ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಸ್ವ ನಾಮ ಪ್ರೇಮಿ: ಸಂಗಣ್ಣ ಕರಡಿ ವ್ಯಂಗ್ಯ

Published 18 ಏಪ್ರಿಲ್ 2024, 15:45 IST
Last Updated 18 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದ ಬಿಜೆಪಿಯ ಮಾಜಿ ಸಂಸದ ಸಂಗಣ್ಣ ಕರಡಿ ‘ಪ್ರಣಾಳಿಕೆಯಲ್ಲಿ ಮೋದಿ ಮೋದಿ ಎಂದೇ ಇದೆ, ಬಿಜೆಪಿ ಹೆಸರೇ ಇಲ್ಲ. ಸ್ವ ನಾಮ ಪ್ರೇಮಿ ಯಾರಾದರೂ ಇದ್ದಾರೆಂದರೆ ಅವರು ನರೇಂದ್ರ ಮೋದಿ’ ಎಂದು ಜರಿದರು.

ತಾಲ್ಲೂಕಿನ ಹಿರೇಮನ್ನಾಪುರದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಪರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯುವುದು ಸಂವಿಧಾನ ಉಳಿಸಲು ಅದನ್ನು ಗಮನದಲ್ಲಿರಿಸಿಕೊಂಡು ಮತದಾರರು ನಮ್ಮ ಪಕ್ಷಕ್ಕೆ ಮತಹಾಕಬೇಕು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲ್ಲುವುದು ಖಚಿತ’ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಗುಣಗಾನ ಮಾಡಿದರು.

ಜಿಲ್ಲೆಯಲ್ಲಿನ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಅವರು, ‘ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ಅವರನ್ನೂ ಹೊಗಳಲು ಸಂಗಣ್ಣ ಮರೆಯಲಿಲ್ಲ. ರಾಯರಡ್ಡಿ ಅವರಂಥ ಪ್ರಬುದ್ಧ ನಾಯಕರು ಇರುವುದರಿಂದಲೇ ಜಿಲ್ಲೆಯಲ್ಲಿ ಮೆಹಬೂಬ ನಗರ, ಗದಗ ವಾಡಿ ರೈಲ್ವೆ ಮಾರ್ಗಗಳಿಗೆ ಚಾಲನೆ ದೊರೆತಿದೆ. ಈಗ ರಾಜದಲ್ಲಿ ನಮ್ಮದೇ (ಕಾಂಗ್ರೆಸ್‌) ಇರುವುದರಿಂದ ತಂಗಡಗಿ ಮತ್ತು ರಾಯರಡ್ಡಿ ಅವರ ಸಹಕಾರದೊಂದಿಗೆ ಮತ್ತು ತಾವು ಸೇರಿ ಈ ಭಾಗದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುತ್ತೇವೆ. ಹಿರೇಮನ್ನಾಪುರ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ, ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಸೇರಿದಂತೆ ಅನೇಕ ಪ್ರಮುಖರು ಮಾತನಾಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಪ್ರಮುಖರಾದ ಜನಾರ್ದನ ಹುಲಗಿ, ವಿ.ಆರ್‌.ಪಾಟೀಲ, ಮಾಲತಿ ನಾಯಕ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

ಹುಟ್ಟಿಸಿದವರ ಹೆಸರಷ್ಟೇ ಹೇಳ್ತೇವೆ: ‘ನಾನು ಏನು ಮಾಡುತ್ತಾನೆಂಬುದು ಈ ತಾಲ್ಲೂಕಿನ ಜನರಿಗೆ ಗೊತ್ತಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ, ಯಾವ ಪಕ್ಷಕ್ಕೆ ಮಾತು ಕೊಟ್ಟಿದ್ದೇವೆ ಆ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇವೆ. ಇದಕ್ಕೆ ಶರಣಬಸವೇಶ್ವರನ ಮೇಲೆ ಆಣೆ. ಅಷ್ಟೇ ಅಲ್ಲ ಒಬ್ಬರಿಗೆ ಹುಟ್ಟಿ ಇನ್ನೊಬ್ಬರ ಹೆಸರು ಹೇಳಲ್ಲ, ಆ ರೀತಿ ಹೇಳುವವರು ಬೇರೆಯವರು ಇಲ್ಲಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ತಾಲ್ಲೂಕಿನ ತಳುವಗೇರಾದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಗುಡುಗಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಅತಿ ಹೆಚ್ಚು ಮತಗಳನ್ನು ರಾಜಶೇಖರ ಹಿಟ್ನಾಳ ಅವರಿಗೆ ನೀಡುವ ಮೂಲಕ ಬಯ್ಯಾಪುರ ಮತ್ತು ಸಂಗಣ್ಣ ಕರಡಿ ಅವರ ಸ್ವಾಭಿಮಾನ ಎಂಥದ್ದು ಎಂಬುದನ್ನು ಶಾಸಕ ದೊಡ್ಡನಗೌಡ ಪಾಟೀಲರಿಗೆ ಮನವರಿಕೆ ಮಾಡಿಕೊಡಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT