ಶುಕ್ರವಾರ, ಅಕ್ಟೋಬರ್ 7, 2022
28 °C
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಸೂರರೈ ಪೋಟ್ರು’ ಅತ್ಯುತ್ತಮ ಚಿತ್ರ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಸೂರರೈ ಪೋಟ್ರು’ ಅತ್ಯುತ್ತಮ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ತಮಿಳಿನ ‘ಸೂರಾರೈ ಪೋಟ್ರು’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ‘ತಲೆದಂಡ’, ‘ಡೊಳ್ಳು’ ‘ನಾದದ ನವನೀತ’ ಹಾಗೂ ತುಳುವಿನ ‘ಜೀಟಿಗೆ’ ಚಿತ್ರಗಳು ರಜತ ಕಮಲ ಬಾಚಿಕೊಂಡಿವೆ.

ಈವರೆಗೂ ಪ್ರಶಸ್ತಿಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿ ಈ ಬಾರಿ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಇದನ್ನೂ ಓದಿ: 

‘ಸೂರಾರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಸೂರ್ಯ ಅತ್ಯುತ್ತಮ ನಟ ಹಾಗೂ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಶಾಲಿನಿ ಉಷಾ ನಾಯರ್‌, ನಿರ್ದೇಶಕಿ ಸುಧಾ ಕೊಂಗರ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನ (ಜಿ.ವಿ.ಪ್ರಕಾಶ್‌ ಕುಮಾರ್‌) ಪ್ರಶಸ್ತಿಯೂ ಇದೇ ಚಿತ್ರಕ್ಕೆ ಲಭಿಸಿದೆ. ಹಿಂದಿಯ ‘ತಾನಾಜಿ – ದಿ ಅನ್‌ಸಂಗ್‌ ವಾರಿಯರ್‌’ ಚಿತ್ರಕ್ಕಾಗಿ ಅಜಯ್‌ ದೇವಗನ್‌ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ನಟ ಸೂರ್ಯ ಅವರ ಜೊತೆ ಹಂಚಿಕೊಂಡಿದ್ದಾರೆ. 


ಸೂರ್ಯ

 

ನಟ ದಿವಂಗತ ಸಂಚಾರಿ ವಿಜಯ್‌ ಅಭಿನಯದ ‘ತಲೆದಂಡ’ (ನಿರ್ದೇಶನ: ಪ್ರವೀಣ್‌ ಕೃಪಾಕರ್‌) ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು ₹ 1.50 ಲಕ್ಷ ನಗದು ಒಳಗೊಂಡಿದೆ. ಸಾಗರ್‌ ಪುರಾಣಿಕ್‌ ನಿರ್ದೇಶನದ ‘ಡೊಳ್ಳು’ ಚಿತ್ರವೂ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಅಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ (ಆಡಿಯೋಗ್ರಫಿ) ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ₹ 50 ಸಾವಿರ ನಗದು ಒಳಗೊಂಡಿದೆ. ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಚಿತ್ರಗಳ ವಿಭಾಗದಲ್ಲಿ ತುಳು ಚಿತ್ರ ‘ಜೀಟಿಗೆ’ಗೆ (ನಿರ್ದೇಶನ: ಸಂತೋಷ್‌ ಮಾಡ) ರಜತ ಕಮಲ ಲಭಿಸಿದೆ. ಅತ್ಯುತ್ತಮ ಕಲೆ, ಸಂಸ್ಕೃತಿ ಆಧಾರಿತ ಚಿತ್ರ ವಿಭಾಗದ ಅಡಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ– ಡಾ.ಪಂಡಿತ್‌ ವೆಂಕಟೇಶ್‌ ಕುಮಾರ್‌’ ರಜತ ಕಮಲ ಪ್ರಶಸ್ತಿ ಪಡೆದಿದೆ.

ಮಲಯಾಳಂನ ‘ಅಯ್ಯಪ್ಪನುಂ ಕೋಷಿಯುಂ’ ಚಿತ್ರಕ್ಕಾಗಿ ದಿವಂಗತ ಕೆ.ಆರ್‌. ಸಚ್ಚಿದಾನಂದನ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಒಲಿದುಬಂದಿದೆ. ಇದೇ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ರಾಜಶೇಖರ್‌, ಮಾಫಿಯಾ ಸಸಿ ಹಾಗೂ ಸುಪ್ರೀಂ ಸುಂದರ್‌ ಅವರಿಗೆ ಉತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ‘ಅಯ್ಯಪ್ಪನ್‌’ ಪಾತ್ರಕ್ಕಾಗಿ ಬಿಜು ಮೆನನ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಹಾಗೂ ತಮಿಳು ಚಿತ್ರ ‘ಸಿವರಂಜಿನಿಯುಂ ಇನ್ನುಂ ಸುಲಾ ಪೆಂಗಳುಂ’ನ ಅಭಿನಯಕ್ಕಾಗಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.

‘ಮಂಡೇಲ’ (ತಮಿಳು) ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶನಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಯು ಮದೊನ್ನೆ ಅಶ್ವಿನ್‌ ಅವರಿಗೆ ಲಭಿಸಿದೆ. ಇದೇ ಚಿತ್ರಕ್ಕೆ ಅಶ್ವಿನ್ ಅವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ. 

ಇತರ ವಿಭಾಗಗಳು: ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಚಿತ್ರ: ಅಯ್ಯಪ್ಪನುಂ ಕೋಶಿಯುಂ), ಅತ್ಯುತ್ತಮ ಹಿನ್ನೆಲೆ ಗಾಯಕ ರಾಹುಲ್‌ ದೇಶಪಾಂಡೆ (ಚಿತ್ರ: ಮಿ ವಸಂತರಾವ್‌), ಅತ್ಯುತ್ತಮ ಛಾಯಾಗ್ರಹಣ: ಸುಪ್ರತಿಮ್‌ ಭೋಲ್‌ (ಚಿತ್ರ: ಅವಿಜಾತ್ರಿಕ್‌), ಅತ್ಯುತ್ತಮ ಸಂಕಲನಕಾರ: ಶ್ರೀಕರ ಪ್ರಸಾದ್‌ (ಸಿವರಂಜಿನಿಯುಂ ಇನ್ನುಂ ಸಿಲಾ ಪೆಂಗಳುಂ), ಅತ್ಯುತ್ತಮ ನಿರ್ಮಾಣ ವಿನ್ಯಾಸದ ಚಿತ್ರ: ಕಪ್ಪೆಲ (ಮಲಯಾಳಂ).


ಅಪರ್ಣಾ ಬಾಲಮುರಳಿ

‘ಅತ್ಯುತ್ತಮ ನಟ ಪ್ರಶಸ್ತಿ ನಿರೀಕ್ಷಿಸಿದ್ದೆವು’

ನನ್ನ ನಿರ್ದೇಶನದ ಚೊಚ್ಚಲ ಚಿತ್ರವಿದು. ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಇಡೀ ತಂಡಕ್ಕೆ ಬಹಳ ಸಂತೋಷ ಹಾಗೂ ಹೆಮ್ಮೆ ತಂದಿದೆ. ಯಾವುದೇ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆಯುವುದು ಪುಣ್ಯ. ಆದರೆ, ನಾನು ವೈಯಕ್ತಿಕವಾಗಿ ಸಂಚಾರಿ ವಿಜಯ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೆ. ಏಕೆಂದರೆ, ಚಿತ್ರದಲ್ಲಿ ಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಅರೆಬುದ್ಧಿಮಾಂದ್ಯ ‘ಕುನ್ನ’ ಎಂಬ ಪಾತ್ರದಲ್ಲಿ ವಿಜಯ್‌ ಪರಕಾಯ ಪ್ರವೇಶ ಮಾಡಿದ್ದರು. ವಿಜಯ್‌ಗೆ ಮರಣೋತ್ತರ ಪ್ರಶಸ್ತಿ ಕೊಡಬಹುದು ಎನ್ನುವ ನಿರೀಕ್ಷೆ ಬಹಳಷ್ಟಿತ್ತು. ಆದರೆ, ಇಲ್ಲಿ ಕುಳಿತು ಮಾನದಂಡಗಳ ಕುರಿತು ನಮ್ಮ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ. ಏನೇ ಆಗಲಿ, ವಿಜಯ್‌ ಇಂದು ದೇವರ ಬಳಿ ಕುಳಿತು ಈ ಪ್ರಶಸ್ತಿ ಘೋಷಣೆಯಾಗಿರುವುದನ್ನು ನೋಡಿದ್ದಾರೆ. ಪರಿಸರ ಮತ್ತು ಅರಣ್ಯವನ್ನು ರಕ್ಷಿಸುವ ಕುರಿತ ಈ ಚಿತ್ರಕ್ಕೆ ಪ್ರಶಸ್ತಿ ದೊರಕಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಚಿತ್ರಮಂದಿರಗಳ ಸಮಸ್ಯೆಯಿಂದ ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಚಿತ್ರ ಬಿಡುಗಡೆಗೊಳಿಸಿದ್ದೆವು. ಆದರೆ ನಿರೀಕ್ಷೆಯಷ್ಟು ಜನ ಬಂದು ವೀಕ್ಷಿಸಲಿಲ್ಲ. ಆದರೆ ಮೊನ್ನೆ ಜೀ ಕನ್ನಡದಲ್ಲಿ ಚಿತ್ರ ಪ್ರದರ್ಶನ ಕಂಡಾಗ ಸುಮಾರು 1.15 ಕೋಟಿ ಜನರು ವೀಕ್ಷಿಸಿದ್ದಾರೆ. ಇದಕ್ಕಿಂತ ಹೆಮ್ಮೆಯ ವಿಷಯ ಬೇಕೇ? ಈ ಪ್ರಶಸ್ತಿಯನ್ನು ವಿಜಯ್‌ ಅವರಿಗೆ ಅರ್ಪಿಸುತ್ತೇನೆ.

–ಪ್ರವೀಣ್‌ ಕೃಪಾಕರ್‌, ‘ತಲೆದಂಡ’ ನಿರ್ದೇಶಕ

 
ಆಗಸ್ಟ್‌ನಲ್ಲಿ ‘ಡೊಳ್ಳು’ ತೆರೆಗೆ

ಕಥೆಯನ್ನು ಕೇಳಿ, ಖಂಡಿತವಾಗಿಯೂ ಈ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಪ್ರೇರೇಪಿಸಿದ ಕಾರಣಕ್ಕೆ ನನ್ನ ಪತ್ನಿ ಅಪೇಕ್ಷಾಳಿಗೆ ಮೊದಲು ಧನ್ಯವಾದ. ಹಣ ಮಾಡುವುದಷ್ಟೇ ಸಿನಿಮಾ ನಿರ್ಮಾಣದ ಉದ್ದೇಶವಾಗಿರಬಾರದು. ಜಾಗರೀಕರಣದ ನಡುವೆ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ‘ಕಾಲಕ್ಕೆ ತಕ್ಕ ಹಾಗೆ ಕಲೆ ಬದಲಾಗದೇ ಇದ್ದರೆ ಕಲೆ ನಾಶವಾಗುತ್ತದೆ’ ಎನ್ನುವ ಚಿತ್ರದಲ್ಲಿನ ಒಂದು ಸಂಭಾಷಣೆ ನನ್ನನ್ನು ಈ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಪ್ರೇರೇಪಿಸಿತು. ಚಿತ್ರವು ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಆಗಸ್ಟ್‌ನಲ್ಲಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲೇ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ. ಈ ಸಿನಿಮಾದಿಂದ ನನಗೆ ಹಣ ಮಾಡುವ ಉದ್ದೇಶವೇನೂ ಇಲ್ಲ. ಚಿತ್ರಮಂದಿರಗಳಲ್ಲೇ ಜನರು ಇಂಥ ಸಿನಿಮಾ ನೋಡುವಂತೆ ಮಾಡಬೇಕು.

–ಪವನ್‌ ಒಡೆಯರ್‌, ‘ಡೊಳ್ಳು’ ನಿರ್ಮಾಪಕ

 


ಡೊಳ್ಳು

‘ತಂಡಕ್ಕೆ ಸಿಕ್ಕ ಮನ್ನಣೆ’

ಎರಡು ಪ್ರಶಸ್ತಿ ದೊರಕಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ತಂಡವೊಂದು ಜೊತೆಯಾಗಿ ಶ್ರದ್ಧೆಯಿಂದ ಶ್ರಮಪಟ್ಟು ಕೆಲಸ ಮಾಡಿದರೆ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಸಾಕ್ಷಿಯೇ ನಮ್ಮ ಸಿನಿಮಾ. ಇಂಥ ವಿಷಯ ಹೊಂದಿದ್ದ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಪವನ್‌ ಒಡೆಯರ್‌ ಅವರು ಕಿಂಚಿತ್ತೂ ಹಿಂಜರಿಯಲಿಲ್ಲ. ಡೊಳ್ಳು ಕುಣಿತ ನನ್ನನ್ನು ಮೊದಲಿನಿಂದಲೂ ಆಕರ್ಷಿಸಿದ ಕಲೆ. ಜನಪದ ಕಲೆಯೊಂದರ ಮೇಲೆ ಜಾಗತೀಕರಣದ ಪರಿಣಾಮವನ್ನು ಈ ಚಿತ್ರದ ಮುಖಾಂತರ ತೋರಿಸಿದ್ದೇವೆ. ನನ್ನ ಸ್ವಂತ ಅನುಭವವನ್ನು ಸೇರಿಸಿ ಕಥೆ ಮಾಡಿದ್ದೇನೆ.

–ಸಾಗರ್‌ ಪುರಾಣಿಕ್‌, ‘ಡೊಳ್ಳು’ ನಿರ್ದೇಶಕ  

ತುಳು ಚಿತ್ರರಂಗಕ್ಕೆ ಕೃತಜ್ಞ

ತುಂಬಾ ಭಾವುಕನಾಗಿದ್ದೇನೆ. ನಾನು ಮಲಯಾಳಂ ಭಾಷಾ ಮೂಲದವನು. ನನ್ನ ನಿರ್ದೇಶನದ ಮೊದಲ ಚಿತ್ರ ತುಳುವಿನಲ್ಲಿ ಬರಲು ಅವಕಾಶ ನೀಡಿದ ನಿರ್ಮಾಪಕರು, ಚಿತ್ರ ತಂಡದ ಪ್ರತಿಯೊಬ್ಬರಿಗೂ ಹಾಗೂ ಈ ಚಿತ್ರದ ಕಥೆಯಲ್ಲೇ ಬಂದಿರುವ ಕೊರಗಜ್ಜ ದೈವಕ್ಕೂ ಕೃತಜ್ಞನಾಗಿದ್ದೇನೆ.

– ಸಂತೋಷ್‌ ಮಾಡ, ‘ಜೀಟಿಗೆ’ ನಿರ್ದೇಶಕ


ತಲೆದಂಡ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು