ರೆಬೆಲ್‍ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿಯ ಸಮಾಧಿಗೆ ಅವರ ಪತ್ನಿ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್, ಅಂಬಿ ಕುಟುಂಬದ ಆಪ್ತರಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯಶುಕ್ರವಾರ ಪೂಜೆ ಸಲ್ಲಿಸಿದರು. ಅಂಬಿ ಹುಟ್ಟು ಹಬ್ಬದ ಆಚರಣೆ ಪ್ರಯುಕ್ತ ಸುಮಲತಾ ಮತ್ತು ಅಭಿಷೇಕ್ ಕೇಕ್ ಕತ್ತರಿಸಿದರು.
ಕೊರೊನಾ ಲಾಕ್‌ಡೌನ್ ಕಾರಣದಿಂದ ಸಾರ್ವಜನಿಕ ಸಮಾರಂಭ ನಡೆಸಲು ಅವಕಾಶ ಇಲ್ಲದೆ ಇರುವುದರಿಂದ ಅಭಿಮಾನಿಗಳು ಅಂಬಿ ಸಮಾಧಿಯ ಕಡೆಗೆ ಸುಳಿಯಲಿಲ್ಲ.
ಇದೇ ವೇಳೆ ಅಂಬರೀಷ್ ಪುತ್ರ ಅಭಿಷೇಕ್ ಅವರ ಎರಡನೇ ಚಿತ್ರ ‘ಬ್ಯಾಡ್‍ಮ್ಯಾನರ್ಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೊಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
‘ಅಂಬರೀಷ್ ನಮ್ಮೊಂದಿಗಿದ್ದರೆ ಇಂದು ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರು ಭೌತಿಕವಾಗಿ ಇಲ್ಲದಿದ್ದರೂ ಎಂದೆಂದಿಗೂ ಅಭಿಮಾನಿಗಳ ಮನದಲ್ಲಿ ನೆಲೆಸಿರುತ್ತಾರೆ. ಕೊರೊನಾದಿಂದಾಗಿ ಅಭಿಮಾನಿಗಳು ಈ ವರ್ಷ ಸಮಾಧಿ ಬಳಿಗೆ ಬರದೇ ಇದ್ದರೂ, ರಾಜ್ಯದಾದ್ಯಂತ ತಾವು ಇರುವ ಸ್ಥಳಗಳಲ್ಲೇ ಅಂಬಿಯ ಹುಟ್ಟುಹಬ್ಬ ಆಚರಿಸಿ ಗೌರವ ಸಲ್ಲಿಸಿದ್ದಾರೆ’ ಎಂದರು ಸುಮಲತಾ ಅಂಬರೀಷ್.
‘ಪುತ್ರ ಅಭಿಯ ಮೊದಲ ಚಿತ್ರ ‘ಅಮರ್’ ಚಿತ್ರೀಕರಣದ ವೇಳೆಮಗನಿಗೆ ಅಂಬಿ ಸಲಹೆನೀಡುವ ಮೂಲಕ ಪ್ರತಿ ಹಂತದಲ್ಲೂ ಮಗನ ಜತೆ ಇದ್ದರು. ಎರಡನೇ ಚಿತ್ರದ ವೇಳೆ ಅವರು ಜೊತೆಗಿಲ್ಲದಿದ್ದರೂ ಸೂರಿಯವರಂತಹ ಪ್ರಬುದ್ಧ ನಿರ್ದೇಶಕರು ಸಿನಿಮಾ ನಿರ್ದೇಶಿಸುತ್ತಿರುವುದರಿಂದ ಅಭಿಯ ಚಿತ್ರರಂಗದ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಅಮರ್ ಚಿತ್ರದಲ್ಲಿ ಪ್ರೇಮದ ವಿಷಯ ವಿದ್ದರೆ, ಈ ಚಿತ್ರದಲ್ಲಿ ಡಿಫರೆಂಟ್ ಮ್ಯಾನರಿಸಂ ಇದ್ದು, ಅಭಿ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅಪ್ಪನಂತೆ ಮಗ ಕೂಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲಿ’ ಎಂದು ಅವರು ಹಾರೈಸಿದರು.
ಲಿರಿಕಲ್ ಹಾಡು ಬಿಡುಗಡೆ:ಅಂಬಿಗೆ ಹುಟ್ಟುಹಬ್ಬದ ಪ್ರಯುಕ್ತ ಅಂಬಿಗೆ ಗೌರವ ಸಲ್ಲಿಸಲು ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ಅವರು ‘ಮಂಡ್ಯ ಗಂಡು ಕಲ’ ನಿರ್ಮಿಸಿರುವ ಲಿರಿಕಲ್ ವಿಡಿಯೊ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ನಟ ನಿನಾಸಂ ಸತೀಶ್ ಹಾಡಿರುವ ಈ ಹಾಡು ಕೇಳಲು ಚೆಂದವಿದೆ. ಅಂಬಿಯ ಸಿನಿಮಾ ಬದುಕು ಮತ್ತು ಅವರ ವ್ಯಕ್ತಿತ್ವವನ್ನು ನೆನಪಿಸುವಂತಿದೆ. ಈ ಹಾಡಿಗೆ ಭರ್ಜರಿ ಚೇತನ್‌ಕುಮಾರ್ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.