ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಶಾಸಕರ ಶ್ರಮ; ನಾಲ್ಕೂ ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ

ಸುನಿಲ್‌ ಬೋಸ್‌ಗೆ ಹನೂರು ಕ್ಷೇತ್ರದಲ್ಲಿ ಗರಿಷ್ಠ ‌36,957 ಮತಗಳ ಮುನ್ನಡೆ
Published 6 ಜೂನ್ 2024, 5:46 IST
Last Updated 6 ಜೂನ್ 2024, 5:46 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿದೆ. 

ಅದರಲ್ಲೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೈಸೂರು ಗ್ರಾಮಾಂತರ ಭಾಗದ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬೋಸ್‌ ಅವರಿಗೆ 1,08,281 ಮತಗಳ ಮುನ್ನಡೆ ಸಿಕ್ಕಿದ್ದರೆ, ಮೈಸೂರು ಭಾಗದ ವರುಣ, ನಂಜನಗೂಡು, ಎಚ್‌.ಡಿ.ಕೋಟೆ ಮತ್ತು ತಿ.ನರಸೀಪುರ ಕ್ಷೇತ್ರಗಳಲ್ಲಿ ಅವರಿಗೆ ಸಿಕ್ಕ ಮುನ್ನಡೆ 80,589 ಮತಗಳು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಹನೂರಿನಲ್ಲಿ ಜೆಡಿಎಸ್‌ ಶಾಸಕ ಇದ್ದಾರೆ. ಹಾಗಿದ್ದರೂ, ಎಂಟು ಕ್ಷೇತ್ರಗಳ ಪೈಕಿ ಗರಿಷ್ಠ ಹನೂರಿನಲ್ಲಿಯೇ ಬೋಸ್‌ ಮುನ್ನಡೆ ಕಾಯ್ದುಕೊಂಡಿದ್ದರು. ಅಲ್ಲಿ ಬಿಜೆಪಿಯ ಎಸ್‌.ಬಾಲರಾಜ್‌ ಅವರಿಗಿಂತ 36,957 ಹೆಚ್ಚು ಮತಗಳನ್ನು ಗಳಿಸಿದ್ದರು. 

ಜಿಲ್ಲೆಯ ಕೊಳ್ಳೇಗಾಲದಲ್ಲಿ 36,016 ಮತಗಳು, ಚಾಮರಾಜನಗರದಲ್ಲಿ 29,326 ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ 17,982 ಮತಗಳಿಂದ ಮುನ್ನಡೆ ಸಾಧಿಸಿದ್ದರು. 

ಕಳೆದ ಚುನಾವಣೆಯಲ್ಲಿ ಹೊಡೆತ: 2019ರ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆ ವ್ಯಾಪ್ತಿಗೆ ಬರುವ ನಂಜನಗೂಡು ಕ್ಷೇತ್ರಗಳು ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರಿಗೆ ದೊಡ್ಡ ಹೊಡೆತ ನೀಡಿದ್ದವು. ಇದು ಅವರ ಸೋಲಿಗೂ ಕಾರಣವಾಗಿತ್ತು. 

ಧ್ರುವನಾರಾಯಣ ಅವರು ಎಚ್‌.ಡಿ.ಕೋಟೆಯಲ್ಲಿ 3,780, ವರುಣದಲ್ಲಿ 9,002, ತಿ.ನರಸೀಪುರದಲ್ಲಿ 6,500, ಹನೂರು 14,250 ಮತ್ತು ಕೊಳ್ಳೇಗಾಲದಲ್ಲಿ 194 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರಿಂದ ಮುನ್ನಡೆ ಕಾಯ್ದುಕೊಂಡಿದ್ದರೂ, ಚಾಮರಾಜನಗರ ಕ್ಷೇತ್ರದಲ್ಲಿ 9,681, ಗುಂಡ್ಲುಪೇಟೆಯಲ್ಲಿ 15,510 ಮತ್ತು ನಂಜನಗೂಡು ಕ್ಷೇತ್ರದಲ್ಲಿ 9,791 ಮತಗಳಿಂದ ಹಿನ್ನಡೆ ಅನುಭವಿಸಿ ಸೋತಿದ್ದರು.

ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದೂ (ಸಿ.ಪುಟ್ಟರಂಗಶೆಟ್ಟಿ) ಧ್ರುವನಾರಾಯಣ ಅವರಿಗೆ ಮುನ್ನಡೆ ಬಾರದೇ ಇದ್ದುದು, ಆ ಸಮಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಚಾಮರಾಜನಗರ ಕ್ಷೇತ್ರದಲ್ಲಿ ಆದ ಹಿನ್ನಡೆಯೇ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿತ್ತು. 

ಶಾಸಕರ ಶ್ರಮ: : ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಅಂತಹ ತಪ್ಪುಗಳು ಆಗಿಲ್ಲ. ಹೀಗಾಗಿ, ಚಾಮರಾಜನಗರ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರಿ ಅಂತರದ ಮುನ್ನಡೆ ದೊರೆತಿದೆ. ಚಾಮರಾಜನಗರ ಕ್ಷೇತ್ರದಲ್ಲಂತು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುಟ್ಟರಂಗಶೆಟ್ಟಿ ಅವರು ಗೆದ್ದಿರುವ ಮತಗಳ ಅಂತರಕ್ಕಿಂತಲೂ (7,533) ಹೆಚ್ಚಿನ ಮತಗಳ ಅಂತರದಿಂದ ಬೋಸ್‌ ಮುನ್ನಡೆ ಸಾಧಿಸಿದ್ದರು.

ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣತೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಶಾಸಕರಿಗೂ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ತಾಕೀತು ಮಾಡಿದ್ದರು. ವಿಶೇಷವಾಗಿ ಪುಟ್ಟರಂಗಶೆಟ್ಟಿ ಅವರಿಗೆ, ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆಯಾಗಬಾರದು ಎಂದು ಖಂಡತುಂಡವಾಗಿ ತಿಳಿಸಿದ್ದರು ಎಂದು ಹೇಳುತ್ತವೆ ಪಕ್ಷದ ಮೂಲಗಳು. 

‘ಮಗನನ್ನು ಗೆಲ್ಲಿಸಿಕೊಂಡು ಬರುವೆ’ ಎಂದು ವರಿಷ್ಠರಿಗೆ ವಾಗ್ದಾನ ನೀಡಿದ್ದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮಗನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಹೊರಿಸಿದ್ದರು. ಹನೂರಿನಲ್ಲಿ ಹಾಲಿ ಶಾಸಕರಲಿಲ್ಲದಿದ್ದರೂ, ಮಾಜಿ ಶಾಸಕ ಆರ್‌.ನರೇಂದ್ರ ಅವರಿಗೆ ಹೊಣೆಗಾರಿಕೆ ನೀಡಿದ್ದರು. 

ಈ ಬಾರಿ ತಮ್ಮ ಕ್ಷೇತ್ರದಿಂದ ಗರಿಷ್ಠ ಪ್ರಮಾಣದ ಅಂತರದ ಮುನ್ನಡೆ ಕೊಡಿಸಬೇಕು ಎಂಬ ಉದ್ದೇಶದಿಂದ ಮೂವರೂ ಶಾಸಕರು, ಹನೂರಿನ ಮಾಜಿ ಶಾಸಕರು ಕಾಲಿಗೆ ಚಕ್ರ ಸುತ್ತಿಕೊಂಡು ಸುಡು ಬಿಸಿಲಿನಲ್ಲೂ ಕ್ಷೇತ್ರದಾದ್ಯಂತ ಓಡಾಡಿದ್ದರು. ಅದರ ಫಲವೇ ಸುನಿಲ್‌ ಬೋಸ್‌ಗೆ ಗರಿಷ್ಠ ಅಂತರದಿಂದ ಸಿಕ್ಕ ಗೆಲುವು.

ಲಿಂಗಾಯತರೂ ಬೆಂಬಲಿಸಿದ್ದಾರೆ

2019ರ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದು ನಿಜ. ಈ ಬಾರಿ 20 ಸಾವಿರಕ್ಕೂ ಹೆಚ್ಚು ಮುನ್ನಡೆ ಸಿಕ್ಕಿದೆ. ನನ್ನ ಪ್ರಕಾರ 25 ಸಾವಿರ ಹೆಚ್ಚು ಮತಗಳು ಸಿಗಬೇಕಿತ್ತು. ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೆ. ಇದಲ್ಲದೇ ಬಿಜೆಪಿಯ ಸಂವಿಧಾನ ವಿರೋಧಿ ಪ್ರಜಾಪ್ರಭುತ್ವ ನೀತಿಗಳು ಎಲ್ಲ ಸಮುದಾಯದವರನ್ನು ಒಟ್ಟಾಗಿಸಿದ್ದವು. ಅವರೆಲ್ಲ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಯಾವಾಗಲೂ ಬಿಜೆಪಿಯನ್ನು ಬೆಂಬಲಿಸುವ ಲಿಂಗಾಯತರೂ ಬೋಸ್‌ಗೆ ಮತ ನೀಡಿದ್ದಾರೆ. 

–ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಕ್ಷೇತ್ರ ಶಾಸಕ

ಸಿ.ಎಂಗೆ ಭರವಸೆ ನೀಡಿದ್ದೆ

ನಾನು ವಿಧಾನಸಭಾ ಚುನಾವಣೆಯಲ್ಲಿ 59519 ಮತಗಳ ಅಂತರದಿಂದ ಗೆದ್ದಿದ್ದೆ. ಅದಕ್ಕಿಂತಲೂ ಹೆಚ್ಚಿನ ಮುನ್ನಡೆ ಕೊಡಿಸಬೇಕು ಎಂದು ಮುಖ್ಯಮಂತ್ರಿಯವರು ಹೇಳಿದ್ದರು. 30 ಸಾವಿರಕ್ಕಿಂತಲೂ ಹೆಚ್ಚು ಮತಗಳು ಸಿಗುತ್ತವೆ ಎಂದು ನಾನು ಭರವಸೆ ನೀಡಿದ್ದೆ. 33 ಸಾವಿರ ಹೆಚ್ಚುವರಿ ಮತಗಳು ಕೊಳ್ಳೇಗಾಲದಲ್ಲಿ ಬಂದಿವೆ. ಪ್ರತಿ ಪಂಚಾಯಿತಿ ಹೋಬಳಿಗಳಿಗೂ ಭೇಟಿ ನೀಡಿ ಮತಯಾಚನೆ ಮಾಡಿದ್ದೆ. ಕಾರ್ಯಕರ್ತರು ಮುಖಂಡರು ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದರು. ಸರ್ಕಾರದ ಗ್ಯಾರಂಟಿ ಯೋಜನೆಗಳೂ ಕೆಲಸ ಮಾಡಿವೆ.  

–ಎ.ಆರ್‌.ಕೃಷ್ಣಮೂರ್ತಿ ಕೊಳ್ಳೇಗಾಲ ಶಾಸಕ

ಜನರು ಕೈ ಬಿಟ್ಟಿಲ್ಲ

ಶಾಸಕನಾಗಿ ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿರುವುದರ ಜೊತೆಗೆ ಅನುದಾನವನ್ನೂ ತರುತ್ತಿದ್ದೇನೆ. ಈ ಚುನಾವಣೆಯಲ್ಲೂ  ಜನರು ನಮ್ಮ ಕೈ ಬಿಟ್ಟಿಲ್ಲ. ವಿಧಾನಸಭಾ ಚುನಾವಣೆಗೆ ಮಾಡಿದ ಪ್ರಚಾರದ ರೀತಿಯಲ್ಲೇ ಈ ಬಾರಿಯೂ ಮತಯಾಚನೆ ಮಾಡಿದ್ದೆ. ಮುಂದೆಯೂ ಕಾಂಗ್ರೆಸ್‌ ಪಕ್ಷವು ಜನರ ಪರವಾಗಿ ಕೆಲಸ ಮಾಡಲಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸ ಮುಂದುವರಿಸುವೆ.

–ಎಚ್‌.ಎಂ.ಗಣೇಶ್‌ ಪ್ರಸಾದ್‌ ಗುಂಡ್ಲುಪೇಟೆ ಶಾಸಕ

ಜನರಿಗೆ ಅರ್ಥವಾಗಿದೆ 

ಹನೂರು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವಾಗಲೂ ಮುನ್ನಡೆ ಸಿಗುತ್ತದೆ. 2019ರಲ್ಲಿ ನಮ್ಮ ಕ್ಷೇತ್ರದಲ್ಲಿ ಧ್ರುವನಾರಾಯಣ ಗರಿಷ್ಠ ಮತಗಳ ಮುನ್ನಡೆ ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪಪ್ರಚಾರ ಸೇರದಂತೆ ವಿವಿಧ ಕಾರಣಳಿಂದ ನನಗೆ ಸೋಲಾಯಿತು. ವರ್ಷದಿಂದ ಏನೇನಾಗಿದೆ ಎಂದು ಜನರು ನೋಡಿದ್ದಾರೆ. ಅವರಿಗೂ ಅರ್ಥವಾಗಿದೆ. ನಾನು ಕೂಡ ಮುಖಂಡರು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದೆ. ಗರಿಷ್ಠ ಮುನ್ನಡೆ ಗಳಿಸುವುದಕ್ಕೆ ಪ್ರಯತ್ನಿಸೋಣ ಎಂದು ಅವರನ್ನು ಹುರಿದುಂಬಿಸಿದ್ದೆ. 

– ಆರ್‌.ನರೇಂದ್ರ ಹನೂರು ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT