ಭಾನುವಾರ, ನವೆಂಬರ್ 17, 2019
28 °C

ನಟ ಅಮೀರ್‌‌ಖಾನ್ ಫಿಟ್‌ನೆಸ್‌ ಗುಟ್ಟು

Published:
Updated:
Prajavani

ಸಿನಿಮಾಗಳ ಮೇಲಿನ ಪ್ರೀತಿ, ಬದ್ಧತೆ ಹಾಗೂ ವೃತ್ತಿಪರತೆಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ನಟ ಅಮೀರ್‌ ಖಾನ್ ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ವಿಚಾರದಲ್ಲೂ ತುಂಬಾ ಕಾಳಜಿ ವಹಿಸುತ್ತಾರೆ. 

54ರ ಹರೆಯದಲ್ಲೂ 25ರ ಯುವಕನಂತೆ ಕಾಣುವ ಅಮೀರ್‌ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  ಇವರ ದೇಹ ಸೌಷ್ಟವಕ್ಕೆ ಫಿದಾ ಆದವರಲ್ಲಿ ಚೀನಾ ಮತ್ತು ಅರಬ್‌ ದೇಶಗಳಲ್ಲಿನ ಮಹಿಳೆಯರೇ ಹೆಚ್ಚು ಎಂಬುದು ವಿಶೇಷ!

ದೇಹವನ್ನು ಹೆಚ್ಚಾಗಿ ಪ್ರೀತಿಸುವ ಅಮೀರ್‌, ಈ ಹಿಂದೆ ತೂಕ ಇಳಿಸಿಕೊಳ್ಳುವ ಮತ್ತು ಹೆಚ್ಚಿಸಿ ಕೊಳ್ಳುವ ಪ್ರಯೋಗಕ್ಕೆ ಕೈ ಹಾಕಿದ್ದರು. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಫಲವಾಗಿ ಆ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದರು. 2009ರಲ್ಲಿ ತೆರೆಕಂಡ ಘಜನಿ ಸಿನಿಮಾಕ್ಕೆ 30 ಕೆ.ಜಿ. ತೂಕ ಇಳಿಸಿಕೊಂಡಿದ್ದರು. ಹಾಗೇ 2016ರಲ್ಲಿ ಬಿಡುಗಡೆಯಾಗಿದ್ದ ‘ದಂಗಲ್’ ಸಿನಿಮಾಗಾಗಿ 97 ಕೆ.ಜಿ. ವರೆಗೂ ತೂಕವನ್ನು ಹೆಚ್ಚಿಸಿಕೊಂಡಿದ್ದರು. 

ಸ್ಲಿಮ್ ಆಂಡ್ ಫಿಟ್ ಆಗಿರುವ ಅಮೀರ್‌ ಖಾನ್‌ ಇದೀಗ ತಮ್ಮ ಮುಂದಿನ ಚಿತ್ರ ‘ಲಾಲ್‌ ಸಿಂಗ್‌ ಛಡ್ಡಾ’ಕ್ಕಾಗಿ  20 ಕೆ.ಜಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ದು ಅದಕ್ಕಾಗಿ ಕಠಿಣ ಡಯೆಟ್‌ ಹಾಗೂ ವರ್ಕೌಟ್‌ ಮಾಡುತ್ತಿದ್ದಾರೆ. 1994ರಲ್ಲಿ ತೆರೆಕಂಡ ಹಾಲಿವುಡ್‌ ಚಿತ್ರ ‘ಫಾರೆಸ್ಟ್‌ ಗಂಪ್‌’ ನ ರಿಮೇಕ್‌ ಸಿನಿಮಾ ಇದಾಗಿದೆ. ಈ ಚಿತ್ರ ಒಟ್ಟು 6 ಆಸ್ಕರ್‌ ಪ್ರಶಸ್ತಿಗಳನ್ನು ಪಡೆದಿತ್ತು. 

ಲಾಲ್‌ ಸಿಂಗ್‌ ಛಡ್ಡಾ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿರುವ ಅಮೀರ್‌ ಖಾನ್‌ ತೂಕ ಇಳಿಕೆಗಾಗಿ ಕಠಿಣ ದೈಹಿಕ ತಾಲೀಮು ನಡೆಸುತ್ತಿದ್ದಾರೆ. ವಾರದಲ್ಲಿ ಐದು ದಿನ ನಿತ್ಯ ಮೂರು ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದರ ಜತೆಗೆ ಡಯಟ್‌ ಅನ್ನು ಆರಂಭಿಸಿದ್ದಾರೆ. 

ಅಮೀರ್‌ ವರ್ಕೌಟ್‌

ಸೋಮವಾರ ಚೆಸ್ಟ್‌ ಆ್ಯಂಡ್‌ ಟ್ರೈಸಿಪ್ಸ್‌ಗೆ ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಡಂಬಲ್ಸ್‌,  ಟ್ರೈಸಿಪ್ಸ್‌, ಕೇಬಲ್‌ ಪ್ರೆಸ್‌ ಡೌನ್‌ ಮತ್ತು ಬಾರ್‌ಬೆಲ್‌ ಬೆಂಚ್‌ ಮೂಲಕ  ದೇಹ ದಂಡಿಸುತ್ತಾರೆ. ಮಂಗಳವಾರ ಡಂಬಲ್ಸ್‌, ಲ್ಯಾಟೆರೆಲ್‌ ಡಂಬಲ್ಸ್‌ ಹಾಗೂ ಮಿಲಿಟರಿ ಡಂಬಲ್ಸ್‌ ಸಾಧನಗಳನ್ನು ಬಳಸಿ  ಶೋಲ್ಡರ್ಸ್‌ ವರ್ಕೌಟ್‌ ನಡೆಸುತ್ತಾರೆ. ಬುಧವಾರ ಬ್ಯಾಕ್‌ ಆ್ಯಂಡ್‌ ಬೈಸಿಪ್ಸ್‌ ವ್ಯಾಯಾಮದಲ್ಲಿ ಬೆವರು ಹರಿಸುತ್ತಾರೆ. ಟಿ ಬಾರ್ ರೊ, ಕರ್ಲ್ಸ್‌ ಮತ್ತು ಡಂಬಲ್ಸ್‌ಗಳ ಸಹಾಯದಿಂದ ಮೈಯನ್ನು ಹುರಿಗೊಳಿಸುತ್ತಾರೆ. ಇನ್ನು ಗುರುವಾರ ಮತ್ತು ಶುಕ್ರವಾರ ಕ್ರಂಚಸ್‌, ಸ್ಟಬಿಲಿಟಿ ಬಾಲ್‌, ಲೆಗ್‌ ಪ್ರೆಸ್‌ ಮೇಶಿನ್‌ ಮೂಲಕ ವ್ಯಾಯಾಮ ಮಾಡುತ್ತಾರೆ. ಶನಿವಾರ ಮತ್ತು ಭಾನುವಾರ ವಾರ್ಮ್‌ಅಪ್‌ ರೀತಿಯ ಸರಳ ಎಕ್ಸಸೈಜ್‌ಗಳನ್ನು ಮಾಡುವ ಮೂಲಕ ವಿಶ್ರಾಂತಿ ಪಡೆಯುತ್ತಾರೆ. 

ಅಮೀರ್‌ ಆಹಾರ...

* ಬೆಳಗಿನ ಉಪಾಹಾರ: ಗ್ರೀನ್‌ ಟೀ, ಮೊಟ್ಟೆಯ ಬಿಳಿಯ ಭಾಗ, ಮೊಳಕೆ ಕಾಳು ಹಾಗೂ ಹಣ್ಣುಗಳ ಸೇವನೆ ಅಮೀರ್‌ ಖಾನ್‌ ಅವರ ಬೆಳಗಿನ ಉಪಹಾರ. 

* ಬೆಳಗಿನ ಸ್ನ್ಯಾಕ್ಸ್‌ : ಹಣ್ಣು ಅಥವಾ ತರಕಾರಿ ಜ್ಯೂಸ್‌

*  ಮಧ್ಯಾಹ್ನದ ಊಟ: ದಾಲ್‌ (ಮೂರು ರೀತಿಯ ದ್ವಿದಳ ಧಾನ್ಯಗಳಿಂದ ತಯಾರಿಸಿದ) ರೊಟ್ಟಿ (ಗೋಧಿ, ಜೋಳ ಹಾಗೂ ಬಾಜರಾ ಧಾನ್ಯ) ತರಕಾರಿ ಸಬ್ಜಿ (3  ಟೇಬಲ್‌ ಚಮಚ ಆಲಿವ್ ಎಣ್ಣೆ ಬಳಸಿ) ಮತ್ತು ಒಂದು ಬಟ್ಟಲು ಗಟ್ಟಿ ಮೊಸರು. 

* ಸಂಜೆ ಸ್ನ್ಯಾಕ್ಸ್‌:  ರಸ್ಕ್‌ ಹಾಗೂ ಟೀ

* ರಾತ್ರಿ ಊಟ: ಗ್ರಿಲ್ಡ್‌ ಚಿಕನ್‌ ಹಾಗೂ ಬೇಯಿಸಿದ ತರಕಾರಿ 

* ದಿನದ ಮಧ್ಯದಲ್ಲಿ ಬಾಳೆ ಹಣ್ಣು ಹಾಗೂ ಸೇಬು ಹಣ್ಣು ಸೇವನೆ.

ಪ್ರತಿಕ್ರಿಯಿಸಿ (+)