ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕಲಾವಿದ, ನಟ ಕೃಷ್ಣೇಗೌಡ ಬಿ.ಎಂ ನಿಧನ

Last Updated 25 ಮೇ 2021, 7:50 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ’ ನಾಟಕದಲ್ಲಿ ಪಕ್ಷದ ಅಧ್ಯಕ್ಷನ ಪಾತ್ರ ನಿರ್ವಹಿಸಿ ಖ್ಯಾತಿಯಾಗಿದ್ದ ಹಿರಿಯ ನಟ ಕೃಷ್ಣೇಗೌಡ ಬಿ.ಎಂ ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಏಪ್ರಿಲ್‌ 13ಕ್ಕೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. 36 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಗುಣಮುಖರಾಗಿ ಮನೆಗೆ ಮರಳಿದ್ದರು. ಆದರೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಮಂಗಳವಾರ ಮುಂಜಾನೆ 4.15ಕ್ಕೆ ಮೃತಪಟ್ಟಿದ್ದಾರೆ. ಕೃಷ್ಣೇಗೌಡ ಅವರ ಪುತ್ರ ಸತೀಶ್‌ ಎನ್ನುವವರು ಕಳೆದ ತಿಂಗಳು ಕೋವಿಡ್‌ನಿಂದ ಮೃತಪಟ್ಟಿದ್ದರು. ‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಈ ವಿಷಯವನ್ನು ಅಪ್ಪನಿಗೆ ತಿಳಿಸಿರಲಿಲ್ಲ, ಕೊನೆಗೂ ಅಪ್ಪನಿಗೆ ಇದು ಹೇಳಲಾಗಲಿಲ್ಲ’ ಎಂದು ಪುತ್ರ ಮುರುಳೀಧರ್‌ ಹೇಳಿದರು.

‘ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಕೃಷ್ಣೇಗೌಡರು ಕಲಾಗಂಗೋತ್ರಿ ತಂಡದೊಂದಿಗೆ 45 ವರ್ಷದ ನಂಟು ಹೊಂದಿದ್ದರು. ‘ಮುಖ್ಯಮಂತ್ರಿ’ ನಾಟಕದ 450ಕ್ಕೂ ಅಧಿಕ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ ಖ್ಯಾತಿ ಅವರದ್ದು. ಅನಾರೋಗ್ಯದ ಬಳಿಕ ಈ ಪಾತ್ರವನ್ನು ಬೇರೆಯವರು ನಿರ್ವಹಿಸಿದ್ದರು. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ(ಎಜಿಎಸ್‌) ಕಾರ್ಯನಿರ್ವಹಿಸುತ್ತಿರುವ ವೇಳೆಗೆ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡ ಭಾಷೆಯ ವಿಷಯದಲ್ಲಿ ಹಲವು ಹೋರಾಟಗಳನ್ನು ನಡೆಸಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ನಟ ಮುಖ್ಯಮಂತ್ರಿ ಚಂದ್ರು.

‘ಕನ್ನಡ ಚಿತ್ರರಂಗದಲ್ಲಿ ಕಾಣಸಿಗದ ಅನೇಕ ಅಪರೂಪದ ಗುಣಗಳು ಕೃಷ್ಣೇಗೌಡರಲ್ಲಿದ್ದವು. ತಾಳ್ಮೆ, ಸಜ್ಜನಿಕೆ ,ವಿಚಾರವಂತಿಕೆ, ಸ್ವಾಭಿಮಾನ, ಸಮಯ ಪ್ರಜ್ಞೆ.....ಛೇ! ಈ ಕೋವಿಡ್ ಕಾಲ ಅದೆಷ್ಟು ಜನರನ್ನು ತಿಂದು ಹಾಕಿತು’ ಎಂದು ನಟ ಮಂಡ್ಯ ರಮೇಶ್‌ ಹೇಳಿದ್ದಾರೆ.

ಸಿ.ಆರ್‌.ಸಿಂಹ ಅವರ ನಿರ್ದೇಶನದ ‘ಸಿಂಹಾಸನ’ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಇವರು ‘ಚಕ್ರವ್ಯೂಹ’, ‘ಹಾಲುಂಡ ತವರು’, ‘ಒಲವಿನ ಉಡುಗೊರೆ’, ‘ಸಂಸಾರ ನೌಕೆ’ ಹೀಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಇವರು ಪಡೆದಿದ್ದರು. ‘ಗುರು ಜಗದ್ಗುರು’ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ಹೀಗೆ ಬಹುತೇಕ ಚಿತ್ರದಲ್ಲಿ ರಾಜಕಾರಣಿಯ ಪಾತ್ರಕ್ಕೆ ಕೃಷ್ಣೇಗೌಡರು ಬಣ್ಣ ಹಚ್ಚಿದ್ದರು. ‘ಒಂದು ಮುತ್ತಿನ ಕಥೆ’ ಹಾಗೂ ‘ಆಕಸ್ಮಿಕ’ ಚಿತ್ರದಲ್ಲಿ ಡಾ.ರಾಜ್‌ಕುಮಾರ್‌ ಅವರ ಜೊತೆಯೂ ಕೃಷ್ಣೇಗೌಡರು ನಟಿಸಿದ್ದರು.

ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಾಲಿಬಾಲ್‌ ಪಟುವಾಗಿದ್ದ ಕೃಷ್ಣೇಗೌಡರು, ವಿಶ್ವವಿದ್ಯಾಲಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ತಂಡದ ನಾಯಕರಾಗಿ ಮಿಂಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT