ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಹಟ್ಟಿ- ಬಾಲಿವುಡ್‍ ಸಂಬಂಧ ಬೆಸೆದ ಈಶ್ವರ

100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಹಣ: ಮರಾಠಿ, ಗುಜರಾತಿ ಚಿತ್ರದಲ್ಲೂ ಕೆಲಸ
Last Updated 28 ಡಿಸೆಂಬರ್ 2020, 16:39 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಬೆಳಗಾವಿಯಲ್ಲಿ ನಿಧನರಾದ ಹಿಂದಿ ಚಲನಚಿತ್ರ ರಂಗದ ಸಿನಿಮಾ ಛಾಯಾಗ್ರಾಹಕ ಈಶ್ವರ ಬಿದರಿ ಮೂಲತಃ ಬನಹಟ್ಟಿಯವರು.

ಈಶ್ವರ ಬಿದರಿಯವರು 1932ರಲ್ಲಿ ಬನಹಟ್ಟಿಯಲ್ಲಿ ಜನಿಸಿದರು. ನಂತರ ಇಲ್ಲಿಯ ಸರ್ಕಾರಿ ಶಾಲೆಯಲ್ಲಿ ಕಲಿತರು. ಸ್ಥಳೀಯ ಎಸ್ಆರ್‍ಎ ಹೈಸ್ಕೂಲ್‍ನಿಂದ 1953 ರಲ್ಲಿ ಎಸ್‍ಎಸ್‍ಎಲ್‍ಸಿ ಶಿಕ್ಷಣ ಪೂರೈಸಿದರು. ನಂತರ ಕೆಲವು ವರ್ಷಗಳ ಕಾಲ ಜಮಖಂಡಿಯ ತಮ್ಮ ಸಂಬಂಧಿಕರಾದ ಮುರಿಗೆಪ್ಪ ಹರಕಂಗಿಯವರ ಬಳಿ ಫೋಟೊಗ್ರಾಫಿ ಮಾಡಲು ಆರಂಭಿಸಿದರು. ನಂತರ ಅಲ್ಲಿಂದ ಬೆಂಗಳೂರಿಗೆ ತೆರಳಿ ಅಲ್ಲಿಯ ಎಸ್‍.ಜಿ.ಪಾಲಿಟೆಕ್ನಿಕ್‍ ಕಾಲೇಜಿನಲ್ಲಿ ಸಿನಿಮಾಟೊಗ್ರಾಫಿ ಕಲಿತರು. ನಂತರ ಅಲ್ಲಿಂದ ಮುಂಬೈಗೆ ತೆರಳಿದರು.

ಅಲ್ಲಿ ಕರ್ನಾಟಕದವರೆ ಆದ ವಿ.ಕೆ. ಮೂರ್ತಿಯವರ ಬಳಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯ ಮಾಡಿದರು. ಹಿಂದಿ ಚಲನಚಿತ್ರ ರಂಗದ ಗುರುದತ್‍ ಸ್ಟುಡಿಯೊ ಸೇರಿಕೊಂಡರು. ಗುರುದತ್‍ರ ಚಿತ್ರಗಳಿಗೆ ಫೋಟೊಗ್ರಾಫಿ ಮಾಡುವುದರ ಜೊತೆಗೆ, ಹಿಂದಿಯ ಸೂಪರ್‌ ಹಿಟ್‌ ಶೋಲೆ ಚಲನಚಿತ್ರಕ್ಕೂ ಕೂಡಾ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದಿ ಸೇರಿದಂತೆ, ಮರಾಠಿ, ಗುಜರಾತಿ, ಬಂಗಾಲಿಯ ಅಂದಾಜು 100 ಕ್ಕೂ ಹೆಚ್ಚು ಚಲನಚಿತ್ರಗಳಿಗೂ ಅವರು ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿದರು.

2012ರಲ್ಲಿ ಅವರು ತಮ್ಮ ವೃತ್ತಿಯಿಂದ ನಿವೃತ್ತಿಯಾದರು. ಈಗ ಅವರ ಮಗ ಸಂಜೀವ ತಂದೆಯ ವೃತ್ತಿಯನ್ನು ಮುಂದುವರಿಸಿದ್ದಾರೆ.

ಜೆ.ಪಿ.ದತ್ತಾ ಮತ್ತು ರಾಜಕುಮಾರ ಸಂತೋಷಿ ಅವರ ಬಹಳಷ್ಟು ಚಿತ್ರಗಳಿಗೆ ಅವರು ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿದರು.

ಈಶ್ವರ ಬಿದರಿಯವರು ಗುಲಾಮಿ, ಯತೀಮ, ಬಟವಾರಾ, ಹತ್ಯಾರಾ, ದಾಮಿನಿ, ಅಂದಾಜ್‌ ಅಪ್ನಾ ಅಪ್ನಾ, ಘಾತಕ್, ವನ್ಷ್, ಔರತ್ ಔರತ್ ಔರತ್, ಅಮಿತಾಬ್ ಬಚ್ಚನ್ ಅಭಿನಯದ ಹಿಂದೂಸ್ತಾನ್ ಕಿ ಕಸಮ್, ದಾಹಿ ಅಕ್ಷರ ಪ್ರೇಮ್ ಕಿ, ಫರ್ಜ್‌, ಅಬ್ ಕಿ ಬರಸ್, ಗುನಾಹ, ಅಂದಾಜ್, ರೇನ್‍ ದ ಟೆರರ್ವಿದಿನ್‍, ಕಭಿ ಕಹಿನಾ ಚಿತ್ರಗಳಿಗೆ ಛಾಯಾಗ್ರಹಕರಾಗಿ ಹೆಸರು ಮಾಡಿದ್ದಾರೆ.

ಅವರಿಗೆ ಬಹಳಷ್ಟು ಹೆಸರು ತಂದು ಕೊಟ್ಟ ಚಲನಚಿತ್ರ ಜೆ.ಪಿ.ದತ್ತಾ ನಿರ್ದೇಶನ ಬಾರ್ಡರ್‍. ಪಾಕಿಸ್ತಾನ ಮತ್ತು ಭಾರತ ಸೀಮೆಯಲ್ಲಿರುವ ಮರುಭೂಮಿ ಸನ್ನಿವೇಶಗಳನ್ನು ಸುಂದರವಾಗಿ ನೋಡುಗರಿಗೆ ಉಣ ಬಡಿಸಿದರು, ಯುದ್ಧದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ತೋರಿಸಿದರು. ಸಲ್ಮಾನ್‌ ಖಾನ್‌, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ ಅವರ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಬಿದರಿ ಅವರಿಗೆ ಸಾಕಷ್ಟು ಪ್ರಶಸ್ತಿಗಳು ದೊರಕಿವೆ. ಈಶ್ವರ ಬಿದರಿಯವರು ಬನಹಟ್ಟಿಯ ಜೊತೆಗೆ ಈಗಲೂ ಸಂಪರ್ಕವಿಟ್ಟುಕೊಂಡಿದ್ದರು. ಇಲ್ಲಿಯ ಕಾರ್ಯಕ್ರಮಗಳಿಗೆ ಅವರು ಬರುತ್ತಿದ್ದರು. ಬಂದಾಗ ಇಲ್ಲಿಯ ಎಲ್ಲ ಸ್ನೇಹಿತರ ಜೊತೆಗೂಡಿ ಹರಟೆ ಹೊಡೆಯುತ್ತಿದ್ದರು ಎಂದು ಅವರ ಸ್ನೇಹಿತ ಕಾಡಪ್ಪ ಮಾಲಾಪುರ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT