ಗುರುವಾರ , ಫೆಬ್ರವರಿ 9, 2023
30 °C
ದಲಿತಕಥನದ ಎರಡು ಮಾದರಿಗಳು

PV Web Exclusive l ಬೆಳ್ಗಲ್ಲು: ಕುದುರೆಯೇರಿ ಬಂದ ದೇವರು ಮತ್ತು ಅಸುರ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

‘ಅಸುರನ್’ ಸಿನಿಮಾದ ದೃಶ್ಯ

* ‘‘ಅಸುರನ್’ ಒಂದು ಮುಖ್ಯವಾಹಿನಿ ಸಿನಿಮಾ. ಅದರಲ್ಲಿ ನಿಮಗೆ ದಲಿತ ಸಂವೇದನೆ ಕಂಡಿದ್ದರೆ ಅದನ್ನು ನಾನೂ ಅನುಮೋದಿಸುವೆ’’

–ವೆಟ್ರಿಮಾರನ್

* ನಾನು ನನ್ನನ್ನು ಒಬ್ಬ ಆರ್ಟಿಸ್ಟ್ ಆಗಿ ನೋಡಲು ಬಯಸುತ್ತೇನೆ. ಅದಕ್ಕೆ ಬಹಳ ಪ್ರಯತ್ನ ಮಾಡುತ್ತಿರುವೆ. ಆದರೆ ನನ್ನ ಆರ್ಟ್ ಏನು ಮಾಡುತ್ತಿದೆ ಎಂಬುದನ್ನೂ ನಾನು ಮುಖ್ಯವಾಗಿ ಗಮನಿಸುತ್ತಿದ್ದೇನೆ.

– ಪಾ. ರಂಜಿತ್

**********************

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಜ್ವಾಜಲ್ಯಮಾನವಾಗಿ ಬೆಳಗುತ್ತಿರುವ ಇಬ್ಬರು ನಿರ್ದೇಶಕರು ಬೇರೆ ಬೇರೆ ಸಂದರ್ಭದಲ್ಲಿ ಹೇಳಿದ ಮಾತು ಇದು. ಮೇಲ್ನೋಟಕ್ಕೆಇದು ಇಬ್ಬರು ನಿರ್ದೇಶಕರ ಸಾಮಾನ್ಯ ಹೇಳಿಕೆಗಳ ಹಾಗೆ ಕಾಣಬಹುದು. ಆದರೆ ಇದು ಇಂದಿನ ತಮಿಳು ಚಿತ್ರರಂಗದಲ್ಲಿ ಬರುತ್ತಿರುವ ಸಂವೇದನಾಶೀಲ ಸಿನಿಮಾಗಳ ಎರಡು ಕವಲುಗಳನ್ನೂ ಸೂಚಿಸುತ್ತವೆ. ಮತ್ತು ಈ ಕವಲುಗಳು ಅಲ್ಲಿನ ಮುಖ್ಯವಾಹಿನಿಯಲ್ಲಿಯೇ ಬೇರೂರಿವೆ ಎನ್ನುವುದೂ ಅಷ್ಟೇ ಮುಖ್ಯ.

ಇತ್ತೀಚೆಗಿನ ವರ್ಷಗಳಲ್ಲಿ ಬಾಲಿವುಡ್‌ ಎಂಬ ಎಲ್ಲ ಕಡೆ ಸಲ್ಲುವ ಹಂಬಲದ ಬಿಳಿಯಾನೆ ಹೆಂಗೆಂದರೆ ಹಾಂಗೆ ಕುಣಿಯುತ್ತ, ಅಂಗಾತ ಬೀಳುತ್ತ, ಏಳುತ್ತ ಹೊರಳಾಡುತ್ತಿರುವಾಗ ದಕ್ಷಿಣ ಭಾರತದಲ್ಲಿ ಬಹುಚೈತನ್ಯಶೀಲ ಮತ್ತು ಪ್ರಯೋಗಶೀಲವಾದ ಜೀವನ್ಮುಖಿ ಸಿನಿಮಾಗಳ ಪ್ರಬಲ ಅಲೆಯೇ ಎದ್ದಿದೆ. ಆ ಅಲೆಯ ಎಸರು ಹನಿಗಳೇ ಬಾಲಿವುಡ್‌ ಅಂಗಳದ ಅಂಚಿಗೂ ಚಿಮ್ಮಿ ಅಲ್ಲಿಯೂ ಗರಿಕೆಗಳು ಚಿಗುರುತ್ತಿದೆ. ಒಂದೆಡೆ ದಿನನಿತ್ಯದ ಸಣ್ಣ ಸಣ್ಣ ಸಂಗತಿಗಳ ಮೂಲಕವೇ ಮನುಷ್ಯ ಮತ್ತು ಸಮಾಜದ ನಡುವಿನ ಸಂಬಂಧಗಳನ್ನು ಶೋಧಿಸುತ್ತ, ಬದುಕಿನ ಆಳದ ಸತ್ಯಗಳಿಗೆ ಮುಖಾಮುಖಿಯಾಗುವ ಪ್ರಯತ್ನವನ್ನು ಮಲಯಾಳಂ ಸಿನಿಮಾಗಳು ಬಹುಸತ್ವಯುತವಾಗಿ ಮಾಡುತ್ತಿವೆ. ಇನ್ನೊಂದೆಡೆ ಮರಾಠಿ ಚಿತ್ರರಂಗದಲ್ಲಿ ಜೀವನದ ಮೂಲಭೂತ ಪ್ರಶ್ನೆಗಳಿಗೆ ತಾತ್ತ್ವಿಕವಾಗಿ ಮುಖಾಮುಖಿಯಾಗುವ, ಜಾತಿ, ವರ್ಗ ವ್ಯವಸ್ಥೆಯ ಕರಾಳ ಮುಖಗಳನ್ನು ಕಾಣಿಸುವ ಸಿನಿಮಾಗಳು ಬರುತ್ತಿವೆ. 

ಇವೆರಡರ ಆಚೆ ಇನ್ನೊಂದು ಮುಖ್ಯಧಾರೆಯಿದೆ. ಅದು ತಮಿಳು ಚಿತ್ರರಂಗದಲ್ಲಿ ‘ಆರ್ಟ್’ ಮತ್ತು ‘ಕಮರ್ಷಿಯಲ್’ ಎಂದು ಜನಪ್ರಿಯವಾಗಿ ಗುರ್ತಿಸುವ ಎರಡು ಮಾದರಿಗಳಲ್ಲಿಯೂ ಬರುತ್ತಿರುವ ದಲಿತಕಥನ ಕೇಂದ್ರಿತ ಸಿನಿಮಾಗಳು.

ಕಳೆದ ವರ್ಷ ತೆರೆಕಂಡ ‘ಟು ಲೆಟ್‌’ನಂಥ ಸಿನಿಮಾಗಳು ನಗರಪ್ರದೇಶದಲ್ಲಿ ಬಾಡಿಗೆ ಮನೆ ಹುಡುಕಲು ಕಷ್ಟಪಡುವ ಪುಟ್ಟ ಕುಟುಂಬದ ಮೂಲಕ ನಾಗರಿಕ ಸಮಾಜದ ಅನಾಗರಿಕ ನಖಗಳನ್ನು ತೋರಿಸುತ್ತ ಹೋಗುತ್ತದೆ. ಇನ್ನು ತಮಿಳು ಸಿನಿಮಾದ ಮುಖ್ಯವಾಹಿನಿಯಲ್ಲಿ ದಲಿತಕಥನಗಳ ದೊಡ್ಡ ಉಬ್ಬರವನ್ನೇ ಕಾಣಬಹುದು. ಆ ಉಬ್ಬರದ ತುದಿಯಲ್ಲಿ ಮುಂಚೂಣಿ ಉಲ್ಲೇಖಿಸಿದ ಎರಡು ನಿರ್ದೇಶಕರಿದ್ದಾರೆ. ಅವರ ಮಾತುಗಳು ಬರಿ ಅಭಿಪ್ರಾಯಗಳಷ್ಟೇ ಅಲ್ಲ, ಕಥನದ ಆಯ್ಕೆ, ಅದನ್ನು ಕಟ್ಟುವ ಕ್ರಮ, ಅದರ ಮೂಲಕ ವ್ಯಕ್ತವಾಗುವ ಸ್ಟೇಟ್‌ಮೆಂಟ್‌ಗಳಿಗೆ ಸಂಬಂಧಿಸಿದ್ದೂ ಹೌದು. 

ವೆಟ್ರಿಮಾರನ್ ಅವರಿಗೆ ಗೆಲ್ಲುವ ಸಿನಿಮಾ ಮಾಡುವುದು ಮುಖ್ಯ. ಹಾಗೆಂದು ಗೆಲ್ಲುವುದಷ್ಟೇ ಅವರ ಉದ್ದೇಶ ಅಲ್ಲ ಅನ್ನುವುದಕ್ಕೆ ಅವರು ನಿರ್ದೇಶಿಸಿದ ‘ಆಡುಕಳಮ್’, ‘ವಿಸಾರಣೈ’, ‘ವಡಾ ಚೆನ್ನೈ’ದಂಥ ಸಿನಿಮಾಗಳ ವಸ್ತುಗಳೇ ಉದಾಹರಣೆ. ದಲಿತಲೋಕದ ಕಥನವನ್ನು ‘ರಿಯಲಿಸ್ಟಿಕ್’ ಆಗಿ ಪ್ರೆಸೆಂಟ್ ಮಾಡಿ ಬೆಚ್ಚಿಬೀಳಿಸುವಂಥ ಸಿನಿಮಾಗಳನ್ನು ಕೊಟ್ಟವರು ಅವರು. ಅವರು ಇದನ್ನು ಹೆಣೆದಿದ್ದು ಕಮರ್ಷಿಯಲ್‌ ಸೂತ್ರಗಳಲ್ಲಿಯೇ ಎನ್ನುವುದೂ ಗಮನಾರ್ಹ. ದಲಿತ ಕಥನದ ಪೊಟ್ಟಣದಲ್ಲಿ ಕಮರ್ಷಿಯಲ್ ಸಿನಿಮಾ ಕಟ್ಟಿ ಉಣಬಡಿಸುವ ನಿರ್ದೇಶಕ ಅವರು. ಅವರ ನಿರ್ದೇಶನದ ‘ಅಸುರನ್’ (2019) ಸಿನಿಮಾ ಅದಕ್ಕೆ ಒಳ್ಳೆಯ ಉದಾಹರಣೆ. ಇದು ಕಾದಂಬರಿ ಆಧಾರಿತ ಸಿನಿಮಾ ಎನ್ನುವುದೂ ಅಷ್ಟೇ ಗಮನಾರ್ಹ.

ಮತ್ತೊಬ್ಬ ನಿರ್ದೇಶಕ ಪಾ. ರಂಚಿತ್ ಇದಕ್ಕೆ ವಿರುದ್ಧವಾಗಿ ಕಮರ್ಷಿಯಲ್ ಪೊಟ್ಟಣದಲ್ಲಿ ದಲಿತ ಸಂವೇದನೆಯ ಗುಳಿಗೆ ಇಟ್ಟು ಪ್ರೇಕ್ಷಕರ ಮುಂದಿಡುವವರು. ರಜನೀಕಾಂತ್‌ ಅವರ ಸ್ಟಾರ್‌ಗಿರಿಗೂ ಹೊಂದುವ ‘ಕಾಲಾ’ದಂಥ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಿ ಅದರ ಅಡಿಯಲ್ಲಿ ಸಬ್‌ಟೆಕ್ಸ್ಟ್‌ಗಳ ಮೂಲಕವೇ ಸಮಾಜದ ಸ್ಥಾಪಿತ ತಾರತಮ್ಯವನ್ನು ಬಹುಬಲವಾಗಿ ಪ್ರಶ್ನಿಸಿದವರು ಅವರು. ಹಾಗೆ ನೋಡಿದರೆ ರಂಜಿತ್ ಅವರ ಮೇಲಿನ ಹೇಳಿಕೆ, ಅವರ ನಿರ್ದೇಶನದ ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ನಿರ್ಮಾಣದಲ್ಲಿ ರೂಪುಗೊಂಡ, ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮರಿ ಸೇಲ್ವರಾಜ್ ನಿರ್ದೇಶನದ ‘ಪರಿಯೇರುಂ ಪೆರುಮಾಳ್’ (2018) ಸಿನಿಮಾದಲ್ಲಿಯೇ ಹೆಚ್ಚು ಸಾರ್ಥಕವಾಗಿ ಅನ್ವಯಗೊಂಡಿದೆ. ಪರಿಯೇರುಂ ಪೆರುಮಾಳ್ ಎಂದರೆ ‘ಕುದುರೆಯೇರಿ ಬಂದ ದೇವರು’ ಎಂಬ ಅರ್ಥವಿದೆಯಂತೆ.

‘ಪರಿಯೇರುಂ ಪೆರುಮಾಳ್‘ ಮತ್ತು ‘ಅಸುರನ್’ ಸಿನಿಮಾಗಳನ್ನು ಅಕ್ಕಪಕ್ಕ ಇಟ್ಟು ನೋಡಿದರೆ ಸೂಕ್ಷ್ಮ ಸಂವೇದನೆಯ, ಆದರೆ ಭಿನ್ನದೃಷ್ಟಿಯ ಇಬ್ಬರು ನಿರ್ದೇಶಕರ ಅಭಿವ್ಯಕ್ತಿಯ ದಾರಿಗಳು ತೆರೆದುಕೊಳ್ಳುತ್ತ ಹೋಗುತ್ತದೆ.

ಹಾಗೆ ನೋಡಿದರೆ ಈ ಎರಡೂ ಸಿನಿಮಾಗಳಲ್ಲಿ ಹಲವು ಸಾಮ್ಯತೆಗಳಿವೆ. ಎರಡೂ ಚಿತ್ರದ ನಾಯಕರು ದಲಿತ ಸಮುದಾಯಕ್ಕೆ ಸೇರಿದವರು. ನೂರಾರು ವರ್ಷಗಳಿಂದ ಮೇಲ್ವರ್ಗ, ಮೇಲು ಜಾತಿಯ ಜನರಿಂದ ಶೋಷಣೆ ಅನುಭವಿಸುತ್ತ, ಅವರ ಕಣ್ಣಲ್ಲಿ ‘ಮನುಷ್ಯರು’ ಎಂದೂ ಪರಿಗಣಿತವಾಗದ ಜನಸಮೂಹದ ಸಮುದ್ರದಂಥ ನೋವನ್ನು ಪ್ರತಿನಿಧಿಸುತ್ತಿರುವವರು ಮತ್ತು ಶೋಷಣೆಯನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸುವವರು. ಎರಡೂ ಕಥೆಗಳು ನಡೆಯುವುದು ಹಳ್ಳಿಯ ಹಿನ್ನೆಲೆಯಲ್ಲಿಯೇ. ಎರಡೂ ಸಿನಿಮಾಗಳಲ್ಲಿ ದಲಿತಬದುಕಿನ ಜೊತೆಗೆ ಒಂದು ನಾಯಿ ಇರುತ್ತದೆ; ಮತ್ತವು ಮೇಲ್ಜಾತಿಯವರ ಕ್ರೌರ್ಯಕ್ಕೆ ಬರ್ಬರವಾಗಿ ಬಲಿಯಾಗುತ್ತವೆ. ಇಬ್ಬರು ನಿರ್ದೇಶಕರಿಗೂ ಸಿನಿಮಾದ ಕೊನೆಯಲ್ಲಿ ಒಂದು ಸ್ಟೇಟ್‌ಮೆಂಟ್ ಕೊಡುತ್ತಾರೆ. ಎರಡೂ ಸಿನಿಮಾಗಳಲ್ಲಿ ‘ಪ್ರೇಮ’ವೇ ನಂತರ ನಡೆಯುವ ಸಂಘರ್ಷಗಳಿಗೆ ಪ್ರತ್ಯಕ್ಷ ಪರೋಕ್ಷವಾಗಿ ಕಾರಣವಾಗುತ್ತದೆ.

ಇಷ್ಟೆಲ್ಲ ಸಾಮ್ಯತೆಗಳಿದ್ದರೂ ಈ ಎರಡೂ ಸಿನಿಮಾಗಳು ನೀಡುವ ಒಟ್ಟಾರೆ ಅನುಭವ, ಬೀರುವ ಪರಿಣಾಮ ಮಾತ್ರ ತುಂಬ ಭಿನ್ನವಾದದ್ದು. ಈ ಭಿನ್ನತೆಯ ಮೂಲ ಅದನ್ನು ಕಟ್ಟುವ ಕ್ರಮ ಮತ್ತು ಯಾವುದನ್ನು ಮುನ್ನೆಲೆಗೆ ತಂದು ಯಾವುದನ್ನು ಹಿನ್ನೆಲೆಯಲ್ಲಿ ಇಟ್ಟು ಸಿನಿಮಾ ವಿನ್ಯಾಸ ಮಾಡಲಾಗಿದೆ ಎನ್ನುವುದರಲ್ಲಿಯೇ ಇರುವಂಥದ್ದು. ಅದು ನಿರ್ದೇಶಕರ ಪ್ರಜ್ಞಾಪೂರ್ವಕ ಆಯ್ಕೆಯೇ ಆಗಿದ್ದರಿಂದ ಅದರಿಂದ ಹೊರಡುವ ಪೊಲಿಟಿಕಲ್ ಸ್ಟೇಟ್‌ಮೆಂಟ್‌ ಕೂಡ ನಿರ್ದೇಶಕರಿಗೇ ಸಂಬಂಧಿಸಿದ್ದಾಗಿರುತ್ತದೆ. 

ಸಿನಿಮಾದಲ್ಲಿ ಒಂದು ಸಮಸ್ಯೆಯನ್ನು ತೆಗೆದುಕೊಂಡಾಗ ಅದನ್ನು ತಾರ್ಕಿತ ಅಂತ್ಯದ ದಡ ಮುಟ್ಟಿಸುವ, ಅದಕ್ಕೊಂದು ಸಂಭಾವ್ಯ ಪರಿಹಾರ ಕಾಣಿಸುವ ಒತ್ತಡಕ್ಕೆ ನಿರ್ದೇಶಕ ಬೀಳುತ್ತಾನೆ. ರೋಚಕ ಅಂತ್ಯ ಎನ್ನುವುದು ಕಮರ್ಷಿಯಲ್ ಸಿನಿಮಾಗಳ ಬಹುದೊಡ್ಡ ಸೂತ್ರವೂ ಹೌದು. ದುರಂತವೋ ಶುಭಾಂತ್ಯವೋ ತೆರೆಯ ಮೇಲೆ ಶುರುವಾದ ‘ಸಮಸ್ಯೆ’ ತೆರೆಯ ಮೇಲೆಯೇ ಮುಗಿಯಬೇಕು. ಪ್ರೇಕ್ಷಕ ಸಮಾಧಾನದ ನಿಟ್ಟುಸಿರನ್ನು ಬಿಟ್ಟೋ, ನೋವಿನ ಕಣ್ಣೀರನ್ನು ಸುರಿಸಿಯೋ, ಒಟ್ಟಾರೆ ಹಗುರಾಗಿ ಚಿತ್ರಮಂದಿರದಿಂದ ಹೊರಗೆ ಬರಬೇಕು. ಇದು ಕಮರ್ಷಿಯಲ್ ಸಿನಿಮಾಗಳ ಬಹುಮುಖ್ಯ ಲಕ್ಷಣ. ತಮ್ಮ ನೆಚ್ಚಿನ ಸ್ಟಾರ್‌ಗಳನ್ನು ತೆರೆಯ ಮೇಲೆ ನೋಡಿ ಆನಂದಿಸಲು, ಬದುಕಿನ ಜಂಜಡಗಳಿಂದ ತಪ್ಪಿಸಿಕೊಂಡು ‘ರಿಲ್ಯಾಕ್ಸ್’ ಆಗಲು ಚಿತ್ರಮಂದಿರಕ್ಕೆ ಬರುವವರು, ಸಮಾಜದ ಅನ್ಯಾಯಗಳಿಗೆ ನೈತಿಕ ಹೊಣೆ ಹೊತ್ತು ಎರಡೂವರೆ ತಾಸು ಪಶ್ಚಾತ್ತಾಪ ಪಟ್ಟು ಮತ್ತದೇ ಅನ್ಯಾಯದ ಯಂತ್ರಕ್ಕೆ ಚಕ್ರಗಳಾಗುವವರು ಎಲ್ಲರೂ ಬಯಸುವುದು ಈ ರೋಚಕ ಅಂತ್ಯವನ್ನೇ; ಅದು ಕೊನೆಯಲ್ಲಿ ನೀಡುವ ನಿರಾಳಭಾವವನ್ನೇ.

ಆದರೆ ಸಿನಿಮಾ ಅಷ್ಟೇ ಅಲ್ಲ, ಯಾವುದೇ ಒಳ್ಳೆಯ ಕಲಾಕೃತಿಯ ಉದ್ದೇಶ ಹೀಗೆ ರೋಚಕತೆಯಲ್ಲಿ ಮೈಮರೆಸಿ, ಭಾವುಕತೆಯಲ್ಲಿ ಮುಳುಗಿಸಿ ನಿರಾಳಗೊಳಿಸುವುದಷ್ಟೇ ಆಗಿರುವುದಿಲ್ಲ. ಒಳ್ಳೆಯ ಸಿನಿಮಾ ಯಾವಾಗಲೂ ತೆರೆಯ ಮೇಲೆ ಮುಗಿದ ಮರುಕ್ಷಣದಲ್ಲಿ ಪ್ರೇಕ್ಷಕನ ಮನಸಲ್ಲಿ ಶುರುವಾಗುತ್ತದೆ. ಮತ್ತು ಹಲವು ರೀತಿಯಲ್ಲಿ ಅವನನ್ನು ಸುತ್ತಿ ಸುಳಿದು ಕಾಡುತ್ತಲೇ ಇರುತ್ತದೆ. ಕ್ಲೈಮ್ಯಾಕ್ಸ್‌ನ ರೋಚಕತೆಯ ಆಚೆಗೂ ಒಟ್ಟಾರೆ ಸಿನಿಮಾ ಕಟ್ಟಿಕೊಡುವ ಅನುಭವ ಏನನ್ನು ಸೂಚಿಸುತ್ತದೆ ಎನ್ನುವುದೂ ಅಷ್ಟೇ ಮುಖ್ಯವಾಗುತ್ತದೆ.

‘ಅಸುರನ್’ ಮತ್ತು ‘ಪರಿಯೇರುಂ ಪೆರುಮಾಳ್’ ಸಿನಿಮಾಗಳ ನಡುವಿನ ಮುಖ್ಯ ವ್ಯತ್ಯಾಸ ಇರುವುದೂ ಇಲ್ಲಿಯೇ. ಈ ಎರಡೂ ಕಥನಗಳು ನಡೆಯುವ ಕಾಲಘಟ್ಟವನ್ನೂ ಇಲ್ಲಿ ಗಮನಿಸಬೇಕು.

ಪರಿಯೇರುಂ ಪೆರುಮಾಳ್ ಈ ಕಾಲದ ಹುಡುಗ. ಕಾನೂನು ಕಲಿತು ‘ಡಾ. ಬಿ.ಆರ್. ಅಂಬೇಡ್ಕರ್’ ಆಗಬೇಕು ಎಂಬ ಕನಸು ಕಂಡವನು. ‘ನಮ್ಮ ಬದುಕು ಇಷ್ಟೆ’ ಎಂದು ನಂಬಿಕೊಂಡು ಶೋಷಣೆಯನ್ನೇ ಹಣೆಬರಹವೆಂದುಕೊಂಡು ಬದುಕುವುದು ಅವನಿಂದ ಸಾಧ್ಯವಿಲ್ಲ. ಆದರೆ ಅವನು ರೆಬಲ್ ಅಲ್ಲ. ದುಷ್ಟರನ್ನು ಸಂಹರಿಸಿ ನ್ಯಾಯ ದೊರಕಿಸಿಬಿಡುವ ‘ಹೀರೊ’ ಅಲ್ಲ. ತಾನೊಬ್ಬ ಮನುಷ್ಯನಾಗಿದ್ದೂ ಜಾತಿಯ ಕಾರಣಕ್ಕೆ ಅನುಭವಿಸುವ ತಾರತಮ್ಯ, ಸಂಘರ್ಷಗಳು ಅವನೊಳಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಬಹಿರ್ಮುಖವಾಗಿ ಅಂಥ ಅವಮಾನಗಳಿಗೆ ಮುಖಾಮುಖಿಯಾಗುತ್ತಲೇ ‘ನಾನು ಯಾರು?’ ಎಂಬ ಪ್ರಶ್ನೆ ಹಲವು ಮುಖ ನಖಗಳ ಹೊತ್ತು ಅವನೊಳಗನ್ನು ಇರಿಯುತ್ತಲೇ ಇವೆ. ಆ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ಳುವುದರ ಮೂಲಕವೇ ಅವನು ನಮ್ಮ ಸಮಾಜದಲ್ಲಿ ದಲಿತ ಎಂಬ ಕಾರಣಕ್ಕೇ ಬಲಿಪಶುಗಳಾಗುತ್ತಿರುವ ನೂರಾರು ಜೀವಗಳ ಜೊತೆಗೆ ತನ್ನನ್ನು ತಾನು ಸಂಬಂಧಿಸಿಕೊಳ್ಳುತ್ತಾನೆ. ಅರ್ಧಕ್ಕೇ ನಿಂತುಹೋದ ಅವರೆಲ್ಲರ ಬದುಕಿನ ಆಕ್ರಂದನವನ್ನು ತಾನು ಧರಿಸಿ ವಿಷಕಂಠನಾಗುತ್ತಾನೆ. 

ಚಿತ್ರದ ಮೊದಲ ದೃಶ್ಯದಲ್ಲಿಯೇ ನಿರ್ದೇಶಕರು ತಾನು ಹೇಳಲಿರುವ ಕಥನಕ್ಕೊಂದು ಸ್ಪಷ್ಟವಾದ ಭೂಮಿಕೆಯನ್ನು ಸಿದ್ದಪಡಿಸಿಕೊಳ್ಳುತ್ತಾರೆ. ದಲಿತ ಹುಡುಗನಾದ ಪರಿಯೇರುಂ ಪೆರುಮಾಳ್‌ನ ನೆಚ್ಚಿನ ನಾಯಿ ಕರುಪ್ಪಿಯನ್ನು ಮೇಲು ಜಾತಿಯವರು ರೈಲ್ವೇ ಹಳಿಗೆ ಕಟ್ಟಿ ಹಾಕಿ ಬರ್ಬರವಾಗಿ ಸಾಯಿಸುತ್ತಾರೆ. ಹೀಗೆ ಮೊದಲ ದೃಶ್ಯದಲ್ಲಿಯೇ ರೈಲ್ವೆ ಚಕ್ರದಡಿಗೆ ಸಿಕ್ಕು ಚಿಂದಿಯಾಗಿ ಹೋದ ಕರುಪ್ಪಿ ಚಿತ್ರದುದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಂಡು ಹಲವು ಅರ್ಥಸಾಧ್ಯತೆಗಳನ್ನು ಹೊಮ್ಮಿಸುತ್ತಲೇ ಇರುತ್ತದೆ. ಸತ್ತ ನಾಯಿಗಾಗಿ ಇಡೀ ಕೇರಿಯವರು ಎದೆ ಬಡಿದುಕೊಂಡು ಅಳುವ, ಹಾಡುವ, ಶವಯಾತ್ರೆ ಮಾಡಿ ಅದರ ಅಂತ್ಯಸಂಸ್ಕಾರ ಮಾಡುವ ಸನ್ನಿವೇಶ ಸಿನಿಮಾದಲ್ಲಿದೆ. ಅದು, ಈ ಮಣ್ಣಿನ ಮಕ್ಕಳ, ಶ್ರೀಮಂತ ಸಂಸ್ಕೃತಿಯನ್ನು, ಬದುಕನ್ನು ಜಾತಿಯ ಹೆಸರಲ್ಲಿ ತುಳಿಯುತ್ತಿರುವ ಮೇಲುವರ್ಗದವರ ‘ನಾಗರಿಕತೆ’ಯ ಶವಯಾತ್ರೆಯೂ ಹೌದು. ಈ ಸಂದರ್ಭದಲ್ಲಿ ಪರಿಯೇರುಂ ಪೆರುಮಾಳ್‌ಗೆ ‘ಸತ್ತಿದ್ದು ನಾಯಿಯಾ? ನಾನಾ?’ ಎಂಬ ಪ್ರಶ್ನೆ ಬರುತ್ತದೆ. ಆ ಪ್ರಶ್ನೆ ಆ ಕ್ಷಣದಲ್ಲಿ ಹುಟ್ಟಿ ಸಾಯುವುದಲ್ಲ. ಇಡೀ ಸಿನಿಮಾದುದ್ದಕ್ಕೂ ಅವನು ಮತ್ತೆ ಮತ್ತೆ ಸತ್ತು ಹುಟ್ಟುತ್ತಲೇ ಇರುತ್ತಾನೆ. ನೀರಿನಲ್ಲಿ ಮುಳುಗಿಸಿ ತಲೆಯೆತ್ತಿದರೆ ಲಾಠಿಯಲ್ಲಿ ನೆತ್ತಿಗೆ ಬಡಿದು ಮತ್ತೆ ಮತ್ತೆ ಮುಳುಗಿಸುತ್ತಲೇ ಇರುತ್ತದೆ ಸಮಾಜ. ಕೊನೆಗೆ ಅವನನ್ನೂ ಕುರುಪ್ಪಿಯ ಹಾಗೆ ರೈಲ್ವೆ ಹಳಿಗಳ ಮೇಲೆ ಮಲಗಿಸಿ ಕೊಲ್ಲುವ ಪ್ರಯತ್ನವೂ ನಡೆಯುತ್ತದೆ.

ಇಡೀ ಸಿನಿಮಾದುದ್ದಕ್ಕೂ ನಾಯಕನ ಮೇಲೆ ನಡೆಯುವ ಅಮಾನುಷ ದೌರ್ಜನ್ಯಗಳು ನಮ್ಮ ಮನಸ್ಸಿನಲ್ಲಿ ಅದರ ವಿರುದ್ಧ ಹೇಸಿಗೆಯನ್ನು ಹುಟ್ಟಸುತ್ತ ಹೋಗುತ್ತವೆ. ಇಲ್ಲಿ ಹಿಂಸೆಯಿದೆ; ದೈಹಿಕ ಹಿಂಸೆಯೂ ಅದರ ದುಪ್ಪಟ್ಟು ಮಾನಸಿಕ ಹಿಂಸೆಯೂ ಇದೆ. ಆದರೆ ಅದನ್ನು ಕಟ್ಟಿದ ಕ್ರಮದಲ್ಲಿಯೇ, ಅದನ್ನು ಆಸ್ವಾದಿಸಲು ಅವಕಾಶ ಕೊಡದೆ ವಿಚಿತ್ರ ತಳಮಳವನ್ನು ಹುಟ್ಟಿಸುತ್ತದೆ. ತನ್ನನ್ನು ತನ್ನನ್ನು ತಾನು ಪ್ರಶ್ನಿಸಿಕೊಳ್ಳುವ ನಾಯಕ ನೋವಿನ ಕಗ್ಗತ್ತಲಿನ ಸಾವಿರ ಕಂಠಗಳ ಧ್ವನಿಯ ಮೂರ್ತರೂಪವಾಗಿಬಿಡುತ್ತಾನೆ. ಧ್ವನಿಯಿಲ್ಲದ ಒಂದು ಸಮುದಾಯದ ಕಟ್ಟಿದ ಕತ್ತಿನಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಬ್ಬಿನಿಂತ ನರವಾಗಿ ಕಾಡುತ್ತಾನೆ. 

ದಲಿತ ಸಮುದಾಯದ ಬದುಕಿನ ಮೇಲಾಗುತ್ತಿರುವ ಕ್ರೌರ್ಯವನ್ನು ಯಾವ ವೀರಾವೇಶವೂ ಇಲ್ಲದ, ದೃಢವಾದ ಧ್ವನಿಯಲ್ಲಿ ಕಾಣಿಸುವ ನಿರ್ದೇಶಕರಿಗೆ ಇದು ಇಂದು ರಾತ್ರಿ ಕ್ರಾಂತಿಯಾಗಿ ನಾಳೆ ಬದಲಾಗಿಬಿಡುವ ಸಮಸ್ಯೆ ಅಲ್ಲ ಎಂಬ ಅರಿವೂ ಇದೆ. ಚಿತ್ರದ ಕೊನೆಯೂ ಅದನ್ನೇ ಸೂಚಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೇಲುಜಾತಿಯ ನಾಯಕಿಯ ತಂದೆ ಮತ್ತು ದಲಿತ ಹುಡುಗ ಪರಿಯೇರುಂ ಪೆರುಮಾಳ್ ಒಂದೇ ಟೆಬಲ್‌ನಲ್ಲಿ ಕೂತು ಟೀ ಕುಡಿಯುತ್ತಾರೆ. ನಾಯಕಿಯ ತಂದೆಗೆ, ‘ಮುಂದೆ ಪರಿಸ್ಥಿತಿ ಬದಲಾಗಬಹುದು’ ಎಂಬ ಆಸೆಯಿದೆ. ಅದಕ್ಕೆ ನಕ್ಕ ನಾಯಕ, ‘ನೀವು ನಿಮ್ಮ ದಾರಿಯನ್ನು ಎಲ್ಲಿಯವರೆಗೆ ಬದಲಾಯಿಸುವುದಿಲ್ಲವೋ, ನಮ್ಮನ್ನು ಮನುಷ್ಯರೆಂದು ನೋಡಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಏನೂ ಬದಲಾಗುವುದಿಲ್ಲ’ ಎಂಬರ್ಥದ ಮಾತನ್ನು ಹೇಳುತ್ತಾನೆ.  ಕೊನೆಗೆ ಟೆಬಲ್ ಮೇಲೆ ಉಳಿಯುವ ಎರಡು ಟೀ ಗ್ಲಾಸ್‌ಗಳ ನಡುವಿನ ಅರಳುತ್ತಿರುವ ಮೊಗ್ಗಿನ ಇಮೇಜ್, ತಾರತಮ್ಯದ ಸಮಾಜದಲ್ಲಿ ಪ್ರೀತಿಯ ಬಳ್ಳಿ ಬೆಳೆದು ಸಮಸಮಾಜ ಸಾಕಾರಗೊಳ್ಳುವ ಕನಸಿನ ಸಹಿಯಂತೆ ತೋರುತ್ತದೆ. 

 ‘ಅಸುರನ್’ ಸಿನಿಮಾ ಶುರುವಾಗುವುದು ಹದಿನಾರು ವರ್ಷದ ಚಿದಂಬರಂ ಎಂಬ ಹುಡುಗ (ಅವನ ಕೈಯಲ್ಲಿ ನಾಡಬಾಂಬ್ ಇರುವ ಬ್ಯಾಗ್ ಇದೆ)ನನ್ನು ಅವನ ತಂದೆ ಶಿವಸಾಮಿ, ಕಾಡಿನ ನಡುವಿನ ಹಳ್ಳವೊಂದನನ್ನು ದಾಟಿಸಿಕೊಂಡು ಹೋಗುತ್ತಿರುವ ದೃಶ್ಯದಿಂದ.

ಆ ಹುಡುಗನಿಗೆ ಅಣ್ಣನನ್ನು ಜೈಲಿಗಟ್ಟಿದವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಂದೆಯ ಬಗ್ಗೆ ತಿರಸ್ಕಾರವಿದೆ. ಅಣ್ಣನ ಭೀಕರ ಸಾವನ್ನು ಕಂಡ ಮೇಲೆಯೂ ಸಿಡಿದೇಳದ ಅಪ್ಪ ಹೇಡಿ ಎಂಬ ಅಸಹ್ಯಭಾವವಿದೆ. ತನ್ನನ್ನು ಬೆನ್ನತ್ತಿ ಬರುವ ಹತ್ತಾರು ದಾಂಡಿಗರನ್ನು ಬಡಿದುಹಾಕಿದಾಗ ಅವನ ಮನಸಲ್ಲಿದ್ದ ಆ ಚಿತ್ರಣ ಬದಲಾಗುತ್ತದೆ. ಅಪ್ಪನ ಬಾಯಲ್ಲಿಯೇ ಅವನ ಫ್ಲ್ಯಾಶ್‌ಬ್ಯಾಕ್‌ ಕಥೆಯನ್ನು ಕೇಳಿದಾಗ ತಂದೆಯ ಬಗ್ಗೆ ಹೆಮ್ಮೆ ಮೂಡುತ್ತದೆ. 

ಶಿವಸಾಮಿ ಯ ಬದುಕಿನ ಮೊದಲರ್ಧ ಮತ್ತು ದ್ವಿತೀಯಾರ್ಧ ಎರಡರಲ್ಲಿಯೂ ಜಮೀನ್ದಾರರ ಅಟ್ಟಹಾಸವಿದೆ. ಅಲ್ಲದೆ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ರೈತ ಹೋರಾಟದ ಎಳೆಯೂ ಇದೆ. ತನ್ನ ಹಿಂದಿನ ಬದುಕಿನಲ್ಲಿ ತನ್ನ ಗೆಳತಿಗಾದ ಅವಮಾನಕ್ಕೆ ಪ್ರತೀಕಾರ ತೆಗೆದುಕೊಂಡು ಜಮೀನ್ದಾರನನ್ನು ಎದುರುಹಾಕಿಕೊಳ್ಳುತ್ತಾನೆ. ಇದರ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ತಮ್ಮ ಜಮೀನುಗಳನ್ನು ಪಡೆದುಕೊಳ್ಳುವ ಹೋರಾಟದಲ್ಲಿ ಅವನ ಗೆಳತಿ, ಮನೆಯವರನ್ನೆಲ್ಲ ಕಳೆದುಕೊಂಡು ಅನಾಥನಾಗುತ್ತಾನೆ. ಅದೇ ಕೋಪದಲ್ಲಿಹೋಗಿ ಜಮೀನ್ದಾರನನ್ನೂ ಕೊಚ್ಚಿ ಕೊಲೆ ಮಾಡುತ್ತಾನೆ. 

ದ್ವಿತೀಯಾರ್ಧದಲ್ಲಿಯೂ ಇದೇ ಘಟನೆ ಬೇರೆ ರೀತಿಯಲ್ಲಿ ಪುನರಾವರ್ತಿತವಾಗುತ್ತದೆ. ಇಲ್ಲಿಯೂ ಒಬ್ಬ ಜಮೀನ್ದಾರನಿದ್ದಾನೆ. ಅವನ ತಮ್ಮನ ಸಿಮೆಂಟ್ ಫ್ಯಾಕ್ಟರಿಗಾಗಿ ಶಿವಸಾಮಿ ಯ ಹೆಂಡತಿ ಹೆಸರಿನಲ್ಲಿರುವ  ಜಮೀನು ಬೇಕಾಗಿದೆ. ಅದನ್ನು ಮಾರಲು ಶಿವಸಾಮಿ ಯ ಕುಟುಂಬ ಸಿದ್ಧವಿಲ್ಲ. ಅವನ ಮಗ ಕೋಪಿಷ್ಟ. ತನ್ನಪ್ಪನಿಗೆ ಅವಮಾನ ಮಾಡಿದ ಜಮೀನ್ದಾರನಿಗೆ ಚಪ್ಪಲಿಯಲ್ಲಿ ಹೊಡೆದು ಕೊನೆಗೆ ಬರ್ಬರವಾಗಿ ಹತ್ಯೆಯಾಗುತ್ತಾನೆ. ಅವನ ತಮ್ಮ ಹದಿನಾರು ವರ್ಷದ ಚಿದಂಬರಂ ಜಮೀನ್ದಾರನನ್ನು ಹತ್ಯೆ ಮಾಡುತ್ತಾನೆ. ಜಮೀನ್ದಾರರ ಕಡೆಯವರಿಂದ ರಕ್ಷಿಸಿಕೊಳ್ಳಲು ಶಿವಸಾಮಿ ಕುಟುಂಬದವರು ದಿಕ್ಕಾಪಾಲಾಗಿ ಊರಿಂದ ಪರಾರಿಯಾಗುತ್ತಾರೆ. ಜಮೀನ್ದಾರರ ಕಡೆಯವರು ಅವನ ಬೆನ್ನು ಬೀಳುತ್ತಾರೆ. ಕೊನೆಯಲ್ಲಿ ಶಿವಸಾಮಿ ದುಷ್ಟ ಜಮೀನ್ದಾರರನ್ನು ಕೊಚ್ಚಿಹಾಕಿ ಮಗನ ತಪ್ಪನ್ನೂ ತಾನೇ ಹೊತ್ತು ಜೈಲಿಗೆ ಹೋಗುತ್ತಾನೆ.

ಈ ಸಿನಿಮಾದಲ್ಲಿಯೂ ಹಿಂಸೆಯ ದರ್ಶನ ಧಾರಾಳವಾಗಿಯೇ ಆಗುತ್ತದೆ. ಇಡೀ ಸಿನಿಮಾದಲ್ಲಿ ನಾಯಕ ಶಿವಸಾಮಿ ಮೂರು ಸಲ ಸಿಡಿದೇಳುತ್ತಾನೆ. ಆಗೆಲ್ಲ ರಕ್ತದ ಹೊಳೆ ಹರಿಯುತ್ತದೆ. ಹೆಣಗಳು ರಾಶಿ ಬೀಳುತ್ತವೆ. ಆದರೆ ಇದು ಉಂಟುಮಾಡುವ ಪರಿಣಾಮ ‘ಪರಿಯೇರುಂ ಪೆರುಮಾಳ್’ ಸಿನಿಮಾಗಿಂತ ಭಿನ್ನವಾಗಿದ್ದು. ಪರಿಯೇರುಂ ಪೆರುಮಾಳ್ ಚಿತ್ರದಲ್ಲಿನ ಹಿಂಸೆ, ಹಿಂಸೆಯ ಬಗ್ಗೆ ಹೇವರಿಕೆ ಹುಟ್ಟಿಸಿದರೆ ಈ ಸಿನಿಮಾದ ಹಿಂಸೆಯನ್ನು ಆಸ್ವಾದಿಸುವ ಹಾಗೆ ಮಾಡುತ್ತದೆ. ದುಷ್ಟರಿಗೆ ಶಿಕ್ಷೆಯಾಗಿ ಕೊನೆಯಲ್ಲಿ ನಿರಾಳಭಾವ ಮೂಡಿಸುತ್ತದೆ. ಸೂಕ್ಷ್ಮವಾಗಿ ನೋಡಿದರೆ ಶಿವಸಾಮಿ ಸಿಡಿದೇಳುವ ಕೇಂದ್ರಗಳನ್ನು ಶಕ್ತಗೊಳಿಸಲೆಂದೇ ಅದುವರೆಗೆ ಅವನನ್ನು ಹೇಡಿಯಾಗಿ, ಬೇಜಬ್ದಾರಿಯಾಗಿ ಚಿತ್ರಿಸಿರುವ ಜನಪ್ರಿಯ ಸೂತ್ರವೂ ಗೋಚರವಾಗುತ್ತದೆ.

ಆದರೆ ಸಿನಿಮಾದ ಕೊನೆಯಲ್ಲಿ ಜೈಲಿಗೆ ಹೋಗುವ ಶಿವಸಾಮಿ ತನ್ನ ಮಗ, ಚಿದಂಬರಂಗೆ ಹೇಳುವ ಮಾತು ತುಂಬ ಶಕ್ತಿಶಾಲಿಯಾಗಿದೆ. ‘ನಮ್ಮ ಬಳಿ ಭೂಮಿಯಿದ್ದರೆ ಅವರು ಕಸಿದುಕೊಳ್ಳುತ್ತಾರೆ. ನಮ್ಮ ಬಳಿ ಹಣವಿದ್ದರೆ ಅವರು ದೋಚುತ್ತಾರೆ. ಆದರೆ ನಮ್ಮ ಬಳಿ ಶಿಕ್ಷಣ ಇದ್ದರೆ ಅವರು ಖಂಡಿತ ಕಸಿದುಕೊಳ್ಳಲು ಸಾಧ್ಯವಿಲ್ಲ. ಅವರನ್ನು ಗೆಲ್ಲುವುದಾದರೆ ಚೆನ್ನಾಗಿ ಓದು; ಶಕ್ತಿಶಾಲಿಯಾಗು’. 

ಹಿಂಸೆಯ ದಾರಿ ತೊರೆದು ಶಿಕ್ಷಣದ ಬೆಳಕು ಹಿಡಿಯುವ ಸೂಚನೆ ಕೊಡುವ ಈ ಮಾತನ್ನು ಸಿನಿಮಾದ ಸಂದೇಶವೆನ್ನುವ ಹಾಗೆ ಬಿಂಬಿಸಲಾಗಿದೆ. ಅದು ಇಂದಿನ ಅಗತ್ಯವೂ ಹೌದು. ಆದರೆ ಇಡೀ ಸಿನಿಮಾದ ಕ್ಯಾನ್ವಾಸಿನಿಂದ ಆ ಮಾತು ಬೇರೆಯೇ ಆಗಿ ಉಳಿಯುತ್ತದೆ. ಹಾಗಾಗಿ ಅದು ಸಿನಿಮಾ ನೀಡುವ ಅನುಭವದ ಭಾಗವಾಗಿ ನಮ್ಮೊಳಗೆ ಇಳಿಯುವುದಿಲ್ಲ. ಬದಲಿಗೆ ಒಂದು ಸ್ಟೇಟ್‌ಮೆಂಟ್ ಆಗಿ ಮಾತ್ರ ದಕ್ಕುತ್ತದೆ. 

'ಅಸುರನ್' ಸಿನಿಮಾದಲ್ಲಿ ಪೊಲೀಸರು, ಕೋರ್ಟು, ವಕೀಲ ಹೀಗೆ ಆಡಳಿತ ವ್ಯವಸ್ಥೆಯೂ ಕಥನದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲಿ ಕಾಣಿಸಿಕೊಳ್ಳುವ ಪೊಲೀಸರು ಖಳನ ಕಡೆಯವರು. ಅವರ ಪರವಾಗಿ ಕೆಲಸ ಮಾಡುತ್ತಾರೆ. ಪರುಯೇರುಂ ಪೆರುಮಾಳ್‌ ಸಿನಿಮಾದಲ್ಲಿ ನಾಯಕ ಕಾನೂನು ವಿದ್ಯಾರ್ಥಿ. ಆದರೂ ಅಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳಾಗಿ ಪೊಲೀಸರು ಕಾಣಿಸಿಕೊಳ್ಳುವುದು ಒಂದು ದೃಶ್ಯದಲ್ಲಿ ಮಾತ್ರ. ಇಲ್ಲಿ ಪೊಲೀಸರು ಖಳನ ಕಡೆಯವರಲ್ಲ. ಸ್ವತಃ ಖಳರು. ದಲಿತ ಹುಡುಗರ ಮೇಲೆ ಸುಳ್ಳು ಆರೋಪ ಹೊರಿಸಿ ಸ್ಟೇಷನ್ನಿಗೆ ಎಳೆದು ತರುವವರು. ಅವರ ಪರವಾಗಿ ಮಾತಾಡಲು ಬಂದ ಹಿರಿಯನನ್ನು ಬೂಟುಗಾಲಿನಲ್ಲಿ ಒದೆಯುವವರು. ಅಧಿಕಾರಶಾಹಿಗೆ ತನ್ನ ದರ್ಪದ ಚಲಾವಣೆಗೆ ಮೊದಲು ಕಾಣುವುದು ತಳವರ್ಗದವರೇ ತಾನೆ?

ಪರಿಯೇರುಂ ಪೆರುಮಾಳನ ಹಾಗೆ ಶಿವಸಾಮಿ ಗೆ ‘ತಾನು ಯಾರು? ತಾನೇಕೆ ಹೀಗೆ ಶೋಷಣೆ ಅನುಭವಿಸಬೇಕು?’ ಎಂಬ ಅಸ್ತಿತ್ವದ ಪ್ರಶ್ನೆಗಳು ಕಾಡುವುದಿಲ್ಲ. ಇದು ಇರುವುದು ಹೀಗೆಯೇ ಎಂದು ನಂಬಿದವನು ಅವನು. ಹಾಗಾಗಿ ಅವನು ಸಿಡಿದೇಳುವುದು ಸಮಾಜವೆಂಬ ಬಾವಿಯನ್ನು ಸ್ವಚ್ಛಮಾಡಲಲ್ಲ. ಆ ಆಲೋಚನೆಯೂ ಅವನಿಗಿಲ್ಲ. ಬದಲಿಗೆ ಬಾವಿಯ ನೀರ ಮೇಲಿದ್ದ ಕಸವನ್ನು ತುಸು ಸರಿಸಿ ತಾನೊಂದು ಗುಟುಕು ಶುದ್ಧ ನೀರನ್ನು ಕುಡಿಯಬೇಕು  ಎಂಬುದಷ್ಟೇ ಅವನ ಆಸೆ ಉದ್ದೇಶ ಎಲ್ಲವೂ. ಹಾಗಾಗಿಯೇ ಇದು ಕೊನೆಗೂ ಎರಡು ಕುಟುಂಬದ ದ್ವೇಷದ ಕಥೆಯಷ್ಟೇ ಆಗಿಬಿಡುತ್ತದೆ. ಕೊನೆಯ ದೃಶ್ಯದಲ್ಲಿ ಇದೇ ಅರ್ಥ ಬರುವ ಮಾತುಗಳೇ ಬರುತ್ತವೆ ಕೂಡ. 

ಆದರೆ ಅವನ ಮಗ ಚಿದಂಬರಂನ ಮನಸಲ್ಲಿ ತನ್ನ ಅಸ್ತಿತ್ವದ, ಸಮಾಜದ ವ್ಯವಸ್ಥೆಯ ಕುರಿತಾದ ಪ್ರಶ್ನೆಗಳು ನಿಧಾನಕ್ಕೆ ಚಿಗುರುತ್ತಿವೆ. ಆಗಾಗ ಅವನು, ‘ತನ್ನಣ್ಣನನ್ನು ಕೊಂದ ಜಮೀನ್ದಾರನ ಮೇಲೆ ಯಾವ ಕಂಪ್ಲೆಂಟ್ ಕೂಡ ಆಗಲಿಲ್ಲ. ಅವನನ್ನು ಪೊಲೀಸರು ಹಿಡಿದುಕೊಂಡು ಹೋಗಲಿಲ್ಲ. ಆದರೆ ಅವನನ್ನು ಕೊಂದ ನಮ್ಮ ಮೇಲೇ ಮಾತ್ರ ಯಾಕೆ ಕಂಪ್ಲೆಂಟ್ ಆಗುತ್ತದೆ? ಹಿಡಿದುಕೊಂಡು ಹೋಗುತ್ತಾರೆ’ ಎಂದು ಕೇಳುತ್ತಿರುತ್ತಾನೆ. 

ಹಾಗೆ ನೋಡಿದರೆ ‘ಅಸುರನ್’ ಸಿನಿಮಾದ ಚಿದಂಬರಂನೇ ಮುಂದೆ ಪರಿಯೇರುಂ ಪೆರುಮಾಳ್ ಆಗಿರುವಂತೆ ತೋರುತ್ತದೆ. 

ಪರಿಯೇರುಂ ಪೆರುಮಾಳ್ ಸಿನಿಮಾದ ಅಂತ್ಯದಲ್ಲಿ ಕಾಣುವ ಸಮಸಮಾಜದ ಇಮೇಜ್ ಕೂಡ ಒಂದು ರಮ್ಯ ಕನಸಷ್ಟೇ. ಅದನ್ನು ಸಾಧಿಸುವ ದಾರಿ ಸುಲಭವಿಲ್ಲ. ಆದರೆ ಅದನ್ನು ಸಾಧಿಸಲು ನಾವು ಹಿಡಿಯಬೇಕಾದ ದಾರಿ ಯಾವುದು ಎಂಬುದನ್ನು ಖಂಡಿತ ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯವಿದೆ.

 ‘ಅಸುರನ್’ ಧ್ವನಿಸುವ (ಕಾಣಿಸುವ ಅಲ್ಲ) ರೀತಿಯ ಸಂಘರ್ಷದ ಮಾರ್ಗ ಇಂದಿನ ದಲಿತ ವಿಮೋಚನೆಯ ಹಂಬಲ ಕಾಣುತ್ತಿರುವವರಿಗೆ ಮಾದರಿಯಗಬೇಕೇ ಎಂಬ ಪ್ರಶ್ನೆಯನ್ನು ಗಂಭೀರವಾಗಿಯೇ ಕೇಳಿಕೊಳ್ಳಬೇಕಾಗಿದೆ. ಯಾಕೆಂದರೆ ಘನತೆಯ ಬದುಕನ್ನೂ, ಸಮಾನತೆಯ ಹಕ್ಕನ್ನೂ ಗಟ್ಟಿ ಧ್ವನಿಯಲ್ಲಿ ಕೇಳುವ ಶೋಷಿತರನ್ನು ಮೊದಲು ಕೆರಳಿಸಲಾಗುತ್ತದೆ. ಹಿಂಸೆಯ ಮಾರ್ಗ ಹಿಡಿಯುವಂತೆ ಪ್ರೇರೇಪಿಸಲಾಗುತ್ತದೆ. ಅವರು ವಯೊಲೆಂಟ್ ಆಗಿದ್ದೇ, ಅವರನ್ನು ಸಮಾಜದ ಕಣ್ಣಿನಲ್ಲಿ ದುಷ್ಕೃತ್ಯ ಎಸಗುವ ದುಷ್ಟರನ್ನಾಗಿ ಚಿತ್ರಿಸಲಾಗುತ್ತದೆ. ‘ಒಳಗೆ ಹಾಕಿ’ ಶಿಕ್ಷೆಯಾಗುವ ಹಾಗೆ ನೋಡಿಕೊಳ್ಳಲಾಗುತ್ತದೆ. ಇದು ಇಂದು ಪ್ರಭುತ್ವ, ಶೋಷಿತರ ಧ್ವನಿ ಅಡಗಿಸಲು ವ್ಯಾಪಕವಾಗಿ ಬಳಸುತ್ತಿರುವ ಅಸ್ತ್ರ ಎಂಬುದನ್ನು ಮರೆಯಬಾರದು.

ಮೇಲೆ ಉಲ್ಲೇಖಿಸಿದ ಪಾ. ರಂಜಿತ್ ಅವರ ಮಾತಿಗೇ ಬರುವುದಾದರೆ, ಕಲಾವಿದ ಅನ್ನುವಷ್ಟೇ ತನ್ನ ಕಲೆ ಏನನ್ನು ಮಾಡುತ್ತಿದೆ ಎನ್ನುವುದೂ ಮುಖ್ಯ. ಪರಿಯೇರುಂ ಪೆರುಮಾಳ್‌ನಂಥ ಸಾವಿರಾರು ಯುವಕರಲ್ಲಿ ಅದು ವಿಶ್ವಾಸವನ್ನು, ನಾಳೆಯ ಕುರಿತು ನಂಬಿಕೆಯನ್ನು, ಅದುಮಿದಷ್ಟೂ ಚಿಗಿತುಕೊಳ್ಳುವ, ದ್ವೇಷಿಸಿದಷ್ಟೂ ಪ್ರೀತಿಯನ್ನು ಹಂಚುವ, ನಿನ್ನ ಅಸ್ತಿತ್ವವನ್ನು ಅಲ್ಲಗಳೆದಷ್ಟೂ ‘ತಾನು ಯಾರು’ ಎಂದು ಇತರರಿಗೂ ಸ್ಪಷ್ಟವಾಗಿ ಕೇಳುವಷ್ಟು ಗಟ್ಟಿಯಾಗಿ ತನಗೆ ತಾನೇ ಕೇಳಿಕೊಳ್ಳುವ ಅಸ್ಮಿತೆಯನ್ನು ಹುಟ್ಟಿಸುತ್ತದೆ. ಪರಿಯೇರುಂ ಪೆರುಮಾಳ್ ಸಿನಿಮಾದ ಕೊನೆಯ ದೃಶ್ಯದಲ್ಲಿ ಕಾಣುವ ಎರಡು ಟೀ ಕಪ್ ನಡುವಿನ ಈಗಷ್ಟೇ ಅರಳುತ್ತಿರುವ ಹೂವನ್ನು ಎಲ್ಲರ ಎದೆಯಲ್ಲಿಯೂ ಜೋಪಾನವಾಗಿ ಉಳಿಸುವ ಕೆಲಸವನ್ನು ಮಾಡುತ್ತದೆ. ಕಲೆಯ ಸಾರ್ಥಕತೆ ಇರುವುದೂ ಅದರಲ್ಲಿಯೇ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು