ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ಸಮೀಕ್ಷೆ: ಮೈಸೂರು ಜಿಲ್ಲೆಯಲ್ಲಿ ಪುಟಿದೇಳಲು ಕಾಂಗ್ರೆಸ್ ಕಸರತ್ತು

ಹೊಸಮುಖ, ವಲಸಿಗರಿಗೆ ಮಣೆ ‘ಪ್ರಯೋಗ’ ಬಿಜೆಪಿ ಕೈಹಿಡಿಯುವುದೇ?
Published 28 ಏಪ್ರಿಲ್ 2023, 20:35 IST
Last Updated 3 ಮೇ 2023, 12:01 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯು ಹಲವು ವಿಶೇಷಗಳಿಂದಾಗಿ ಗಮನ ಸೆಳೆದಿದೆ. ಭದ್ರಕೋಟೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದ್ದರೆ, ನೆಲೆ ವಿಸ್ತರಿಸಿಕೊಳ್ಳಲು ಜೆಡಿಎಸ್‌ ಪ್ರತಿತಂತ್ರ ರೂಪಿಸಿದೆ. ಬಲ ಹೆಚ್ಚಿಸಿಕೊಳ್ಳಲು ಬಿಜೆಪಿಯು ‘ಪ್ರಯೋಗ’ದ ಮೊರೆ ಹೋಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಡಿಎಸ್ ನಡುವೆಯೇ ನೇರ ಹಣಾಹಣಿ ಇದೆ.

ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ನ ತಲಾ ನಾಲ್ವರು ಮತ್ತು ಬಿಜೆಪಿಯ ಮೂವರು ಶಾಸಕರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಕ್ಷೇತ್ರಗಳನ್ನು ಗಳಿಸಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಕ್ಷಾಂತರ, ಪ್ರತಿಷ್ಠೆ, ವೈಯಕ್ತಿಕ ವರ್ಚಸ್ಸು, ಹೊಂದಾಣಿಕೆ ರಾಜಕಾರಣ ಪ್ರಭಾವಿಸುವ ಲಕ್ಷಣಗಳಿವೆ. ತವರಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂಬ ಹಂಬಲದಲ್ಲಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದೇ ಬಿಜೆಪಿ–ಜೆಡಿಎಸ್‌ ನ ಗುರಿಯಾಗಿದೆ.

ಸಿದ್ದರಾಮಯ್ಯ ತಂತ್ರ:

ತಾವು ಒಕ್ಕಲಿಗರ‌ ವಿರೋಧಿಯಲ್ಲ ಎಂಬುದನ್ನು ತೋರಿಸಲು ಸಿದ್ದರಾಮಯ್ಯ ಆ ಸಮುದಾಯದ ನಾಯಕರ ಸಖ್ಯದಲ್ಲಿದ್ದಾರೆ. ಬಹಳ ವರ್ಷಗಳಿಂದ ದೂರವಿಟ್ಟಿದ್ದ ಮುಖಂಡ ಸಿ.ದಾಸೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ವಿರುದ್ಧ ತಮ್ಮ ಆಪ್ತ, ಕುರುಬ ಸಮಾಜದ ಕೆ.ಮರೀಗೌಡ ಬದಲಿಗೆ ಈಚೆಗೆ ಪಕ್ಷ ಸೇರಿದ ‘ಮೈಮುಲ್’ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. 

ತಮ್ಮ ಸಮುದಾಯದ ನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉನ್ನತ ಸ್ಥಾನಕ್ಕೇರಬಹುದಾದ ಸಾಧ್ಯತೆ ಇರುವುದರಿಂದ ಅವರನ್ನು ಬೆಂಬಲಿಸುವಂತೆ ಸಮುದಾಯದ ಸಭೆಗಳಲ್ಲಿ ನಡೆಯುತ್ತಿರುವ ಚರ್ಚೆಯು ಗುಪ್ತಗಾಮಿನಿಯಾಗಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್‌ಗೆ ‘ಪ್ಲಸ್ ಪಾಯಿಂಟ್’.

ಹೈವೋಲ್ಟೇಜ್ ವರುಣ:

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಕಾಂಗ್ರೆಸ್) ಹಾಗೂ ಸಚಿವ ವಿ.ಸೋಮಣ್ಣ (ಬಿಜೆಪಿ) ಸ್ಪರ್ಧೆಯಿಂದಾಗಿ ವರುಣ ‘ಹೈವೋಲ್ಟೇಜ್‌’ ಕ್ಷೇತ್ರವಾಗಿದೆ. ಸಮಬಲದ ಪೈಪೋಟಿಯುಳ್ಳ ಇಲ್ಲಿ ‘ಹೊರಗಿನವರು’ ಹಾಗೂ ‘ಸ್ಥಳೀಯರು’ ನೆಲೆಯಲ್ಲಿ ಚರ್ಚೆ ಜೋರಾಗಿದೆ.

‘ಇದು ನನ್ನ ಕೊನೆಯ ಚುನಾವಣೆ, ಮನೆ ಮಗನಿಗೆ ಅವಕಾಶ ಕೊಡಿ’ ಎಂದು ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ‘ಗೋವಿಂದರಾಜ ನಗರದ ಮಾದರಿಯಲ್ಲಿ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ’ ಎಂದು ಸೋಮಣ್ಣ ಕೋರುತ್ತಿದ್ದಾರೆ.

ಇವರಿಬ್ಬರ ಸ್ಪರ್ಧೆಯಿಂದಾಗಿ ಜೆಡಿಎಸ್ ಅಭ್ಯರ್ಥಿಯನ್ನೇ ಬದಲಿಸಿದ್ದು, ಅಭಿಷೇಕ್ ಬದಲಿಗೆ ಮಾಜಿ ಶಾಸಕ, ಪರಿಶಿಷ್ಟ ಜಾತಿಯ ಡಾ.ಭಾರತಿ ಶಂಕರ್​ ಅವರನ್ನು ಕಣಕ್ಕಿಳಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಕೂಡ ಕಣಕ್ಕಿಳಿದಿದ್ದಾರೆ. ಪರಿಶಿಷ್ಟರ ಮತಗಳ ವಿಭಜನೆಯ ಲಾಭ–ನಷ್ಟದ ಲೆಕ್ಕಾಚಾರ ಎಲ್ಲ ಪಕ್ಷಗಳಲ್ಲಿ ನಡೆದಿದೆ.

ಕಾಂಗ್ರೆಸ್–ಜೆಡಿಎಸ್ ಹಣಾಹಣಿ:

ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ತಿ.ನರಸೀಪುರ (ಪರಿಶಿಷ್ಟ ಜಾತಿ ಮೀಸಲು) ಮತ್ತು ಎಚ್‌.ಡಿ.ಕೋಟೆ (ಪರಿಶಿಷ್ಟ ಪಂಗಡ ಮೀಸಲು) ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ.

ಪರಿಶಿಷ್ಟ ಜಾತಿಗೆ ಮೀಸಲಾದ ನಂಜನಗೂಡಿನಲ್ಲಿ ಟಿಕೆಟ್‌ ಬಯಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದಿಂದ ಅವರ ಪುತ್ರ ದರ್ಶನ್‌ ಅಭ್ಯರ್ಥಿಯಾಗಿದ್ದಾರೆ. ಶಾಸಕ ಬಿ.ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿ. ತಿಂಗಳ ಅಂತರದಲ್ಲಿ ತಂದೆ– ತಾಯಿ ಕಳೆದುಕೊಂಡು ಸಂಕಷ್ಟದ ಸನ್ನಿವೇಶದಲ್ಲಿ ಕಣಕ್ಕಿಳಿದಿರುವ ದರ್ಶನ್‌ ಅವರನ್ನು ಅನುಕಂಪವು ಗೆಲುವಿನ ದಡ ಸೇರಿಸಬಹುದೆಂಬುದು ಕಾಂಗ್ರೆಸ್ ಲೆಕ್ಕಾಚಾರ. ದರ್ಶನ್‌ಗೆ ಅನುಕೂಲವಾಗಲಿ ಎಂದೇ ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಕಿಲ್ಲ.

ಬಿಜೆಪಿಯು ವಲಸಿಗರಿಗೆ ಮಣೆ ಹಾಕಿರುವುದು ‘ಒಳೇಟು’ ಕೊಡಬಹುದು. ಎಚ್‌.ಡಿ.ಕೋಟೆಯ ಕೃಷ್ಣ ನಾಯಕ, ಹುಣಸೂರಿನ ಸೋಮಶೇಖರ್‌, ಕೆ.ಆರ್‌.ನಗರದ ಹೊಸಹಳ್ಳಿ ವೆಂಕಟೇಶ ಅವರು ಜೆಡಿಎಸ್‌ನಿಂದ ಬಂದವರು. ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಪುತ್ರ, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವೀಶ್‌ ಗೌಡ ಈಚೆಗೆ ಪಕ್ಷ ಸೇರಿದವರು. ತಿ.ನರಸೀಪುರದ ಅಭ್ಯರ್ಥಿ ಡಾ.ಎಂ.ರೇವಣ್ಣ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಟಿಕೆಟ್‌ ಗಿಟ್ಟಿಸಿದ್ದಾರೆ.

ಕೃಷ್ಣರಾಜದಲ್ಲಿ ಶಾಸಕ ಎಸ್.ಎ.ರಾಮದಾಸ್‌ ಬದಲಿಗೆ, ಹೊಸಮುಖ ಟಿ.ಎಸ್.ಶ್ರೀವತ್ಸ ಅವರನ್ನು ಕಣಕ್ಕಿಳಿಸಿ ಬಿಜೆಪಿ ‘ಪ್ರಯೋಗ’ಕ್ಕೆ ಮುಂದಾಗಿದೆ. ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಹಾಗೂ ಜೆಡಿಎಸ್‌ನಿಂದ ಕೆ.ವಿ.ಮಲ್ಲೇಶ್ ಕಣದಲ್ಲಿದ್ದು, ಬಿಜೆಪಿ–ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದವರು- ಬೆಂಬಲಿಗರ ಪಡೆಯು ಒಳಹೊಡೆತ ಕೊಟ್ಟರೆ ಬಿಜೆಪಿ ಬಯಸುವ ಫಲಿತಾಂಶ ಸಿಗುವುದಿಲ್ಲ.

ನರಸಿಂಹರಾಜದಲ್ಲಿ ಕಾಂಗ್ರೆಸ್‌ನ ತನ್ವೀರ್‌ ಸೇಠ್‌ ಗೆಲುವಿನ ಓಟಕ್ಕೆ ತಡೆ ಒಡ್ಡಲು ಎಸ್‌ಡಿಪಿಐನ ಅಬ್ದುಲ್‌  ಮಜೀದ್ ಹಾಗೂ ಬಿಜೆಪಿಯ ಎಸ್.ಸಂದೇಶ್‌ ಸ್ವಾಮಿ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಅಬ್ದುಲ್ ಅಜೀಜ್ ಸೇರ್ಪಡೆಯಿಂದ ಶಕ್ತಿ ವೃದ್ಧಿಸಬಹುದೆಂದು ಕಾಂಗ್ರೆಸ್‌ ಕಾಯುತ್ತಿದೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ
ವಿ.ಸೋಮಣ್ಣ
ವಿ.ಸೋಮಣ್ಣ
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ
ಜಿ.ಡಿ.ಹರೀಶ್‌ ಗೌಡ
ಜಿ.ಡಿ.ಹರೀಶ್‌ ಗೌಡ
ತನ್ವೀರ್‌ ಸೇಠ್‌
ತನ್ವೀರ್‌ ಸೇಠ್‌
ದರ್ಶನ್‌ ಧ್ರುವನಾರಾಯಣ
ದರ್ಶನ್‌ ಧ್ರುವನಾರಾಯಣ
ಡಾ.ಎಚ್‌.ಸಿ.ಮಹದೇವಪ್ಪ
ಡಾ.ಎಚ್‌.ಸಿ.ಮಹದೇವಪ್ಪ
ಸಾ.ರಾ.ಮಹೇಶ್
ಸಾ.ರಾ.ಮಹೇಶ್

Highlights - ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನೇರ ಹಣಾಹಣಿ ನಂಜನಗೂಡಿನಲ್ಲಿ ಬಿಜೆಪಿ–ಕಾಂಗ್ರೆಸ್‌ ಪೈಪೋಟಿ ಆಡಳಿತ ವಿರೋಧಿ ಅಲೆ ನೆಚ್ಚಿದ ಕಾಂಗ್ರೆಸ್

Cut-off box - 2655998 ಮೈಸೂರು ಜಿಲ್ಲೆಯಲ್ಲಿರುವ ಒಟ್ಟು ಮತದಾರರು 1317121 ಪುರುಷರು 1338637 ಮಹಿಳೆಯರು 230 ಲೈಂಗಿಕ ಅಲ್ಪಸಂಖ್ಯಾತರು 143 ಜಿಲ್ಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

Cut-off box - ಪಕ್ಷಗಳ ಬಲಾಬಲ ಕ್ಷೇತ್ರ;2013;2018 ವರುಣ;ಕಾಂಗ್ರೆಸ್;ಕಾಂಗ್ರೆಸ್ ತಿ.ನರಸೀಪುರ;ಕಾಂಗ್ರೆಸ್;ಜೆಡಿಎಸ್ ನರಸಿಂಹರಾಜ;ಕಾಂಗ್ರೆಸ್;ಕಾಂಗ್ರೆಸ್ ಪಿರಿಯಾಪಟ್ಟಣ;ಕಾಂಗ್ರೆಸ್;ಜೆಡಿಎಸ್ ಕೆ.ಆರ್.ನಗರ;ಜೆಡಿಎಸ್;ಜೆಡಿಎಸ್ ಎಚ್‌.ಡಿ.ಕೋಟೆ;ಜೆಡಿಎಸ್;ಕಾಂಗ್ರೆಸ್ ಚಾಮುಂಡೇಶ್ವರಿ;ಜೆಡಿಎಸ್;ಜೆಡಿಎಸ್ ಹುಣಸೂರು;ಕಾಂಗ್ರೆಸ್;ಜೆಡಿಎಸ್ ಕೃಷ್ಣರಾಜ;ಕಾಂಗ್ರೆಸ್;ಬಿಜೆಪಿ ನಂಜನಗೂಡು;ಕಾಂಗ್ರೆಸ್;ಬಿಜೆಪಿ ಚಾಮರಾಜ;ಕಾಂಗ್ರೆಸ್;ಬಿಜೆಪಿ (ನಂಜನಗೂಡಿನಲ್ಲಿ 2017ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪುನರಾಯ್ಕೆಯಾಗಿತ್ತು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಆಯ್ಕೆ. 2019ರಲ್ಲಿ ಹುಣಸೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು)

Cut-off box - ಗೆಲ್ಲುವರೇ ತಂದೆ–ಮಗ? ಮೂರು ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರು ತಮ್ಮೊಂದಿಗೆ ಪುತ್ರ ಜಿ.ಡಿ.ಹರೀಶ್‌ (ಹುಣಸೂರು) ಅವರಿಗೂ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಗನ ಪರವಾಗಿ ಪ್ರಚಾರವನ್ನೂ ಮಾಡುತ್ತಿದ್ದಾರೆ. ಎರಡೂ ಕಡೆಗಳಲ್ಲಿ ಗೆಲ್ಲಲು ಇಡೀ ಕುಟುಂಬವೇ ಶ್ರಮಿಸುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಕದ ತಟ್ಟಿದ್ದ ಜಿ.ಟಿ.ದೇವೇಗೌಡರಿಗೆ ‘ಡಬಲ್‌ ಟಿಕೆಟ್’ ಖಾತ್ರಿಯಾಗಿರಲಿಲ್ಲ. ಈ ನಡುವೆ ವರಿಷ್ಠ ಎಚ್‌.ಡಿ.ದೇವೇಗೌಡರ ಮನವೊಲಿಕೆಯ ನಂತರ ಜೆಡಿಎಸ್‌ನಲ್ಲೇ ಉಳಿದು ಇಬ್ಬರಿಗೂ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಹುಣಸೂರಿನಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎ.ಎಚ್.ವಿಶ್ವನಾಥ್ ಗೆದ್ದಿದ್ದರು. ಅವರ ರಾಜೀನಾಮೆಯಿಂದಾಗಿ2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ (ಎಚ್‌.ಪಿ.ಮಂಜುನಾಥ್) ಗೆದ್ದಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿಶ್ವನಾಥ್‌ ಸೋಲನುಭವಿಸಿದ್ದರು. ಈಗ ವಿಶ್ವನಾಥ್ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ತಂದೆ–ಮಗ ಸ್ಪರ್ಧಿಸಿರುವ 2ನೇ ಚುನಾವಣೆ ಇದು. 2018ರಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ (ಚಾಮುಂಡೇಶ್ವರಿ) ಹಾಗೂ ಅವರ ಪುತ್ರ ಡಾ.ಯತೀಂದ್ರ (ವರುಣ) ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಸೋತರೆ ಯತೀಂದ್ರ ಗೆದ್ದಿದ್ದರು. ಈ ಬಾರಿ ಜಿಟಿಡಿ ಹಾಗೂ ಅವರ ಮಗ ಗೆದ್ದರೆ ದಾಖಲೆ ನಿರ್ಮಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT