ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾದಬ್ರಹ್ಮ‘ ಹಂಸಲೇಖ ಜನ್ಮದಿನ: ನೋ ಕೇಕ್‌, ಓನ್ಲೀ ಕೇಕೆ!

Last Updated 23 ಜೂನ್ 2022, 5:13 IST
ಅಕ್ಷರ ಗಾತ್ರ
ADVERTISEMENT
""

ಸಂಗೀತ ನಿರ್ದೇಶಕ ಹಂಸಲೇಖ ಅವರ ಜನ್ಮದಿನ ಇಂದು (ಜುಲೈ 23). ಅವರು 71ನೇ ವರ್ಷದ ಸಂಭ್ರದಲ್ಲಿದ್ದಾರೆ. ಎರಡು ವರ್ಷಗಳ (2020) ಹಿಂದೆ ಅವರ 69ನೇ ವರ್ಷದ ಜನ್ಮದಿನ ಸಂದರ್ಭದಲ್ಲಿ ಪ್ರಜಾವಾಣಿ ಅವರ ಸಂದರ್ಶನ ಮಾಡಿತ್ತು. ಅದರ ಪೂರ್ಣಪಾಠವನ್ನು ಮತ್ತೆ ಮರು ಓದಿಗೆ ನೀಡಲಾಗಿದೆ.

*ಹಿಂತಿರುಗಿ ನೋಡಿದಾಗ ಏನು ಕಾಣಿಸುತ್ತಿದೆ?

ನಾನು ಇಂಡಸ್ಟ್ರಿಗೆ ಕಾಲಿಟ್ಟಾಗ ಒಂದು ಅದ್ಭುತ ಸಿಸ್ಟಮ್‌ ಇತ್ತು. ಅದು ಹೇಳಿದ ತಕ್ಷಣ ರಿಸಲ್ಟ್‌ ಕೊಡುತ್ತಿತ್ತು. ಎರಡು ಮೂರನೇ ಸಾಲಿನಲ್ಲಿ ಯಾರೂ ಇಲ್ಲ ಎನ್ನುವಂತಿತ್ತು. ಸಿಸ್ಟಮ್‌ನಲ್ಲಿ ಒಂದು ಶೂನ್ಯ ಇದೆ ಅನ್ನುವುದು ನನಗೆ ಗೊತ್ತಾಯಿತು. ನಾನು ಹೋಗಿ ನನ್ನ ಭಾವನೆ, ಸೃಷ್ಟಿಗಳನ್ನು ಆ ಸಿಸ್ಟಮ್‌ಗೆ ಒಪ್ಪಿಸಿದೆ. ಕ್ಲೀನ್‌ ರಿಸಲ್ಟ್‌ ಬಂತು. ಪೇಪರ್‌ ಹಾಕಿದರೆ ಪ್ರಿಂಟಾಗಿ‌ ಬರುತ್ತಲ್ಲ ಹಾಗೆ. ಆಗ ಶ್ರೇಷ್ಠ ಗಾಯಕರು, ಶ್ರೇಷ್ಠ ಸಂಗೀತಗಾರರು ಎಲ್ಲರೂ ಸಿಸ್ಟಂನಲ್ಲಿ ಲೈವ್‌ ಮಾಡೋದಕ್ಕೂ ಸಿದ್ಧವಾಗಿದ್ದರು. ನಾನು ಸುಮ್ಮನೆ ಹೋದೆ, ಅವರು ನನ್ನ ಎಲ್ಲ ಭಾವನೆಗಳನ್ನೂ ಹಾಡಾಗಿಸಿದರು. ಅದು ಅದ್ಬುತ ಟೈಮ್‌. ಆ ಟೈಮ್‌ ಈಗ ಮುಗಿದಿದೆ. ಇನ್ನೊಂದು ಸಿಸ್ಟಮ್‌ ಬರೋದಕ್ಕೆ ಇಲ್ಲಿ ಏನೇನೋ ನಡೀತಿದೆ. ಹಿಂದಕ್ಕೆ ತಿರುಗಿ ನೋಡಿದರೆ ನಾನು ತುಂಬಾ ಲಕ್ಕೀ ಅನ್ಸುತ್ತೆ.

*ಹಿಂದೆ ತಿರುಗಿ ನೋಡಿದಾಗ ಮೊತ್ತಮೊದಲು ನೆನಪಾಗುವವರು ಯಾರು? ಏಕೆ?

ಎಸ್‌.ಪಿ. ಬಾಲಸುಬ್ರಹ್ಮಣ್ಯಂ... ಅವರು ಒಂದು ಹಾಡಿನ ಡಿಸೈನ್‌ಅನ್ನು ಕಾಪಾಡಲು ಗೊತ್ತಿರುವವರು ಮತ್ತು ನನಗೆ ಅದನ್ನು ಕಲಿಸಿದವರು. ಒಬ್ಬ ಕಂಪೋಸರ್‌ ಒಂದು ಹಾಡನ್ನು ಡಿಸೈನ್‌ ಮಾಡ್ತಾನೆ, ಒಂದು ಹಾಡನ್ನು ತಯಾರು ಮಾಡೋದಕ್ಕೆ ಅವನು ಅದನ್ನು ನೂರು ಸಲ ಹಾಡಿಕೊಂಡಿರ್ತಾನೆ. ಆ ನೂರು ಸಲ ಹಾಡಿಕೊಂಡು ಪಕ್ವವಾದ ಹಾಡನ್ನು ಗಾಯಕ ಅಷ್ಟೇ ಜತನದಿಂದ ಕಾಪಾಡಬೇಕು ಅನ್ನೋದೇ ಎಸ್ಪಿಬಿ ಕಾನ್ಸೆಪ್ಟ್‌. ಇವತ್ತು ಅವರದ್ದು ಸುಮಾರು 50 ಸಾವಿರ ಹಾಡುಗಳಿವೆ. ಯಾವುದೇ ಹಾಡು ಅವತ್ತು ಹೇಗೆ ಹಾಡಿದರೋ ಅದೇ ರೀತಿ ಇವತ್ತೂ ಹಾಡುತ್ತಾರೆ. ಇದನ್ನು ನೀವು ಎಲ್ಲಿಂದ ಕಲಿತಿರಿ ಎಂದು ಎಸ್ಪಿಬಿಗೆ ಕೇಳಿದರೆ, ಅವರು ಹೇಳಿದ್ದು ಲತಾ ಮಂಗೇಶ್ಕರ್‌ ಹೆಸರು. ಲತಾ ದೀದಿಗೆ ಹಾಡನ್ನು ಇಂಪ್ರೂವ್‌ ಮಾಡಲು ಎಷ್ಟೇ ಅವಕಾಶಗಳಿದ್ದರೂ ಅವರು ಕಂಪೋಸರ್‌ ಸೂಚಿಸಿದ್ದನ್ನೇ ಹಾಡುತ್ತಿದ್ದರು. ಎಸ್ಪಿಬಿ ಬಹಳ ದೊಡ್ಡ ಸಂಗೀತಗಾರ. ಸಿನಿಮಾದಲ್ಲಿ ನಮಗೆ ಅವರಿಂದ ಬೇಕಾಗಿರುವುದು ಒಂದು ಸಣ್ಣ ಹಾಡು. ಇಲ್ಲಿ ಬಂದು ಕುಳಿತುಕೊಂಡು ಅವರ ಈ ಡಿಸೈನಿಗೆ ತಮ್ಮ ಜೀವನವನ್ನೇ ಮುಡಿಪಾಗಿಡುವುದು ನಿಜಕ್ಕೂ ಗ್ರೇಟ್‌.ನನಗೆ ಹೇರಳ ಅವಕಾಶಗಳು ಸಿಕ್ಕಿದವು; ಶ್ರೇಷ್ಠ ಸಂಗೀತಗಾರರೂ‌ ಸಿಕ್ಕಿದರು.

*ನಿಮ್ಮ ಹಾಡುಗಳನ್ನೇ ನೀವು ಹಿಂತಿರುಗಿ ನೋಡಿದಾಗ ಕಣ್ಣಿಗೆ ಕಾಣಿಸುವ ನಟ ಯಾರು?

ನಮ್ಮ ಯಜಮಾನ್ರು.. ಚಂದನವನದ ರವಿಚಂದಿರ– ರವಿಚಂದ್ರನ್‌! ನಮ್ಮಿಬ್ಬರ ನಡುವೆ ಒಂದು ಆಂತರಂಗಿಕ ಸಂಬಂಧ ಇತ್ತು. ಅವರ ಮನಸ್ಸಲ್ಲಿ ನಾನು, ನನ್ನ ಮನಸ್ಸಲ್ಲಿ ಅವರು ಇರುತ್ತಿದ್ದರು. ಅವರು ಸುಮ್ಮನೆ ಕಣ್ಸನ್ನೆಯಲ್ಲಿ ಯೋಚನೆ ಮಾಡುತ್ತಿದ್ದುದನ್ನು ನಾನು ಬಾಯಿಯಲ್ಲಿ ಗುನುಗುತ್ತಿದ್ದೆ. ಆ ಸಂವೇದನೆ ಅರ್ಥವಾಗುವುದು ಇತ್ತಲ್ಲ.. ಇದು ಎಲ್ಲ ಕಡೆ ನಡೆಯುವುದಿಲ್ಲ. ಇದು ಮಣಿರತ್ನಂ ಮತ್ತು ರೆಹಮಾನ್‌ ನಡುವೆ ನಡೆಯುತ್ತಿತ್ತು. ಹಾಗೆಯೇ ಶಂಕರ್‌– ಜೈಕಿಷನ್‌ ಮತ್ತು ರಾಜ್‌ಕಪೂರ್‌ ಮಧ್ಯೆ ಈ ರೀತಿಯ ಸಂಬಂಧ ಇತ್ತು. ರಾಜ್‌ಕಪೂರ್‌ ಮತ್ತು ಲತಾ ಮಂಗೇಶ್ಕರ್‌ ಮಧ್ಯೆಯೂ ಇದು ನಡೆದಿತ್ತು. ಮನಸ್ಸುಗಳು ಅರ್ಥ ಆಗಿಬಿಟ್ರೆ ಅಲ್ಲಿಯ ಎನರ್ಜಿಯೇ ಬೇರೆ. ಕೆಲಸದ ಅರ್ಥೈಸುವಿಕೆ ಇದ್ದರೆ ಎಲ್ಲವೂ ತಾನೇತಾನಾಗಿ ಬರುತ್ತದೆ.

*ನಿಮ್ಮ ದೇಸೀ ಸಂಗೀತ ಶಾಲೆಯ ಪ್ರಯೋಗ ಎಲ್ಲಿಗೆ ಬಂದಿದೆ?

ಜನಪದವನ್ನು ಸಮಾಜಮುಖಿ ಮಾಡಬೇಕು, ಅದಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ತಂದುಕೊಡಬೇಕು ಎಂದು ಆರಂಭಿಸಿದೆ. ಸಮುದಾಯದ ದೊಡ್ಡದೊಂದು ಬಳಗ ಅಥವಾ ನಾಲ್ಕು ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸವದು. ನೂರು ವರ್ಷಗಳಾದರೂ ಬೇಕಿತ್ತು. ನಾನು ಒಬ್ಬನೇ ಆವೇಶದಿಂದ ಅದನ್ನು ಕೈಗೆತ್ತಿಕೊಂಡೆ. ಈ ಹದಿನೈದು ವರ್ಷದಲ್ಲಿ ನನಗೆ ವೈಯಕ್ತಿಕವಾಗಿ ತೊಂದರೆಯಾದರೂ ಆ ಸಬ್ಜೆಕ್ಟಿಗೆ ದೊಡ್ಡ ಪ್ರತಿಫಲ ಸಿಕ್ಕಿದೆ. ಈ ವರ್ಷದಿಂದ ಆ ದೇಸೀ ಶಾಸ್ತ್ರೀಯ ಸಂಗೀತದ ಲೋಕಾರ್ಪಣೆ ಆರಂಭವಾಗಲಿದೆ.

*ನಿಮ್ಮ ಮನೆಯಲ್ಲಿರುವ ಯಜಮಾನರ ಬಗ್ಗೆ ಹೇಳಿ?

ಅವಳಾ... ಲತಾ! ಅವಳಿಲ್ಲದಿದ್ದರೆ ನಾನು ಈ ಕೆಲಸವನ್ನು ಮಾಡಲು ಸಾಧ್ಯವೇ ಇರಲಿಲ್ಲ. ಆಕೆ ನನ್ನನ್ನು 200 ಪರ್ಸೆಂಟ್‌ ಲವ್‌ ಮಾಡ್ತಾರೆ. ನಾವು 90 ಪರ್ಸೆಂಟ್‌ ಮಾತ್ರ; ಉಳಿದ 10 ಪರ್ಸೆಂಟ್‌ ಅವರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದೇನೆ. (ನಗು..) ಈ ಯೋಜನೆಯಲ್ಲಿ ಯಾವುದೇ ಬೇಕು– ಬೇಡಗಳನ್ನು ಆಕೆ ನನ್ನ ಮುಂದೆ ಇಡಲೇ ಇಲ್ಲ, ಹಾಗಾಗಿ ನನ್ನ ಶಕ್ತಿ ಸಾಮರ್ಥ್ಯವನ್ನೆಲ್ಲ ಸಂಗೀತದ ಪ್ರಯೋಗಗಳಲ್ಲಿ ತೊಡಗಿಸಲು ಸಾಧ್ಯವಾಯಿತು.

‘ಈ ಸಲ ಬರ್ತಡೇ ಸೆಲೆಬ್ರೇಷನ್‌ ಇಲ್ಲ. ನೋ ಕೇಕ್‌.. ಓನ್ಲೀ ಕೇಕೆ...’ ಎಂದರು ಹಂಸ್‌ ಮಿಂಚಿದ ತಮ್ಮ ಪಂಚ್‌ ಲೈನ್‌ಗೆ ಜೋರಾಗಿ ನಗತೊಡಗಿದರು.

ವೈರಸ್ ಮತ್ತು ವೈರತ್ವ

ಹಂಸಲೇಖ ತಮ್ಮ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ತಮ್ಮ ಹಿತೈಷಿಗಳಿಗೆಲ್ಲ ಒಂದು ವಿಡಿಯೊ ಕಳಿಸಿದ್ದಾರೆ. ಅದರಲ್ಲಿ ‘ಇಡೀ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ನಮ್ಮ ನೆರೆಯ ದೇಶ ವೈರಸ್‌ ಮಾತ್ರವಲ್ಲ ವೈರತ್ವವನ್ನೂ ಕಳುಹಿಸಿದೆ. ಮನೆಯಿಂದ ಹೊರಗೆ ಹೋದವರು ವಾಪಸ್ ಸುರಕ್ಷಿತವಾಗಿ ಮನೆಗೆ ಬಂದರೆ ಅದೇ ಅವರ ಹುಟ್ಟುಹಬ್ಬ! ಈ ಸಲ ಬರ್ತ್‌ಡೇ ಸಂಭ್ರಮ ಇಲ್ಲ. ನೀವೂ ಸೇಫ್‌ ಆಗಿರಿ, ನಾವೂ ಸೇಫಾಗಿರ್ತೇವೆ’ ಎಂದಿದ್ದಾರೆ. ಎಲ್ಲ ಹಿರಿಯರು, ಗೆಳೆಯರು, ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ‘ಬದುಕಿನಲ್ಲಿ ಏನೆಲ್ಲಾ ಬಯಸಿದ್ದೆನೋ ಅದೆಲ್ಲವೂ ಸಿಕ್ಕಿದೆ. ಐ ಆ್ಯಮ್‌ ದಿ ಹ್ಯಾಪೀ ಮ್ಯಾನ್‌. ನನಗೆ ಇನ್ನು ಯಾವ ಆಸೆಗಳೂ ಇಲ್ಲ’ ಎಂದಿದ್ದಾರೆ ಹಂಸಲೇಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT