ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳಿಕೆನ್ನೆಯ ಹುಡುಗನ ದುರಂತ ಕಥೆ ಇದು...

Last Updated 14 ಜೂನ್ 2020, 12:18 IST
ಅಕ್ಷರ ಗಾತ್ರ

ತರುಣಿಯರಿಗೆ ರೋಮಾಂಚನ ಎನ್ನಿಸುವಂತಹ ನಗುವಿನ, ನಕ್ಕಾಗಲೆಲ್ಲ ಗುಳಿ ಬೀಳುತ್ತಿದ್ದ ಕೆನ್ನೆಯ ಸುಂದರ‌ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ಬರಸಿಡಿಲಿನಂತಹ ಸುದ್ದಿ ಅರಗಿಸಿಕೊಳ್ಳಲೂ ಆಗದಂತಹ ದುಃಖವನ್ನು ನೀಡುತ್ತಿದೆ.

ತನ್ನ ಸಹಜ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳ ಮನಸನ್ನು ಸೂರೆ ಮಾಡಿದ್ದ ಯುವ‌ ನಟನನ್ನು ಕಳೆದುಕೊಂಡಿರುವ ಬಾಲಿವುಡ್ ದಿಗ್ಭ್ರಮೆಗೆ ಒಳಗಾಗಿದೆ.

ಕೊರೊನಾ ಸೋಂಕಿನ ತಡೆಗಾಗಿ ಹೇರಲಾದ ಲಾಕ್‌ಡೌನ್ ಸಂದರ್ಭ ಅನೇಕ ಜನಪ್ರಿಯ ಚಿತ್ರ ನಟರು ಇಹಲೋಕ ತ್ಯಜಿಸಿದ್ದು, ಅವರ ಸಾಲಿಗೆ 34ರ ಹರೆಯದ ಯುವ ನಟನ ಸೇರ್ಪಡೆಯಾಗಿದೆ.

ಭಾರತಕ್ಕೆ ಕ್ರಿಕೆಟ್‌ನಲ್ಲಿ ಎರಡು ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಜೀವನವನ್ನು ಆಧರಿಸಿದ 'ಎಂ.ಎಸ್. ದೋನಿ- ದಿ ಅನ್ ಟೋಲ್ಡ್ ಸ್ಟೋರಿ' ಸಿನಿಮಾದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿ ಸಿನಿಮಾ ಮತ್ತು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದ ಸುಶಾಂತ್, ಆ ಚಿತ್ರದ ಅಭಿನಯಕ್ಕಾಗಿ ಅಂದಾಜು ಒಂದು‌ ವರ್ಷ ಕಠಿಣ ಅಭ್ಯಾಸ ಮಾಡಿ ದೋನಿ ಹಾವಭಾವದ ಅನುಕರಣೆಗೆ ತನ್ನನ್ನು ತೊಡಗಿಸಿಕೊಂಡಿದ್ದ ಶ್ರಮ ಇಡೀ ಸಿನಿಮಾದಲ್ಲಿ ಕಾಣಿಸಿತ್ತು.

ಇತ್ತೀಚಿನ ದಿನಗಳಲ್ಲಿ ತೆರೆಯ ಮೇಲೆ ಬಂದಿರುವ ಅದೆಷ್ಟೋ ಬಯೋಪಿಕ್‌ಗಳಲ್ಲಿ ದೋನಿ ಜೀವನಾಧರಿತ ಚಿತ್ರ ಗಳಿಸಿದಷ್ಟು ಯಶಸ್ಸು ಅದ್ಭುತ.

ಆಮಿರ್ ಖಾನ್ ನಟನೆಯಲ್ಲಿ 2013ರಲ್ಲಿ ತೆರೆ ಕಂಡಿದ್ದ ವಿದು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ‌ಹಿರಾನಿ ನಿರ್ದೇಶನದ 'ಪಿಕೆ' ಚಿತ್ರದಲ್ಲಿ ನಾಯಕಿ ಅನುಷ್ಕಾ ಶರ್ಮಾಳ ಪ್ರಿಯಕರನಾಗಿ, ಪಾಕಿಸ್ತಾನಿ ಮೂಲದ ಪುಟ್ಟ ಪಾತ್ರಕ್ಕೆ ಜೀವ ತುಂಬಿದ್ದ ಸುಶಾಂತ್, ಅದಕ್ಕೂ ಮೊದಲು ಅಭಿಷೇಕ್ ಕಪೂರ್ ನಿರ್ದೇಶನದ 'ಕಾಯ್ ಪೊ ಚೆ' ಚಿತ್ರದ‌ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆಯುವ‌ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದರು. ಬಿಹಾರ ಮೂಲದ ಈ ನಟನ ಮುಖದಲ್ಲಿ ಎದ್ದು ಕಾಣುತ್ತಿದ್ದದ್ದು ಮುಗ್ಧತೆ ಮಾತ್ರ.

ದೋನಿ ಚಿತ್ರದ ಬಿಡುಗಡೆಯ ನಂತರ ಮನೆ ಮಾತಾಗಿದ್ದ ಸುಶಾಂತ್, ಉದ್ದನೆಯ ಕೂದಲಿನ ಯುವ ಕ್ರಿಕೆಟ್ ಆಟಗಾರ ದೋನಿಯ ಪಾತ್ರವನ್ನು ತೆರೆಯ ಮೇಲೆ ಪ್ರಸ್ತುತಪಡಿಸಿದ್ದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು.

'ಸ್ವತಃ ನಾನೇ ನಟಿಸುತ್ತಿದ್ದರೂ ಆ ಪಾತ್ರಕ್ಕೆ ಇಷ್ಟು ಪ್ರಮಾಣದಲ್ಲಿ ಜೀವ ತುಂಬಲು ಸಾಧ್ಯವಾಗುತ್ತಿರಲಿಲ್ಲ' ಎಂದು ದೋನಿಯೇ ಹೇಳುವಷ್ಟರ ಮಟ್ಟಿಗೆ ಸುಶಾಂತ್ ತಲ್ಲೀನತೆ ವ್ಯಕ್ತವಾಗಿತ್ತು.

ಸೌಮ್ಯ ಸ್ವಭಾವ, ವಿಭಿನ್ನ ಬ್ಯಾಟಿಂಗ್ ಶೈಲಿ, ಎಲ್ಲರೊಂದಿಗೂ ಸಲೀಸಾಗಿ ಬೆರೆಯದ ದೋನಿಯ ಪಾತ್ರದ ಅಭಿನಯ ನಿಜಕ್ಕೂ ಸವಾಲಿನದ್ದೇ ಆಗಿದ್ದರೂ ಅದನ್ನು ಮೆಟ್ಟಿ ನಿಂತು ಸೈ ಎನ್ನಿಸಿಕೊಂಡಿದ್ದು ಸುಶಾಂತ್ ಹೆಗ್ಗಳಿಕೆ.

ಮಾನಸಿಕ ತುಮುಲಗಳನ್ನು ಒಳಗೊಂಡ ಕಥೆಯ, ತೆಳು ಹಾಸ್ಯದ 'ಚಿಚೋರೆ' ಚಿತ್ರದಲ್ಲಿನ ತಮ್ಮ ಅಭಿನಯದಿಂದಲೂ ಮತ್ತೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ಸುಶಾಂತ್, 'ರಾಬ್ತಾ', 'ಸೋಂಚಿರಿಯಾ','ಕೇದಾರ್ ನಾಥ್', 'ಶುದ್ಧ ದೇಸೀ ರೋಮ್ಯಾನ್ಸ್', 'ಬ್ಯೋಮಕೇಶ ಭಕ್ಷಿ' ಚಿತ್ರಗಳಲ್ಲಿನ ಅಭಿನಯದಿಂದಲೂ ಅಸಂಖ್ಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರ ಅಭಿನಯದ 'ದಿಲ್‌ ಬೆಚಾರಾ' ಲಾಕ್ ಡೌನ್ ಘೋಷಣೆ ಆಗದಿದ್ದರೆ ಮೇ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು.

ಸಹಜ ‌ನಟನೆಯ ಮೂಲಕ ಭರವಸೆ ಮೂಡಿಸಿದ್ದ ಸುಶಾಂತ್ ಉಜ್ವಲ ಭವಿಷ್ಯಕ್ಕೆ ಅಕಾಲಿಕ ಸಾವು ಪೂರ್ಣವಿರಾಮ ಹಾಕಿದೆ. ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕಿರುವ‌ ಇವರ ನಡೆ ಅಭಿಮಾನಿಗಳಲ್ಲಿ ದುಃಖದ ಜೊತೆಜೊತೆಗೇ ಅವರ ಮೇಲೆ ಸಿಟ್ಟಾಗುವಂತೆಯೂ ಪ್ರೇರೇಪಿಸಿದೆ.

ತಮ್ಮ 16ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ (2002) ಸುಶಾಂತ್ ಸ್ನೇಹಿತರ ಮಟ್ಟಿಗೆ ಮಾತ್ರ ಅರ್ಥವೇ ಆಗದ ಒಗಟಿನಂತಿದ್ದರು. ಆಗಾಗ ತಾಯಿಯನ್ನು ನೆನೆದು ಚುಟುಕು ಕವಿತೆಯ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಈ ಸುಂದರ ನಟನ ಜೀವನ ಇಷ್ಟು ಬೇಗನೇ ಅಂತ್ಯವಾಯಿತಲ್ಲ ಎಂಬ ನೋವು ಮಾತ್ರ ಅಭಿಮಾನಿಗಳ ಹೃದಯದಲ್ಲಿ ಅನವರತ ಇರುವುದಂತೂ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT