ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಗೈ... ಅಪಘಾತವಲ್ಲ ‘ಆಘಾತ’: ನಟಿ ಧನು ಹರ್ಷಾ ಸಂದರ್ಶನ

Last Updated 18 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ರಂಗಭೂಮಿ, ಕಿರುಚಿತ್ರಗಳಲ್ಲಿ ನಟಿಸುತ್ತಾ, ಅಷ್ಟೋ ಇಷ್ಟೋ ಆನ್‌ಲೈನ್‌ ವೇದಿಕೆಗಳಲ್ಲಿ ಸಕ್ರಿಯವಾಗಿದ್ದ ಮೌಂಟ್‌ ಕಾರ್ಮೆಲ್‌ ಕಾಲೇಜು ಹುಡುಗಿಗೆ ಇದೀಗ ನಾಯಕಿ ಪಾತ್ರವೊಂದು ಹುಡುಕಿಕೊಂಡು ಬಂದಿದೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ಧನು ಹರ್ಷಾ ಹೇಗಿದ್ದಾರೆ? ಅವರನ್ನೇ ಕೇಳೋಣ...

ತಮಿಳಿನ ‘ಇರಂಧಕಾಲಂ’, ಕನ್ನಡದ ‘ಅರಿಹ’ದಿಂದ ಇದೀಗ ‘ಎಡಗೈ...’ ವರೆಗಿನ ಹೆಜ್ಜೆಗಳು ಹೇಗಿದ್ದವು?

‘ಇರಂದ ಕಾಲಂ’ ನನ್ನ ವಯಸ್ಸಿಗಿಂತ ಸುಮಾರು 8, 9 ವರ್ಷ ಹಿರಿಯಳ ಪಾತ್ರ. ತುಂಬಾ ಸವಾಲಿನದ್ದೂ ಹೌದು. ಅದರಲ್ಲಿ ಸಾಕಷ್ಟು ಅನುಭವ ಸಿಕ್ಕಿತು. ‘ಅರಿಹ’ದಲ್ಲಿ ಪೋಷಕ ಪಾತ್ರ. ‘ಎಡಗೈ...’ಗೆ ಸಿಕ್ಕ ಅವಕಾಶ ನೋಡಿದರೆ ನಾನಿನ್ನೂ ಆ ಶಾಕ್‌ನಿಂದ ಹೊರಬಂದಿಲ್ಲ. ಅಂತಹ ಅವಕಾಶ ಇದು. ವರಮಹಾಲಕ್ಷ್ಮೀ ಹಬ್ಬದ ಮುನ್ನಾದಿನ ನಾನು ಆಯ್ಕೆಯಾದ ಸುದ್ದಿ ಬಂತು. ಅದೂ ದಿಗಂತ್‌ ಅವರ ಜೊತೆ ಅಭಿನಯಿಸುತ್ತಿದ್ದೇನೆ. ಆಗಸ್ಟ್‌ ಅಂತ್ಯದಲ್ಲಿ ಶೂಟಿಂಗ್‌ ಆರಂಭವಾಗಲಿದೆ.

ಬೆಳ್ಳಿತೆರೆಗೆ ಬರುವ ಮುನ್ನ ನಿಮ್ಮ ಸಿದ್ಧತೆ ಹೇಗಿತ್ತು?

ನಾನು ನಟನಾ ತರಬೇತಿಯನ್ನೋ, ಪದವಿಯನ್ನೋ ಪಡೆದವಳಲ್ಲ. ಕಾಲೇಜಿನ ರಂಗ ತಂಡಗಳಲ್ಲಿ ಸಕ್ರಿಯಳಾಗಿದ್ದೆ. ‘ವಿಮೂವ್‌’, ‘ಬೆಂಗಳೂರು ಲಿಟ್ಲ್‌ ಥಿಯೇಟರ್‌ ಗ್ರೂಪ್‌’ ತಂಡಗಳ ನಾಟಕಗಳಲ್ಲಿ ಅಭಿನಯಿಸಿದ್ದೆ. ಹಾಗೆ ನೋಡಿದರೆ ರಂಗಭೂಮಿಯೇ ನನಗೆ ತುಂಬಾ ಖುಷಿ ಕೊಡುತ್ತದೆ. ಒಂದು ವೇಳೆ ಪೂರ್ಣಾವಧಿ ಕೆಲಸ ಮಾಡುವ ಒಳ್ಳೆಯ ಅವಕಾಶ ಸಿಕ್ಕಿದರೆ ರಂಗಭೂಮಿಯಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಇದೆ.

ಪದವಿ ಓದುತ್ತಿರುವಾಗಲೇ ‘ಫ್ರೆಷ್‌ ಫೇಸ್‌ ಇಂಡಿಯಾ’ ಫ್ಯಾಷನ್‌ ಷೋದಲ್ಲಿ ‘ಬೆಂಗಳೂರು ನಗರ’ ವಿಭಾಗದಲ್ಲಿ ವಿಜೇತಳಾಗಿದ್ದೆ. ಆಗಾಗ ಕಿರುಚಿತ್ರಗಳನ್ನು ಮಾಡುತ್ತಿದ್ದೆ. ಕೋವಿಡ್‌ ಸಮಯದಲ್ಲಿ ಮನೆಯಲ್ಲೇ ಇರಬೇಕಾಯಿತು. ಆಗ ಮನೆಯಲ್ಲೇ ಒಂದು ಪುಟ್ಟ ಸ್ಟುಡಿಯೊ ಮಾಡಿ ಅಲ್ಲಿಯೇ ಜಾಲತಾಣಗಳಿಗೆ ಬೇಕಾದ ಕಂಟೆಂಟ್‌ ಮಾಡುತ್ತಿದ್ದೆ. ಅಲ್ಲಿಯೂ ಕಿರುಚಿತ್ರಗಳ ಪ್ರಯೋಗಗಳು ನಡೆದವು. ಒಟ್ಟಿನಲ್ಲಿ ನನ್ನದೇ ಆದ ವ್ಯಕ್ತಿಚಿತ್ರ ಬೆಳೆಸಿಕೊಳ್ಳುತ್ತಾ ಮುನ್ನಡೆದೆ. ಈಗ ಇಲ್ಲಿವರೆಗೆ ಬಂದಿದ್ದೇನೆ ನೋಡಿ.

‘ಎಡಗೈ...’ ವಿಷಯವನ್ನಿಟ್ಟುಕೊಂಡು ಹೊರಟಿದ್ದೀರಿ?

ಇದು ಎಡಗೈಯನ್ನೇ ಹೆಚ್ಚು ಬಳಸುವವರ ಕುರಿತ ಸಿನಿಮಾ. ನಮ್ಮಲ್ಲಿ ಈಗಲೂ ಎಡಗೈ ಎಂದರೆ ಅಪಶಕುನ ಎಂಬ ನಂಬಿಕೆ ಇದೆ. ಯಾವುದೇ ಎಡಗೈಯವರು ಉದ್ದೇಶಪೂರ್ವಕವಾಗಿ ಅಭ್ಯಾಸ ಮಾಡಿಕೊಂಡು ಎಡಗೈ ಬಳಸುವುದಿಲ್ಲ. ಕೆಲವರಿಗೆ ಅಲ್ಲಿಯೇ ಶಕ್ತಿ ಇರುತ್ತದೆ. ಜೈವಿಕವಾಗಿಯೂ ಬಂದಿರುವುದುಂಟು. ನಾನೂ ಇಂಥ ಪ್ರಕರಣಗಳನ್ನು ನೋಡಿದ್ದೇನೆ. ಚಿತ್ರದಲ್ಲಿ ನಾಯಕನಂತೆಯೇ ನಾಯಕಿಯೂ ಎಡಗೈ ಬಳಸುವವಳು. ಹಾಗಾಗಿ ಅವರು ಎಂತೆಂತಹ ಸಮಸ್ಯೆಗಳು, ಸಂದರ್ಭಗಳನ್ನು ಎದುರಿಸುತ್ತಾರೆ ಎಂಬುದು ಸಿನಿಮಾದ ಕಥಾಹಂದರ. ಪ್ರೋಮೋ ಶೂಟಿಂಗ್‌ ಎಲ್ಲವೂ ತುಂಬಾ ಮಜವಾಗಿತ್ತು. ಒಟ್ಟಿನಲ್ಲಿ ಈ ಅವಕಾಶ ಖುಷಿ ಕೊಟ್ಟಿದೆ.

ಸ್ಫೂರ್ತಿಯ ಗುರುಗಳು ಯಾರು?

ನಿರ್ದಿಷ್ಟವಾಗಿ ಇಂಥವರು ಎಂದು ಯಾರೂ ಇಲ್ಲ. ಎಲ್ಲರಿಂದಲೂ ಕಲಿಯುವುದಿದೆ. ಕನ್ನಡದ ಮಟ್ಟಿಗೆ ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ವಿಜಯ್‌ ಸೇತುಪತಿ.... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾವುದೇ ನಟ/ನಟಿಯ ಚಿತ್ರಗಳನ್ನು ನೋಡಿದಾಗ ಅವರ ಬಗ್ಗೆ ಅಧ್ಯಯನ ಮಾಡುತ್ತೇನೆ. ಈ ಕ್ಷೇತ್ರಕ್ಕೆ ಅವರ ತಯಾರಿಗಳು. ಅಪ್‌ಡೇಟ್‌ ಆಗುವ ಬಗೆ, ಮ್ಯಾನರಿಸಂ, ಕೌಶಲ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.

ಶಿಕ್ಷಣ ಎಲ್ಲಿವರೆಗೆ ಬಂತು?

ಬಿ.ಎ. ಪದವಿ ಮುಗಿದಿದೆ. ನಟನೆಯ ಕಾರಣಕ್ಕೆ ಕೆಲಕಾಲ ಬ್ರೇಕ್‌ ತೆಗೆದುಕೊಂಡೆ. ಮುಂದೆ ಎಂಬಿಎ ಓದಬೇಕು. ಉದ್ಯಮ ಪ್ರವೇಶಿಸಬೇಕು ಎಂದುಕೊಂಡಿದ್ದೇನೆ. ಅಪ್ಪ ಉದ್ಯಮಿ. ಅಮ್ಮನೂ ಉದ್ಯಮಕ್ಕೆ ನೆರವಾಗುತ್ತಿದ್ದಾರೆ. ನನಗೂ ಆಸಕ್ತಿ ಇದೆ. ಹಾಗಾಗಿ ಶಿಕ್ಷಣದ ಭದ್ರ ಬುನಾದಿ ಇರಬೇಕು. ಆ ದಿಸೆಯಲ್ಲಿ ಸಾಗಿದ್ದೇನೆ.

ಕನ್ನಡದಲ್ಲಿ ಮುಂದಿನ ಕನಸುಗಳು?

ಕಲಾವಿದರಿಗೆ ಭಾಷೆ ಮುಖ್ಯವಾಗುವುದಿಲ್ಲ. ನಾವು ಕೊಡುವ ಕೃತಿ ಮತ್ತು ಅದರ ಮೌಲ್ಯ ಏನು ಎಂಬುದಷ್ಟೇ ಮುಖ್ಯ. ಉದಾಹರಣೆಗೆ ಕಿರುಚಿತ್ರಗಳಿಗಾಗಿ ತಮಿಳು ಕಲಿತೆ. ಅದು ಮುಂದೆ ಬೆಳ್ಳಿತೆರೆಗೂ ಅನುಕೂಲವಾಯಿತು. ಕನ್ನಡದಲ್ಲೂ ಈಗ ನಾಯಕಿಯಾಗಿ ಮೊದಲ ಅವಕಾಶ ಬಂದಿದೆ. ಮುಂದೆ ನೋಡಬೇಕು. ಮೊದಲು ನನ್ನ ಶಿಕ್ಷಣದ ಕಡೆಗೆ ಗಮನ. ಆ ಬಳಿಕ ಮೊದಲೇ ಹೇಳಿದೆನಲ್ಲಾ, ಎಲ್ಲ ಅನುಕೂಲಗಳು ಒದಗಿಬಂದರೆ ಪೂರ್ಣಾವಧಿ ರಂಗಭೂಮಿ ನನಗಿಷ್ಟ.

ಪೋಷಕರ ಪ್ರೋತ್ಸಾಹ ಹೇಗಿದೆ?

ಪದವಿ ಮುಗಿದ ಕಾರಣ ಈಗ ಚೆನ್ನಾಗಿಯೇ ಇದೆ. ಅವರ ದೃಷ್ಟಿ ನನ್ನ ಶಿಕ್ಷಣದ ಮೇಲೆ ಇದೆ. ಹೊಸಚಿತ್ರಕ್ಕೆ ಆಯ್ಕೆಯಾದ ಕಾರಣ ಅವರೂ ಖುಷಿಯಾಗಿದ್ದಾರೆ. ಜೊತೆಗೆ ತೆರೆಯ ಮೇಲೆ ನೋಡಿದವರ, ಸ್ನೇಹಿತರ ಬೆಂಬಲವೂ ಚೆನ್ನಾಗಿದೆ. ಎಲ್ಲರ ಪ್ರೋತ್ಸಾಹವೂ ಹೀಗೇ ಇರಲಿ ಎಂದೇ ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT