ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಬಗ್ಗೆ ಹೆಮ್ಮೆ ಇದೆ: ಆಸ್ಕರ್ ವೇದಿಕೆಯಲ್ಲಿ ಏಟು ತಿಂದ ರಾಕ್‌ ತಾಯಿ ಹೇಳಿಕೆ

Last Updated 25 ಏಪ್ರಿಲ್ 2022, 5:56 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್‌ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು, ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ಹಾಸ್ಯನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರ ಕೆನ್ನೆಗೆ ಬಾರಿಸಿದ್ದರು.ವಿಲ್‌ ಸ್ಮಿತ್‌ ಅವರು ಈಗಾಗಲೇ ಕ್ರಿಸ್‌ ರಾಕ್‌, ಆಸ್ಕರ್‌ ಅಕಾಡೆಮಿ ಹಾಗೂ ಸಂಘಟಕರಲ್ಲಿ ಕ್ಷಮೆ ಕೋರಿದ್ದಾರೆ. ಮಾತ್ರವಲ್ಲದೆ, ಅಕಾಡೆಮಿಯು 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಸ್ಮಿತ್‌ ಮೇಲೆ ನಿಷೇಧ ಹೇರಿದೆ. ಆದರೆ, ಈ ಘಟನೆ ನಡೆದು ಬರೋಬ್ಬರಿ ಒಂದು ತಿಂಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಕ್‌ ತಾಯಿ ರೋಸ್‌ ರಾಕ್ ಅವರು ಸ್ಮಿತ್ ವಿರುದ್ಧ ಕಿಡಿ ಕಾರಿದ್ದಾರೆ.

ಲೇಖಕಿ ಮತ್ತುವಾಗ್ಮಿಯೂ ಆಗಿರುವ ರೋಸ್‌ ಅವರು ಟಿವಿ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಘಟನೆ ಬಗ್ಗೆ ಮಾತನಾಡಿದ್ದಾರೆ.

'ಯಾವಾಗ ಸ್ಮಿತ್‌, ಕ್ರಿಸ್‌ ಕೆನ್ನೆಗೆ ಹೊಡೆದರೋ, ಆಗಲೇ ನಮ್ಮೆಲ್ಲರಿಗೂ ಹೊಡೆದರು. ಆತ ನಿಜವಾಗಿಯೂ ನನಗೇ ಬಾರಿಸಿದ. ಏಕೆಂದರೆ ನನ್ನ ಮಗುವನ್ನು ನೀವು ಘಾಸಿಗೊಳಿಸಿದರೆ, ನನ್ನನ್ನೂ ಘಾಸಿಗೊಳಿಸಿದಂತೆಯೇ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದುವರಿದು, ಸ್ಮಿತ್‌ ಅವರಿಂದ ಪೆಟ್ಟು ತಿಂದ ಸಂದರ್ಭದಲ್ಲಿ ತಮ್ಮ ಮಗ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ 'ಹೆಮ್ಮೆ ಇದೆ' ಎಂದು ಹೇಳಿಕೊಂಡಿದ್ದಾರೆ.

94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್‌ಏಂಜಲೀಸ್‌ನ ಡೊಲ್ಡಿ ಸಭಾಂಗಣದಲ್ಲಿ ಕಳೆದ ತಿಂಗಳುಜರುಗಿತ್ತು. ಈ ವೇಳೆ ರಾಕ್‌ ಕೆನ್ನೆಗೆ ಹೊಡೆದದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಸ್ಮಿತ್‌ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಕ್ಷಮೆ ಕೋರಿದ್ದರು. 'ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲು ಬಯಸುತ್ತಿದ್ದೇನೆ. ನಾನು ಮುಜುಗರಗೊಂಡಿದ್ದೇನೆ ಮತ್ತು ನಾನು ನಡೆದುಕೊಂಡಂತೆ ಇರಲು ಬಯಸುವುದಿಲ್ಲ. ಪ್ರೀತಿ ಮತ್ತು ಕರುಣೆಯ ಪ್ರಪಂಚದಲ್ಲಿಹಿಂಸೆಗೆ ಜಾಗವಿರುವುದಿಲ್ಲ' ಎಂದಿದ್ದರು.

ಮುಂದುವರಿದು,'ಹಿಂಸೆಯು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ನನ್ನ ವರ್ತನೆಯು ಒಪ್ಪುವಂತಹದಲ್ಲ ಮತ್ತು ಕ್ಷಮೆಗೂ ಅರ್ಹವಲ್ಲ. ನನ್ನ ವಿಚಾರದಲ್ಲಿ ಹಾಸ್ಯ ಮಾಡಿದ್ದರೆ, ಕೆಲಸದ ಒಂದು ಭಾಗವಾಗಿರುತ್ತಿತ್ತು. ಆದರೆ, ಜೇಡ (ಜೇಡ ಪಿಂಕೆಟ್‌, ಸ್ಮಿತ್‌ ಅವರ ಪತ್ನಿ) ಅವರ ಆರೋಗ್ಯ ಸ್ಥಿತಿ ಬಗ್ಗೆ ತಮಾಷೆ ಮಾಡಿದ್ದು ಅತಿ ಎನಿಸಿತು. ತಡೆದುಕೊಳ್ಳಲಾಗದೆ, ಭಾವನಾತ್ಮಕವಾಗಿ ಪ್ರತಿಕ್ರಿಯಿಸಿಬಿಟ್ಟೆ' ಎಂದೂ ವಿವರಿಸಿದ್ದರು.

ಆಸ್ಕರ್‌ ವೇದಿಕೆಯಲ್ಲಿಆಗಿದ್ದೇನು?
ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಘೋಷಣೆ ಮಾಡಲು ವೇದಿಕೆಗೆ ರಾಕ್‌ ಆಗಮಿಸಿದ್ದರು. ಪ್ರಶಸ್ತಿ ಘೋಷಣೆ ಮಾಡುವುದಕ್ಕೂ ಮುನ್ನ, ವಿಲ್‌ ಸ್ಮಿತ್‌ ಅವರ ಪತ್ನಿ ಜೇಡ ಪಿಂಕೆಟ್‌ ಸ್ಮಿತ್‌ ಕುರಿತು ರಾಕ್‌ ಚಟಾಕಿಯೊಂದನ್ನು ಹಾರಿಸಿದರು. ‘ಜೇಡ, ಜಿ.ಐ.ಜೇನ್‌ ಸಿನಿಮಾದ ಎರಡನೇ ಭಾಗದಲ್ಲಿ ನಿಮ್ಮನ್ನು ನೋಡಲು ಕಾತುರದಿಂದಿದ್ದೇನೆ’ ಎಂದಿದ್ದರು.

ಕೂದಲುದುರುವಿಕೆಯ ಕಾಯಿಲೆಯಿಂದ (ಅಲೊಪೀಸಿಯಾ) ಬಳಲುತ್ತಿರುವ ಜೇಡ ಅವರ ಬೋಳುತಲೆಯನ್ನು ಉದ್ದೇಶಿಸಿ ರಾಕ್‌ ಈ ರೀತಿ ಹೇಳಿಕೆ ನೀಡಿದ್ದರು. 1997ರಲ್ಲಿ ಬಿಡುಗಡೆಯಾಗಿದ್ದ ‘ಜಿ.ಐ.ಜೇನ್‌’ ಸಿನಿಮಾದಲ್ಲಿ ನಟಿ ಡೆಮಿ ಮೋರ್‌ ಈ ರೀತಿ ಬೋಳುತಲೆ ಮಾಡಿಸಿಕೊಂಡಿದ್ದರು.

ನಗುತ್ತಲೇ ಈ ಹೇಳಿಕೆಯನ್ನು ಸ್ವೀಕರಿಸಿದ ಸ್ಮಿತ್‌, ತದನಂತರ ಏಕಾಏಕಿ ವೇದಿಕೆ ಏರಿ ರಾಕ್‌ ಕೆನ್ನೆಗೆ ಬಾರಿಸಿದರು. ಈ ಘಟನೆಯು ಸಭಿಕರನ್ನು, ಪ್ರೇಕ್ಷಕರನ್ನು ಕ್ಷಣಕಾಲ ಗಲಿಬಿಲಿಗೊಳಿಸಿತು. ವೇದಿಕೆಯಿಂದ ಇಳಿದ ಸ್ಮಿತ್‌, ‘ನಿನ್ನ ಬಾಯಿಯಲ್ಲಿ ನನ್ನ ಪತ್ನಿಯ ಹೆಸರು ಬರಬಾರದು’ ಎಂದು ರಾಕ್‌ಗೆ ಅವಾಚ್ಯ ಶಬ್ದಗಳನ್ನು ಬಳಸಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT