ಭಾನುವಾರ, ಜನವರಿ 17, 2021
17 °C

ಹೇಗಿರಲಿದೆ ಕೆಜಿಎಫ್ ಚಾಪ್ಟರ್–2: ಟೀಸರ್‌ನಲ್ಲಿ ಕಂಡುಬಂದ 5 ಆಕರ್ಷಣೀಯ ಅಂಶಗಳು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಡೀ ದೇಶದ ಚಿತ್ರರಂಗ ಒಮ್ಮೆ ಸ್ಯಾಂಡಲ್‌ವುಡ್ ಕಡೆ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್. ಈ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಶನಲ್ ಸ್ಟಾರ್ ಆದರು. ಚಿನ್ನದ ಗಣಿಯ ಕಾರ್ಮಿಕರ ಸ್ಥಿತಿ, ಚಿನ್ನದ ಲೋಕವನ್ನು ಆಳಲು ನಡೆಯುವ ಸಂಗ್ರಾಮದ ಕಥೆ ಇರುವ ಕೆಜಿಎಫ್ ಚಾಪ್ಟರ್ 1 ಅಭೂತಪೂರ್ವ ಯಶಸ್ಸಿನ ಬಳಿಕ ಚಾಪ್ಟರ್ 2 ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಮಧ್ಯೆ, ಬಿಡುಗಡೆಯಾದ ಟೀಸರ್ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

ವಿಶುವಲ್ ಆಕರ್ಷಣೆ
ಕೆಜಿಎಫ್ 1ರ ಯಶಸ್ಸಿನ ಹುರುಪು  ಚಾಪ್ಟರ್ 2ರಲ್ಲಿ ವಿಶ್ಯುವಲ್ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ ಎಂದು ಟೀಸರ್ ಸ್ಪಷ್ಟಪಡಿಸುತ್ತದೆ. ದೃಶ್ಯಗಳ ವಿಷಯದಲ್ಲಿ ಚಿತ್ರ ಬಹಳ ಮಹತ್ವಾಕಾಂಕ್ಷಿಯಂತೆ ಕಾಣುತ್ತದೆ.  ಈ ಹಿಂದಿನ ಡಾರ್ಕ್ ಸ್ಮೋಕಿ ಕಲರ್‌ಗೆ ಮತ್ತಷ್ಟು ಒತ್ತು ನೀಡಿದ್ದಾರೆ, ಇದು ಟೀಸರ್‌ಗೆ ಭವ್ಯವಾದ ನೋಟ ನೀಡಿದೆ.
 
ಅಧೀರನ ಆಗಮನ
ಬಲವಾದ ಖಳನಾಯಕನಿಲ್ಲದೆ ಸಿನಿಮಾ ಅಷ್ಟು ಥ್ರಿಲ್ ಆಗಿರುವುದಿಲ್ಲ. ಕೆಜಿಎಫ್ 1 ರಲ್ಲಿ ಖಳನಾಯಕ ರಾಕಿಗೆ ಅಷ್ಟಾಗಿ ಸವಾಲು ಒಡ್ಡಲಿಲ್ಲ. ಗರುಡನನ್ನು ಕೆಳಗಿಳಿಸುವಲ್ಲಿ ಸಾಕಷ್ಟು ಪೈಪೋಟಿ ಇರಲಿಲ್ಲ. ಚಾಪ್ಟರ್ 2ರಲ್ಲಿ ಗರುಡನ ಚಿಕ್ಕಪ್ಪ ಅಧೀರನ ಆಗಮನದಿಂದ ಕಥಾವಸ್ತು ಮತ್ತಷ್ಟು ರೋಚಕವಾಗಲಿದೆ. ಗರುಡ ಜೀವಂತವಾಗಿರುವವರೆಗೂ ಕೆಜಿಎಫ್ ಚಿನ್ನದ ಗಣಿ ನಿಯಂತ್ರಣಕ್ಕೆ ಬಯಸುವುದಿಲ್ಲ ಎಂದು ಅವನು ಹಿರಿಯ ಸಹೋದರನಿಗೆ ಭರವಸೆ ನೀಡಿದ್ದ ಎಂಬ ಕಥೆ ನಮಗೆ ಗೊತ್ತೇ ಇದೆ. ಈಗ ಗರುಡ ಸಾವನ್ನಪ್ಪಿರುವುದರಿಂದ ರಾಕಿಯ ಕೈಯಿಂದ ಗಣಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧೀರಾ ತನ್ನ ಎಲ್ಲ ಶಕ್ತಿಯೊಂದಿಗೆ ಬರುತ್ತಾನೆ.

ಚಿತ್ರದ ಕಥಾ ಹಂದರ
ಚಾಪ್ಟರ್ 2ರಲ್ಲೂ ಪ್ರಶಾಂತ್ ನೀಲ್ ತಮ್ಮ ಮೂಲ ಕಥೆಯ ಆಧಾರಗಳನ್ನು ಮುಂದುವರೆಸಿದ್ದಾರೆ. ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಪ್ರಮುಖ ಭಾವನಾತ್ಮಕ ಅಂಶಗಳನ್ನು ಹಾಗೆ ಇಟ್ಟುಕೊಂಡಿದ್ದಾರೆ. ತನ್ನ ತಾಯಿಗೆ ರಾಕಿ ಮಾಡಿದ ಆಣೆ ಪ್ರಮಾಣವು ಇಲ್ಲೂ ಸಂಪತ್ತು ಮತ್ತು ಅತ್ಯುನ್ನತ ಅಧಿಕಾರಕ್ಕೆ ಹಾತೊರೆಯುವಂತೆ ಮಾಡುವ ಸನ್ನಿವೇಶ ಗೋಚರಿಸಿದೆ. ದೃಶ್ಯ ವೈಭವ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಸಂಜಯ್ ದತ್ 
ಸಂಜಯ್ ದತ್ ಚಾಪ್ಟರ್ 2ನಲ್ಲಿ ಕಾಣಿಸಿಕೊಳ್ಳುತ್ತಿರುವ ಗೊತ್ತಿರುವ ಸಂಗತಿಯಾದರೂ ಪ್ರೇಕ್ಷಕರನ್ನು ಅಯಸ್ಕಾಂತದಂತೆ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಟೀಸರ್‌ನಲ್ಲಿ ಹೆಚ್ಚು ಕಾಣದಿದ್ದರೂ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟ. ಒಂದು ಸಾಮ್ರಾಜ್ಯದ ಆಧಿಪತ್ಯಕ್ಕಾಗಿ ಹೋರಾಡುವ ಕಥೆ ರೋಚಕತೆ ಹೆಚ್ಚಿಸಿದೆ. ಸಂಜಯ್ ದತ್  ಯೋಧನಂತೆ ಕತ್ತಿ ಎಳೆದುಕೊಂಡು ಬರುವ ದೃಶ್ಯ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
 
ಸ್ಲೋ ಮೋಶನ್
ಸ್ಲೋ ಮೋಶನ್ ದೃಶ್ಯಗಳ ಬಗ್ಗೆ ಪ್ರಶಾಂತ್ ನೀಲ್‌ಗೆ ಒಲವಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಅವರ ಮೊದಲ ಚಿತ್ರ ಉಗ್ರಂನಿಂದಲೂ ಸ್ಲೋ ಮೋಶನ್ ಬಳಸಿಕೊಂಡು ಶಿಳ್ಳೆಗೆ ಯೋಗ್ಯವಾದ ಸಿನಿಮೀಯ ದೃಶ್ಯಗಳನ್ನು ಚಿತ್ರಿಸುವಲ್ಲಿ ಅವರು ಎತ್ತಿದ ಕೈ. ಕೆಜಿಎಫ್ ಚಾಪ್ಟರ್ 2 ಟೀಸರ್‌ನಲ್ಲೂ ಅದು ಗೊತ್ತಾಗಿದೆ. ಪ್ರೇಕ್ಷಕರ ಮನದಲ್ಲಿ ಉಳಿಯುವ ಹಾಗೆ ನಿಧಾನಗತಿಯ ದೃಶ್ಯಗಳ ಮೂಲಕ ಟೀಸರ್‌ ಅನ್ನು ಮತ್ತಷ್ಟು ಆಕರ್ಷಕಗೊಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು