ಬುಧವಾರ, ಆಗಸ್ಟ್ 4, 2021
27 °C

‘ಗಾಲ್ವನ್‌ ಸಂಘರ್ಷ‘ ಸಿನಿಮಾ ಮಾಡಲಿದ್ದಾರೆ ಅಜಯ್‌ ದೇವಗನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವಾರ ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ‘ಸಂಘರ್ಷ‘ದ ಕಥೆ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಮುಂದಾಗಿದ್ದಾರೆ.

ಯೋಧರ ನಡುವೆ ನಡೆದ ಸಂಘರ್ಷ, 20 ಮಂದಿ ಭಾರತದ ಯೋಧರ ವೀರ ಮರಣ, ಚೀನಾ ದಾಳಿ ಹಿಂದಿನ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಂತೆ. ಅಜಯ್‌ ದೇವಗನ್ ಅವರು ಈಗಾಗಲೇ ಚಿತ್ರ ನಿರ್ಮಾಣದ ತಯಾರಿಯಲ್ಲಿ ತೊಡಗಿದ್ದಾರೆ ಎಂದು, ಹೊಸ ಚಿತ್ರದ ಕುರಿತು ಸಿನಿಮಾ ವಿಮರ್ಶಕ ತರುಣ್‌ ಆದರ್ಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರದ ಶೀರ್ಷಿಕೆ ಹಾಗೂ ಕಲಾವಿದರ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಚಿತ್ರ ನಿರ್ಮಾಣಕ್ಕೆ ಅಜಯ್‌ ದೇವಗನ್‌ ಜೊತೆಗೆ ಸೆಲೆಕ್ಟ್‌ ಮೀಡಿಯಾ ಹೋಲ್ಡಿಂಗ್ಸ್‌ ಎಲ್‌ಎಲ್‌ಪಿ ಸಿನಿ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. 

‘ಭುಜ್‌‘ ಸಿನಿಮಾ ಬಿಡುಗಡೆ

ಸದ್ಯ ಅಜಯ್‌ ದೇವಗನ್ ತಾವು ನಟಿಸಿರುವ ಯುದ್ಧ ಆಧಾರಿತ ‘ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದ ಬಿಡುಗಡೆ ಕೆಲಸದಲ್ಲಿ ತೊಡಗಿದ್ದಾರೆ. ಈ ಚಿತ್ರ ಡಿಸ್ನಿ+ಹಾಟ್‌ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

‘ಭುಜ್‌‘ ಚಿತ್ರವನ್ನು ಇದೇ ಆಗಸ್ಟ್‌ 14ರಂದು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಆ ಸಮಯಕ್ಕೆ ಚಿತ್ರಮಂದಿರಗಳು ಪುನರರಾಂಭವಾಗುವ ಲಕ್ಷಣಗಳು ಕಾಣದಿರುವುದರಿಂದ, ಒಟಿಟಿ ವೇದಿಕೆಯಲ್ಲೇ ಬಿಡುಗಡೆಗೊಳಿಸಲು ಸಿನಿಮಾ ತಂಡ ನಿರ್ಧರಿಸಿದೆ. ಆದರೆ ಬಿಡುಗಡೆ ದಿನಾಂಕವನ್ನು ತಿಳಿಸಿಲ್ಲ.

ಈ ಚಿತ್ರವನ್ನು ಅಭಿಷೇಕ್ ದುಧಯ್ಯ ನಿರ್ದೇಶಿಸಿದ್ದು, ಇದು 1971ರ ಭಾರತ– ಪಾಕಿಸ್ತಾನ ಯುದ್ಧದ ಕತೆ ಹೊಂದಿದೆ. ಇದರಲ್ಲಿ ಸಂಜಯ್‌ ದತ್‌, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಪ್ರಣೀತಾ ಸುಭಾಷ್‌ ಮೊದಲಾದವರು ನಟಿಸಿದ್ದಾರೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು