ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭೆ ಚುನಾವಣೆ: ಸ್ಪಷ್ಟವಾದ ನೀಲನಕ್ಷೆ ಯಾರಲ್ಲೂ ಇಲ್ಲ

Published 22 ಏಪ್ರಿಲ್ 2024, 0:53 IST
Last Updated 22 ಏಪ್ರಿಲ್ 2024, 0:53 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರವೂ ಸೇರಿರುವುದರಿಂದ ‌ರಾಜ್ಯದ ಗಮನ ಸೆಳೆದಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಈ ಬಾರಿ ‘ಕೈ’ – ‘ಕಮಲ’ದ ನಡುವೆ ನೇರ ಹಣಾಹಣಿಗೆ ವೇದಿಕೆಯಾಗಿದೆ. 

ಬಿಜೆಪಿಯಿಂದ ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಬಾಲರಾಜು ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಮಗ ಸುನಿಲ್‌ ಬೋಸ್‌ ಅಖಾಡದಲ್ಲಿದ್ದಾರೆ. ಇಬ್ಬರಿಗೂ ಇದು ಮೊದಲ ಲೋಕಸಭಾ ಚುನಾವಣೆ.

ತವರಿನಲ್ಲಿ ಸೋತರೆ ತಮ್ಮ ವರ್ಚಸ್ಸು, ಸ್ಥಾನಮಾನಕ್ಕೆ ಹಿನ್ನಡೆಯಾಗಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ‘ವರುಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ನೀಡಿದರೆ ನನ್ನನ್ನು ಯಾರೂ ಮುಟ್ಟುವುದಕ್ಕಾಗುವುದಿಲ್ಲ’ ಎಂದು ಈಗಾಗಲೇ ಹೇಳಿದ್ದಾರೆ. ಅಲ್ಲದೇ, ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರೊಂದಿಗಿದ್ದ ಮುನಿಸು ಮರೆತು, ಖುದ್ದಾಗಿ ಅವರ ಮನೆಗೆ ಹೋಗಿ ಬೋಸ್‌ ಗೆಲುವಿಗೆ ನೆರವನ್ನೂ ಯಾಚಿಸಿದ್ದಾರೆ.

ಮಗನನ್ನು ಗೆಲ್ಲಿಸಿಕೊಂಡು ಬರುವ ವಾಗ್ದಾನವನ್ನು ವರಿಷ್ಠರಿಗೆ ನೀಡಿರುವ ಸಚಿವ ಮಹದೇವಪ್ಪ, ಅಭ್ಯರ್ಥಿಗಿಂತ ಹೆಚ್ಚಾಗಿ ತಾವೇ ಓಡಾಡುತ್ತಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ದಲಿತ ಸಂಘಟನೆಗಳ ಮುಖಂಡರು, ಬಿಜೆಪಿ ಮುಖಂಡರು, ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.  

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ‘ಭದ್ರಕೋಟೆ’ಯನ್ನು ಭೇದಿಸಿದ್ದ ಬಿಜೆಪಿ, ಕ್ಷೇತ್ರವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್‌  ‘ಸ್ವಾಭಿಮಾನ’ವನ್ನು ಪಣಕ್ಕಿಟ್ಟು ರೋಚಕವಾಗಿ ಗೆದ್ದಿದ್ದರು. ಈಗ ರಾಜಕೀಯ ನಿವೃತ್ತಿ ನಂತರದ ಅವರ ‘ಮೌನ’ವು ಬಿಜೆಪಿಯ ಉತ್ಸಾಹವನ್ನು ಕುಗ್ಗಿಸಿದೆ. ಅವರ ಅಳಿಯಂದಿರಿಬ್ಬರೂ ಪಕ್ಷದಲ್ಲೇ ಇರುವುದು ಬಿಜೆ‍ಪಿಗೆ ಕತ್ತಲ ಹಾದಿಯಲ್ಲಿ ಕೋಲ್ಮಿಂಚಿನಂತಾಗಿದೆ.

‘ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ’ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರ ಕೆಲವು ಬೆಂಬಲಿಗರೂ ‘ಕೈ’ಗೆ ಜೈ ಎಂದಿದ್ದಾರೆ.     

ಬಿಜೆ‍ಪಿಯ ಬಾಲರಾಜು, ದಿವಂಗತ ಆರ್.ಧ್ರುವನಾರಾಯಣ ಅವರೊಂದಿಗಿದ್ದವರು. ಧ್ರುವನಾರಾಯಣ ಅಭಿಮಾನಿಗಳು ಪಕ್ಷವನ್ನು ಬೆಂಬಲಿಸಬಹುದು, ಜೆಡಿಎಸ್‌ ಮೈತ್ರಿ ಕೂಡ ಶಕ್ತಿ ತುಂಬಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ.

ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕಿಳಿದಿರುವ ಬೋಸ್‌ ಅವರಿಗೆ ಕ್ಷೇತ್ರದ ಜನಸಂಪರ್ಕ ಕಡಿಮೆ. ನಾಮಪತ್ರ ಸಲ್ಲಿಕೆ ದಿನವೇ ಅವರ ವಿರುದ್ಧ ‘ಗೋ ಬ್ಯಾಕ್‌ ಸುನಿಲ್‌’ ಎಂಬ ಭಿತ್ತಿಪತ್ರಗಳು ಕಂಡು ಬಂದಿದ್ದವು. ‘ಪ್ರಮಾಣಪತ್ರದಲ್ಲಿ ಕುಟುಂಬದ ಮಾಹಿತಿ ಮರೆಮಾಚಿದ್ದಾರೆ’ ಎಂಬ ವಿಷಯವೂ ಕಣದಲ್ಲಿ ಚರ್ಚೆಯಾಗುತ್ತಿದೆ.

ಬಿಎಸ್‌ಪಿ ಅಭ್ಯರ್ಥಿ ಕಣದಲ್ಲಿದ್ದರೂ, ಬಿಜೆಪಿ –ಕಾಂಗ್ರೆಸ್‌ ನಡುವಿನ ಪೈಪೋಟಿಯಲ್ಲಿ ಛಾಪು ಒತ್ತುವ ಸಾಧ್ಯತೆ ಕ್ಷೀಣ.

ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಈ ಬಗ್ಗೆಯೇ ಚರ್ಚೆಯಾಗುತ್ತಿಲ್ಲ. ಎರಡೂ ಪಕ್ಷಗಳು ‘ಅಭಿವೃದ್ಧಿಗಾಗಿ ಮತಕೊಡಿ’ ಎಂದು ಕೇಳುತ್ತಿದ್ದರೂ, ಸ್ಪಷ್ಟವಾದ ನೀಲ ನಕ್ಷೆಯೇ ಇಲ್ಲ. ‘ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳತ್ತ ಗಮನ ಕೊಡಿ’ ಎಂಬಂಥ ಸಲಹೆಗಳು ಗಾಳಿಗೆ ಹೋಗುತ್ತಿವೆ.

ನನ್ನ ಪರವಾಗಿ ವಾತಾವರಣ ಚೆನ್ನಾಗಿದೆ. ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕೆಂದು ಜನ ತೀರ್ಮಾನಿಸಿದ್ದಾರೆ
–ಎಸ್‌.ಬಾಲರಾಜು, ಬಿಜೆಪಿ ಅಭ್ಯರ್ಥಿ
ಕ್ಷೇತ್ರದ ಜನ ಕಾಂಗ್ರೆಸ್‌ ಪರವಾಗಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನ ಕೈ ಹಿಡಿಯುತ್ತವೆ.
–ಸುನಿಲ್‌ ಬೋಸ್‌, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT