ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆ: ಪಕ್ಷ ರಾಜಕೀಯ ಗೌಣ; ಗೌಡ, ಪಾಟೀಲರ ಪಾರಮ್ಯ

ಬಬಲೇಶ್ವರ, ಇಂಡಿ, ಮುದ್ದೇಬಿಹಾಳ, ವಿಜಯಪುರ, ಸಿಂದಗಿಯಲ್ಲಿ ನೇರ ಹಣಾಹಣಿ; ಬ.ಬಾಗೇವಾಡಿ, ದೇ.ಹಿಪ್ಪರಗಿ, ನಾಗಠಾಣ ತ್ರೀಕೋನ ಸ್ಪರ್ಧೆ
Published 2 ಮೇ 2023, 19:50 IST
Last Updated 2 ಮೇ 2023, 19:50 IST
ಅಕ್ಷರ ಗಾತ್ರ

ವಿಜಯಪುರ: ಜಾತಿ, ಹೊಂದಾಣಿಕೆ ಮತ್ತು ಒಳಒಪ್ಪಂದ ರಾಜಕಾರಣವೇ ಪ್ರಬಲವಾಗಿರುವ ವಿಜಯಪುರ ಜಿಲ್ಲೆಯಲ್ಲಿ ಪಕ್ಷ ರಾಜಕಾರಣ ನೆಪ ಮಾತ್ರಕ್ಕೆ ಎಂಬಂತಾಗಿದೆ.

ತಮ್ಮ ಪಕ್ಷದವರನ್ನೇ ಕೆಡವಲು ಅನ್ಯ ಪಕ್ಷಗಳೊಂದಿಗೆ ಮಾಡಿಕೊಳ್ಳುವ ಈ ಒಳಒಪ್ಪಂದ ಪಕ್ಷವನ್ನು ಮೀರಿದ ವೈಯಕ್ತಿಕ ಸ್ನೇಹ, ಸಂಬಂಧ, ವ್ಯವಹಾರವನ್ನು ಆಧರಿಸಿರುವುದು ಬಹಿರಂಗ ಗುಟ್ಟು.

ಮೋದಿ, ರಾಹುಲ್‌ ಗಾಂಧಿ, ಅಮಿತ್‌ ಶಾ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಗೆ ಹೊರಗಿನಿಂದ ಯಾರೇ ಬಂದು ಅಬ್ಬರಿಸಿದರೂ ಕೊನೆಯಲ್ಲಿ ಪಾಟೀಲ, ಗೌಡರಂಥ ‘ಬಿಜಾಪುರ ಮಂದಿ’ಯ ಲೆಕ್ಕಾಚಾರವೇ ಪಕ್ಕಾ ಆಗೋದು, ಇದಕ್ಕೆ ಜಿಲ್ಲೆಯ ರಾಜಕೀಯ ಚಿತ್ರಣವೇ ಸಾಕ್ಷಿ.

ಬಬಲೇಶ್ವರ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರ ಸ್ಪರ್ಧೆಯಿಂದ ಗಮನ ಸೆಳೆದಿರುವ //ಈ ಕ್ಷೇತ್ರದಲ್ಲಿ 50 ವರ್ಷಗಳಿಂದ// ಇವರ ಕುಟುಂಬವೇ ಪಾರುಪತ್ಯ ಸಾಧಿಸಿದೆ. ಕ್ಷೇತ್ರವನ್ನು ನೀರಾವರಿಗೆ ಒಳಪಡಿಸಿರುವ, ಅಭಿವೃದ್ಧಿ ವಿಷಯವನ್ನೇ  ಎಂ.ಬಿ.ಪಾಟೀಲರು ಪ್ರಚಾರದ ಸರಕಾಗಿಸಿಕೊಂಡಿದ್ದಾರೆ. ಎಂ.ಬಿ.ಪಾಟೀಲ ಈ ಬಾರಿ ‘ಲಿಂಗಾಯತ ಮುಖ್ಯಮಂತ್ರಿ’ ಅಭ್ಯರ್ಥಿ ಎಂಬುದು ಕ್ಷೇತ್ರದ ಮತದಾರರ ಗಮನ ಸೆಳೆದಿದೆ. ಇವರ ವಿರುದ್ಧ ಮೂರು ಬಾರಿ ಸೋತಿರುವ ಬಿಜೆಪಿಯ ವಿಜುಗೌಡ ಪಾಟೀಲ ಕೊನೆಯ ಪ್ರಯತ್ನವಾಗಿ ಮತದಾರರ ಕೈಕಾಲು ಹಿಡಿದು, ಕಣ್ಣೀರು ಸುರಿಸಿ ಅನುಕಂಪದ ಬಲೆ ಬೀಸಿದ್ದಾರೆ. 

ಮುದ್ದೇಬಿಹಾಳ

ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಕಾಂಗ್ರೆಸ್‌ನ ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ನಡುವೆ ನೇರ ಹಣಾಹಣಿ ನಡೆದಿದೆ. ಚುನಾವಣಾ ಅಖಾಡದಲ್ಲಿ ಗೆಲುವಿಗಾಗಿ ನಡಹಳ್ಳಿ ಅವರು ಎಲ್ಲ ಪಟ್ಟುಗಳನ್ನು ಪ್ರಯೋಗಿಸಿದ್ದಾರೆ. ಆದರೆ, ನಾಡಗೌಡರು ಇದು ನನ್ನ ಕೊನೆಯ ಚುನಾವಣೆ ಎಂಬ ಅನುಕಂಪದ ಮೇಲೆ ಹೊರಟಿದ್ದಾರೆ.  ನಡಹಳ್ಳಿಯ ಐದು ವರ್ಷ, ನಾಡಗೌಡರ 25 ವರ್ಷಗಳ ಕೊಡುಗೆಯೇ ಚರ್ಚೆಯ ವಿಷಯವಾಗಿದೆ. ಜೆಡಿಎಸ್‌, ಕಾಂಗ್ರೆಸ್‌ನ ಪ್ರಮುಖರು ಪಕ್ಷ ತೊರೆದು ನಡಹಳ್ಳಿ ಜೊತೆ ಗುರುತಿಸಿಕೊಂಡಿರುವುದು ಬಿಜೆಪಿ ಬಲ ಹೆಚ್ಚಿಸಿದೆ. //ನಡಹಳ್ಳಿ ಸಹೋದರ ನಾಡಗೌಡರ ಜೊತೆ, ನಾಡಗೌಡರ ಸಹೋದರ ನಡಹಳ್ಳಿ ಜೊತೆ ಕೈಜೋಡಿಸಿದ್ದಾರೆ!// 

ಇಂಡಿ

ಕಾಂಗ್ರೆಸ್‌ನ ಯಶವಂತರಾಯಗೌಡ ಮತ್ತು ಜೆಡಿಎಸ್‌ನ ಬಿ.ಡಿ.ಪಾಟೀಲ ಹಾಗೂ ಬಿಜೆಪಿಯ ಕಾಸುಗೌಡ ಬಿರಾದಾರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ’ಭೀಮಾತೀರ’ದಲ್ಲಿ ಶಾಂತಿ, ಸುವ್ಯವಸ್ಥೆ ಕಲ್ಪಿಸಿರುವುದು, ಸಕ್ಕರೆ ಕಾರ್ಖಾನೆ ಆರಂಭ ಹಾಗೂ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಭರವಸೆ, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲದಿರುವುದು ಕಾಂಗ್ರೆಸ್‌ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಹೆಚ್ಚಿನ ಸಂಖ್ಯೆಯ ಕುರುಬ ಸಮಾಜದ ಮತದಾರರನ್ನು ನಂಬಿಕೊಂಡಿರುವ ಜೆಡಿಎಸ್‌ ಅಭ್ಯರ್ಥಿ ಹಾಗೂ ಪಂಚಮಸಾಲಿ ಸಮಾಜದ ವೋಟುಗಳನ್ನು ಆಧರಿಸಿರುವ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ.  

ಬಸವನ ಬಾಗೇವಾಡಿ

ಕಾಂಗ್ರೆಸ್‌ನ ಶಿವಾನಂದ ಪಾಟೀಲ, ಬಿಜೆಪಿಯ ಎಸ್‌.ಕೆ.ಬೆಳ್ಳುಬ್ಬಿ ಹಾಗೂ ಜೆಡಿಎಸ್‌ನ ಸೋಮನಗೌಡ ಪಾಟೀಲ ಮನಗೂಳಿ(ಅಪ್ಪು) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಅಪ್ಪು ಮನಗೂಳಿ ಬಳಿಕ ಪಕ್ಷಾಂತರವಾಗಿ, ಬಿಜೆಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆದರೆ, ಟಿಕೆಟ್‌ ಸಿಗದ ಕಾರಣಕ್ಕೆ ಕೊನೇ ಗಳಿಗೆಯಲ್ಲಿ ಮರಳಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಒಂದೇ ಸಮಾಜದವರಾದ ಮನಗೂಳಿ ಮತ್ತು ಶಿವಾನಂದ ಪಾಟೀಲ ಲಿಂಗಾಯತ ಪಂಚಮಸಾಲಿ ಸಮಾಜದ ವೋಟುಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಮನಗೂಳಿ ಪಡೆಯುವ ಮತಗಳನ್ನು ಆಧರಿಸಿ ‌ಕಾಂಗ್ರೆಸ್‌, ಬಿಜೆಪಿ ಹಣಬರಹ ನಿರ್ಧಾರವಾಗಲಿದೆ.

ನಾಗಠಾಣ

ಜಿಲ್ಲೆಯಲ್ಲಿ ಇರುವ ಏಕೈಕ ಮೀಸಲು(ಎಸ್‌ಸಿ) ಕ್ಷೇತ್ರವಾದ ನಾಗಠಾಣದಲ್ಲಿ ಶಾಸಕ ಜೆಡಿಎಸ್‌ನ ಡಾ.ದೇವಾನಂದ ಚವ್ಹಾಣ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ವಿಠಲ ಕಟಕಧೋಂಡ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ, ಸಂಸದ ರಮೇಶ ಜಿಗಜಿಣಗಿ, ಚುನಾವಣೆಗಾಗಿಯೇ ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದ ಮಹೇಂದ್ರ ನಾಯಕ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಇವರೆಲ್ಲರ ಹೊರತಾಗಿ ಕೊನೇ ಗಳಿಗೆಯಲ್ಲಿ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳೆ ಅವರನ್ನು ಬಿಜೆಪಿಯ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಿರೀಕ್ಷಿತ ಪೈಪೋಟಿ ಕಾಣಿಸುತ್ತಿಲ್ಲ.  

ವಿಜಯಪುರ ನಗರ

ಹಿಂದು–ಮುಸ್ಲಿಂ ವೋಟ್‌ ಬ್ಯಾಂಕ್‌ ಆಧಾರದ ಮೇಲೆಯೇ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ‘ಮುಸ್ಲಿಮರ ವೋಟ್‌ ಬೇಡ’ ಎನ್ನುತ್ತಿರುವ ಯತ್ನಾಳ ಪಕ್ಷಾತೀತವಾಗಿ ಹಿಂದು ಮತಗಳನ್ನು ಒಟ್ಟು ಮಾಡುತ್ತಿದ್ದಾರೆ.  ಬಿಜೆಪಿಯ ಲಿಂಗಾಯತ ಮುಖಂಡರಿಗೆ ಯತ್ನಾಳ ವಿರುದ್ಧ ಇರುವ ಅಸಮಾಧಾನ, ಭಿನ್ನಾಭಿಪ್ರಾಯವು ಒಳ ಏಟು ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಮುಸ್ಲಿಂ ಮತ ಬ್ಯಾಂಕ್‌ ಇದ್ದರೂ ಹಿಂದುಗಳ ವೋಟುಗಳಿಲ್ಲದೇ ಗೆಲುವಿನ ದಡ ಸೇರುವುದು ಕಷ್ಟ. 

ಸಿಂದಗಿ

ಬಿಜೆಪಿಯ ರಮೇಶ ಭೂಸನೂರ ಮತ್ತು ಕಾಂಗ್ರೆಸ್‌ನ ಅಶೋಕ ಮನಗೂಳಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಬೆಂಬಲ, ಕಾಂಗ್ರೆಸ್‌ ಒಳಗಿನ ಭಿನ್ನಮತ ಹಾಗೂ ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟವೇ ಕ್ಷೇತ್ರದಲ್ಲಿ ಬೀಡುಬಿಟ್ಟು ಭೂಸನೂರಗೆ ಜಯ ಸುಲಭವಾಗಿಸಿದ್ದರು. ಆದರೆ, ಸದ್ಯದ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಕಾಂಗ್ರೆಸ್‌ ಒಗ್ಗಟ್ಟು ಪ್ರದರ್ಶಿಸಿದೆ. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಸೋಮಜಾಳ ಅವರ ಹಠಾತ್‌ ನಿಧನದಿಂದ ಅವರ ಪತ್ನಿ ವಿಶಾಲಾಕ್ಷಿ ಕಣಕ್ಕಿಳಿದಿದ್ದಾರೆ. ಅನುಕಂಪದ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ. 

ದೇವರ ಹಿಪ್ಪರಗಿ

ಆರಂಭದಿಂದಲೂ ಲಿಂಗಾಯತ ರೆಡ್ಡಿ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮರಳಿ ಕಣಕ್ಕಿಳಿಸಿದೆ. ಪ್ರಬಲ ಪಂಚಮಸಾಲಿ ಸಮಾಜಕ್ಕೆ ಸೇರಿದ ಜೆಡಿಎಸ್‌ ಅಭ್ಯರ್ಥಿ ರಾಜುಗೌಡ ಪಾಟೀಲ ತೀವ್ರ ಸ್ಪರ್ಧೆ ಒಡ್ಡಿದ್ದಾರೆ.  ಹಿಂದುಳಿದ ವರ್ಗಕ್ಕೆ ಸೇರಿದ ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT