ಶುಕ್ರವಾರ, ಜುಲೈ 23, 2021
23 °C

ರಂಗಭೂಮಿಯಿಂದ ಉದಯಿಸಿದ ಅಭಿಜಾತ ಪ್ರತಿಭೆ ಶಾಂತಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಕಾಯಂ ತಾಯಿ ಪಾತ್ರಧಾರಿ ಯಾರೆಂದರೆ ಅದು ಹಿರಿಯ ಕಲಾವಿದೆ ಶಾಂತಮ್ಮ. ನಾಯಕ ಅಥವಾ ನಾಯಕಿಯ ತಾಯಿ ಪಾತ್ರಕ್ಕೆ ಬೇರೆ ಯಾರನ್ನೋ ಹುಡುಕಬೇಕಾದ ಪ್ರಮೇಯ ಕನ್ನಡದ ನಿರ್ದೇಶಕರಿಗೆ ಬಂದಂತಿರಲಿಲ್ಲ. ಅಷ್ಟರ ಮಟ್ಟಿಗೆ ಶಾಂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಹಾಗಾಗಿ ತಾಯಿ ಪಾತ್ರಕ್ಕೆ ಅವರು ಕಾಯಂ ಕಲಾವಿದೆಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಬಡ್ತಿ ಪಡೆದಂತೆ ಅವರು ಅಜ್ಜಿ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು.

ರಂಗಭೂಮಿಯಿಂದ ಬಂದ ಈ ಅಭಿಜಾತ ಪ್ರತಿಭೆ ಜನಿಸಿದ್ದು  1929ರಲ್ಲಿ, ಬೆಂಗಳೂರಿನ ಯಲಹಂಕದಲ್ಲಿ. ಶಿಕ್ಷಣ ಪಡೆದಿದ್ದು  ಮಂಡಿಪೇಟೆಯ ಮೇರಿ ಥಾಮಸ್‌ ಶಾಲೆಯಲ್ಲಿ. ಅಭಿನಯದ ಆಸಕ್ತಿಯಿಂದಾಗಿ 1949ರಲ್ಲಿ ಸುಬ್ಬಯ್ಯ ನಾಯ್ಡು ಅವರ ಕಂಪನಿ ಮೂಲಕ ರಂಗಭೂಮಿ ಪ್ರವೇಶ ಮಾಡಿದರು. ನಾಲ್ಕಾರು ನಾಟಕ ಕಂಪನಿಗಳಲ್ಲಿ ಸುತ್ತಾಡಿ ಕೊನೆಗೆ ಸೇರಿದ್ದು ಗುಬ್ಬಿ ಕಂಪನಿಯನ್ನು. ಗುಬ್ಬಿ ಕಂಪನಿಯಲ್ಲಿ ನೆಲೆಯೂರಿದ ಬಿ.ಜಯಮ್ಮ ಅವರ ಸಹೋದರ ಅನಿಲ್‌ಕುಮಾರ್‌ ಅವರ ಜತೆಗೆ ವಿವಾಹವಾದರು. ಪತಿ ಮತ್ತು ಕುಟುಂಬದ ಪ್ರೋತ್ಸಾಹದಿಂದ ಶಾಂತಮ್ಮ ಸಿನಿಮಾರಂಗಕ್ಕೂ ಕಾಲಿಟ್ಟರು. ಕನ್ನಡ ಚಿತ್ರರಂಗಕ್ಕೆ ಇವರನ್ನು ಪರಿಚಯಿಸಿದ್ದು ಜಿ.ವಿ. ಅಯ್ಯರ್‌ ಎನ್ನುವ ಮಾತಿದೆ.

‌1956ರಲ್ಲಿ ತೆರೆಕಂಡ ಡಾ.ರಾಜ್‌ಕುಮಾರ್‌ ನಟನೆಯ ‘ಹರಿಭಕ್ತ’ ಸಿನಿಮಾದಲ್ಲಿ ರಾಜ್‌ ಅವರ ತಾಯಿ ಪಾತ್ರದಲ್ಲಿ ಶಾಂತಮ್ಮ ನಟಿಸಿದ್ದರು. ಇದು ಇವರ ಮೊದಲ ಚಿತ್ರ. ರಾಜ್‌ ಅವರ ಜತೆಗೆ 36 ಸಿನಿಮಾಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತು. ರಜನಿಕಾಂತ್‌ ಅವರ ‘ಲಿಂಗಂ‘ ಸಿನಿಮಾದಲ್ಲೂ ನಟಿಸಿರುವ ಶಾಂತಮ್ಮ ಅವರ ಸಿನಿಮಾ ಬದುಕಿನಲ್ಲಿ ಇದೇ ಕೊನೇ ಚಿತ್ರ. ತಮಿಳಿನ ‘ಮುಳ್ಳುವರಂ’ ಚಿತ್ರದಲ್ಲಿ ರಜನಿಕಾಂತ್‌ ಅತ್ತೆಯ ಪಾತ್ರವನ್ನು ಶಾಂತಮ್ಮ ನಿಭಾಯಿಸಿದ್ದರು. ಜಿ.ವಿ. ಅಯ್ಯರ್‌ ನಿರ್ದೇಶನದ ಹಿಂದಿ ಚಿತ್ರದಲ್ಲೂ ನಟಿಸಿದ್ದಾರೆ.

‘ಚಿನ್ನಾರಿಮುತ್ತ’, ‘ಕೆಂಡದಮಳೆ’, ‘ಮನೆದೇವ್ರು’ ಚಿತ್ರಗಳಲ್ಲಿ ಶಾಂತಮ್ಮ ಅವರ ನಟನೆಯನ್ನು ಸಿನಿ ಪ್ರೇಕ್ಷಕರು ಮರೆತಿರಲಾರರು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಚಿತ್ರರಂಗಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ, ಕಿರುತೆರೆಯಲ್ಲೂ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು ಈ ಹಿರಿಯ ಕಲಾವಿದೆ. ‘ಕ್ರೇಜಿ ಕರ್ನಲ್’‌, ‘ಜೀವನ್ಮುಖಿ’, ‘ಗೃಹಭಂಗ’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಲನಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶಾಂತಮ್ಮ ಅವರ ದೊಡ್ಡ ಪುತ್ರಿ ಸುಮಾ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಸುಮಾರು 90 ಚಿತ್ರಗಳಲ್ಲಿ ನಟಿಸಿದ್ದಾರೆ. ಚಿಕ್ಕ ಮಗಳು ಸುನಂದಾ ಅವರೂ ನಟಿಯಾಗಿದ್ದು, ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ನಾಲ್ವರು ಪುತ್ರರು ಚಿತ್ರರಂಗದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು.

ಶಾಂತಮ್ಮ ಅವರ ಕುಟುಂಬಕ್ಕೆ ರಾಜ್‌ ಕುಟುಂಬದ ಜತೆಗೆ ನಿಕಟ ಒಡನಾಡವಿತ್ತು. ರಾಜ್‌ ಕುಟುಂಬದ ಕಾರ್ಯಕ್ರಮಗಳಲ್ಲಿ ಶಾಂತಮ್ಮ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಇವರ ಕಷ್ಟಕಾಲದಲ್ಲಿ ರಾಜ್‌ ಕುಟುಂಬ ನೆರವಾಗಿದ್ದನ್ನು ಶಾಂತಮ್ಮ ಕೂಡ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿಯೂ ಇದ್ದರು. ಕನ್ನಡ ಚಿತ್ರರಂಗವು ‘ಕಾಯಂ ತಾಯಿ’ಯನ್ನು ಕಳೆದುಕೊಂಡಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು