ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ‘ಪಠಾಣ್’ ಪ್ರಚಾರಕ್ಕೆ ಬಜರಂಗದಳ ವಿರೋಧ: ಸಿಎಂಗೆ ಕರೆ ಮಾಡಿದ ಶಾರುಖ್

Last Updated 22 ಜನವರಿ 2023, 7:58 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ಪ್ರಚಾರಕ್ಕೆ ಬಜರಂಗದಳದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಗುವಾಹಟಿ ನಗರದ ನರೇಂಗಿಯಲ್ಲಿ ಚಿತ್ರಮಂದಿರವೊಂದರಲ್ಲಿ ‘ಪಠಾಣ್’ ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿದ ಪ್ರತಿಭಟನಾಕಾರರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ಶಾರುಖ್ ಖಾನ್ ಅವರು ತಮಗೆ ದೂರವಾಣಿ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

‘ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಬಿಸ್ವಾ ಶರ್ಮಾ ಭರವಸೆ ನೀಡಿದ್ದಾರೆ.

ಶಾರುಖ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರದ ಹಾಡೊಂದು ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸಿನಿಮಾ ಹಾಗೂ ಹಾಡಿನಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಚಿತ್ರತಂಡಕ್ಕೆ ನಿರ್ದೇಶಿಸಿದೆ.

‘ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುನ್ನ, ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿದ ‘ಪಠಾಣ್‌’ ಚಿತ್ರದ ಪರಿಷ್ಕೃತ ಪ್ರತಿಯನ್ನು ಸಲ್ಲಿಸಲು ಚಿತ್ರದ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲಂಸ್‌ಗೆ ಸಿಬಿಎಫ್‌ಸಿ ಸೂಚಿಸಿದೆ’ ಎಂದು ಮಂಡಳಿಯ ಅಧ್ಯಕ್ಷ ಪ್ರಸೂನ್‌ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದರು.

ಡಿ.12ರಂದು ಬಿಡುಗಡೆಯಾಗಿದ್ದ ಚಿತ್ರದ ‘ಬೇಷರಮ್‌ ರಂಗ್‌’ ಹಾಡು ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಒಳಉಡುಪು ಧರಿಸಿದ್ದು ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಚಿತ್ರವನ್ನು ಬ್ಯಾನ್‌ ಮಾಡುವ ಕೂಗೂ ಇದೇ ಸಂದರ್ಭದಲ್ಲಿ ಎದ್ದಿತ್ತು. ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT