ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಅವಿನಾಭಾವ ಸಂಬಂಧವಿದ್ದರೆ ಅನುಮತಿ ಕೊಡಿಸಿ– ದೇವೇಗೌಡರಿಗೆ ಸಿಎಂ ಸವಾಲು

Published 28 ಮಾರ್ಚ್ 2024, 11:57 IST
Last Updated 28 ಮಾರ್ಚ್ 2024, 11:57 IST
ಅಕ್ಷರ ಗಾತ್ರ

ರಾಮನಗರ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳುವ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಚುನಾವಣೆ ಬಳಿಕ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ದೇವೇಗೌಡರು, ಅಲ್ಲಿಯವರೆಗೆ ಕಾಯದೆ ಮುಂಚೆಯೇ ಅನುಮತಿ ಕೊಡಿಸಲಿ’ ಎಂದರು.

‘ಮೈತ್ರಿಯಾದ ಬಳಿಕ ದೇವೇಗೌಡ ಮತ್ತು ಮೋದಿ ಅವರು ಗಳಸ್ಯ– ಕಂಠಸ್ಯ ಆಗಿದ್ದಾರೆ. ಮೋದಿ ಸಹವಾಸ ಮಾಡಿ ದೇವೇಗೌಡರು ಸಹ ಸುಳ್ಳು ಹೇಳುವುದಕ್ಕೆ ಶುರು ಮಾಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶಕ್ಕೆ ಅವರ ಕೊಡುಗೆ ಶೂನ್ಯ. ನುಡಿದಂತೆ ಎಂದಿಗೂ ನಡೆದುಕೊಂಡಿಲ್ಲ. ಈ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಂದೇ’ ಎಂದು ವಾಗ್ದಾಳಿ ನಡೆಸಿದರು.

‘ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ, ಆಗ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ತಾವು ಹೋಗಿ ನಿಂತಿದ್ದಾರೆ. ಅಲ್ಲಿ ಅವರಿಗೆ ಸೋಲು ಖಚಿತ. ಮಂಡ್ಯದ ಹೆಸರು ಹೇಳಿಕೊಂಡು ರಾಜಕೀಯ ಮಾಡಿರುವ ಅವರು, ಅಲ್ಲಿಗೆ ಏನಾದರೂ ಕೆಲಸ ಮಾಡಿದ್ದರೆ ತಾನೇ ಜನ ಮತ ಹಾಕಿ ಗೆಲ್ಲಿಸೋದು’ ಎಂದು ವ್ಯಂಗ್ಯವಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಪಕ್ಷಾತೀತವಾಗಿ ನಾವು ಮೇಕೆದಾಟು ಪಾದಯಾತ್ರೆ ಕೈಗೊಂಡಾಗ ದೇವೇಗೌಡರು ಬೆಂಬಲ ಕೊಡಲಿಲ್ಲ. ಈಗ, ಕಾವೇರಿ ಜಲಾನಯನ ಪ್ರದೇಶದಲ್ಲಿರುವ 3 ಕ್ಷೇತ್ರಗಳಲ್ಲಿ ಅವರ ಕುಟುಂಬದ ಸದಸ್ಯರೇ ಸ್ಪರ್ಧಿಸಿದ್ದು, ರೈತರು ಎಲ್ಲಿ ತಮ್ಮನ್ನು ತಿರಸ್ಕರಿಸುತ್ತಾರೊ ಎಂಬ ಭಯದಿಂದ ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ’ ಎಂದು ಕುಹುಕವಾಡಿದರು.

ಸುಳ್ಳೇ ಮೋದಿ ಗ್ಯಾರಂಟಿ. ಒಬ್ಬರು ಸುಳ್ಳು ಹೇಳಿದರೆ, ಮತ್ತೊಬ್ಬರು ಕಣ್ಣೀರು ಹಾಕುತ್ತಾರೆ. ಕೆಲಸ ಮಾಡುವ ನಾನು ಬೇಕೋ ಅಥವಾ ಅವರು ಬೇಕೋ ಎಂದು ಜನ ತೀರ್ಮಾನಿಸಲಿ.
– ಡಿ.ಕೆ. ಸುರೇಶ್, ಕಾಂಗ್ರೆಸ್ ಅಭ್ಯರ್ಥಿ

‘ಸುರೇಶ್ ಬೇಕೋ, ವೈಟ್ ಕಾಲರ್ ಮಂಜುನಾಥ್ ಬೇಕೋ?’

‘ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣದಲ್ಲಿದ್ದು ಜನಸೇವೆ ಮಾಡಿದ್ದಾರಾ? ಸುರೇಶ್ ಅವರು ಪಂಚಾಯಿತಿ ಸದಸ್ಯನಂತೆ‌ ಕೆಲಸ ಮಾಡಿದ್ದಾರೆ. ಜನರ ನಡುವೆ ನಿಂತು ಕಷ್ಟ–ಸುಖಗಳಿಗೆ ಸ್ಪಂದಿಸುವ ಸುರೇಶ್ ಬೇಕೋ ಅಥವಾ ವೈಟ್ ಕಾಲರ್ ಮಂಜುನಾಥ್ ಬೇಕೋ ಎಂಬುದನ್ನು ಕ್ಷೇತ್ರದ ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಸುರೇಶ್ ಗೆಲುವು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ದೇವೇಗೌಡರು ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿದ್ದವರು. ಅವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಎರಡು ಸಲ ಸಿ.ಎಂ ಆಗಿದ್ದರು. ಆದರೂ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಅಳಿಯನನ್ನು ತಮ್ಮ ಪಕ್ಷದ ಬದಲು ಬಿಜೆಪಿಯಿಂದ ನಿಲ್ಲಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT