ನಟಿ ಅಂಕಿತಾ ಅಮರ್ ನಟನೆಯ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಇಂದು (ಸೆ.6) ಬಿಡುಗಡೆಯಾಗಿದೆ. ಇದು ಇವರ ಚೊಚ್ಚಲ ಕಮರ್ಷಿಯಲ್ ಸಿನಿಮಾ. ಈ ಸಿನಿಮಾ ಬೆಳ್ಳಿತೆರೆಯಲ್ಲಿ ಕಾದಂಬರಿ ಓದಿದಂಥ ಅನುಭವ ನೀಡುತ್ತದೆ ಎನ್ನುವ ಅಂಕಿತಾ ಸಿನಿಮಾ ಪುರವಣಿ ಜೊತೆ ಮಾತನಾಡಿದ್ದಾರೆ.
2022ರಲ್ಲಿ ನಿಮ್ಮ ಸಿನಿಪಯಣ ಆರಂಭವಾಯಿತು. ಚೊಚ್ಚಲ ಸಿನಿಮಾದ ನಿರೀಕ್ಷೆ ಏನಿದೆ?
ವಾರದ ಹಿಂದೆ (ಆ.30) ನಾನು ನಟಿಸಿದ್ದ ‘ಮೈ ಹೀರೋ’ ಸಿನಿಮಾ ಬಿಡುಗಡೆಯಾಗಿತ್ತು. ಇದು ಕಮರ್ಷಿಯಲ್ ಮಾದರಿಯಲ್ಲ, ಸಾಕ್ಷ್ಯಚಿತ್ರದ ಮಾದರಿಯಲ್ಲಿತ್ತು. ಹಾಗೆ ನೋಡಿದರೆ ‘ಇಬ್ಬನಿ ತಬ್ಬಿದ ಇಳೆಯಲಿ’ ನನ್ನ ಮೊದಲ ಕಮರ್ಷಿಯಲ್ ಸಿನಿಮಾ. 2022ರ ಅಕ್ಟೋಬರ್‌ನಲ್ಲಿ ಮೊದಲು ಸಹಿ ಹಾಕಿದ್ದು, ಶೂಟಿಂಗ್ ಆರಂಭಿಸಿದ್ದು ಇದೇ ಸಿನಿಮಾ. ಇದು ಕೌಟುಂಬಿಕ ಸಿನಿಮಾವೂ ಹೌದು, ಸ್ನೇಹಿತರ ಜೊತೆಗೂಡಿ ಹೋಗಬಹುದಾದ ಸಿನಿಮಾವೂ ಆಗಿದೆ. ‘ಅಮೃತ ವರ್ಷಿಣಿ’, ‘ನಮ್ಮೂರ ಮಂದಾರ ಹೂವೆ’, ‘ಅಮೆರಿಕಾ! ಅಮೆರಿಕಾ!!’, ‘ಹೂಮಳೆ’ ಚಿತ್ರಗಳಲ್ಲಿ ಹೇಗೆ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೋ ಅದೇ ರೀತಿ ಭಾವನೆಗಳನ್ನು ಇಟ್ಟುಕೊಂಡು ನಮ್ಮ ಈ ಸಿನಿಮಾ ಕಥೆ ಹೆಣೆಯಲಾಗಿದೆ. ಸಾಹಿತ್ಯಕ್ಕೆ ಒತ್ತುಕೊಟ್ಟು ಕಾವ್ಯಾತ್ಮಕವಾಗಿ ದೃಶ್ಯರೂಪದಲ್ಲಿ ಈ ಸಿನಿಮಾ ಕಟ್ಟಿಕೊಟ್ಟಿದ್ದೇವೆ. ಹಾಗೆಂದು ಇದು ಹಳೇ ಕಾಲದ ಸಿನಿಮಾದ ಫೀಲ್ ಕೊಡುವುದಿಲ್ಲ. ಇದು ಕನ್ನಡ ಚಿತ್ರರಂಗಕ್ಕೆ ಹೊಸಶೈಲಿಯ ಸಿನಿಮಾ ಎನ್ನಬಹುದು.
ಈ ಸಿನಿಮಾದ ಮೇಕಿಂಗ್, ಸಿನಿಮಾಟೋಗ್ರಫಿ, ದೃಶ್ಯಗಳು, ಸಂಗೀತವಿದೆಯಲ್ಲ ಅದು ಕೆ–ಡ್ರಾಮಾ (ಕೊರಿಯನ್ ಸಿನಿಮಾಗಳು) ಪ್ರೇಮಕಥೆಗಳಿಂತ ಚೆನ್ನಾಗಿ ಮೂಡಿಬಂದಿದೆ. ಇದರ ಬಗ್ಗೆ ಚರ್ಚೆಗಳು ನಡೆಯಲಿದೆ. ಸಿನಿಮಾದಲ್ಲಿ ಪಾತ್ರದ ಪರಿಚಯ ಮತ್ತು ಪೋಷಣೆ, ಕಥೆಯ ರೂಪ ಬಹಳ ಕಾವ್ಯಾತ್ಮಕವಾಗಿದೆ. ಪ್ರತಿಯೊಂದು ಫ್ರೇಮ್‌ಗಳನ್ನು ನೋಡುವಾಗ ಒಂದು ಕೃತಿಯನ್ನು ಓದಿದ ಅನುಭವ ಜನರಿಗೆ ಆಗಲಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ಅನುಭವಿಸಬೇಕು. ಚಿತ್ರಮಂದಿರದಲ್ಲಿ ನೋಡುವ ಸಿನಿಮಾ ಎಂದರೆ ಹೀಗಿರಬೇಕು ಎಂದು ಜನ ಮಾತನಾಡಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ.
ಹೊಸಬರ ಮೇಲೆ ಭರವಸೆ ಇಟ್ಟು ಬಂಡವಾಳ ಹೂಡಿದ ರಕ್ಷಿತ್ ಶೆಟ್ಟಿ ಬಗ್ಗೆ...
ಈ ಸಿನಿಮಾದ ಕಥೆ ಉತ್ಕೃಷ್ಟವಾಗಿದೆ. ಜೊತೆಗೆ ನಿರ್ದೇಶನವೂ ಅಷ್ಟೇ. ರಕ್ಷಿತ್ ಅವರು ಸಂಪೂರ್ಣವಾದ ನಂಬಿಕೆಯನ್ನು ನಿರ್ದೇಶಕರಾದ ಚಂದ್ರಜಿತ್ ಬೆಳ್ಯಪ್ಪ ಅವರ ಮೇಲೆ ಇಟ್ಟಿದ್ದರು. ಆ ನಂಬಿಕೆ ಎನ್ನುವುದು ಹಲವಾರು ರೀತಿ ಕವಲೊಡೆಯಿತು. ಕಲಾವಿದರು, ತಂತ್ರಜ್ಞರ ಆಯ್ಕೆ ವಿಚಾರದಲ್ಲಿ ಇದನ್ನು ನೀವು ಕಾಣಬಹುದು. ನಾನು ಅವರನ್ನು ನಾಲ್ಕೈದು ಬಾರಿ ಭೇಟಿಯಾಗಿರಬಹುದು. ಸಿನಿಮಾದ ಮೇಲೆ ರಕ್ಷಿತ್ ಅವರಿಗೆ ಇರುವ ಒಲವು ಅಪಾರ. ಕಲೆಗೆ ಅವರು ಕೊಡುವ ಬೆಲೆ ಇದು. ಶಿಸ್ತು, ಪ್ರಾಮಾಣಿಕತೆ, ನಂಬಿಕೆ ಅವರಿಗೆ ಮುಖ್ಯವಾಗಿದೆ.
ಈ ವರ್ಷ ಅತ್ಯುತ್ತಮ ನಟಿ ಪ್ರಶಸ್ತಿ ನಿಮಗೇ ಎಂದು ರಕ್ಷಿತ್ ಹೇಳಿದ್ದಾರೆ...
ಅದು ಅವರ ದೊಡ್ಡ ಗುಣ. ಈ ಮಾತನ್ನು ರಕ್ಷಿತ್ ಶೆಟ್ಟಿ ಅವರು ಹೇಳಿದ್ದಾರೆ ಎನ್ನುವುದಕ್ಕಿಂತ ನನ್ನ ಸಿನಿಮಾದ ನಿರ್ಮಾಪಕರಾಗಿ ಅವರು ಈ ರೀತಿ ಹೇಳಿದ್ದಾರೆ ಎನ್ನುವುದು ಮುಖ್ಯ. ಈ ರೀತಿ ಪ್ರೋತ್ಸಾಹ ಪ್ರಶಸ್ತಿ ಸಿಕ್ಕಿದಷ್ಟೇ ಖುಷಿ ನೀಡುತ್ತದೆ. ಈ ಮಾತು ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ಭರವಸೆ ಮೂಡಿಸಿದೆ. ಪ್ರೇಕ್ಷಕರಿಗಿಂತ ಮೊದಲೇ ನಿರ್ಮಾಪಕರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಹೊಸ ಸಿನಿಮಾಗಳು ಎಲ್ಲಿಯವರೆಗೆ ಬಂದವು?
‘ಜಸ್ಟ್ ಮ್ಯಾರೀಡ್’ ಹಾಗೂ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾಗಳ ಶೂಟಿಂಗ್ ಪೂರ್ಣಗೊಂಡಿದೆ. ಇವುಗಳ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿವೆ. ‘ಸತ್ಯ ಸನ್ ಆಫ್..’ ಸಿನಿಮಾದ ಡಬ್ಬಿಂಗ್ ಹಾಗೂ ಪ್ಯಾಚ್‌ವರ್ಕ್ ಬಾಕಿ ಇದೆ. ಇದರಲ್ಲಿ ಕಥೆಯೇ ನನ್ನ ಪಾತ್ರದ ಮೇಲೆ ಹೋಗುತ್ತದೆ. ಇದನ್ನು ಹೊರತುಪಡಿಸಿ ಹೊಸ ಕಥೆಗಳು ಬರುತ್ತಿವೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ನಾನಿಲ್ಲ. ಏಕೆಂದರೆ ಇನ್ನೂ ಎರಡು ಸಿನಿಮಾಗಳು ಬಿಡುಗಡೆಯಾಗಬೇಕಿವೆ. ಮುಖ್ಯವಾಗಿ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಫಲಿತಾಂಶ ನನ್ನ ಮುಂದಿನ ಸಿನಿಮಾಗಳ ಗೈಡ್ ಆಗಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.