ಬೆಂಗಳೂರು: ಮಕ್ಕಳ ಅಳು, ಚಿಕ್ಕ ಚಿಕ್ಕ ಟೆಂಟ್‌ಗಳು, ರಸ್ತೆಯಲ್ಲೇ ಮಲ ಮೂತ್ರ ವಿಸರ್ಜನೆ, ಕಸದ ರಾಶಿ, ಎಲ್ಲೆಂದರಲ್ಲಿ ಕುರಿ, ಕೋಳಿಗಳ ಹಿಕ್ಕೆ... ಹೀಗೆ ಸಾಲು ಸಾಲು ಸಮಸ್ಯೆಗಳು. ಇವುಗಳನ್ನು ಕಂಡು ಅಭ್ಯರ್ಥಿ ದಿಗ್ಭ್ರಾಂತರಾದರು. ಅವರದ್ದು ಮೌನವೇ ಉತ್ತರವಾಗಿತ್ತು.

ಇದು ಶಾಂತಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ವಾಸುದೇವಮೂರ್ತಿ ಅವರ ಪ್ರಚಾರದ ವೈಖರಿ. ಬೆಳಿಗ್ಗೆ 9.45ಕ್ಕೆ ಪ್ರಚಾರ ಆರಂಭಿಸಿದ ಅವರು ಸಮತಾನಗರ, ಮಾರೇನಹಳ್ಳಿ, 90 ಹೌಸ್ ಕ್ವಾರ್ಟಸ್ ಹಾಗೂ ವಿವೇಕನಗರದ ಕೊಳೆಗೇರಿಗಳಲ್ಲಿ ಹೆಜ್ಜೆ ಹಾಕಿದರು. ಅಲ್ಲೇ ಇದ್ದ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ‘ನನ್ನನ್ನೇ ಗೆಲ್ಲಿಸು ದೇವರೇ’ ಎಂದು ಕೇಳಿಕೊಂಡು ಮುಂದಡಿ ಇಟ್ಟರು.

ಪ್ರಚಾರದಲ್ಲಿ ಹೆಚ್ಚು ಸದ್ದುಗದ್ದಲ ಇರಲಿಲ್ಲ. ಘೋಷಣೆ ಕೂಗುವವರ ಸಂಖ್ಯೆ ಕಡಿಮೆ ಇತ್ತು. ಮೆರವಣಿಗೆಯ ಮುಂದೆ ಇದ್ದ ಮಕ್ಕಳು ಮಾತ್ರ ಡೊಳ್ಳು ಬಾರಿಸಿಕೊಂಡು ಕುಣಿಯುತ್ತಿದ್ದರು. ಮನೆಯಿಂದ ಜನರು ಹೊರಗೆ ಬರದಿದ್ದರೆ ಪಟಾಕಿಗಳನ್ನು ಸಿಡಿಸಿ ಆಚೆಗೆ ಕರೆಯುತ್ತಿದ್ದರು. ಆಗ ಜನರೇ ಓಡಿ ಬಂದು ಕರಪತ್ರ ತೆಗೆದುಕೊಂಡು ಹೋಗುತ್ತಿದ್ದರು. ಕಾರ್ಯಕರ್ತರು ಮೂರನೇ ಮಹಡಿಯಲ್ಲಿದ್ದವರನ್ನೂ ಬಿಡಲಿಲ್ಲ. ‘ಇಂಗೆ ವಾಂಗ’ ಎಂದು ಕರೆದು ‘ಪೊನ್ನ ನಂಬರ್ ಮಾ’ ಎಂದು ತಮ್ಮ ಮತ ಸಂಖ್ಯೆಯನ್ನು ಹೇಳಿ ಮುಂದೆ ತೆರಳುತ್ತಿದ್ದರು.

ಮನೆಯಿಂದ ಹೊರಗೆ ಬಾರದ ಮಹಿಳೆಯರನ್ನು ಉದ್ದೇಶಿಸಿ ಕಾರ್ಯಕರ್ತರು ‘ವಾಂಗ ಮಾ ಇಂಗೆ’ ಎಂದು ಜೋರಾಗಿ ಕರೆಯುತ್ತಿದ್ದರು. ಓಣಿಯೊಂದರಲ್ಲಿ ಶವ ಇರಿಸಲಾಗಿತ್ತು. ಅದರ ಮುಂದೆ ಅಳುತ್ತಿದ್ದವರನ್ನು ವಾಸುದೇವಮೂರ್ತಿ ಸಮಾಧಾನ ಪಡಿಸಿದರು. ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಕಾರ್ಯಕರ್ತರ ಮನೆ ಮುಂದೆ ಅಭ್ಯರ್ಥಿಗೆ ಹಾರ ಹಾಕಿ, ಆರತಿ ತೆಗೆದು, ನೀರು ಕೊಟ್ಟು ಮುಂದೆ ಕಳಿಸುತ್ತಿದ್ದರು. ದಾರಿಯಲ್ಲಿ ಸಿಕ್ಕ ಅಂಬೇಡ್ಕರ್ ಯುವಕರ ಸಂಘದ ಎದುರು ಕಾರ್ಯಕರ್ತರೊಂದಿಗೆ ‘ಫೋಟೊ ಸೆಷನ್’ ಕೂಡ ನಡೆಯಿತು. ‘ಇವರು ನಮಗೆ ಓಟ್ ಹಾಕ್ತಾರೆ. ಈ ಹುಡುಗರು ನಮ್ಮವರು’ ಎಂದು ಅಭ್ಯರ್ಥಿ ಕೂಗುತ್ತಿದ್ದಂತೆ ಕಾರ್ಯಕರ್ತರು ಜೈಕಾರ ಮೊಳಗಿಸಿದರು.

ಪ್ರತಿ ಮನೆ ಮುಂದೆಯೂ ಪ್ರಚಾರ ನಡೆಸಿ ಕರಪತ್ರ ಕೊಡುವ ವೇಳೆ ಛಾಯಾಚಿತ್ರಕ್ಕಾಗಿ ಫೋಸ್ ನೀಡುತ್ತಿದ್ದ ನಾಯಕನಿಗೆ ಕಾರ್ಯಕರ್ತರು ಸಾಥ್ ನೀಡುತ್ತಿದ್ದರು. ಛಾಯಾಚಿತ್ರ ತೆಗೆಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಮಹಿಳೆಯರಿಗೆ ‘ಅಯ್ಯೋ ಇರಮ್ಮ ಏನಾಗಲ್ಲ’ ಎನ್ನುತ್ತಿದ್ದರು.

ತಮಿಳರು ಹೆಚ್ಚಾಗಿರುವ ಪ್ರದೇಶದಲ್ಲಿ ಅಭ್ಯರ್ಥಿಯನ್ನು ಕಂಡ ಕೂಡಲೇ ಕೆಲವರು, ‘ಅಯ್ಯೋ ಮಗನೇ ಬಂದ್ಯಾ’.. ‘ನೀನೇ ನಮ್ಮ ನಾಯಕ’ ಎಂದು ಕಾಲಿಗೆ ಬೀಳುತ್ತಿದ್ದರು. ‘ಅಣ್ಣಾ ಬಂದ ದಾರಿ ಬಿಡಿ’ ಎಂದು ಕೂಗುತ್ತಿದ್ದರು. ಅಜ್ಜಿಯರು ಕೂಡ ಬಂದು ಕಾಲಿಗೆ ಬೀಳುವುದು ಮಾಮೂಲಿಯಾಗಿತ್ತು.

ಅಭಿವೃದ್ಧಿಯತ್ತ ಆಸೆ ಕಣ್ಣು

ಇಲ್ಲಿರುವ ಬಹುತೇಕ ‘ಟೆಂಟ್’ ಎಂದು ಕರೆಯಬಹುದಾದ ಮನೆಗಳಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಶೌಚಾಲಯ, ಅಡುಗೆ ಮನೆ ಎಂಬ ಪ್ರತ್ಯೇಕತೆ ಇಲ್ಲ. ಎಲ್ಲವೂ ಒಂದೇ ಆಗಿರುವ ಒಂದು ಸಣ್ಣ ಕೊಠಡಿಯಲ್ಲಿ ಇವರ ವಾಸ. ರಸ್ತೆಗಳು ಡಾಂಬರೀಕರಣ ಕಾಣದೇ ವರ್ಷಗಳೇ ಆಗಿವೆ.

‘ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ತಮಿಳರು ಇಲ್ಲಿನ ಕೊಳೆಗೇರಿಯಲ್ಲಿ ಹೆಚ್ಚಿದ್ದಾರೆ. ಹೆಚ್ಚಿನವರು ಕಟ್ಟಡ ಕೆಲಸ ಮಾಡುವವರು. ಕೂಲಿ ಕೆಲಸ ಮಾಡಿ ಅಂದಿನ ಸಂಬಳವನ್ನು ಅಂದೇ ಖರ್ಚು ಮಾಡುತ್ತಾರೆ. ನಿತ್ಯ ಕೆಲಸ ಮಾಡಿದರೆ ಮಾತ್ರ ಅವರಿಗೆ ಊಟ’ ಎನ್ನುತ್ತಾರೆ ಸಮತಾನಗರ ನಿವಾಸಿ ರೋಮಾ.

‘ಇಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತವೆ. ನಮಗೂ ಎಲ್ಲರಂತೆ ಒಳ್ಳೆಯ ಬದುಕು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದ್ದು ಮಾರೇನಹಳ್ಳಿ ನಿವಾಸಿ ರಸಿಕಾ.

ಇಲ್ಲಿ ಪೊಲೀಸರೇ ಮಾರ್ಗದರ್ಶಿಗಳು

ಅಭ್ಯರ್ಥಿ ಪ್ರಚಾರದ ವೇಳೆ ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸರೇ ಮಾರ್ಗದರ್ಶಿಗಳಾಗಿ ಕೆಲಸ ಮಾಡುತ್ತಿದ್ದುದು ವಿಶೇಷವಾಗಿತ್ತು. ‘ಮಹಡಿಯ ಮೇಲಿನಿಂದ ಇಣುಕುತ್ತಿದ್ದವರನ್ನು ಹೋಗಿ ಮಾತನಾಡಿಸಿ. ಕೈಮುಗಿದು ಮತ ಕೇಳಿ’ ಎಂದು ಹೇಳುತ್ತಿದ್ದರು.

ಕಣ್ಣೀರಿಟ್ಟ ಮಹಿಳೆ

‘ನನ್ನ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಮೊಮ್ಮಗಳನ್ನು ಶಾಲೆಗೆ ಕಳಿಸೋಕೆ ದುಡ್ಡಿಲ್ಲ. ಏನಾದ್ರೂ ಸಹಾಯ ಮಾಡಿ’ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಅವರನ್ನು ವಾಸುದೇವಮೂರ್ತಿ ಸಂತೈಸಿದರು. ‘ನೋಡ್ರಪ್ಪಾ, ಇವರ ಸಮಸ್ಯೆ ಏನು’ ಎಂದು ಕಾರ್ಯಕರ್ತರಿಗೆ ಸೂಚಿಸಿ ಮುಂದೆ ತೆರಳಿದರು.

ಪಕ್ಕದ ಮನೆಯ ಮಹಿಳೆಯೊಬ್ಬರು ಇದೇ ಸಂದರ್ಭವನ್ನು ನೋಡಿಕೊಂಡು ‘ಮತ ಕೇಳೋಕೆ ಮಾತ್ರ ಬರ್ತೀರಿ. ನಿಮ್ಮಿಂದ ನಮಗೇನು ಉಪಯೋಗ’ ಎಂದು ತನ್ನದೊಂದು ಬಾಣವನ್ನು ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.