಹೇಳಿರುವ ಕುಮಾರಸ್ವಾಮಿ ಅವರು ಈಗಾಗಲೇ ಅಲ್ಲಿ ಸೋಲೊಪ್ಪಿಕೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ’

‘ಡಿ.ಕೆ. ಸಹೋದರರು ನಮ್ಮ ಬದುಕಿಗೆ ವಿಷ ಹಾಕ್ತಿದ್ದಾರೆ ಎಂದು ಹೇಳಿರುವ ಎಚ್‌.ಡಿ. ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ. ರಾಜಕೀಯ ವಿರೋಧಿಗಳ ವಿರುದ್ಧ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡುತ್ತಾರೆ. ಚುನಾವಣೆ ಅಂದಮೇಲೆ ಎಲ್ಲವೂ ಇರುತ್ತದೆ. ಚಾಣಕ್ಯನ ತಂತ್ರ ಕುಮಾರಸ್ವಾಮಿ ಅವರಿಗೆ ಚನ್ನಾಗಿ ಗೊತ್ತು. ಅದನ್ನೇ ಇಲ್ಲಿ ಪ್ರಯೋಗಿಸಿ ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ. ಈಗ ಅದೆಲ್ಲಾ ನಡೆಯುವುದಿಲ್ಲ’ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT