ವಾರವಿಡೀ ಕಠಿಣ ಆಟಗಳನ್ನು ಆಡಿ ಒತ್ತಡದಲ್ಲಿ ನಲುಗಿದ ಬಿಗ್‌ಬಾಸ್ ಕನ್ನಡ ಸ್ಪರ್ಧಿಗಳಿಗೆ ‘ಫನ್ ಫ್ರೈಡೆ’ ಟಾಸ್ಕ್ ಬಂತೆಂದರೆ ಖುಷಿ. ಏಕೆಂದರೆ ಇದು ಸಖತ್ ಫನ್ ಹಾಗೂ ಎಂಟರ್‍ಟೈನಿಂಗ್ ಆಗಿರುತ್ತದೆ. ಹಾಗಂತ ಇದನ್ನು ಲಘುವಾಗಿಯೂ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಇದೂ ಕೂಡ ಸ್ಪರ್ಧಿಗಳ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಜನರ ಎದುರಿಗೆ ತೆರೆದಿಟ್ಟು ಅವರು ಸ್ಪರ್ಧಿಗಳ ಕುರಿತು ಒಂದು ಅಭಿಪ್ರಾಯ ರೂಪಿಸಿಕೊಳ್ಳುವಂತೆ ಮಾಡುತ್ತದೆ. ಜತೆಗೆ ಈ ಟಾಸ್ಕ್‌ನಲ್ಲಿ ಗೆದ್ದವರಿಗೆ ಜಿಯೋ ಸಿನಿಮಾ ವತಿಯಿಂದ ₹5 ಸಾವಿರ ಉಡುಗೊರೆ ಕೂಪನ್ ಸಹ ನೀಡಲಾಗುತ್ತದೆ.
ಈ ವಾರದ ‘ಜಿಯೋ ಸಿನಿಮಾ ಫನ್ ಫ್ರೈಡೇ’ ಕೂಡ ತುಂಬಾ ಮಜವಾಗಿತ್ತು. ಅದರ ಹೆಸರು ‘ಕಥಾ ಸಂಗಮ’. ಟಾಸ್ಕ್ ಅನುಸಾರ ಎಲ್ಲ ಸದಸ್ಯರೂ ಒಂದೊಂದು ಫಲಕ ಹಿಡಿದುಕೊಂಡು, ವೇದಿಕೆಯ ಮುಂದೆ ಸಾಲಾಗಿ ಕುಳಿತುಕೊಳ್ಳಬೇಕು. ಫಲಕ ಸಿಗದಿರುವ ಒಬ್ಬ ಸದಸ್ಯ ವೇದಿಕೆಗೆ ಬಂದು ಕಥೆ ಹೇಳಲು ಆರಂಭಿಸಬೇಕು. ಈ ಸಂದರ್ಭದಲ್ಲಿ ವೇದಿಕೆಯ ಮುಂದೆ ಇರುವ ಸದಸ್ಯರು, ಒಬ್ಬ ಸದಸ್ಯನ ನಂತರ ಇನ್ನೊಬ್ಬ ಸದಸ್ಯರು ಫಲಕಗಳನ್ನು ತೋರಿಸುತ್ತ ಆದಷ್ಟೂ ಕಥೆಯ ದಿಕ್ಕು ತಪ್ಪಿಸಲು ಯತ್ನಿಸಬೇಕು. ಕಥೆ ಹೇಳುತ್ತಿರುವ ಸದಸ್ಯ, ಆ ಫಲಕದಲ್ಲಿ ಬರೆದಿರುವ ಶಬ್ದಗಳನ್ನು ತನ್ನ ಕಥೆಗೆ ಅಳವಡಿಸಿಕೊಂಡು, ಕಥೆಯನ್ನು ಮುಂದುವರಿಸಬೇಕು. ಕಥೆ ಹೇಳುವ ಸದಸ್ಯರಿಗೆ ಗರಿಷ್ಠ ಮೂರು ಬಾರಿ ಮಾತ್ರ ಅನ್ಯ ಭಾಷೆಯ ಶಬ್ದಗಳನ್ನು ಬಳಸುವ ಅವಕಾಶವಿದೆ. ಪ್ರತಿ ಸದಸ್ಯನಿಗೆ ಕಥೆ ಹೇಳಲು 2 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಎಲ್ಲರೂ ಕಥೆ ಹೇಳಿದ ಬಳಿಕ ಮನೆಯ ಸದಸ್ಯರೇ ಚರ್ಚಿಸಿ, ಅತ್ಯುತ್ತಮವಾಗಿ ಕಥೆ ಹೇಳಿದ ಒಬ್ಬರನ್ನು ಆರಿಸಬೇಕು.
ಟಾಸ್ಕ್ ಹೇಗಿತ್ತು?
ಮೊದಲು ವಿನಯ್ ಕಥೆ ಹೇಳಲು ಶುರು ಮಾಡಿದರು. ‘ಒಂದೂರಲ್ಲಿ ಇಬ್ಬರು ಹುಡುಗ ಹುಡುಗಿ ಇರುತ್ತಾರೆ ಎಂದು ಹೇಳುತ್ತಿದ್ದ ಹಾಗೆ ನಮ್ರತಾ, ‘ಇಷ್ಟೇ ಜೀವನ’ ಎಂಬ ಫಲಕವನ್ನು ಎತ್ತಿಹಿಡಿದರು. ವಿನಯ್ ಆ ಶಬ್ದವನ್ನು ಅಳವಡಿಸಿಕೊಂಡು ಕಥೆ ಮುಂದುವರಿಸಿದರು. 'ಆ ಹುಡುಗ, ಹುಡುಗಿಯ ಬಳಿ ಹೇಳ್ತಾನೆ, ಇಷ್ಟೇ ಜೀವನ ಚಿನ್ನಾ’ ಅಷ್ಟರಲ್ಲಿ ‘ಕೊತ್ತಂಬರಿ ಸೊಪ್ಪು’ ಎಂಬ ಇನ್ನೊಂದು ಫಲಕ ತಲೆ ಎತ್ತಿತ್ತು. ವಿನಯ್ ಕಥೆ ಮುಂದುವರಿಸಿದರು. ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಬಾ ಎಂದರೆ ಇಷ್ಟೇ ಜೀವನ ಅಂತಿದಿಯಲ್ಲ ಎಂದು ಹುಡುಗಿ ಹುಡುಗನಿಗೆ ಹೇಳ್ತಾಳೆ.
ನಂತರ, ‘ಚರಂಡಿ’, ‘ನಮಗ್ಯಾರು ಬೀಳ್ತಾರೆ’, ‘ಮದ್ವೆ ಯಾವಾಗ’, ‘ತುಕಾಲಿ’, ‘ಓ ಭ್ರಮೆ’ ‘ಈ ಸಲ ಕಪ್ ನಮ್ದೆ’, ‘ಕಾಡಲ್ಲಿ ಸಿಕ್ಕ ಸೊಪ್ಪು’ ಹೀಗೆ ಒಂದರ ಹಿಂದೆ ಇನ್ನೊಂದು ಒಂದಕ್ಕೊಂದು ಸಂಬಂಧವೇ ಇಲ್ಲದಂಥ ಪದಗಳನ್ನು ಹೊತ್ತ ಫಲಕಗಳು ಏಳುತ್ತಲೇ ಇದ್ದವು. ವಿನಯ್, ಕಥೆ ಬೆಳೆಸುವುದನ್ನು ಬಿಟ್ಟು ಈ ಪದಗಳ ಹಿಂದೆ ಬಿದ್ದು ತಾವೇ ದಾರಿ ತಪ್ಪಿಯಾಗಿತ್ತು. ಇದು ಕೇವಲ ವಿನಯ್ ಅವರ ಕಥೆ ಅಷ್ಟೇ ಅಲ್ಲ, ಎಲ್ಲ ಸ್ಪರ್ಧಿಗಳ ಪಾಡೂ ಇದೆ. ಏಕೆಂದರೆ ಆ ಟಾಸ್ಕ್ ಹಾಗಿತ್ತು. ಆದರೆ ಕಥೆ ಹೇಳುವವರು ಕಥೆಯ ದಾರಿ ತಪ್ಪಿಸಿಕೊಂಡು ಪರದಾಡುವುದನ್ನು ನೋಡುವುದು ಮಾತ್ರ ಬಲು ಮಜವಾಗಿತ್ತು.
ರಕ್ಷಕ್, ಸಿನಿಮಾ ಡೈಲಾಗ್ ಸ್ಟೈಲಿನಲ್ಲಿ ಕಥೆ ಹೇಳಲು ಹೊರಟರೆ, ಸ್ನೇಹಿತ್, ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಎಂದು ಶುರುಮಾಡಿ ರಾಜನನ್ನು ತುಕಾಲಿಯ ಜತೆಗೆ ಸೇರಿಸಿ, ಚರಂಡಿ ಯೋಜನೆ ಮಾಡಿಸಿ, ಮದ್ವೆ ಯಾವಾಗ ಎಂದು ಕನವರಿಸುವಂತೆ ಮಾಡಿದರು. ಹಾಗೆ ನೋಡಿದರೆ ರಾಜನ ಕಥೆಯನ್ನು ಸ್ನೇಹಿತ್ ಚೆನ್ನಾಗಿಯೇ ಪದಗಳನ್ನು ಪೋಣಿಸಿದರು.
ಸಂಗೀತಾ ಕಾಡಿನಲ್ಲಿಯೇ ಕಥೆಯನ್ನು ಹುಟ್ಟಿಸಿದರು. ಕಾಡಿನಲ್ಲಿ ಹಣ್ಣುಗಳ ನಡುವಿನ ಮಾತುಕತೆಯನ್ನೇ ಒಂದು ಕಥೆಯಾಗಿಸಿದರು. ಬಾಳೆಹಣ್ಣು, ದ್ರಾಕ್ಷಿ, ಸೇಬುಗಳ ನಡುವಿನ ಮಾತುಕತೆಯಲ್ಲಿಯೇ ಹುಟ್ಟಿದ ಕಥೆ ಮಜವಾಗಿತ್ತು. ಆದರೆ ಮೂರಕ್ಕಿಂತ ಹೆಚ್ಚುಇಂಗ್ಲಿಷ್ ಪದಗಳನ್ನು ಬಳಸಿದರು.
ನಂತರ ಕಥೆ ಕಟ್ಟಲು ಹೊರಟವರು ಮೈಕಲ್. ಅವರೂ ಕೂಡ ಕಾಡಿನ ಜಾಡನ್ನೇ ಹಿಡಿದರು. ಕಥೆಯ ನಾಯಕ ಕೋತಿ. ಆದರೆ ಕೋತಿ ಮರದಿಂದ ಮರಕ್ಕೆ ಹಾಡುವ ಹಾಗೆ ಮೈಕಲ್ ಕೂಡ ಪದದಿಂದ ಪದಕ್ಕೆ ಹಾರುತ್ತ ಹೊರಟು ದಾರಿಯನ್ನೇ ಮರೆತರು. ತನಿಷಾ, ಮನೆಯ ಸದಸ್ಯರನ್ನೇ ಕಥೆಯ ಪಾತ್ರಗಳನ್ನಾಗಿಸಿಕೊಂಡು, ಅವರು ಎತ್ತಿಹಿಡಿದ ಪದಗಳ ಫಲಕಗಳನ್ನು ಅವರ ಹೆಸರಿನ ಪಾತ್ರಗಳಿಂದಲೇ ಹೇಳಿಸಿದರು.
ತುಕಾಲಿ ಸಂತೋಷ್, ಕಥೆ ಕಟ್ಟುವ ವೇದಿಕೆಗೆ ಹೋಗುತ್ತಿದ್ದ ಹಾಗೆ ‘ಹುಚ್ಚ ವೆಂಕಟ್’ ಆಗಿ ಬದಲಾಗಿ ಬಿಟ್ಟಿದ್ದರು. ‘ನನ್ ಮಗಂದು…. ಕೊತ್ತಂಬರಿ ಸೊಪ್ಪು ಸಿಗುತ್ತದೆ ಎಂದು ಸೀದಾ ಹೋದೆ’ ಎಂದು ವೆಂಟಕ್ ಮಿಮಿಕ್ರಿ ಮಾಡುತ್ತಲೇ ಕಥೆಯನ್ನು ಕಟ್ಟಿದರು. ಸಿರಿ ಕಾಡಿನಲ್ಲಿ ನಡೆದುಕೊಂಡು ಬೀಳುತ್ತಿರುವ ಚಿಕ್ಕ ಹುಡುಗಿಯ ಕಥೆಯನ್ನು ಹೇಳಿದರೆ, ನಮ್ರತಾ ಅವರು ‘ಯಮ್ಮ ಯಪ್ಪನ ಕಥೆಯನ್ನು ಹೇಳುತ್ತ ಹೇಳುತ್ತ ಕಳೆದುಹೋದರು.
ಕಾರ್ತಿಕ್‌ಗೆ ಕುಡುಕನ ಕಥೆ ಹೇಳುವ ಉಮೇದು. ಆ ಕುಡುಕನಿಗೆ ತುಕಾಲಿ ಎಂದು ಅವರು ಹೆಸರಿಟ್ಟು ಕಥೆ ಕಟ್ಟಿದರು. ಇಶಾನಿ ‘ಒಂದು ರಾತ್ರಿ ಫಾರೆಸ್ಟ್‌ನಲ್ಲಿ…’ ಎಂದು ಇಂಗ್ಲಿಷ್ ಶಬ್ದದಿಂದಲೇ ಕಥೆ ಶುರು ಮಾಡಿದರು. ನಂತರ ಕಥೆ ಬದಲಿಸಿಕೊಂಡು ಬೇರೆ ಹೇಳಬೇಕು ಎಂದು ಹೊರಟರೆ ಕಥೆ ಪೂರ್ತಿ ದಾರಿತಪ್ಪಿ ಹೋಗಿತ್ತು. ಒಂದೊಂದು ಸಾಲಿಗೂ ಅವರು ಪರದಾಡುತ್ತಿದ್ದರು. ಮಾತಿಗಿಂತ ನಗುವೇ ಜಾಸ್ತಿ ಇತ್ತು. ಪ್ರತಾಪ್‌ಗೂ ಕಥೆಯ ಡ್ರೋಣ್ ಸರಿಯಾಗಿ ಹಾರಿಸಲು ಸಾಧ್ಯವೇ ಆಗಲಿಲ್ಲ. ನೀತು ಇಲಿ-ಬೆಕ್ಕು ಕಥೆಯನ್ನು ಹೇಳಿದರು.
ಭಾಗ್ಯಶ್ರೀ ಹೇಳಿದ ಕಥೆ ಇಂಟ್ರೆಸ್ಟಿಂಗ್ ಆಗಿತ್ತು. ಮೂವರು ಸ್ನೇಹಿತರ ಆ ಕಥೆ ಪದಗಳಿಂದ ದಾರಿ ತಪ್ಪದೇ ಸರಿಯಾಗಿ ಸಾಗಿತು. ಒಬ್ಬರಾದ ಮೇಲೆ ಇನ್ನೊಬ್ಬರು ಎತ್ತುತ್ತಿದ್ದ ಫಲಕಗಳಿಂದ ದಿಕ್ಕೆಡದೇ ತಾಳ್ಮೆಯಿಂದ ತಮ್ಮ ಕಥೆಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವ ಹಾಗೆ ಪದಗಳನ್ನು ತಮ್ಮ ಕಥೆಯಲ್ಲಿ ಸಹಜವೆನ್ನಿಸುವಂತೆ ಸೇರಿಸಿಕೊಂಡು ಕಥೆಯನ್ನು ಮುಂದುವರೆಸಿದರು. ಅವರು ಕಥೆ ಹೇಳುವ ಶೈಲಿಗೆ ಸ್ಪರ್ಧಿಗಳು ಫಲಕಗಳನ್ನು ಎತ್ತುವುದನ್ನೂ ಮರೆತು ಕಥೆ ಕೇಳಲು ಶುರುಮಾಡಿದ್ದರು.
ಗೆದ್ದವರು ಯಾರು?:
ಎಲ್ಲರೂ ಕಥೆ ಹೇಳಿ ಮುಗಿಸದ ಮೇಲೆ ಎಲ್ಲರೂ ಸೇರಿ ಯಾರು ಚೆನ್ನಾಗಿ ಕಥೆ ಹೇಳಿದರು ಎಂಬುದನ್ನು ನಿರ್ಧರಿಸುವ ಹೊತ್ತು. ನೀತು ಎಲ್ಲ ಎಲ್ಲರ ಅಭಿಪ್ರಾಯ ಕೇಳಿದಾಗ ಬಹುತೇಕ ಎಲ್ಲರ ವೋಟ್ ಭಾಗ್ಯಶ್ರೀ ಅವರಿಗೆ ಬಿದ್ದಿತ್ತು. ಭಿನ್ನವಾದ ಅಭಿಪ್ರಾಯಕ್ಕೆ ಅವಕಾಶವೇ ಇಲ್ಲದ ಹಾಗೆ ಈವಾರದ ಜಿಯೋ ಸಿನಿಮಾ ಫನ್ ಫ್ರೃಡೇಯಲ್ಲಿ ಭಾಗ್ಯಶ್ರೀ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.