ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ ಲೋಕಸಭಾ ಕ್ಷೇತ್ರ | ಸಾಗರ್‌ ಖಂಡ್ರೆ ಗೆದ್ದಾಯ್ತು, ಮುಂದೇನು..?

ಬೀದರ್ ಲೋಕಸಭಾ ಕ್ಷೇತ್ರ: ಯುವ ಸಂಸದನ ಮುಂದಿವೆ ಹತ್ತು ಹಲವು ಸವಾಲುಗಳು
Published 6 ಜೂನ್ 2024, 5:13 IST
Last Updated 6 ಜೂನ್ 2024, 5:13 IST
ಅಕ್ಷರ ಗಾತ್ರ

ಬೀದರ್‌: ತೀವ್ರ ಕುತೂಹಲ ಕೆರಳಿಸಿದ್ದ ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು ಬಿಜೆಪಿಯ ಭಗವಂತ ಖೂಬಾ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿ ಸಂಸತ್ತು ಪ್ರವೇಶಿಸಿದ್ದಾರೆ.

ಸಾಗರ್‌ ಖಂಡ್ರೆ ಗೆದ್ದಾಯ್ತು, ಈಗ ಮುಂದೇನು? ಇದು ಸಾರ್ವಜನಿಕರ ಪ್ರಶ್ನೆ. ಚುನಾವಣೆಯಲ್ಲಿ ಗೆದ್ದ ನಂತರ ಅವರ ಕೆಲಸ ಪೂರ್ಣಗೊಂಡಿಲ್ಲ. ಅವರ ಮುಂದೆ ಹತ್ತು ಹಲವು ಸವಾಲುಗಳಿವೆ. ಅವುಗಳನ್ನು ಅವರು ಹೇಗೆ ಮೆಟ್ಟಿ ನಿಲ್ಲುತ್ತಾರೆ. ಮತದಾರರ ನಿರೀಕ್ಷೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದಕ್ಕೆ ಸಮಯವೇ ಉತ್ತರ ಕೊಡಲಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್‌ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಗಿಲ್ಲ. ಮಹಾನಗರಗಳಿಗೆ ಯುವಕರು ವಲಸೆ ಹೋಗುತ್ತಾರೆ. ಈ ಹಿಂದಿನ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೂಡ ಈ ನಿಟ್ಟಿನಲ್ಲಿ ಏನು ಮಾಡಲಿಲ್ಲ. ಅವರು ಸಂಸದರಿದ್ದ ಎರಡೂ ಅವಧಿಯಲ್ಲಿ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಉದ್ಯೋಗ ಸೃಷ್ಟಿಗೆ ಪೂರಕವಾದ ಕೈಗಾರಿಕೆಗಳನ್ನು ಅವರು ಜಿಲ್ಲೆಗೆ ತರಬಹುದಿತ್ತು. ಆದರೆ, ಆ ಕಡೆಗೆ ಅವರು ಗಮನವೇ ಹರಿಸಲಿಲ್ಲ. ಆ ಕೆಲಸ ಸಾಗರ್‌ ಖಂಡ್ರೆಯವರು ಮಾಡುತ್ತಾರೆಯೇ?

ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಿಂದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸ್ಥಳೀಯವಾಗಿ ಯುವಕರಿಗೆ ಉದ್ಯೋಗಗಳನ್ನು ಒದಗಿಸಬಹುದು. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯದ ಕೊರತೆ ಹೆಚ್ಚಿದ್ದು, ಅದನ್ನು ನೀಗಿಸುವ ಹೊಣೆಗಾರಿಕೆಯೂ ಅವರ ಮೇಲಿದೆ.

ಇನ್ನು, ಬೀದರ್‌–ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಏಕಮಾತ್ರ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿದೆ. 700 ಕಿ.ಮೀ ದೂರದಲ್ಲಿರುವ ರಾಜಧಾನಿ ಬೆಂಗಳೂರಿಗೆ ಕ್ರಮಿಸಲು ಸ್ಥಳೀಯರು ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ವಿಮಾನ ಸೇವೆ ಆರಂಭಿಸಬೇಕೆಂದು ಸ್ಥಳೀಯರು ಸತತವಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಅದು ಈಡೇರಿಲ್ಲ. ಇನ್ನು, ಬೀದರ್‌ ವಾಯಾ ಕಲಬುರಗಿ ಮಾರ್ಗವಾಗಿ ಸಂಜೆ ಬೀದರ್‌ನಿಂದ ಹೊರಟು ಬೆಳಿಗ್ಗೆ ಬೆಂಗಳೂರು ಸೇರುವಂತೆ ರೈಲು ಓಡಿಸಬೇಕೆಂಬ ಬೇಡಿಕೆಯೂ ಇದೆ.

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ಅನುದಾನ ತಂದು, ಹೆಚ್ಚಿನ ಮೂಲಸೌಕರ್ಯ ನಗರಕ್ಕೆ ಒದಗಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ಅಗತ್ಯ ಸೌಕರ್ಯ, ನೀರಾವರಿ ಪ್ರದೇಶದ ವಿಸ್ತರಣೆ, ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ. ಸಮಯ ಬಂದಾಗಲೆಲ್ಲ ಬೀದರ್‌ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕೆಂಬುದು ಜನರ ನಿರೀಕ್ಷೆಗಳಾಗಿವೆ.

ಮತದಾರರು ನನ್ನ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುವೆ.

-ಸಾಗರ್‌ ಖಂಡ್ರೆ ಸಂಸದ

ಬೀದರ್‌ ದಕ್ಷಿಣ ಬೀದರ್‌ನಲ್ಲಿ ಹೆಚ್ಚಿನ ಅಂತರ

ಸಾಗರ್‌ ಖಂಡ್ರೆಯವರು ಲೋಕಸಭಾ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ಬೀದರ್‌ ಕ್ಷೇತ್ರ ಹಾಗೂ ಹುಮನಾಬಾದ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಭಗವಂತ ಖೂಬಾ ಅವರಿಗಿಂತ ಹೆಚ್ಚಿನ ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಬೀದರ್‌ ದಕ್ಷಿಣದಲ್ಲಿ ಸಾಗರ್‌ ಅವರು ಪ್ರತಿಸ್ಪರ್ಧಿ ಭಗವಂತ ಖೂಬಾ ಅವರಿಗಿಂತ 36820 ಹೆಚ್ಚು ಮತಗಳನ್ನು ಪಡೆದಿದ್ದಾರೆ. ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ 32477 ಹುಮನಾಬಾದಿನಲ್ಲಿ 26922 ಭಾಲ್ಕಿಯಲ್ಲಿ 16743 ಅಧಿಕ ಮತಗಳನ್ನು ಗಳಿಸಿದ್ದಾರೆ.

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ

ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಬೀದರ್‌ ಭಾಲ್ಕಿ ಮತ್ತು ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಮಿಕ್ಕುಳಿದ ಐದು ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಾರೆ. ಬೀದರ್‌ ದಕ್ಷಿಣ ಔರಾದ್‌ ಹುಮನಾಬಾದ್‌ ಬಸವಕಲ್ಯಾಣ ಹಾಗೂ ಚಿಂಚೋಳಿ ಸೇರಿವೆ.

ಬಿಜೆಪಿ ಶಾಸಕರು ಪ್ರತಿನಿಧಿಸುವ ಎಲ್ಲ ಐದೂ ಕ್ಷೇತ್ರಗಳಲ್ಲಿ ಸಾಗರ್‌ ಖಂಡ್ರೆಯವರು ಬಿಜೆಪಿಗಿಂತ ಅಧಿಕ ಮತಗಳನ್ನು ಗಳಿಸಿದ್ದಾರೆ. ಔರಾದ್‌ ಶಾಸಕ ಪ್ರಭು ಚವಾಣ್‌ ಅವರು ಅನಾರೋಗ್ಯದ ಕಾರಣ ಕೊಟ್ಟು ಪ್ರಚಾರದಿಂದ ದೂರ ಉಳಿದಿದ್ದರಿಂದ ಸಹಜವಾಗಿಯೇ ಅಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ಆದರೆ ಮಿಕ್ಕುಳಿದ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಹಿನ್ನಡೆ ಏಕೆ ಉಂಟಾಯಿತು? ಬೀದರ್‌ ಮತ್ತು ಭಾಲ್ಕಿ ಕ್ಷೇತ್ರಗಳನ್ನು ಕ್ರಮವಾಗಿ ಸಚಿವರಾದ ರಹೀಂ ಖಾನ್‌ ಈಶ್ವರ ಬಿ. ಖಂಡ್ರೆ ಪ್ರತಿನಿಧಿಸುತ್ತಿದ್ದು ಇಬ್ಬರು ಪಕ್ಷಕ್ಕೆ ಮುನ್ನಡೆ ತಂದುಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆದ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ ಅವರು ಪ್ರತಿನಿಧಿಸುವ ಆಳಂದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ 65273 ಬಿಜೆಪಿ 78209 ಮತ ಮಡೆದಿದ್ದು ಅಂತರ 12936 ಇದೆ.

ಚಿಂಚೋಳಿಯಲ್ಲಿ ಕಾಂಗ್ರೆಸ್‌ 67360 ಮತ ಗಳಿಸಿದರೆ ಬಿಜೆಪಿ 61445 ಗಳಿಸಿದೆ. 5915 ಮತಗಳ ಲೀಡ್‌ ಸಿಕ್ಕಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ 82618 ಬಿಜೆಪಿ 73161 ಮತ ಪಡೆದರೆ ಗೆಲುವಿನ ಅಂತರ 9457 ಇದೆ. ಹುಮನಾಬಾದ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ 96009 ಬಿಜೆಪಿ 69087 ಅಂತರ 26922 ಬೀದರ್‌ ದಕ್ಷಿಣದಲ್ಲಿ ಕಾಂಗ್ರೆಸ್ 90776 ಬಿಜೆಪಿ 53956 ಅಂತರ 36820 ಔರಾದ ಕ್ಷೇತ್ರದಲ್ಲಿ ಕಾಂಗ್ರೆಸ್ 79699 ಬಿಜೆಪಿ 65701 ಅಂತರ 13998. ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ 94247 ಬಿಜೆಪಿ 61770 ಅಂತರ 32477 ಭಾಲ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ 89180 ಬಿಜೆಪಿ 72437 ಅಂತರ 16743 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT