ಪಂಜಾಬ್ನ ನಸ್ರಾಲಿ ಎಂಬ ಹಳ್ಳಿ. ಧರ್ಮೇಂದ್ರ ಕೇವಲ್ ಕೃಷನ್ ಡಿಯೋಲ್ ಎಂಬ ಹುಡುಗ ಸೈಕಲ್ ಏರಿ ಮನೆಯಿಂದ ಹೊರಟರೆ, ಗೋಡೆ ಮೇಲೆ ಸಿನಿಮಾ ಪೋಸ್ಟರ್ ಕಂಡರೆ ನಿಂತುಬಿಡುತ್ತಿದ್ದ. ಎವೆಯಿಕ್ಕದೆ ಒಂದಿಷ್ಟು ಕ್ಷಣ ಪೋಸ್ಟರ್ ಕಣ್ತುಂಬಿಕೊಂಡು ರಾತ್ರಿ ಉಂಡು ಮಲಗಿದರೆ, ಬೀಳುತ್ತಿದ್ದುದು ಸಿನಿಮಾ ಕನಸು.

ದಿಲೀಪ್ ಕುಮಾರ್ ಅಭಿನಯದ ‘ಶಹೀನ್’ ಸಿನಿಮಾ 1948ರಲ್ಲಿ ತೆರೆಕಂಡಿತ್ತು. ಅದನ್ನು ನೋಡಿದ ಮೇಲಂತೂ ಹುಡುಗನ ತಲೆಯೊಳಗೆ ಸಿನಿಮಾ ಗುಂಗುಹುಳ. ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತು ಹಲವು ಭಂಗಿಗಳಲ್ಲಿ ತನ್ನನ್ನು ತಾನೇ ನೋಡಿಕೊಂಡು, ‘ನಾನೂ ದಿಲೀಪ್ ಜೀ ಅವರಂತೆ ನಟನಾಗಬಲ್ಲನೇ’ ಎಂದು ಪ್ರಶ್ನೆ ಹಾಕಿಕೊಂಡು ಸ್ವಗತಕ್ಕಿಳಿಯುತ್ತಿದ್ದ.1962ರಲ್ಲಿ ‘ಪಾರಿ’ ಎಂಬ ಬಂಗಾಳಿ ಚಿತ್ರದಲ್ಲಿ, ತಾನು ಆರಾಧಿಸುತ್ತಿದ್ದ ದಿಲೀಪ್ ಕುಮಾರ್ ಜೊತೆಯಲ್ಲೇ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂತು. ಆ ಕ್ಷಣದಿಂದ ಧರ್ಮೇಂದ್ರ ಬಾಯಲ್ಲಿ ‘ದಿಲೀಪ್ ಜೀ’ ಎನ್ನುವುದು ‘ದಿಲೀಪ್ ಭಯ್ಯಾ’ ಎಂದಾಯಿತು. 1972ರಲ್ಲಿ ‘ಪಾರಿ’ ಚಿತ್ರವು ‘ಅನೋಖಾ ಮಿಲನ್’ ಹೆಸರಿನಲ್ಲಿ ಹಿಂದಿಗೆ ರೀಮೇಕ್ ಆಯಿತು. ನೆಚ್ಚಿನ ನಟನೊಟ್ಟಿಗೆ ಮತ್ತಷ್ಟು ಸಮಯ ಕಳೆಯುವ ಅವಕಾಶ. ತಾನು ದೀರ್ಘಾವಧಿ ಕಂಡಿದ್ದ ಕನಸು ಈ ಮಟ್ಟಿಗೆ ನನಸಾಗುತ್ತದೆ ಎಂದು ಭಾವಿಸಿಯೇ ಇರಲಿಲ್ಲ ಎಂದು ಧರ್ಮೇಂದ್ರ ಅನೇಕ ಸಲ ಹೇಳಿಕೊಂಡಿದ್ದರು.

ಮುಂಬೈಗೆ ವಲಸೆ

ಕಟ್ಟುಮಸ್ತು ಶರೀರ, ಎತ್ತರದ ನಿಲುವು ಇದ್ದ ಧರ್ಮೇಂದ್ರ ಸಿನಿಮಾ ನಟನಾಗುವ ಕನಸು ಹೊತ್ತು ಚಿಕ್ಕಪ್ರಾಯದಲ್ಲೇ ಮುಂಬೈಗೆ ವಲಸೆ ಹೋದದ್ದು ಸಿನಿಮೀಯ. 1958ರಲ್ಲಿ ‘ಫಿಲ್ಮ್ಫೇರ್’ ನಿಯತಕಾಲಿಕೆಯವರು ನಡೆಸಿದ ಸ್ಪರ್ಧೆಯೊಂದರಲ್ಲಿ ಗೆದ್ದಾಗ ಸಿನಿಮಾ ಅಭಿನಯದ ಅವಕಾಶ ಸಿಕ್ಕೀತು ಎಂದು ಚಾತಕಪಕ್ಷಿಯಾದರು. ಆ ಸ್ಪರ್ಧೆಯಲ್ಲಿ ಗೆದ್ದವರನ್ನು ಹಾಕಿಕೊಂಡೇ ಸಿನಿಮಾ ಮಾಡಲಾಗುತ್ತದೆ ಎಂದು ಘೋಷಿಸಿದ್ದೇ ಅದಕ್ಕೆ ಕಾರಣ. ಆದರೆ, ಆ ಸಿನಿಮಾ ಸೆಟ್ಟೇರಲೇ ಇಲ್ಲ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂಬೈನಲ್ಲಿ ಡ್ರಿಲ್ಲಿಂಗ್ ಮಷಿನ್ ಆಪರೇಟರ್ ಆಗಿ ಸಣ್ಣ ಕೈಗಾರಿಕೆಯಲ್ಲಿ ಕೆಲಸಕ್ಕೆ ಸೇರಿದರು. ತಿಂಗಳಿಗೆ ₹200 ಸಂಬಳ. ಹೆಚ್ಚಿನ ಅವಧಿ ಕೆಲಸ ಮಾಡಿದರೆ ಇನ್ನಷ್ಟು ಹಣ ಸಿಗುತ್ತಿತ್ತೆಂಬ ಕಾರಣಕ್ಕೆ ದೇಹವನ್ನು ಅದಕ್ಕಾಗಿಯೇ ದಂಡಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ದೂರಕ್ಕೆ ನಡೆದೇ ಸಾಗಿ, ನಿರ್ಮಾಪಕರಲ್ಲಿ ಅವಕಾಶ ಕೇಳುತ್ತಿದ್ದರು. ದೇಹಕ್ಕೆ ಪೋಷಕಾಂಶ ಕಡಿಮೆಯಾಗಬಾರದು ಎಂದು ಕಡಲೇಕಾಳು ತಿನ್ನುವುದನ್ನು ಕಷ್ಟಕಾಲದಲ್ಲಿ ರೂಢಿ ಮಾಡಿಕೊಂಡಿದ್ದರು.

ಮೊದಲ ಸಿನಿಮಾ ಸಂಭಾವನೆ ₹51

1960ರಲ್ಲಿ ಅರ್ಜುನ್ ಹಿಂಗೋರಾನಿ ನಿರ್ದೇಶನದ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದಲ್ಲಿ ನಟಿಸುವಂತೆ ಮೂವರು ನಿರ್ಮಾಪಕರು ಮೊದಲಿಗೆ ಧರ್ಮೇಂದ್ರ ಅವರೊಟ್ಟಿಗೆ ಕರಾರು ಮಾಡಿಕೊಂಡರು. ಬಲರಾಜ್ ಸಾಹ್ನಿ, ಕುಂಕುಮ್, ಉಷಾ ಕಿರಣ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತು. ಮೂವರೂ ನಿರ್ಮಾಪಕರೂ ಸೇರಿ ಆಗ ನೀಡಿದ ಸಂಭಾವನೆ ಕೇವಲ ₹51. ಡ್ರಿಲ್ಲಿಂಗ್ ಮಾಡುವ ಕೆಲಸಕ್ಕೆ ಸಿಕ್ಕ ಸಂಬಳವೇ ಅದಕ್ಕಿಂತ ಹೆಚ್ಚಾಗಿತ್ತು.

ಆನಂತರ ಅವಕಾಶಗಳ ದಿಡ್ಡಿ ಬಾಗಿಲು ತೆರೆದುಕೊಂಡಿತು. ‘ಅನ್ಪಢ್’, ‘ಬಂದಿನಿ’, ‘ಅನುಪಮಾ’, ‘ಆಯಾ ಸಾವನ್ ಝೂಮ್ ಕೆ’ ಹಿಂದಿ ಸಿನಿಮಾಗಳಲ್ಲಿ ಅಭಿನಯದ ಸಾಣೆಗೆ ಒಡ್ಡಿಕೊಂಡರು. 1966ರಲ್ಲಿ ‘ಫೂಲ್ ಔರ್ ಪತ್ಥರ್’ ಚಿತ್ರದಲ್ಲಿ ಧರ್ಮೇಂದ್ರ ಅಂಗಿ ಕಳಚಿದ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಂಡರು. ಅದಕ್ಕೆ ಪ್ರೇಕ್ಷಕರಿಂದ ಶಿಳ್ಳೆಯೋ ಶಿಳ್ಳೆ. ‘ಗ್ರೀಕ್ ಗಾಡ್’, ‘ಗರಮ್ ಧರಮ್’ ಎಂದೆಲ್ಲ ಬಿರುದಾವಳಿಗಳು ಸಂದವು.

1960 ಹಾಗೂ 70ರ ದಶಕದಲ್ಲಿ ಧರ್ಮೇಂದ್ರ ತಮ್ಮ ದೇಹಾಕಾರವೇ ಬಂಡವಾಳ ಎನ್ನುವುದರನ್ನು ಅರಿತರು. ‘ಹೀ ಮ್ಯಾನ್’ ಎನ್ನುವ ಇಂಗ್ಲಿಷ್ ಪದದಿಂದ ಅನೇಕರು ಹೊಗಳಿದ್ದನ್ನೇ ಕಣ್ಣಿಗೊತ್ತಿಕೊಂಡರು. ಸಾಹಸ ಪ್ರಧಾನ ಸಿನಿಮಾಗಳಲ್ಲಿ ಭವಿಷ್ಯ ಹುಡುಕಿದರು. ಅವುಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವಂಥ ಸಂಭಾಷಣೆ ಇರಬೇಕು ಎನ್ನುವ ಕಡೆ ನಿಗಾ ವಹಿಸಿದರು. ಜನಪ್ರಿಯ ಚಿತ್ರಗಳಿಗೆ ಸೂತ್ರಬದ್ಧವಾದ ಮೆಲೋಡ್ರಾಮಾ ಇರುತ್ತದಲ್ಲ; ಅದನ್ನೂ ಅಳವಡಿಸಿಕೊಂಡರು.

‘ಗ್ರೀಕ್ ಗಾಡ್ ಎಂದರೇನು ಎಂದೇ ನನಗೆ ಆಗ ಗೊತ್ತಿರಲಿಲ್ಲ. ನನ್ನ ಅಂಗಸೌಷ್ಟವ ನೋಡಿ ಪ್ರೇಕ್ಷಕರು ಹಾಗೆ ಹೇಳಿದ್ದರು’ ಎಂದೊಮ್ಮೆ ಧರ್ಮೇಂದ್ರ ಪ್ರತಿಕ್ರಿಯಿಸಿದ್ದರು. ಹೃತಿಕ್ ರೋಷನ್ ಸ್ಟಾರ್ ಆದಮೇಲೆ ಅವರಿಗೆ ‘ಗ್ರೀಕ್ ಗಾಡ್’ ಎಂಬ ಬಿರುದನ್ನು ಅಭಿಮಾನಿಗಳು ಮತ್ತೆ ನೀಡಿದರು.

‘ಗರಮ್ ಧರಮ್’ ಢಾಬಾ

‘ಗರಮ್ ಧರಮ್’ ಎಂಬ ಗುಣವಿಶೇಷಣವನ್ನೇ ಅವರು ಬ್ರ್ಯಾಂಡ್ ಆಗಿಸಿಕೊಂಡು, ಆ ಹೆಸರಿನ ಢಾಬಾಗಳನ್ನು ಶುರುಮಾಡಿದರು. ಮುಂಬೈನಲ್ಲಿ ಬದುಕಲು ‘ಸೈಕಲ್ ಹೊಡೆಯುತ್ತಿದ್ದ’ ಸ್ಫುರದ್ರೂಪಿ ವ್ಯಕ್ತಿಗೆ ಬೆಳ್ಳಿತೆರೆ ತಂದುಕೊಟ್ಟಿದ್ದ ಆತ್ಮವಿಶ್ವಾಸ ಅಂಥದ್ದಾಗಿತ್ತು.

ಧರ್ಮೇಂದ್ರ ತೆರೆಮೇಲೆ ಬ್ಯಾಂಕ್ ಮ್ಯಾನೇಜರ್ ಆದರು. ಸೆಡವು ತೋರುವ ತರುಣನಾದರು. ಕವನ ಬರೆಯುವ ಸೂಕ್ಷ್ಮಮತಿಯಾದರು. ‘ಶೋಲೆ’ ಚಿತ್ರದಲ್ಲಿ ನೀರಿನ ಟ್ಯಾಂಕ್ ಏರಿ ಪ್ರೇಮ ನಿವೇದನೆ ಮಾಡುವ ಹದಿನಾರಾಣೆ ಪ್ರಿಯಕರನಾದರು. ಮೈತೋರಿದರು. ಹೊಡೆದಾಡಿದರು. ಕಚಗುಳಿ ಇಟ್ಟರು. ಹೇಮಾ ಮಾಲಿನಿ ಅಭಿನಯದ ‘ಸೀತಾ ಔರ್ ಗೀತಾ’, ‘ಡ್ರೀಮ್ ಗರ್ಲ್’ ಸಿನಿಮಾಗಳಲ್ಲಿ ನಾಯಕಿಗೇ ಪ್ರಾಧಾನ್ಯ ನೀಡಲೂ ತಾವು ಸಿದ್ಧರೆನ್ನುವುದನ್ನು ತೋರಿದರು. ಸಂಜೀವ್ ಕುಮಾರ್, ಅಮಿತಾಭ್ ಬಚ್ಚನ್ ಅವರಂಥ ದಿಗ್ಗಜರ ಜೊತೆಗೆ ತಾವೂ ಅಭಿನಯದ ನಿಕಷಕ್ಕೆ ಒಡ್ಡಿಕೊಂಡರು. ‘ಗಂಧದ ಗುಡಿ’, ‘ತಾಯಿಗೆ ತಕ್ಕ ಮಗ’, ‘ಹುಲಿ ಹೆಬ್ಬುಲಿ’ ಕನ್ನಡ ಚಿತ್ರಗಳ ರೀಮೇಕ್ಗಳಲ್ಲಿ ಕೂಡ ನಟಿಸಿದರು.

ಹೇಮಾ ಪರಿಣಯ

ಹೇಮಾಮಾಲಿನಿ ಜೊತೆ ಸರಣಿ ಸಿನಿಮಾಗಳಲ್ಲಿ ಅಭಿನಯಿಸುವ ಹೊತ್ತಿಗೆ ಇಬ್ಬರ ನಡುವೆ ಪ್ರೇಮಾಂಕುರವಾಗಿರುವ ಸುದ್ದಿಗೆ ರೆಕ್ಕೆಪುಕ್ಕ ಮೂಡಿತ್ತು. ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಪ್ರಕಾಶ್ ಕೌರ್ ಎಂಬವರನ್ನು ಧರ್ಮೇಂದ್ರ ಮದುವೆಯಾಗಿದ್ದರು. ಅದಾಗಲೇ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮಕ್ಕಳು ಹುಟ್ಟಿದ್ದರು. ಅಜೀತಾ, ವಿಜೇತಾ ಎಂಬ ಇನ್ನೂ ಇಬ್ಬರು ಹೆಣ್ಣುಮಕ್ಕಳ ತಂದೆಯೂ ಆಗಿದ್ದರು. ಮುಂದೆ ಹೇಮಾಮಾಲಿನಿ ಅವರನ್ನೂ ಮದುವೆಯಾದರು. ಹೇಮಾ ಅವರಿಗೆ ಇಶಾ ಡಿಯೋಲ್, ಅಹಾನಾ ಡಿಯೋಲ್ ಎಂಬಿಬ್ಬರು ಹೆಣ್ಣುಮಕ್ಕಳು ಹುಟ್ಟಿದರು.

1983ರಲ್ಲಿ ವಿಜಯತಾ ಫಿಲ್ಮ್ಸ್ ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಈ ‘ಹೀ ಮ್ಯಾನ್’, ಮಗ ಸನ್ನಿ ಡಿಯೋಲ್ ಅವರನ್ನೇ ನಾಯಕನನ್ನಾಗಿಸಿ ‘ಬೇತಾಬ್’ ಚಿತ್ರ ನಿರ್ಮಿಸಿದರು. ಬಾಬಿ ಡಿಯೋಲ್ ನಾಯಕರಾಗಿದ್ದ ‘ಬರ್ಸಾತ್’ ಚಿತ್ರ ನಿರ್ಮಿಸಿದ್ದೂ ಇದೇ ಸಂಸ್ಥೆ. ಈಗಲೂ ಈ ಇಬ್ಬರೂ ಅಭಿನಯವನ್ನು ಮುಂದುವರಿಸಿದ್ದಾರೆ.

ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, 2004ರಿಂದ 2009ರ ಅವಧಿಗೆ ಬೀಕಾನೇರ್ ಕ್ಷೇತ್ರದ ಸಂಸದರಾಗಿಯೂ ಆಯ್ಕೆಯಾಗಿದ್ದರು. ‘ರಾಜಕೀಯ ನನಗೆ ಉಸಿರುಗಟ್ಟಿಸಿತ್ತು’ ಎಂದು ಅವರು ನಂತರ ಹೇಳಿಕೊಂಡಿದ್ದರು.

‘ಮೇರಾ ಗಾಂವ್ ಮೇರಾ ದೇಶ್’, ‘ಯಾದೋಂಕಿ ಬಾರಾತ್’, ‘ಚುಪ್ಕೆ ಚುಪ್ಕೆ’, ‘ಶೋಲೆ’ ಸಿನಿಮಾಗಳ ಪಾತ್ರಗಳ ಮೂಲಕ ಇಂದಿಗೂ ಧರ್ಮೇಂದ್ರ ಕಾಡುತ್ತಾರೆ; ‘ಹುಕೂಮತ್’ ರೀತಿಯ ಹೊಡಿ–ಬಡಿ ಪಾತ್ರಗಳಿಂದ ಅಲ್ಲ.

ಜನಪ್ರಿಯತೆಯ ಚೌಕಟ್ಟು ಮೀರಿದ್ದು...

ಅಭಿನಯದ ತರಬೇತಿಗೆ ಒಳಪಡದ ಧರ್ಮೇಂದ್ರ, ಕಥನದ ಸಂದರ್ಭಕ್ಕೆ ಆ ಕ್ಷಣದಲ್ಲಿ ಪ್ರತಿಕ್ರಿಯಿಸುವುದೇ ನಟನೆ ಎಂದು ನಂಬಿದ್ದರು. ‘ಮಾ, ಮುಝೆ ನೌಕರಿ ಮಿಲ್ ಗಯೀ’ (ಅಮ್ಮಾ... ನನಗೆ ಕೆಲಸ ಸಿಕ್ಕಿತು) ಎನ್ನುವ ಸಂಭಾಷಣೆಯನ್ನೂ ರಾಗವಾಗಿ ದಾಟಿಸಿದ್ದ ನಟ ಅವರು. ಹೃಷಿಕೇಶ್ ಮುಖರ್ಜಿ ಅವರಂತಹ ನವಿರು ಹಾಸ್ಯದ ಕಥಾನಕಗಳನ್ನು ಕೊಟ್ಟ ನಿರ್ದೇಶಕರ ಗರಡಿಯಲ್ಲಿ ‘ಗುಡ್ಡಿ’, ‘ಚುಪ್ಕೆ ಚುಪ್ಕೆ’ ರೀತಿಯ ಸಿನಿಮಾಗಳಲ್ಲೂ ಅಭಿನಯಿಸಿ, ಎಂದಿನ ಜನಪ್ರಿಯತೆಯ ಚೌಕಟ್ಟಿನಿಂದ ತುಸು ಹೊರಬಂದರು. ‘ಬ್ಲ್ಯಾಕ್ಮೇಲ್’ ಹಿಂದಿ ಸಿನಿಮಾದ ‘ಪಲ್ ಪಲ್ ದಿಲ್ ಕೆ ಪಾಸ್’ ಎಂಬ ಕಿಶೋರ್ಕುಮಾರ್ ಕಂಠದ ಸುಶ್ರಾವ್ಯ ಹಾಡಿಗೆ ಅವರ ತುಟಿಚಲನೆ ನೋಡಿದಾಗ, ಧರ್ಮೇಂದ್ರ ಅವರಿಗೆ ಇಂತಹ ಸಾಮರ್ಥ್ಯವೂ ಇತ್ತೇ ಎಂಬ ಉದ್ಗಾರ ಹೊರಡುತ್ತದೆ. ‘ಬಸಂತಿ... ಇನ್ ಕುತ್ತೋಂ ಕೆ ಸಾಮ್ನೆ ಮತ್ ನಾಚ್ನಾ’ ಎಂಬ ಸಂಭಾಷಣೆ ಚಿರಸ್ಥಾಯಿಯಾಗಿದೆ. ಬಸು ಚಟರ್ಜಿ ನಿರ್ದೇಶನದ ‘ದಿಲ್ಲಗಿ’ ಸಿನಿಮಾದಲ್ಲಿ ಮೆಲುದನಿಯಲ್ಲಿ ಮಾತನಾಡಿವ ಅಧ್ಯಾಪಕನಾಗಿ ಕಾಣಿಸಿಕೊಂಡಿದ್ದ ಅವರು, ತಮ್ಮೊಳಗಿನ ತುಂಟತನ ಹಾಗೂ ಹಾಸ್ಯದ ಟೈಮಿಂಗ್ ಅನ್ನು ತೆರೆಮೇಲೆ ಕಾಣಿಸಿದ್ದರು.

ಪೂರ್ಣವಿರಾಮವಿಲ್ಲದ ವೃತ್ತಿಬದುಕು

250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೂ ಧರ್ಮೇಂದ್ರ ಅವರು ಎಂದಿಗೂ ಅಭಿನಯಕ್ಕೆ ಪೂರ್ಣವಿರಾಮ ಹಾಕಲಿಲ್ಲ. ₹100 ಕೋಟಿಯಷ್ಟು ಬೆಲೆ ಬಾಳುವ ಫಾರ್ಮ್ಹೌಸ್ನಲ್ಲಿ ತಾವು ಮಾಡುತ್ತಿದ್ದ ಕೃಷಿ ಚಟುವಟಿಕೆಯ ವಿಡಿಯೊಗಳನ್ನೂ ಅವರು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯರಾಗಿದ್ದರು. 2007ರಲ್ಲಿ ‘ಜಾನಿ ಗದ್ದಾರ್’ ಚಿತ್ರದಲ್ಲಿ ನಟಿಸಿದ್ದ ಅವರು, ಎರಡು ವರ್ಷಗಳ ಹಿಂದೆ ತೆರೆಕಂಡ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ಯಲ್ಲೂ ತೆರೆಮೇಲೆ ಕಾಣಿಸಿಕೊಂಡಿದ್ದರು. ‘ಇಕ್ಕೀಸ್’ ಅವರ ಅಭಿನಯದ ಕೊನೆಯ ಸಿನಿಮಾ. ಅದು ಇದೇ ಡಿಸೆಂಬರ್ನಲ್ಲಿ ತೆರೆಕಾಣಲಿದೆ.

ಧರ್ಮೇಂದ್ರ ಜೀವನ ಹಾದಿ

1935 ಡಿ.8: ಪಂಜಾಬ್ನ ಲೂಧಿಯಾನಾ ಜಿಲ್ಲೆಯ ನಸ್ರಾಲಿ ಎಂಬ ಹಳ್ಳಿಯ ಜಾಟ್ ಸಿಖ್ ಕುಟುಂಬದಲ್ಲಿ ಜನನ; ತಂದೆ ಕೇವಲ್ ಕೃಷನ್ ಡಿಯೋಲ್, ಶಾಲಾ ಶಿಕ್ಷಕರು; ತಾಯಿ ಸತ್ವಂತ್ ಕೌಲ್

ತಂದೆ ಶಿಕ್ಷಕರಾಗಿದ್ದ ಲೂಧಿಯಾನದ ಸಹ್ನೇವಾಲ್ ಗ್ರಾಮದಲ್ಲಿ ಬಾಲ್ಯಜೀವನ; ಲಾಲ್ಟನ್ ಕಲಾಲ್ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ; 1952ರಲ್ಲಿ ಮೆಟ್ರಿಕ್ಯುಲೇಷನ್

1954: 19ನೇ ವಯಸ್ಸಿನಲ್ಲಿ ಮೊದಲ ಮದುವೆ; ಪತ್ನಿ ಪ್ರಕಾಶ್ ಕೌರ್

1960: ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ

1961: ‘ಶೋಲಾ ಔರ್ ಶಬ್ನಮ್’ ಚಿತ್ರದ ಮೂಲಕ ಮೊದಲ ಯಶಸ್ಸಿನ ರುಚಿ

1964: ‘ಹಕೀಕತ್’ ಚಿತ್ರದಲ್ಲಿ ನಟನೆ; ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ

1966: ‘ಫೂಲ್ ಔರ್ ಪತ್ಥರ್’ ಚಿತ್ರದಲ್ಲಿ ನಟನೆ; ಚಿತ್ರದ ಯಶಸ್ಸಿನಿಂದ ವೃತ್ತಿಜೀವನದಲ್ಲಿ ತಿರುವು

1969: ಸಾಮಾಜಿಕ ಕಥಾಹಂದರದ ‘ಸತ್ಯಕಾಮ್’ ಚಿತ್ರದಲ್ಲಿ ಅತ್ಯುತ್ತಮ ಅಭಿನಯ; ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿ

1971: ‘ಮೇರಾ ಗಾಂವ್, ಮೇರಾ ದೇಶ್’ ಚಿತ್ರದ ಮೂಲಕ ಆ್ಯಕ್ಷನ್ ಹೀರೊ ಆಗಿ ಸ್ಥಾನ ಭದ್ರ

1975: ‘ಶೋಲೆ’ ಚಿತ್ರದಲ್ಲಿ ನಟನೆ; ಅದುವರೆಗಿನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ದಾಖಲೆ ಸೃಷ್ಟಿ; ಚಿತ್ರಮಂದಿರದಲ್ಲಿ ಸತತ ಐದು ವರ್ಷ ಪ್ರದರ್ಶನ ಕಂಡ ಚಿತ್ರ. ಅದೇ ವರ್ಷ ‘ಚುಪ್ಕೆ ಚುಪ್ಕೆ’ ಹಾಸ್ಯ ಚಿತ್ರದಲ್ಲಿ ನಟನೆ

1977: ‘ಧರ್ಮ ವೀರ್’ ಚಿತ್ರದಲ್ಲಿ ನಟನೆ; ಬ್ಲಾಕ್ಬಸ್ಟರ್ ಆದ ಸಿನಿಮಾ

1980: ಎರಡನೇ ವಿವಾಹ; ನಟಿ ಹೇಮಾಮಾಲಿನಿ ಅವರೊಂದಿಗೆ ಮದುವೆ

1983: ‘ಬೇತಾಬ್’ ಚಿತ್ರ ನಿರ್ಮಾಣ; ಹಿರಿಯ ಮಗ ಸನ್ನಿ ಡಿಯೋಲ್ ಚಿತ್ರರಂಗ ಪ್ರವೇಶ

1990: ಪುತ್ರ ಸನ್ನಿ ಡಿಯೋಲ್ ನಟನೆಯ ‘ಘಾಯಲ್’ ಚಿತ್ರ ನಿರ್ಮಾಣ; ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ

1997: ಫಿಲ್ಮ್ಫೇರ್ ಜೀವಮಾನ ಸಾಧಕ ಪ್ರಶಸ್ತಿಯ ಮನ್ನಣೆ

2004: ರಾಜಕೀಯ ಪ್ರವೇಶ; ರಾಜಸ್ಥಾನದ ಬೀಕಾನೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ, ಗೆಲುವು; 2004–2009ರವರೆಗೆ ಸಂಸದ

2007: ‘ಲೈಫ್ ಇನ್ ಎ... ಮೆಟ್ರೊ’, ‘ಅಪ್ನೆ’ ಚಿತ್ರಗಳ ಮೂಲಕ ನಟನೆಗೆ ವಾಪಸ್

2011: ಮಕ್ಕಳೊಂದಿಗೆ ‘ಯಮ್ಲಾ ಪಗ್ಲಾ ದೀವಾನಾ’ ಚಿತ್ರದಲ್ಲಿ ನಟನೆ

2012: ಪದ್ಮಭೂಷಣ ಮನ್ನಣೆ

2023: ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಪೋಷಕ ಪಾತ್ರ

2024: ‘ತೇರಿ ಬಾತೋಮೆ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ನಟನೆ; ಅವರು ಜೀವಂತ ಇರುವಾಗ ಬಿಡುಗಡೆಯಾದ ಅವರ ನಟನೆಯ ಕೊನೆಯ ಚಿತ್ರ

2025 ನ.24: 89ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನ

ಗಣ್ಯರ ಸಂತಾಪ

ಧರ್ಮೇಂದ್ರ ಅವರ ನಿಧನದೊಂದಿಗೆ ಭಾರತೀಯ ಸಿನಿಮಾದ ಒಂದು ಯುಗ ಕೊನೆಗೊಂಡಿದೆ. ಅವರು ಸಿನಿಮಾ ಕ್ಷೇತ್ರದ ಅಪ್ರತಿಮ ವ್ಯಕ್ತಿಯಾಗಿದ್ದರು. ತಾವು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಹೊಸ ರೂಪ ಮತ್ತು ಜೀವ ತುಂಬಿದ ಶ್ರೇಷ್ಠ ನಟ. ಧರ್ಮೇಂದ್ರ ಅವರು ತಮ್ಮ ಸರಳತೆ, ವಿನಮ್ರತೆ ಮತ್ತು ಆತ್ಮೀಯತೆಯಿಂದ ಎಲ್ಲರ ಗೌರವಕ್ಕೂ ಪಾತ್ರರಾಗಿದ್ದರು

–ನರೇಂದ್ರ ಮೋದಿ, ಪ್ರಧಾನಿ (‘ಎಕ್ಸ್’ನಲ್ಲಿ)

ಹಿರಿಯ ನಟ ಮತ್ತು ಲೋಕಸಭೆಯ ಮಾಜಿ ಸದಸ್ಯ ಧರ್ಮೇಂದ್ರ ಅವರ ನಿಧನವು ಭಾರತೀಯ ಸಿನಿಮಾಗೆ ದೊಡ್ಡ ನಷ್ಟ. ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದ ಅವರು ದಶಕಗಳಷ್ಟು ಸುದೀರ್ಘವಾದ ನಟನಾ ವೃತ್ತಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯುನ್ನತ ವ್ಯಕ್ತಿಯಾಗಿ ಅವರು ಬಿಟ್ಟುಹೋಗಿರುವ ಪರಂಪರೆಯು ಯುವಪೀಳಿಗೆಯ ಕಲಾವಿದರಿಗೆ ಸ್ಫೂರ್ತಿಯಾಗಲಿದೆ

–ದ್ರೌಪದಿ ಮುರ್ಮು, ರಾಷ್ಟ್ರಪತಿ (‘ಎಕ್ಸ್’ನಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.