ಬೆಂಗಳೂರು: ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಮದುವೆಯಾಗಿದ್ದಾರೆ.
ತೆಲಂಗಾಣದ ವಾನಪರ್ತಿಯ ಐತಿಹಾಸಿಕ ರಂಗಸ್ವಾಮಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಈಚೆಗೆ ಮದುವೆಯಾಗಿದ್ದಾರೆ. ಕುಟುಂಬ, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ. ಈ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಿದ್ದು ಬಹಿರಂಗವಾಗಿತ್ತು.
ತೆಲುಗಿನ ‘ಮಂಗಳವಾರಂ’ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ನಿರ್ದೇಶಿಸಿದ್ದ ‘ಮಹಾಸಮುದ್ರಂ’ ಸಿನಿಮಾ ಮೂಲಕ ಸಿದ್ಧಾರ್ಥ್ ಹಾಗೂ ಅದಿತಿ ಸಂಪರ್ಕಕ್ಕೆ ಬಂದಿದ್ದರು.
ಖ್ಯಾತ ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ಅದಿತಿ ರಾವ್ ಹೈದರಿ ಅವರು ಇದುವರೆಗೆ ಹಿಂದಿ, ತಮಿಳು, ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. 2012ಕ್ಕೆ ವಿಚ್ಚೇದನ ಆಗಿತ್ತು. ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು.
ನಿರ್ಮಾಪಕ, ನಿರ್ದೇಶಕ, ಹಿನ್ನೆಲೆ ಗಾಯಕ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ್ 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.