ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ: ಕುಟುಂಬ ರಾಜಕಾರಣದ ಪ್ರತಿಷ್ಠೆ ಪಣಕ್ಕೆ

Published 22 ಏಪ್ರಿಲ್ 2024, 0:44 IST
Last Updated 22 ಏಪ್ರಿಲ್ 2024, 0:44 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಎರಡು ಕುಟುಂಬಗಳ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಇಬ್ಬರ ಮಧ್ಯದ ಜಿದ್ದಾಜಿದ್ದಿನ ಹೋರಾಟದ ಅಖಾಡವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್ ನಾಲ್ಕನೇ ಸಲ ಸ್ಪರ್ಧಿಸಿದ್ದಾರೆ. ಇವರಿಗೆ ಈ ಬಾರಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಅಳಿಯ, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಎದುರಾಳಿ.

ಡಿ.ಕೆ. ಸುರೇಶ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ. ಡಾ. ಮಂಜುನಾಥ್, ದೇವೇಗೌಡರ ಅಳಿಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ಬಾಮೈದ.

ಶಿವಕುಮಾರ್‌ ಮತ್ತು ದೇವೇಗೌಡರ ಕುಟುಂಬಗಳು ಇಲ್ಲಿ ನಾಲ್ಕು ದಶಕದಿಂದ ಲೋಕಸಭಾ ಚುನಾವಣೆಗಳಲ್ಲಿ ಸೋಲು–ಗೆಲುವಿನೊಂದಿಗೆ ಮುಖಾಮುಖಿಯಾಗುತ್ತಲೇ ಬಂದಿವೆ. ಈ ಬಾರಿ ಎರಡು ಕುಟುಂಬಗಳ ಜೊತೆ ಬಿಜೆಪಿಯೂ ತನ್ನ ಪ್ರತಿಷ್ಠೆ ಪಣಕ್ಕಿಟ್ಟಿರುವುದರಿಂದ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿಯು ಸುರೇಶ್ ಗೆಲುವಿನ ಹಾದಿ ಸುಗಮಗೊಳಿಸಿತ್ತು. ಹಿಂದಿನ ಮೂರು ಚುನಾವಣೆಗಳಲ್ಲಿ ಸುಲಭವಾಗಿ ಗೆಲುವಿನ ದಡ ಸೇರಿದ್ದ ಸುರೇಶ್, ಈ ಬಾರಿ ಗೆಲುವಿಗಾಗಿ ಬೆವರು ಹರಿಸಬೇಕಾಗಿದೆ.

ಸಂಸದರಾಗಿ ತಾವು ಮಾಡಿರುವ ಅಭಿವೃದ್ಧಿ ಕೆಲಸ, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದಾದ ಅನ್ಯಾಯಗಳ ಬಗ್ಗೆ ಹೇಳುತ್ತಾ ಮತ ಯಾಚಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಲೆ ನೆಚ್ಚಿಕೊಂಡಿರುವ ಅವರಿಗೆ ಅಣ್ಣನ ಅಭಯವಿದೆ.

ಡಾ. ಮಂಜುನಾಥ್ ರಾಜಕೀಯಕ್ಕೆ ಹೊಸಬರಾದರೂ, ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಕೆಲಸದಿಂದಾಗಿ ಜನರಿಗೆ ಪರಿಚಿತರು. ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ಅದರ ನೆರಳಿಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಅವರ ಈ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸಿ ಸುರೇಶ್ ಅವರನ್ನು ಮಣಿಸುವ ತಂತ್ರ ಮೈತ್ರಿಕೂಟದ್ದು.

ಇದೇ ಕಾರಣಕ್ಕಾಗಿ ಬಿಜೆಪಿಯ ಅಮಿತ್ ಶಾ ಸಹ ಕ್ಷೇತ್ರಕ್ಕೆ ಬಂದು ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಗೌಡರ ಕುಟುಂಬದ ಬಹುತೇಕ ಸದಸ್ಯರು ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಡಿ.ಕೆ ಸಹೋದರರ ವಿರುದ್ಧ ಸತತ ವಾಗ್ದಾಳಿ ಜೊತೆಗೆ ಪ್ರಧಾನಿ ಮೋದಿ ಹೆಸರನ್ನು ಅಸ್ತ್ರ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಡಾ. ಮಂಜುನಾಥ್ ಗೆದ್ದರೆ ಕೇಂದ್ರ ಸಚಿವರಾಗಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಅಭ್ಯರ್ಥಿಗಳಿಬ್ಬರೂ ಒಕ್ಕಲಿಗ ಸಮುದಾಯದವರಾಗಿರುವುದರಿಂದ ಜಾತಿ ಮತಗಳು ವಿಭಜನೆಯಾಗಲಿವೆ. ಬಿಜೆಪಿ–ಜೆಡಿಎಸ್‌ ತಮ್ಮ ಸಾಂಪ್ರದಾಯಿಕ ಮತಗಳ ಜೊತೆಗೆ ಮಂಜುನಾಥ್ ವ್ಯಕ್ತಿತ್ವದಿಂದಾಗಿ ಪಕ್ಷಾತೀತ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಲ್ಲಿವೆ. ಕಾಂಗ್ರೆಸ್ ಸಹ ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯಕ್ಕಿಂತ ಅಭ್ಯರ್ಥಿಗಳಿಬ್ಬರ ಕುಟುಂಬಗಳ ನಡುವಣ ವೈಯಕ್ತಿಕ ಪ್ರತಿಷ್ಠೆ ಹೆಚ್ಚು ಸದ್ದು ಮಾಡುತ್ತಿದೆ. ಎರಡೂ ಕುಟುಂಬಗಳ ಜಿದ್ದಾಜಿದ್ದಿಯ ಹೋರಾಟದಿಂದಾಗಿ ಕ್ಷೇತ್ರದ ಜನರು ಈ ಬಾರಿ ಗೌಡರ ಕುಟುಂಬದ ಹೊಸ ಪ್ರತಿನಿಧಿಗೆ ಅವಕಾಶ ಕೊಡುತ್ತಾರಾ? ಅಥವಾ ಸುರೇಶ್‌ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಹುದ್ದೆಗೇರಲು ಕಾಯುತ್ತಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಶಕ್ತಿ ತುಂಬುತ್ತಾರಾ ಎಂಬ ಕುತೂಹಲ ಎಲ್ಲೆಡೆ ವ್ಯಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT