ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ಬ್ಯಾಂಕಾಕ್‌ ಸುತ್ತಿ ಇಡ್ಲಿ ತಂದು ಕೊಟ್ಟಿದ್ದ ಚಿರು: ಅಮೃತಾ ನೆನಪು

Last Updated 8 ಜೂನ್ 2020, 8:39 IST
ಅಕ್ಷರ ಗಾತ್ರ

‘ಅದು ‘ಶಿವಾರ್ಜುನ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ. ಚಿರು ಸರ್‌ ಸೇರಿದಂತೆ ಚಿತ್ರತಂಡದ ಸದಸ್ಯರು ಬ್ಯಾಂಕಾಕ್‌ಗೆ ಹೋಗಿದ್ದೆವು. ನನ್ನಮ್ಮ ಕೂಡ ಬಂದಿದ್ದರು. ನಾನು ಅಪ್ಪಟ ಸಸ್ಯಾಹಾರಿ. ಚಿರು ಅವರು ಊಟ ಮಾಡುತ್ತಿದ್ದ ವೇಳೆ ಸಿಕ್ಕಾಪಟ್ಟೆ ತರ್ಲೆ ಮಾಡುತ್ತಿದ್ದರು. ನಿಮಗೆ ಮೊಸರನ್ನ; ರಸಂ ಬೇಕು. ನಿಮ್ಮನ್ನು ಚೀನಾಕ್ಕೆ ಕರೆದುಕೊಂಡು ಹೋಗಬೇಕು ಎಂದು ರೇಗಿಸುತ್ತಿದ್ದರು. ಸೂಪ್‌ಗೆ ಚಟ್ನಿ ಪುಡಿ ಹಾಕಿ ಈಗ ರಸಂ ಆಗಿದೆ ಕುಡಿಯಿರಿ ಎನ್ನುತ್ತಿದ್ದರು. ಅಲ್ಲಿ ನನಗೆ ಊಟ ಸರಿಹೊಂದುತ್ತಿರಲಿಲ್ಲ. ಕೊನೆಗೆ ಬ್ಯಾಂಕಾಕ್‌ನಲ್ಲಿ ಸುತ್ತಾಡಿ ಮದ್ರಾಸ್‌ ಹೋಟೆಲ್‌ ಅನ್ನು ಹುಡುಕಿ ಅಲ್ಲಿಂದ ನನಗೆ ಇಡ್ಲಿ ತರಿಸಿಕೊಟ್ಟಿದ್ದರು...’

–‘ಯುವ ಸಾಮ್ರಾಜ್’ ಚಿರಂಜೀವಿ ಸರ್ಜಾ ನಾಯಕರಾಗಿದ್ದ ‘ಶಿವಾರ್ಜುನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಅಮೃತಾ ಅಯ್ಯಂಗಾರ್ ಅವರು ಚಿರು ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದು ಹೀಗೆ.

‘ಚಿರು ಅವರದು ಫನ್‌ ಲವಿಂಗ್‌ ವ್ಯಕ್ತಿತ್ವ. ಎಂದಿಗೂ ಅವರು ಸಿನಿಮಾ ಸೆಟ್‌ನಲ್ಲಿ ಬೇಸರದಿಂದ ಇರುತ್ತಿರಲಿಲ್ಲ. ನಾನು ಅವರಂತೆಯೇ ಇರಬೇಕು ಎಂದು ಅಂದುಕೊಳ್ಳುತ್ತಿದ್ದೆ. ಬೇಸರದಿಂದ ಕುಳಿತಿದ್ದರೆ ಎಲ್ಲವೂ ಸರಿಯಾಗುತ್ತದೆ; ಬೇಜಾರಾಗಬಾರದು ಎಂದು ಮಾನಸಿಕ ಸ್ಥೈರ್ಯ ತುಂಬುತ್ತಿದ್ದರು. ಯಾವಾಗಲೂ ನಗು ನಗುತ್ತಾ ಇರುವಂತೆ ಹೇಳುತ್ತಿದ್ದರು. ನಾವು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇವೆ ಎಂದು ಅನಿಸುತ್ತಿರಲಿಲ್ಲ. ಪ್ರವಾಸಕ್ಕೆ ಹೋಗಿದ್ದೇವೆ, ನನ್ನ ಬೆಸ್ಟ್‌ ಫ್ರೆಂಡ್‌ ಜೊತೆಗೆ ಆ್ಯಕ್ಟಿಂಗ್ ಮಾಡುತ್ತಿದ್ದೇನೆ ಎಂದು ಅನಿಸುತ್ತಿತ್ತು. ‘ಶಿವಾರ್ಜುನ’ವೇ ನಮ್ಮ ಕೊನೆಯ ಸಿನಿಮಾವಾಗುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ’ ಎಂದು ವಿಷಾದಿಸಿದರು.

‘ಶಿವಾರ್ಜುನ ಬಿಡುಗಡೆಯಾದಾಗ ಕೊರೊನಾ ಭೀತಿ ಕಾಣಿಸಿಕೊಂಡಿತ್ತು. ಇದು ಸಿನಿಮಾದ ಪ್ರದರ್ಶನಕ್ಕೂ ಅಡ್ಡಿಪಡಿಸಿತು. ಈ ಬಗ್ಗೆ ನಾವು ಚಿರು ಅವರ ಬಳಿ ಚರ್ಚಿಸಿದ್ದೆವು. ಲಾಕ್‌ಡೌನ್‌ ಮುಗಿದ ಬಳಿಕ ಸಿನಿಮಾ ಪ್ರದರ್ಶನದ ಬಗ್ಗೆ ಮತ್ತೊಂದು ಸುತ್ತಿನ ಪ್ರಚಾರ ಹಮ್ಮಿಕೊಳ್ಳೋಣ ಎಂದು ತಿಳಿಸಿದ್ದರು. ಸ್ನೇಹಿತರು ಚಿರು ಅವರ ಸಾವಿನ ಸುದ್ದಿ ಬಗ್ಗೆ ಹೇಳಿದಾಗ ನಾನು ಸುಳ್ಳು ಹೇಳುತ್ತಿದ್ದಾರೆ ಎಂದುಕೊಂಡಿದ್ದೆ. ಮಾನಸಿಕವಾಗಿ ಅವರು ಆರೋಗ್ಯವಾಗಿದ್ದರು. ಅವರು ಈಗ ನಮ್ಮೊಂದಿಗಿಲ್ಲ ಎಂದು ಕಲ್ಪಿಸಿಕೊಳ್ಳಲು ನನಗಾಗುತ್ತಿಲ್ಲ’ ಎಂದರು.

‘ಅವರು ಸೆಟ್‌ಗೆ ತಡವಾಗಿ ಬರುತ್ತಿರಲಿಲ್ಲ. ಸೆಟ್‌ನಲ್ಲಿ ತುಂಬಾ ಆ್ಯಕ್ಟಿವ್‌ ಆಗಿರುತ್ತಿದ್ದರು. ಬದುಕಿನಲ್ಲಿ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ; ಈ ಕ್ಷಣದಲ್ಲಿ ನೀನು ಖುಷಿಯಾಗಿರಬೇಕು. ಬೇಸರಪಡಬಾರದು ಎಂದು ಹೇಳುತ್ತಿದ್ದರು. ಯಾವಾಗಲೂ ನಗು ನಗುತ್ತಾ ಇರು; ತೊಂದರೆಗಳು ಆ ನಗು ನೋಡಿಕೊಂಡೇ ಹೆದರಿ ಹೋಗುತ್ತವೆ ಎಂದು ಹೇಳುತ್ತಿದ್ದರು. ಅವರ ಈ ಗುಣವೇ ನನಗೆ ಇಷ್ಟವಾಗಿತ್ತು’ ಎಂದು ನೆನಪಿಸಿಕೊಂಡರು.

‘ಶೂಟಿಂಗ್‌ ವೇಳೆ ಜಾಸ್ತಿ ಟೇಕ್‌ ತೆಗೆದುಕೊಂಡಾಗ ಇಷ್ಟಕ್ಕೆ ನೀವು ಬೇಜಾರು ಮಾಡಿಕೊಳ್ಳಬೇಡಿ. ಸೂಪರ್‌ಸ್ಟಾರ್‌ಗಳೇ ಹಲವು ಟೇಕ್‌ಗಳನ್ನು ತೆಗೆದುಕೊಳ್ಳುತ್ತಾರೆ. ನೀನು ಇಡೀ ದಿನ ಟೇಕ್‌ ತೆಗೆದುಕೋ. ನಾನು ನಿಂತುಕೊಳ್ಳುವೆ ಎಂದು ಧೈರ್ಯ ತುಂಬುತ್ತಿದ್ದರು ಎಂದರು ಅಮೃತಾ ಅಯ್ಯಂಗಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT