ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಕುಮಾರಿ ಸಾಹಸ ತೆರೆಗೆ

Last Updated 2 ಜುಲೈ 2020, 8:54 IST
ಅಕ್ಷರ ಗಾತ್ರ

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಅನಾರೋಗ್ಯಕ್ಕೊಳಗಾಗಿದ್ದ ತನ್ನ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಏಳುದಿನಗಳ ಕಾಲ ಗುರುಗ್ರಾಮದಿಂದ 1,200 ಕಿ. ಮೀ ದೂರದಲ್ಲಿರುವ ಬಿಹಾರದ ತನ್ನ ಊರು ದರ್ಭಾಂಗ್‌ಗೆ ಕರೆದೊಯ್ದಿದ 15 ವರ್ಷದ ಜ್ಯೋತಿ ಕುಮಾರಿಯ ಸಾಹಸಗಾಥೆ, ಅಂತರರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪುತ್ರಿ ಇವಾಂಕ ಟ್ರಂಫ್‌ ಕೂಡ, ಈ ಬಾಲಕಿಯ ಸಾಹಸವನ್ನು ಮೆಚ್ಚಿ ಟ್ವೀಟ್‌ ಮಾಡಿದ್ದರು.

ಇಂಥ ಜ್ಯೋತಿಯ ಸಾಹಸ ಕಥೆ ಈಗ ಸಿನಿಮಾವಾಗುತ್ತಿದ್ದು, ಆ ಸಿನಿಮಾದ ಮುಖ್ಯ ಪಾತ್ರದಲ್ಲಿ ಸ್ವತಃ ಜ್ಯೋತಿ ಕುಮಾರಿಯೇ ಕಾಣಿಸಿಕೊಳ್ಳುತ್ತಿರುವುದು ವಿಶೇಷ.ಜ್ಯೋತಿಯ ತಂದೆಯ ಪಾತ್ರ ಮಾಡುವ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.

ಶೈನ್‌ ಕೃಷ್ಣ ಎಂಬುವವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಶೈನ್‌ ಕೃಷ್ಣ ಜತೆ ಮಿರಾಜ್‌, ಫಿರೋಜ್‌ ಮತ್ತು ಸಜಿತ್ ನಂಬಿಯಾರ್ ಎಂಬ ನಾಲ್ವರು ಸೇರಿ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರ ಸೆಟ್ಟೇರಲಿದೆ.

ಈ ಚಿತ್ರಕ್ಕೆ ‘ಆತ್ಮನಿರ್ಭರ’ ಎಂದು ಟೈಟಲ್‌ ನೀಡಲಾಗಿದೆ. ಈ ಸಿನಿಮಾದಲ್ಲಿ ಜ್ಯೋತಿ ಸಾಹಸದ ಜೊತೆಗೆ, ಅವರು 1200 ಕಿ.ಮೀ ಸೈಕಲ್ ಪಯಣದಲ್ಲಿ ಕಂಡುಕೊಂಡ ಅನುಭವಗಳೂ ಇರುತ್ತವೆಯಂತೆ.

ಜ್ಯೋತಿ, ತನ್ನ ತಂದೆಯೊಂದಿಗೆ ಗುರುಗ್ರಾಮದಿಂದ ದರ್ಭಾಂಗವರೆಗೂ ಸಾಗಿದ ಹಾದಿಯಲ್ಲೇಈ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ.

‘ಈ ಸಿನಿಮಾವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣ ಮಾಡಲು ಯೋಚಿಸಿದ್ದು, ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡಲಾಗುತ್ತದೆ‘ ಎಂದು ಚಿತ್ರತಂಡ ತಿಳಿಸಿದೆ. ‘ಇಂಗ್ಲಿಷ್‌ನಲ್ಲಿ ಈ ಚಿತ್ರಕ್ಕೆ ‘ಎ ಜರ್ನಿ ಆಫ್‌ ಎ ಮೈಗ್ರೆಂಟ್‌’ ಎಂದು ಶೀರ್ಷಿಕೆ ಇಡಲಾಗುತ್ತಿದೆ. ಸುಮಾರು 20 ಭಾಷೆಗಳಲ್ಲಿ ಸಬ್‌ಟೈಟಲ್‌ ಇರಲಿದೆ’ ಎಂದು ಶೈನ್‌ ಕೃಷ್ಣ ಮಾಹಿತಿ ನೀಡಿದ್ದಾರೆ.‘ತನ್ನ ಸೈಕಲ್ ಪಯಣದ ಕಥೆ ಸಿನಿಮಾವಾಗುತ್ತಿರುವುದಕ್ಕೆ ಖುಷಿಯಾಗಿದೆ‘ ಎಂದಿದ್ದಾರೆ ಜ್ಯೋತಿ.

ಘಟನೆಯ ಹಿನ್ನೆಲೆ

ಜ್ಯೋತಿಯ ತಂದೆ ಮೋಹನ್ ಪಾಸ್ವಾನ್‌ ಗುರುಗ್ರಾಮದಲ್ಲಿ ಇ–ರಿಕ್ಷಾ ಚಾಲಕ. ಕಳೆದ ಜನವರಿಯಲ್ಲಿ ಅಪಘಾತವೊಂದರಲ್ಲಿ ಅವರು ಗಾಯಗೊಂಡಿದ್ದರು. ಹೀಗಾಗಿ ಕೆಲಸಕ್ಕೆ ಹೋಗಲಾಗದೇ ಮನೆಯಲ್ಲೇ ಉಳಿದಿದ್ದರು. ಇದರ ಜತೆಗೆ ಮಾರ್ಚ್‌ ತಿಂಗಳಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಯಿತು. ಕೈಯಲ್ಲಿ ಕೆಲಸವಿಲ್ಲ, ಹಣವೂ ಇಲ್ಲ. ಕೆಲವು ತಿಂಗಳಿಂದ ಮನೆ ಬಾಡಿಗೆ ಕಟ್ಟಿರಲಿಲ್ಲ. ಮನೆಯ ಮಾಲೀಕ ಬಾಕಿ ಇರುವ ಬಾಡಿಗೆ ಕಟ್ಟುವಂತೆ ಒತ್ತಾಯಿಸುತ್ತಿದ್ದರು. ಇನ್ನೊಂದು ಕಡೆ ರಿಕ್ಷಾ ಕೊಟ್ಟಿದ್ದ ಮಾಲೀಕ, ಅದನ್ನು ವಾಸ್ ತೆಗೆದುಕೊಂಡು ಹೋಗಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅಪ್ಪ–ಮಗಳು ತುಂಬಾ ಕಷ್ಟ ಎದುರಿಸುವಂತಾಯಿತು. ಕೊನೆಗೆ, ಜ್ಯೋತಿ, ಅಪ್ಪನನ್ನು ಸೈಕಲ್‌ನಲ್ಲಿ ಹಿಂದೆ ಕೂರಿಸಿಕೊಂಡು ಬಿಹಾರದ ತನ್ನೂರು ದರ್ಭಾಂಗ್‌ಗೆ ಕರೆದುಕೊಂಡು ಹೊರಟಳು. ಇದು ದೇಶದೆಲ್ಲೆಡೆ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT