ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ –ಹಿಂದುತ್ವವಾದಿಗಳ ಸಮರ; ಕೈ ಕಸರತ್ತು

ಗಮನ ಸೆಳೆದ ಕಣ: ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಕ್ಷಾತ್‌ ಸಮೀಕ್ಷೆ
Published 2 ಮೇ 2023, 19:35 IST
Last Updated 2 ಮೇ 2023, 19:35 IST
ಅಕ್ಷರ ಗಾತ್ರ

ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಅರುಣಕುಮಾರ್‌ ಪುತ್ತಿಲ ಬಂಡಾಯ ಸಾರಿದ್ದರಿಂದ ಪುತ್ತೂರು ಕಣ ರಂಗೇರಿದೆ. ಹಿಂದುತ್ವವಾದಿ ಯುವಜನರು ಹಾಗೂ ಸಂಘ ಪರಿವಾರದ ಹಿರಿಯರ ನಡುವಿನ ಸಂಘರ್ಷವಾಗಿಯೂ ಮಾರ್ಪಟ್ಟಿದೆ.

ಶಾಸಕ ಸಂಜೀವ ಮಠಂದೂರು ಬದಲು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ (ಒಕ್ಕಲಿಗ ಗೌಡ) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಪ್ರಖರ ಹಿಂದುತ್ವವಾದಿ ಅರುಣಕುಮಾರ್ ಪುತ್ತಿಲ (ಶಿವಳ್ಳಿ ಬ್ರಾಹ್ಮಣ) ಪಕ್ಷೇತರ ಅಭ್ಯರ್ಥಿ. ಕೆಲ ತಿಂಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿರುವ ಅಶೋಕ ಕುಮಾರ್‌ ರೈ (ಬಂಟ) ಕಾಂಗ್ರೆಸ್‌ ಹುರಿಯಾಳು.

ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಸಂದರ್ಭದಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಹಿಂದುತ್ವವಾದಿ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಇದು ಇನ್ನೂ ತಣಿದಿಲ್ಲ.

ಪ್ರವೀಣ್‌ ಮನೆ ಇರುವುದು ಪಕ್ಕದ ಸುಳ್ಯ ಕ್ಷೇತ್ರದ ನೆಟ್ಟಾರುನಲ್ಲಿ. ಅವರ ಕುಟುಂಬದವರಿಗೆ ನೆಟ್ಟಾರುನಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿರುವ ಬಿಜೆಪಿ, ‘ನಾವು ಪಕ್ಷದ ಕಾರ್ಯಕರ್ತರ ಜೊತೆಗಿದ್ದೇವೆ’ ಎಂದು ಒತ್ತಿ ಹೇಳುತ್ತಿದೆ. ಜೆ.ಪಿ.ನಡ್ಡಾ ಸಹ ‘ಪ್ರವೀಣ್‌’ ಹೊಸ ಮನೆಗೆ ಭೇಟಿ ನೀಡಿದ್ದಾರೆ.

ಪ್ರವೀಣ್‌ ಹತ್ಯೆಯ ಪ್ರಮುಖ ಆರೋಪಿ, ಸದ್ಯ ಜೈಲಿನಲ್ಲಿರುವ ಇಸ್ಮಾಯಿಲ್‌ ಶಾಫಿ ಕೆ. ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ. ಹೀಗಾಗಿ ನೆಟ್ಟಾರು ಹತ್ಯೆ ಇಲ್ಲಿ ಚುನಾವಣೆಯ ವಿಷಯವೂ ಆಗಿದೆ. ಪ್ರವೀಣ್‌ ನೆಟ್ಟಾರು ಸ್ಮರಣಾರ್ಥ ಯುವಕರಿಗೆ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಪುತ್ತಿಲ ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿ ಹಿಂದುತ್ವವಾದಿ ಕಾರ್ಯಕರ್ತರಿಗೆ ಇನ್ನಷ್ಟು ಹತ್ತಿರವಾಗಲು ಯತ್ನಿಸಿದ್ದಾರೆ. ಈ ಹಿಂದುತ್ವವಾದಿ ಕಾರ್ಯಕರ್ತರು ಹಾಗೂ //ನಳಿನ್‌// ಅವರನ್ನು ವಿರೋಧಿಸುವ ಬಣ ಪುತ್ತಿಲ ಬೆನ್ನಿಗೆ ನಿಂತಿದೆ. ಅವರು ಹೋದಲ್ಲೆಲ್ಲ ದೊಡ್ಡ ಕಾರ್ಯಕರ್ತರ ಪಡೆಯೇ ಸೇರುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ತವರು ಜಿಲ್ಲೆ, ಅದರಲ್ಲೂ ಅವರ ಊರಿನ (ಕುಂಜಾಡಿ) ಪಕ್ಕದ ಕ್ಷೇತ್ರದಲ್ಲಿಯ ಈ ಬಂಡಾಯ ಬಿಜೆಪಿ ಪಾಲಿಗೆ ಸೆರಗಿನ ಕೆಂಡದಂತಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ವಿಟ್ಲ ಪ್ರತ್ಯೇಕ ತಾಲ್ಲೂಕು ರಚನೆ ಸೇರಿದಂತೆ ಕ್ಷೇತ್ರದ ಸಮಸ್ಯೆಗಳು ನೇಪಥ್ಯಕ್ಕೆ ಸರಿದು, ಮತೀಯವಾದವೇ ಪ್ರಧಾನ ಚರ್ಚಾ ವಿಷಯವಾಗಿದೆ.

ಪುತ್ತೂರಿನಲ್ಲಿ ಮಾತಿಗೆ ಸಿಕ್ಕ ಕೆಲ ಬಿಜೆಪಿ ಕಾರ್ಯಕರ್ತರು, ‘ಬಿಜೆಪಿ ಬಗ್ಗೆ ಬೇಸರವಿಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಆಶಾ ಅವರಿಗೆ ವಯಸ್ಸಾಗಿದೆ. ಪಕ್ಕದ ಸುಳ್ಯ ಕ್ಷೇತ್ರದವರು. ನಮಗೆ ಸುಲಭವಾಗಿ ಸಂಪರ್ಕಕ್ಕೆ ಸಿಗುವ, ಕಷ್ಟ–ಸುಖದಲ್ಲಿ ನಮ್ಮೊಟ್ಟಿಗಿರುವ ಯುವಕರೊಬ್ಬರಿಗೆ ಟಿಕೆಟ್‌ ನೀಡಬೇಕಿತ್ತು’ ಎನ್ನುತ್ತಾರೆ. ‘ನಿಮ್ಮ ಮತ ಯಾರಿಗೆ’ ಎಂದು ಪ್ರಶ್ನಿಸಿದರೆ, ‘ಪುತ್ತಿಲ ಬಗ್ಗೆ ಅಭಿಮಾನ ಇದೆ. ನಮ್ಮ ಮತ ಬಿಜೆಪಿಗೇ’ ಎನ್ನುತ್ತಾರೆ. ‘ಬಿಜೆಪಿಗಿಂತ ಮಿಗಿಲಾದ ಹಿಂದುತ್ವ ಇಲ್ಲ’ ಎನ್ನುತ್ತ ಕಲ್ಲಡ್ಕ ಪ್ರಭಾಕರ ಭಟ್‌, ಎಂ.ಕೆ.ಪ್ರಸಾದ್‌ ಸೇರಿದಂತೆ ಸಂಘ ಪರಿವಾರದ ಮುಖಂಡರೂ ಕ್ಷೇತ್ರ ಸುತ್ತುತ್ತಾ ಕಾರ್ಯಕರ್ತರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಆರ್ಲಪದವು ಗ್ರಾಮದಲ್ಲಿ ಮಾತಿಗೆ ಸಿಕ್ಕ ಪಿ.ಕೆ. ಇಸ್ಮಾಯಿಲ್‌, ‘ಬರೀ ಜಾತಿ–ಧರ್ಮ ಎನ್ನುತ್ತ ಕೂತರೆ ಬದುಕು ಕಟ್ಟಿಕೊಳ್ಳಲು ಆಗುತ್ತದೆಯೇ? ನಮಗೆ ಸಂಘರ್ಷದ ಬದಲು ಸೌಹಾರ್ದ ಬೇಕು. ನಮ್ಮ ಮತ ಕಾಂಗ್ರೆಸ್‌ಗೆ’ ಎಂದು ಖಚಿತವಾಗಿ ಹೇಳುತ್ತಾರೆ. ಎಸ್‌ಡಿಪಿಐ ವಿರುದ್ಧವೂ ಹರಿಹಾಯುತ್ತಾರೆ.

ಡಿ.ವಿ. ಸದಾನಂದಗೌಡ ನಂತರ ಬಿಜೆಪಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್‌ ನೀಡಿಲ್ಲ. ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್‌, ಸಂಜೀವ ಮಠಂದೂರು ಈ ಪಟ್ಟಿಯಲ್ಲಿದ್ದಾರೆ. ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿ ಅವರಿಗೆ 2008ರಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಆಗ ಅವರು ಸ್ವಾಭಿಮಾನಿ ವೇದಿಕೆ ರಚಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿ, 25,171 (ಶೇ 20.4ರಷ್ಟು) ಮತ ಪಡೆದಿದ್ದರು. ಆದರೂ, ಬಿಜೆಪಿಯ ಮಲ್ಲಿಕಾ ಪ್ರಸಾದ್‌ (46,605 ಮತ: ಶೇ37.77ರಷ್ಟು) ಗೆದ್ದಿದ್ದರು. 

//ಒಕ್ಕಲಿಗ ಗೌಡ,// ಬಂಟ, ಅಲ್ಪಂಖ್ಯಾತರ ಮತಗಳ ಪ್ರಾಬಲ್ಯದ ಈ ಕ್ಷೇತ್ರದಲ್ಲಿಯ ಬಿಜೆಪಿ ಬಂಡಾಯ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ಬಲ ತಂದಂತೆ ತೋರುತ್ತಿದೆ. ಉಪ್ಪಿನಂಗಡಿ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಅಶೋಕ ಕುಮಾರ್‌ ರೈ ಸಾಕಷ್ಟು ‘ಶ್ರಮ’ ಹಾಕುತ್ತಿದ್ದಾರೆ.

ಶಕುಂತಳಾ ಶೆಟ್ಟಿ ಅವರು ಅಲ್ಪಸಂಖ್ಯಾತ ಮತಗಳನ್ನೂ ಸೆಳೆದಿದ್ದರು. ಆದರೆ, ಈಗ ಪುತ್ತಿಲ ಅವರಿಗೆ ಅಲ್ಪಸಂಖ್ಯಾತ ಮತಗಳು ಸಿಗದು, ಅಲ್ಪಸಂಖ್ಯಾತ ಮತಗಳ ಒಟ್ಟುಗೂಡುವಿಕೆ, ಅಭ್ಯರ್ಥಿಯ ಸ್ವಜಾತಿಯ ಮತ ಹಾಗೂ ಮತ ಸೆಳೆಯುವ ‘ಸಾಮರ್ಥ್ಯ’.. ಈ ಎಲ್ಲ ಅಂಶಗಳು ತನಗೆ ಲಾಭ ತಂದುಕೊಡಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ಬಿಜೆಪಿ ಪ್ರಾಬಲ್ಯದ ಈ ಕ್ಷೇತ್ರದಲ್ಲಿ 1994ರಿಂದ 2018ರ ನಡುವಿನ ಆರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಒಮ್ಮೆ (2013) ಮಾತ್ರ. ‌ಪಕ್ಷದ ಬೇರು ಗಟ್ಟಿಯಾಗಿರುವುದರಿಂದ ಬಿಜೆಪಿ ಗೆಲುವು ಖಚಿತ ಎಂದು ಕ್ಷೇತ್ರದ ರಾಜಕೀಯ ವಿದ್ಯಮಾನ ಬಲ್ಲ ಹಿರಿಯರೊಬ್ಬರು ಹೇಳುತ್ತಾರೆ.

ಮಹಿಳೆಯರಿಗೂ ಆದ್ಯತೆ:

ಶಕುಂತಳಾ ಶೆಟ್ಟಿ 2004ರಲ್ಲಿ ಬಿಜೆಪಿಯಿಂದ, 2013ರಲ್ಲಿ ಕಾಂಗ್ರೆಸ್‌ನಿಂದ ಹಾಗೂ ಮಲ್ಲಿಕಾ ಪ್ರಸಾದ್‌ 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಜಿಲ್ಲೆಯಲ್ಲಿ ನಿರಂತರವಾಗಿ ಮೂರುಬಾರಿ ಮಹಿಳೆಯರನ್ನು ಗೆಲ್ಲಿಸಿದ ಕ್ಷೇತ್ರ ಇದು.

ಪುತ್ತೂರು ನಕ್ಷೆ
ಪುತ್ತೂರು ನಕ್ಷೆ

ಇಲ್ಲಿ ಇಲ್ಲದ ಅದೃಷ್ಟ ಬೇರೆಡೆ ಖುಲಾಯಿಸಿತು!

ಈ ಕ್ಷೇತ್ರದ ಶಾಸಕರು ಈವರೆಗೂ ಸಚಿವರಾಗಿಲ್ಲ. ಆದರೆ, ವಲಸೆ ರಾಜಕಾರಣಿಗಳಿಗೆ ಅದೃಷ್ಟ ಖುಲಾಯಿಸಿದೆ. ಈ ಕ್ಷೇತ್ರವನ್ನು ಎರಡು ಬಾರಿ (1985,1989) ಪ್ರತಿನಿಧಿಸಿದ್ದ ‌‌ಕಾಂಗ್ರೆಸ್‌ನ ವಿನಯಕುಮಾರ್‌ ಸೊರಕೆ, ಉಡುಪಿ ಜಿಲ್ಲೆಗೆ ವಲಸೆ ಹೋಗಿ ಅಲ್ಲಿಂದ ಒಮ್ಮೆ ಸಂಸತ್ತಿಗೆ ಆಯ್ಕೆಯಾಗಿದ್ದರು. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, ಸಚಿವರೂ ಆಗಿದ್ದರು. ಈ ಬಾರಿಯೂ ಅವರು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯಿಂದ ಎರಡು ಬಾರಿ ಗೆದ್ದಿದ್ದ ಡಿ.ವಿ. ಸದಾನಂದಗೌಡ, ಮಂಗಳೂರು, ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ತಲಾ ಒಂದು ಅವಧಿಗೆ ಸಂಸದರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರದಿಂದಲೂ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ, ಕೇಂದ್ರ ಸಚಿವರೂ ಆಗಿದ್ದರು.

ಅರುಣಕುಮಾರ್‌ ಪುತ್ತಿಲ
ಅರುಣಕುಮಾರ್‌ ಪುತ್ತಿಲ
ಅಶೋಕ್ ಕುಮಾರ್ ರೈ
ಅಶೋಕ್ ಕುಮಾರ್ ರೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT