ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

JDSನಲ್ಲಿ ಸಸ್ಪೆಂಡ್ ಆಗಿದ್ದ ಸಿದ್ದು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ: ಸುರೇಶ್‌

ಯಾರನ್ನೂ ಅಡ್ಡ ಹಾಕಬೇಡಿ; ಹಾಕಿದರೆ ನಾಯಕರಾಗುತ್ತಾರೆ: ಡಿ.ಕೆ. ಸುರೇಶ್‌
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಮನಗರ: ‘ಜೆಡಿಎಸ್‌ನಲ್ಲಿ ಅಮಾನತು ಆಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದು ಎರಡು ಸಲ ಮುಖ್ಯಮಂತ್ರಿಯಾಗಿ ನಮ್ಮ ನಾಯಕರಾಗಿಲ್ಲವೆ? ಯಾರ ಯೋಗ ಹೇಗಿರುತ್ತದೊ, ಅದು ಹಾಗೆಯೇ ಆಗುತ್ತದೆ. ಹಾಗಾಗಿ, ಯಾರನ್ನೂ ಅಡ್ಡ ಹಾಕಲು ಹೋಗಬೇಡಿ. ಅಡ್ಡ ಹಾಕಲು ಹೋದರೆ ಅವರು ನಾಯಕರಾಗುತ್ತಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ನಗರದ ಹೊರವಲಯದಲ್ಲಿ ಶುಕ್ರವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,‘ಯಾರನ್ನೂ ಅಡ್ಡ ಹಾಕದೆ ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ನಮ್ಮ ಹಣೆಬರಹದಲ್ಲಿ ಏನು ಬರೆದಿದೆಯೊ ಅದು ಖಂಡಿತಾ ಆಗುತ್ತದೆ. ಹೀಗೆಯೇ ಆಗಬೇಕು ಅಂತ ಬರೆದಿದ್ದರೆ ಹುಡುಕಿಕೊಂಡು ಬರುತ್ತದೆ’ ಎಂದರು. 

‘ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗರಲ್ಲ. ಜೆಡಿಎಸ್‌ನಲ್ಲಿ ಅವರನ್ನು ಅಮಾನತು ಮಾಡಿ, ಬೀಗ ಹಾಕಿ ಕೂರಿಸಿದ್ರು. ಅವರನ್ನು ಕಾಂಗ್ರೆಸ್ಸಿಗೆ ಕರೆದುಕೊಂಡು ಬಂದು ಕೂರಿಸಿದ್ದು ಯಾರು? ಅವರ ಯೋಗ ಎಲ್ಲಿ ಬರೆದಿತ್ತು? ಇಲ್ಲಿ (ಕಾಂಗ್ರೆಸ್‌ನಲ್ಲಿ) ಬರೆದಿತ್ತು. ಬೇರೆ ಪಕ್ಷದವರಾದರೂ ನಾವು ಅವರಿಗೆ ಅವಕಾಶ ಮಾಡಿ ಕೊಟ್ಟೆವು. ಅದರಿಂದ ಅವರು ಎರಡು ಸಲ ಮುಖ್ಯಮಂತ್ರಿಯಾಗಿ ನಮ್ಮ ನಾಯಕರಾಗಿದ್ದಾರೆ. ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿರುವ ಅವರು, ಸಮಾಜಕ್ಕೆ ಹಾಗೂ ಬಡವರಿಗಾಗಿ ಒಂದಿಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ’ ಎಂದರು.

‘ನಿಮ್ಮ ಯೋಗಾನೂ ಹೀಗೆಯೇ ಬರೆದಿದ್ದರೆ ಬರೆದಿರಬಹುದು. ಹಾಗಾಗಿ, ಯಾರನ್ನೂ ಅಡ್ಡ ಹಾಕುವುದಕ್ಕೆ ಹೋಗಬೇಡಿ. ಪಕ್ಷ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ಸುರೇಶ್ ಅವರ ಭಾಷಣದ ಈ ವಿಡಿಯೊ ಸಾಮಾಜಿಕ ಜಾಲತಾಣ, ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬೇರೆ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರ ಕುರಿತು ಅವರು ಈ ರೀತಿ ಮಾತನಾಡಿದ್ದಾರೆ ಎಂದು ಸಭೆಯಲ್ಲಿದ್ದ ಪಕ್ಷದ ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT