ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಅಭಿವೃದ್ಧಿಗೆ ಹಲವು ಭರವಸೆ: ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

Published 22 ಏಪ್ರಿಲ್ 2024, 6:53 IST
Last Updated 22 ಏಪ್ರಿಲ್ 2024, 6:53 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ ಅವರು ಸಿದ್ಧಪಡಿಸಿರುವ ‘ಹಲವು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಭರವಸೆಯುಳ್ಳ ಪ್ರಣಾಳಿಕೆ’ಯನ್ನು ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳು ಸೋಮವಾರ ಬಿಡುಗಡೆ ಮಾಡಿದರು.

‘ಭರವಸೆಗಳನ್ನು ಈಡೇರಿಸಲು ಬದ್ಧವಿರುವುದಾಗಿ ಆಶ್ವಾಸನೆ ನೀಡಿದ ಅವರು, ಜನರು ಪಕ್ಷವನ್ನು ಬೆಂಬಲಿಸಬೇಕು’ ಎಂದು ಕೋರಿದರು.

ನರಸಿಂಹರಾಜ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ‘ಕಳೆದ 10 ವರ್ಷಗಳಿಂದ ಮೈಸೂರು- ಕೊಡಗಿಗೆ ಅಪಾರ ನಷ್ಟವಾಗಿದೆ. ಹಿಂದಿನ ಸಂಸದರು, ಚುನಾವಣೆಗೆ ಮುನ್ನ ನೀಡಿದ್ದ ಯಾವುದೇ ಆಶ್ವಾಸನೆಗಳ ಬಗ್ಗೆ ಮಾತನಾಡಲೇ ಇಲ್ಲ; ಅನುಷ್ಠಾನಗೊಳಿಸಲೂ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ಅಭ್ಯರ್ಥಿ ಲಕ್ಷ್ಮಣ ಅವರು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಪಕ್ಷವು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಾವು ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ್ದ ಪಂಚ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದೆ ಕ್ಷೇತ್ರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಪ್ರಣಾಳಿಕೆಯಲ್ಲಿ ನಾವು ತಿಳಿಸಿದ್ದೇವೆ’ ಎಂದು ಹೇಳಿದರು.

ಅಭ್ಯರ್ಥಿಯ ದೂರದೃಷ್ಟಿ: ‘ಹಿಂದಿನ ಸಂಸದರಿಗೆ ನಾವು ಸಲಹೆಗಳನ್ನು ಕೊಟ್ಟಿದ್ದೆವು.‌ ಆದರೆ, ಸ್ಪಂದಿಸಲಿಲ್ಲ. ಬಹಿರಂಗ ಚರ್ಚೆಗೆ ಆಹ್ವಾನವನ್ನೂ ನೀಡಿದ್ದೆವು. ಆಗಲೂ ಬರಲಿಲ್ಲ. ನಮ್ಮ ಅಭ್ಯರ್ಥಿ ಜನರೊಂದಿಗೆ ನಿಲ್ಲುವ ಕನಸನ್ನು ಮುಂದಿಟ್ಟಿದ್ದಾರೆ. ಅವರ ಕಾಳಜಿ–ಬದ್ಧತೆಯನ್ನು ಜನರು ಬೆಂಬಲಿಸಬೇಕು’ ಎಂದು ಕೋರಿದರು.

ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಲಕ್ಷ್ಮಣ ಹಲವು ದಶಕಗಳಿಂದ ಬಹಳಷ್ಟು ಜನಪರ ಹೋರಾಟಗಳಲ್ಲಿ ಪಾಲ್ಗೊಂಡವರು. ಜನರೊಂದಿಗೆ ‌ಒಡನಾಟದಲ್ಲೇ ಇರುವುದರಿಂದ ದೂರದೃಷ್ಟಿಯನ್ನು ಹೊಂದಿದ್ದಾರೆ’ ಎಂದರು.

‘ಬಿಜೆಪಿಯವರು ಜಾತಿ– ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆಯೇ ಹೊರತು, ಅವರು ಯಾವುದೇ ಪ್ರಣಾಳಿಕೆಯನ್ನೂ ಹೊರತಂದಿಲ್ಲ. ಆದ್ದರಿಂದ ಜನರ ಬೆಂಬಲ ನಮಗೆ ಸಿಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ‌ಗೌಡ, ‘ಅಭ್ಯರ್ಥಿ ಹೇಗೆ ಜನಪರವಾಗಿ ಇದ್ದಾರೆ ಎಂಬುದಕ್ಕೆ ಲಕ್ಷ್ಮಣ ಅವರು ಹೊರತಂದಿರುವ ಪ್ರಣಾಳಿಕೆಯೇ ಸಾಕ್ಷಿಯಾಗಿದೆ. ಅವರನ್ನು ಮತದಾರರು ಬೆಂಬಲಿಸಿದರೆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಅನುಮಾನವಿಲ್ಲ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಖಂಡರಾದ ಪುರುಷೋತ್ತಮ, ಎಚ್. ವಿ. ರಾಜೀವ್, ಎಂ‌.ಪ್ರದೀಪ್ ಕುಮಾರ್, ಬಿ.ಎಂ. ರಾಮು ಪಾಲ್ಗೊಂಡಿದ್ದರು.

‘ಬಿಜೆಪಿಯವರ ದೃಷ್ಟಿಕೋನ ಏನು?’

ಅಭ್ಯರ್ಥಿ ಲಕ್ಷ್ಮಣ ಮಾತನಾಡಿ, ‘ಕ್ಷೇತ್ರಕ್ಕೆ ನಾವು ಏನು ಮಾಡಲಿದ್ದೇವೆ ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ರಾಜ್ಯ ಸರ್ಕಾರದ ನೆರವಿದ್ದರೆ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಸಹಾಯವಾಗಲಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಕೆಲಸ ಸುಗಮವಾಗಲಿದೆ’ ಎಂದರು.

‘ಕ್ಷೇತ್ರದಲ್ಲಿ ಪ್ರವಾಸೋದ್ಯಮ ಹಾಗೂ ಐಟಿ ಕ್ಷೇತ್ರವನ್ನು ಬಲಪಡಿಸಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಭರವಸೆಗಳನ್ನು ಈಡೇರಿಸುವುದಕ್ಕೆ ಬದ್ಧವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ ನಂತರವೇ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.‌

‘ನಾನು ನೀಡಿರುವ ಭರವಸೆಗಳನ್ನು ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ತರಲು ಬದ್ಧನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯವರ ದೃಷ್ಟಿಕೋನ ಏನೆಂಬುದನ್ನು ತಿಳಿಸಬೇಕು’ ಎಂದು ಲಕ್ಷ್ಮಣ ಒತ್ತಾಯಿಸಿದರು.

‘ಜನರ ಭಾವನೆಯೊಂದಿಗೆ ಬಿಜೆಪಿ ಚೆಲ್ಲಾಟ’

‘ಬಿಜೆಪಿಯವರು ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಆದರೆ, ಕಾಂಗ್ರೆಸ್ ದೇಶದಾದ್ಯಂತ ಎಲ್ಲ ವರ್ಗದವರ ಅಭಿವೃದ್ಧಿಯ ಆಶಯವನ್ನು ಇಟ್ಟುಕೊಂಡಿದೆ. ಮುಸಲ್ಮಾನರ ಹೆಸರು ಹೇಳದೇ ಬಿಜೆಪಿಯವರ ಬೇಳೆಕಾಳು ಬೇಯುವುದಿಲ್ಲ. ಅವರ ಅಸ್ತಿತ್ವಕ್ಕಾಗಿ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ’ ಎಂದು ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು.

‘ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ‌ಯನ್ನು ತಕ್ಷಣವೇ ಬಂಧಿಸಲಾಗಿದೆ. ಕಾನೂನು ಎಲ್ಲರಿಗೂ‌ ಒಂದೇ. ಅದನ್ನು ಯಾರೂ ಬೇರೆ ರೀತಿಯಲ್ಲಿ ಬಿಂಬಿಸಬಾರದು. ಆ ಯುವತಿ–ಆರೋಪಿ ನಡುವೆ ಏನು ನಡೆದಿದೆ ಎನ್ನುವುದು ಗೊತ್ತಿಲ್ಲ. ಆದರೆ, ಆರೋಪಿಗೆ ಕ್ಷಮೆ ಇಲ್ಲ. ಇಂಥ ಘಟನೆ ನಡೆಯಬಾರದಿತ್ತು. ಸಾವಿನಲ್ಲೂ ರಾಜಕೀಯ ಮಾಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT