ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ರೇವಣ್ಣ ಪ್ರಧಾನಿ ಮೋದಿಯವರ ನಿಜವಾದ ಪರಿವಾರ: ಜಿಗ್ನೇಶ್‌ ಮೇವಾನಿ

Published 2 ಮೇ 2024, 14:26 IST
Last Updated 2 ಮೇ 2024, 14:26 IST
ಅಕ್ಷರ ಗಾತ್ರ

ಬೀದರ್‌: ‘ಸುಮಾರು ಮೂರು ಸಾವಿರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿಜವಾದ ಪರಿವಾರ’ ಎಂದು ಗುಜರಾತಿನ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೇವಾನಿ ಟೀಕಿಸಿದರು.

ಪ್ರಜ್ವಲ್‌ ರೇವಣ್ಣನವರಿಗೆ ಸಂಬಂಧಿಸಿದ ಸೆಕ್ಸ್‌ ಟೇಪ್‌ಗಳಿವೆಯೆಂದು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಗೊತ್ತಿತ್ತು. ಪ್ರಜ್ವಲ್‌ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಅರಿತಿದ್ದರು. 16 ವರ್ಷದ ಬಾಲಕಿಯಿಂದ 65 ವರ್ಷದ ತಾಯಿ ಸಮಾನ ಮಹಿಳೆ ಮೇಲೆ ಪ್ರಜ್ವಲ್‌ ದೌರ್ಜನ್ಯ ಎಸಗಿದ್ದಾನೆ. ಇಂತಹ ಚಾರಿತ್ರ್ಯಹೀನ ವ್ಯಕ್ತಿಯ ಮೇಲೆ ಕೈಯಿಟ್ಟು, ಅವರ ಪರ ಮೋದಿಯವರು ಪ್ರಚಾರ ನಡೆಸಿ, ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮತದಾರರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಬಸವಣ್ಣನವರ ಕರ್ಮಭೂಮಿಯಲ್ಲಿ ಅವರ ಪರಂಪರೆಗೆ ಮಾಡಿದ ದೊಡ್ಡ ಅಪಮಾನವಿದು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅತ್ಯಾಚಾರ ಎಸಗಿದ ವ್ಯಕ್ತಿ ಏಕಾಏಕಿ ಜರ್ಮನಿಗೆ ಓಡಿ ಹೋಗುತ್ತಾನೆ. ಚೋಕ್ಸಿ, ಮಲ್ಯ ಕೂಡ ಇದೇ ರೀತಿ ಓಡಿ ಹೋಗಿದ್ದರು. ಈಗ ಅತ್ಯಾಚಾರಿಗಳು ಹೋಗುತ್ತಿದ್ದಾರೆ. ನವದೆಹಲಿಯಲ್ಲಿ ಕ್ರೀಡಾಪಟುಗಳು ಲೈಂಗಿಕ ಶೋಷಣೆ ವಿರುದ್ಧ ಪ್ರತಿಭಟಿಸಿದ್ದರು. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿತ್ತು. ಅದರ ಬಗ್ಗೆ ಮೋದಿ ಚಕಾರ ಎತ್ತಲಿಲ್ಲ. ಮೌನ ವಹಿಸಿದ್ದರು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಅದರ ಬಗ್ಗೆ ತನಿಖೆ ನಡೆಸದೆ, ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಲಾಗಿತ್ತು. ಮಹಿಳೆಯ ಮನೆಯವರು ಕೊನೆಯ ಬಾರಿಗೆ ಆಕೆಯ ಮುಖ ಕೂಡ ನೋಡಲಾಗಲಿಲ್ಲ. ಇದು ಬಿಜೆಪಿ, ಆರ್‌ಎಸ್‌ಎಸ್‌ ಮನಃಸ್ಥಿತಿ ಎಂದು ಹೇಳಿದರು.

ಈ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲಿದೆಯೇ ಎಂಬ ಆತಂಕ ದೇಶದ ಜನರನ್ನು ಕಾಡುತ್ತಿದೆ. ಆರ್‌ಎಸ್‌ಎಸ್‌, ಬಿಜೆಪಿಯವರು ಕಳೆದ ಹತ್ತು ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಡೆಸಿದ ದಾಳಿಯಿಂದ ಸಹಜವಾಗಿಯೇ ಜನರಿಗೆ ಈ ಪ್ರಶ್ನೆ ಕಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಪತ್ರಕರ್ತರು, ಹೋರಾಟಗಾರರು, ವಿರೋಧ ಪಕ್ಷದ ನಾಯಕರನ್ನು ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯ ಮೂಲಕ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ನಾನು ಪ್ರಧಾನಿ ವಿರುದ್ಧ ಅಸ್ಸಾಂನಲ್ಲಿದ್ದು ಟ್ವೀಟ್‌ ಮಾಡಿದಾಗ ನನ್ನನ್ನು ಅಲ್ಲಿಯೇ ಬಂಧಿಸಲಾಗಿತ್ತು. ಇದು ಎಲ್ಲರ ಜೊತೆಗೂ ಆಗುತ್ತಿದೆ. ಪ್ರಜಾಪ್ರಭುತ್ವ ಕೊನೆಗಾಣಿಸುವ ಪ್ರಯತ್ನವಲ್ಲದೇ ಮತ್ತೇನೂ? 1925ರಿಂದ ಆರ್‌ಎಸ್‌ಎಸ್‌ ಮನುಸ್ಮೃತಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಲೇ ಇದೆ ಎಂದು ಆರೋಪಿಸಿದರು.

ನಿರುದ್ಯೋಗದಿಂದ ಯುವಕರು ಹತಾಶರಾಗಿದ್ದಾರೆ. 6 ಕೋಟಿ ಜನ ಮೋದಿಯವರ ನೀತಿಗಳಿಂದ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಮೋದಿಯವರು ಹಿಂದೂ –ಮುಸ್ಲಿಂ, ಭಾರತ– ಪಾಕಿಸ್ತಾನ, ಮಂಗಳಸೂತ್ರದ ಕುರಿತು ಮಾತುಗಳನ್ನು ಆಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಮುಕ್ತಿ ಕೊಡುವುದು, ಸರ್ಕಾರಿ ನೌಕರಿಗಳನ್ನು ತುಂಬುವುದರ ಬಗ್ಗೆ ಗ್ಯಾರಂಟಿ ಕೊಡುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿ, ಆರ್‌ಎಸ್‌ಎಸ್‌ನವರು ಮಹಿಳಾ ವಿರೋಧಿಗಳು. ಅತ್ಯಾಚಾರಿಗಳನ್ನು ರಕ್ಷಿಸುವವರು. ಇಂತಹವರಿಗೆ ಮತ ಕೊಡಬೇಕೇ?
–ಜಿಗ್ನೇಶ್‌ ಮೇವಾನಿ, ಗುಜರಾತ್ ಶಾಸಕ

‘400 ಸೀಟುಗಳಲ್ಲ ₹400ಕ್ಕೆ ಸಿಲಿಂಡರ್‌ ಕೊಡಲಿ’

‘ಬಿಜೆಪಿಯವರು ಚುನಾವಣೆಯುದ್ದಕ್ಕೂ ಪದೇ ಪದೇ ಈ ಸಲ 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅಪ್ಪಿತಪ್ಪಿಯೂ ₹400ಕ್ಕೆ ಸಿಲಿಂಡರ್‌ ಕೊಡುತ್ತೇವೆ. ಜನರಿಗೆ ನೆರವಾಗುವುದಾಗಿ ಹೇಳುತ್ತಿಲ್ಲ’ ಎಂದು ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.

ಬಿಜೆಪಿಯವರು 400 ಸೀಟುಗಳನ್ನು ಗೆದ್ದರೆ ಭಾರತದ ಸಂವಿಧಾನವನ್ನು ಕೊನೆಗಾಣಿಸುತ್ತಾರೆ. ಪ್ರಧಾನಿ ಆರ್ಥಿಕ ಸಲಹೆಗಾರ ವಿವೇಕ್‌ ದೇವರಾಯ್‌, ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತುಗಳನ್ನು ಹಲವು ಸಲ ಮಾತನಾಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತ್ತೀಚೆಗೆ ಟ್ವೀಟ್‌ ಮಾಡಿ ಬ್ರಾಹ್ಮಣ, ಕ್ಷತ್ರಿಯರ ಸೇವೆ ಮಾಡುವುದೇ ಶೂದ್ರರ ಕೆಲಸ ಎಂದು ಹೇಳಿದ್ದರು. ಇದು ಆರ್‌ಎಸ್‌ಎಸ್‌, ಬಿಜೆಪಿಯವರ ಯೋಚನೆ. ಹೇಗಾದರೂ ಮಾಡಿ ಸಂವಿಧಾನ ಬದಲಿಸಬೇಕು ಎಂಬ ಹವಣಿಕೆಯಲ್ಲಿದ್ದಾರೆ. ಹಾಗಾಗಿ ಜನ ಎಚ್ಚರ ವಹಿಸಬೇಕೆಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT