ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ: MLC ಎಚ್. ವಿಶ್ವನಾಥ್‌

Published 10 ಏಪ್ರಿಲ್ 2024, 13:32 IST
Last Updated 10 ಏಪ್ರಿಲ್ 2024, 13:32 IST
ಅಕ್ಷರ ಗಾತ್ರ

ಮೈಸೂರು: ‘ರಾಜಕಾರಣದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ನಾನು ಬಿಜೆಪಿ‌ಯ ಎಂಎಲ್‌ಸಿ. ತಾಂತ್ರಿಕವಾಗಿ ಏನೇ ಹೇಳಿದರೂ ಬಿಜೆಪಿ‌ಯ ವಿಧಾನಪರಿಷತ್‌ ಸದಸ್ಯ ಅಲ್ಲ ಎನ್ನಲಾಗುವುದಿಲ್ಲ’ ಎಂದರು.

‘ಬಿಜೆಪಿಯಲ್ಲಿ ಇದ್ದ ಮಾತ್ರಕ್ಕೆ ಅದನ್ನೇ ಹೊಗಳಬೇಕೆಂದೇನೂ ಇಲ್ಲ. ತಪ್ಪಿ ಮಾಡಿದವರು ಯಾರೇ ಅದರೂ ಅದರ ವಿರುದ್ಧ ಮಾತನಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಟಿಕೆಟ್ ಕೇಳಿದ್ದು‌ ನಿಜ. ಯದುವೀರ್ ಅವರನ್ನು ಅವಿರೋಧವಾಗಿ ಗೆಲ್ಲಿಸಿ ಎಂದು ಹೇಳಿರುವುದೂ ನಿಜ’ ಎಂದು ಹೇಳಿದರು.

‘ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ಇಡೀ ದೇಶದಲ್ಲೇ ರಾಜಕೀಯ ‌ಧ್ರುವೀಕರಣ ಆಗುತ್ತಿದೆ. ಜತೆಗೆ ಪಕ್ಷ ರಾಜಕಾರಣ ಸತ್ತು ಬಹಳ ವರ್ಷವಾಗಿದೆ. ಈಗ ಇರುವುದು ವ್ಯಕ್ತಿ ರಾಜಕಾರಣ. ಇಂದು ಯಾರೂ ಪಕ್ಷದ ಹೆಸರು‌ ಹೇಳುತ್ತಿಲ್ಲ. ಬದಲಿಗೆ ವ್ಯಕ್ತಿ ರಾಜಕಾರಣ ವೈಭವೀಕರಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ‌ ಸಿದ್ದರಾಮಯ್ಯ ಹೆಸರಿನಲ್ಲಿ ರಾಜಕಾರಣ‌ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.

‘ಪಂಚ ಗ್ಯಾರಂಟಿಗಳಿಂದ ಜನರಿಗೆ ಅನುಕೂಲ ಆಗಿದೆ. ಆದರೆ, ನೂರಕ್ಕೆ‌ ನೂರರಷ್ಟು ಮತವಾಗಿ ಪರಿವರ್ತನೆ ಆಗುತ್ತದೆ ಎನ್ನಲು‌ ಸಾಧ್ಯವಿಲ್ಲ. ಫಲಾನುಭವಿಗಳೆಲ್ಲರೂ ಬೆಂಬಲಿಸುತ್ತಾರೆ ಎನ್ನಲಾಗದು. ಅಂತೆಯೇ ಕಾಂಗ್ರೆಸ್‌ಗೆ ಪ್ರಯೋಜನ ಆಗುವುದಿಲ್ಲ ಎನ್ನುವುದಕ್ಕೂ ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಯಾಕಾಗಬಾರದು?’ ಎಂದ ಅವರು, ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ನಾವ್ಯಾರಾದರೂ ತಪ್ಪಿಸಲಾದೀತೇ?’ ಎಂದು ಮರು ಪ್ರಶ್ನೆ ಹಾಕಿದರು.

‘ರಾಜ್ಯಕ್ಕೆ ಯದುವಂಶದ ಕೊಡುಗೆ ಅಪಾರ. ಕುಡಿಯುವ ನೀರಿನಿಂದ ಹಿಡಿದು ರಸ್ತೆ, ವಿದ್ಯುತ್‌ವರೆಗೂ ಅವರ ಕೊಡುಗೆ ಇದೆ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ. ಆ ವಂಶದ ಕುಡಿ ಯದುವೀರ್ ಅವರಿಗೆ ಮತ ನೀಡುವ ಮೂಲಕ ಋಣ ತೀರಿಸಬೇಕು. ನಾನೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT