ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಬೊಮ್ಮಾಯಿ

ತೂದೂರು ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 7 ಏಪ್ರಿಲ್ 2023, 7:25 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಶಾಸಕರಾಗಿ ಪಕ್ಷ ಕಟ್ಟಿದ ಬಿ.ಎಸ್.‌ ಯಡಿಯೂರಪ್ಪ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ತೂದೂರು ಗ್ರಾಮದ ದೊಡ್ಮನೆಯಲ್ಲಿರುವ ಬೀಗರಮನೆಗೆ ಖಾಸಗಿ ಭೇಟಿ ನೀಡಿದ ನಂತರ ತೂದೂರಿನಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ 2047ರ ಭಾರತದ ಅಮೃತಕಾಲ ಸಂಭ್ರಮಾಚರಣೆಗೆ ಅವಶ್ಯಕವಾದ ಸಿದ್ಧತೆ ನಡೆಸಿದ್ದಾರೆ. ಸಾಮಾಜಿಕ ನ್ಯಾಯ, ಬಡವರು, ರೈತರು, ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ಉದ್ಯೋಗ, ಪರಿಶ್ರಮದಿಂದ ಕಟ್ಟಕಡೆಯ ವ್ಯಕ್ತಿಯ ಬೆಳವಣಿಗೆಗೆ ಏನೆಲ್ಲ ಬೇಕು ಅದನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸಿದೆ. ಅಭಿವೃದ್ಧಿಯ ಪರ್ವದಿಂದ ಬಿಜೆಪಿ ವಿಶ್ವಮಾನ್ಯ ಪಕ್ಷವಾಗಿ ಬೆಳೆದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ವಿಫಲವಾಗಿತ್ತು. ಪೂರ್ವಾಪರ ಇಲ್ಲದೆ 2017ರಲ್ಲಿ ಡಿನೋಟಿಫಿಕೇಷನ್‌ ಮಾಡಿದ್ದು, ಕೇಂದ್ರ ಸರ್ಕಾರದ ಅನುಮತಿ ಪಡೆದಿರಲಿಲ್ಲ. ನಮ್ಮ ಸರ್ಕಾರ ಅದನ್ನು ಕಾನೂನಾತ್ಮಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೊಸದಾಗಿ ಸರ್ವೆ ಕಾರ್ಯ ಮಾಡಿ ಮುಗಿಸಿದೆ. ಸಂತ್ರಸ್ತರಿಗೆ ಭೂಮಿ ಒದಗಿಸಲು ನಿರಪೇಕ್ಷಣಾ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುರಾಜ್ ಹೆಗ್ಡೆ ಇದ್ದರು.

........

ಅಡಿಕೆ ಜ್ಞಾನೇಂದ್ರ ಎಂದ ಸಿಎಂ

ಪ್ರತಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರಗ ಜ್ಞಾನೇಂದ್ರ ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸಲು ಗೋಗರೆಯುತ್ತಿದ್ದರು. ಡೀಮ್ಡ್ ಫಾರೆಸ್ಟ್, ಭೂಮಿ, ಅಡಿಕೆ, ಪಶ್ಚಿಮಘಟ್ಟ, ರೈತರು, ಬಡವರ ಕಷ್ಟಗಳ ಪರಿಹಾರಕ್ಕೆ ಒತ್ತಾಯ ಮಾಡುತ್ತಿದ್ದರು. ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ₹ 10 ಕೋಟಿ ಬಜೆಟ್‌ನಲ್ಲಿ ಕಿತ್ತುಕೊಂಡು ಬಂದಿದ್ದಾರೆ. ಅವರಿಗೆ ಅಡಿಕೆ ಜ್ಞಾನೇಂದ್ರ ಎಂದು ಹೇಳಿದರೆ ತಪ್ಪಾಗಲಾರದು ಎಂದು ಮುಖ್ಯಮಂತ್ರಿ ಹಾಸ್ಯ ಚಟಾಕಿ ಹಾರಿಸಿದರು.

‘ಗೃಹಸಚಿವರಾಗಿ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ಕೆಲವು ಬಾರಿ ಸತ್ಯ ಹೇಳಿದರೆ ತೊಂದರೆಯಾಗುತ್ತದೆ. ಆರಂಭದ ದಿನದಲ್ಲಿ ಜ್ಞಾನೇಂದ್ರ ಅಂತಹ ಸಮಸ್ಯೆ ಮಾಡಿಕೊಂಡಿದ್ದರು. ಕರೆದು ತಿಳಿ ಹೇಳಿದ ನಂತರ ಗಾಡಿ ಸಲಿಸಾಗಿ ಚಾಲನೆ ಮಾಡಿದ್ದಾರೆ’ ಎಂದು ಹೊಗಳಿದರು.

............

‘ಅಭಿವೃದ್ಧಿಗೆ ವೋಡ್‌ ನೀಡಿದರೆ ಎದುರಾಳಿಗೆ ಡಿಪಾಸಿಟ್‌ ಸಿಗಲ್ಲ‘

ಮಾಜಿ ಶಿಕ್ಷಣ ಸಚಿವರು ಪಿಎಸ್‌ಐ ಹಗರಣದ ಸಾಕ್ಷಿ ಇದೆ ಎಂದು ನನ್ನನ್ನು ತೋಜೋವಧೆ ಮಾಡಲು ಮುಂದಾಗಿದ್ದಾರೆ. ತಾಕತ್ತು ಇದ್ದರೆ ದಾಖಲೆಗಳನ್ನು ಸಿಐಡಿಗೆ ನೀಡಿ ನನ್ನನು ಜೈಲಿಗೆ ಕಳುಹಿಸಲಿ. ಮತದಾರರ ಮುಂದೆ ಸೋಗಲಾಡಿತನ ಪ್ರದರ್ಶಿಸಿ ದೊಡ್ಡವರಾಗಲು ಮುಂದಾಗಿದ್ದಾರೆ. ಗಿಮಿಕ್‌ ರಾಜಕಾರಣ ಮಾಡಿದ್ದಕ್ಕೆ ಅರ್ಧದಲ್ಲೇ ಸಿದ್ದರಾಮಯ್ಯ ಮಂತ್ರಿ ಸ್ಥಾನದಿಂದ ಕಳಿಸಿದ್ದಾರೆ. ತಳಹದಿ ಇಲ್ಲದ ಆರೋಪಗಳು ಹೆಚ್ಚು ದಿನ ಉಳಿಯುವುದಿಲ್ಲ. ಸಾಧನೆಯ ಆಧಾರದ ಮೇಲೆ ವಿಧಾನಸಭಾ ಚುನಾವಣೆ ಸ್ಪರ್ಧೆ ಮಾಡಲಿದ್ದೇನೆ. ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿಗೆ ಮತ ನೀಡುವುದಾದರೆ ನನ್ನ ಎದುರಾಳಿಯ ಡಿಪಾಸಿಟ್‌ ಉಳಿಯಲ್ಲ ಎಂದು ಕಿಮ್ಮನೆ ರತ್ನಾಕರ ವಿರುದ್ಧ ಆರಗ ಜ್ಞಾನೇಂದ್ರ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT