ಬೆಲ್‌ ಬಾಟಂ ಟ್ರೇಲರ್‌; ಕಾನ್‌ಸ್ಟೆಬಲ್‌ ’ಡಿಟೆಕ್ಟಿಟ್‌ ದಿವಾಕರ’

7

ಬೆಲ್‌ ಬಾಟಂ ಟ್ರೇಲರ್‌; ಕಾನ್‌ಸ್ಟೆಬಲ್‌ ’ಡಿಟೆಕ್ಟಿಟ್‌ ದಿವಾಕರ’

Published:
Updated:

ಸಿನಿಮಾ ಬಿಡುಗಡೆಗೂ ಮುನ್ನವೇ ಬೆಲ್‌ ಬಾಟಂ ಚಿತ್ರದ ರಿಮೇಕ್‌ ಹಕ್ಕು(ತಮಿಳು) ಬಿಕರಿಯಾಗಿದ್ದು, ಬುಧವಾರ ಚಿತ್ರತಂಡ ಸಿನಿಮಾದ ಅಧಿಕೃತ ಟ್ರೇಲರ್‌ ಬಿಡುಗಡೆ ಮಾಡಿದೆ. 

2.59 ನಿಮಿಷಗಳ ಈ ಟ್ರೇಲರ್‌ನಲ್ಲಿ ಡಿಟೆಕ್ಟಿಟ್‌ ದಿವಾಕರ ಪಾತ್ರದ ಪೂರ್ಣ ಪರಿಚಯವಾಗುತ್ತದೆ. ಹರಿಕಥೆ ಶೈಲಿಯ ಹಿನ್ನೆಲೆ ಧ್ವನಿಯಲ್ಲಿ ಇಡೀ ಟೀಸರ್‌ನಲ್ಲಿ ಪಾತ್ರಗಳು ಹಾಗೂ ಕಥೆಯ ಪರಿಚಯವಾಗುತ್ತದೆ. ಡಾ.ರಾಜ್‌ ಕುಮಾರ್ ಅಭಿನಯದ ಗೋವಾದಲ್ಲಿ ಸಿಐಡಿ 999 ಚಿತ್ರವನ್ನು ನೋಡುತ್ತ ಪ್ರಭಾವಿತನಾಗುವ ಹುಡುಗ ಡಿಟೆಕ್ಟಿಟ್‌ ಆಗುವ ಕನಸು ಕಾಣುತ್ತಾನೆ. ಆದರೆ, ಆಗುವುದು ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌! 

ಪೊಲೀಸ್‌ ಠಾಣೆಯ ಕೆಲಸಗಳ ಜತೆಗೆ ಪತ್ತೇದಾರಿಕೆ ನಡೆಸುವ ಕಾರ್ಯವನ್ನು ಮರೆತಿರುವುದಿಲ್ಲ. ಈ ನಡುವೆ ಹುಡುಗಿಯ ಕಂಡು ಮನಮೆಚ್ಚುವ ದಿವಾಕರನ ವೇಷ ಆಗಾಗೆ ಬದಲಾಗುತ್ತಿರುತ್ತದೆ. 80ರ ದಶಕದ ಪತ್ತೇದಾರಿ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಜಯತೀರ್ಥ ಮತ್ತವರ ತಂಡದ ಪ್ರಯತ್ನ ಈ ಟ್ರೇಲರ್‌ನಲ್ಲಿ ಕಾಣಬಹುದು.  

ಟೋಪಿ, ಉದ್ದದ ಕೋಟು, ಕೈಗವಸು, ಕನ್ನಡಕ ಹಾಗೂ ಜಾವಾ ಬೈಕ್‌; ಇವಿಷ್ಟು ಡಿಟೆಕ್ಟಿವ್‌ ದಿವಾಕರನ ಪರಿಕರ ಮತ್ತು ವೇಷ. ಉಳಿದಂತೆ ಪೈಪ್‌ ಸೇದುವುದು, ಪುಸ್ತಕಗಳ ಅಧ್ಯಯನ, ಕೇಸ್‌ಸ್ಟಡಿ, ವೇಷ ಮರೆಸುವುದು, ಬದಲಿಸುವುದು...ಇತ್ಯಾದಿ,.. ಇತ್ಯಾದಿ... ಬೆಲ್‌ ಬಾಟಂ ಪ್ಯಾಂಟ್ ಧರಿಸುವ ರಿಷಭ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರನಾಗಿ ಕಾಣಿಸಿಕೊಂಡಿದ್ದು, ಎಂಬತ್ತರ ದಶಕದ ಪ್ರೇಯಸಿಯಾಗಿ ಹರಿಪ್ರಿಯಾ ಮನಸೂರೆಗೊಳ್ಳುತ್ತಾರೆ. ನಿರ್ದೇಶಕರಾದ ಯೋಗ್‌ರಾಜ್‌ ಭಟ್‌ ಮತ್ತು ಶಿವಮಣಿ ಸಹ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ಟಿ.ಕೆ.ದಯಾನಂದ ಚಿತ್ರಕ್ಕೆ ಕಥೆ ಒದಗಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಜವಾಬ್ದಾರಿ ವಹಿಸಿದ್ದಾರೆ. ಸಂತೋಷ್‌ ಕುಮಾರ್ ಚಿತ್ರಕ್ಕೆ ಹಣ ಹೂಡಿದ್ದು, ಇದೇ ತಿಂಗಳು ಸಿನಿಮಾ ತೆರೆಕಾಣುವ ಸಾಧ್ಯತೆಯಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !