‘ಪ್ರೇಮಂ ಪೂಜ್ಯಂ’ ಸಿನಿಮಾ ಮೂಲಕ ಬೆಳ್ಳಿತೆರೆಯ ಪಯಣ ಆರಂಭಿಸಿದ ನಟಿ ಬೃಂದಾ ಆಚಾರ್ಯ, ಇದೀಗ ತಮ್ಮ ಮೂರನೇ ಪ್ರಾಜೆಕ್ಟ್ ರಿಲೀಸ್ ಹೊಸ್ತಿಲಲ್ಲಿದ್ದಾರೆ. ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಜುಲೈ 28ಕ್ಕೆ ತೆರೆಕಾಣುತ್ತಿದೆ. ಕನ್ನಡದಲ್ಲಷ್ಟೇ ಅಲ್ಲ, ತಮಿಳು ಚಿತ್ರರಂಗದತ್ತಲೂ ಬೃಂದಾ ಹೆಜ್ಜೆ ಹಾಕಲಿದ್ದಾರೆ.
‘ಪ್ರೇಮಂ ಪೂಜ್ಯಂ’ ಬಳಿಕದ ಬೃಂದಾ ಅವರ ಜೀವನ ಹೇಗಿದೆ?
ಐ.ಟಿ ಉದ್ಯೋಗ ಬಿಟ್ಟು ಬಣ್ಣದ ಲೋಕದ ಕನಸು ಕಟ್ಟಿಕೊಂಡು ಈ ಕ್ಷೇತ್ರಕ್ಕೆ ಬಂದವಳು ನಾನು. ‘ಪ್ರೇಮ್’ ಅವರ ಜೊತೆಗೆ ಮೊದಲ ಸಿನಿಮಾ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಬಳಿಕ ಕನಸು ನನಸಾದ ಭಾವ. ಇದಾದ ಬಳಿಕ ಜವಾಬ್ದಾರಿ ಹೆಚ್ಚಿತು. ಒಳ್ಳೆಯ ಸ್ಕ್ರಿಪ್ಟ್‌ಗಳು ಬರಲಾರಂಭಿಸಿದವು. ಅತ್ಯುತ್ತಮ ನಿರ್ದೇಶಕರ ಜೊತೆ ಕೆಲಸ ಮಾಡಬೇಕು, ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿ ಪ್ರೇಕ್ಷಕರೆದುರಿಗೆ ಬರಬೇಕು ಎನ್ನುವ ತುಡಿತ ಆರಂಭವಾಯಿತು. ಹೀಗಾಗಿಯೇ ಹೊಸ ಸಿನಿಮಾ ಒಪ್ಪಿಕೊಳ್ಳಲು ಸಮಯ ತೆಗೆದುಕೊಂಡೆ.
ಐ.ಟಿ. ಉದ್ಯೋಗದತ್ತ ಮತ್ತೆ ಯೋಚನೆ ಹೊರಳಿತ್ತೇ?
ಮುಂಬೈನಿಂದ ಬೆಂಗಳೂರಿಗೆ ಬಂದು ಐ.ಟಿ. ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲೇ ‘ಪ್ರೇಮಂ ಪೂಜ್ಯಂ’ ಸಿನಿಮಾ ಅವಕಾಶ ಸಿಕ್ಕಿತ್ತು. ಆ ಸಿನಿಮಾಗಾಗಿ ಉದ್ಯೋಗವನ್ನು ಬಿಟ್ಟಿದ್ದೆ. ಸಿನಿಮಾ ಬಿಡುಗಡೆಯಾದ ಬಳಿಕ ಐ.ಟಿ ಉದ್ಯೋಗ ಮತ್ತೆ ಸೇರಿಕೊಳ್ಳುವ ಬಗ್ಗೆ ಯೋಚಿಸಿಲ್ಲ. ಆದರೆ, ಮಧ್ಯಮವರ್ಗದ ಕುಟುಂಬದಲ್ಲಿ ಏನಾಗುತ್ತದೆ ಎಂದರೆ ನಾವು ಯೋಚನೆ ಮಾಡದೇ ಇದ್ದರೂ ನಮ್ಮ ಕುಟುಂಬದವರು ಬಿಡುವುದಿಲ್ಲ. ‘ಸಿನಿಮಾ ಕ್ಷೇತ್ರ ನಮಗೆಲ್ಲಾ ಬೇಕಾ? ಐ.ಟಿ ಉದ್ಯೋಗ ಸೇರಿಕೋ. ದೀರ್ಘಾವಧಿಯಲ್ಲಿ ಜೀವನ ನಡೆಸಲು ಇದರಿಂದಷ್ಟೇ ಸಾಧ್ಯ’ ಎನ್ನುವ ಮಾತು ಅವರದ್ದು. ಹೀಗೆ ಸ್ವಲ್ಪ ಒತ್ತಡ ಇದ್ದರೂ ಬಣ್ಣದ ಜೀವನವನ್ನೇ ನಾನು ಇಷ್ಟಪಡುತ್ತಿದ್ದೇನೆ. ಕನ್ನಡ ಜನರು ನನಗೆ ಪ್ರೀತಿ ನೀಡಿದ್ದಾರೆ.
ಪಾತ್ರಗಳ ಆಯ್ಕೆ ವಿಚಾರದಲ್ಲಿ ಬೃಂದಾ ಅವರ ನಿಯಮಗಳು...
ಈ ವಿಚಾರದಲ್ಲಿ ನಾನು ಸಾಂಪ್ರದಾಯಿಕ ಚೌಕಟ್ಟಿನೊಳಗಿದ್ದೇನೆ. ನಿರ್ದೇಶಕರು ಕಥೆ ಹೇಳುವಾಗ ಒಂದು ಪೆನ್, ಪೇಪರ್ ಹಿಡಿದುಕೊಂಡು ಕೂರುತ್ತೇನೆ. ಒನ್ ಲೈನ್ ಸ್ಟೋರಿಯನ್ನು ನಿರ್ದೇಶಕರು ಮುಂದಿಟ್ಟರೆ ನಾನು ಒಪ್ಪುವುದಿಲ್ಲ. ಚಿತ್ರದ ಕಥೆ, ನನ್ನ ಪಾತ್ರದ ವಿಸ್ತೃತ ವಿವರಣೆಯನ್ನು ಬಯಸುತ್ತೇನೆ. ಹೀಗಾದಾಗಷ್ಟೇ ನನ್ನ ಪಾತ್ರದ ಬಗ್ಗೆ ನನಗೆ ನಂಬಿಕೆ ಹುಟ್ಟಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಇದೊಂದು ಸುದೀರ್ಘ ಪಯಣ. ಈ ಕ್ಷಣಕ್ಕೂ ನಾನು ರೊಮ್ಯಾಂಟಿಕ್ ಸಿನಿಮಾಗಳ ಕಡೆ ವಾಲುವುದು ಕೊಂಚ ಜಾಸ್ತಿ. ಒಬ್ಬ ಕಲಾವಿದೆಯಾಗಿ ಎಲ್ಲ ಜಾನರ್ ಪಾತ್ರಗಳನ್ನು ಮಾಡುವ ಆಸೆ ಇದೆ. ‘ಜೂಲಿಯೆಟ್’ ಸಿನಿಮಾದಲ್ಲಿನ ನಟನೆಗಾಗಿ ನಾನು ಎರಡು ತಿಂಗಳು ಮಾರ್ಷಿಯಲ್ ಆರ್ಟ್ಸ್ ಕಲಿತು ಆ ಪಾತ್ರ ಮಾಡಿದ್ದೆ. ಸಿನಿಮಾಗಳ ಸಂಖ್ಯೆಗಳಿಗಿಂತಲೂ ಗುಣಮಟ್ಟದ ಸಿನಿಮಾಗಳನ್ನು ಮಾಡುವ ನಿಯಮ ಹಾಕಿಕೊಂಡಿದ್ದೇನೆ. ಈ ಹೆಜ್ಜೆಗಳಲ್ಲಿ ಖಂಡಿತವಾಗಿಯೂ ಕಷ್ಟ, ಸವಾಲುಗಳಿವೆ ಎಂದು ತಿಳಿದಿದೆ.
‘ಶಿವಾನಿ’ ಯಾರು?
ಶಶಾಂಕ್ ಅವರ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಬಬ್ಲಿ ಗರ್ಲ್ ಆಗಿ ಕಾಣಿಸಿಕೊಂಡಿದ್ದೇನೆ. ‘ಶಿವಾನಿ’ ಬಬ್ಲಿಯಾಗಿದ್ದರೂ, ಬಹಳ ಪಕ್ವವಾಗಿರುವ ಪಾತ್ರವದು. ಆಕೆಯಲ್ಲೊಂದು ಜೀವಕಳೆಯಿದೆ. ಶಶಾಂಕ್ ಅವರ ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ತೂಕ ಇರುತ್ತದೆ. ಅವರ ಸಿನಿಮಾಗಳಲ್ಲಿ ಸಂದೇಶವಿರುತ್ತದೆ. ‘ಮೊಗ್ಗಿನ ಮನಸು’ ಸಿನಿಮಾದ ಫ್ಯಾನ್ ನಾನು. ‘ಕೌಸಲ್ಯಾ..’ ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಕಥೆ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ಭಾರತೀಯ ಸಮಾಜದಲ್ಲಿ ಇಂದಿಗೂ ಪುರುಷ ಪ್ರಧಾನ ಪದ್ಧತಿ ಅನುಷ್ಠಾನದಲ್ಲಿದೆ. ನಾವು ಇಂದಿಗೂ ಮನೆಗೆ ಹೋದರೆ ಅಮ್ಮನ ಬಳಿಯೇ ಕಾಫಿ ಕೇಳುತ್ತೇವೆ ವಿನಃ ಅಪ್ಪನ ಬಳಿ ಕೇಳುವುದಿಲ್ಲ. ಇದು ಎಲ್ಲರ ತಲೆಯಲ್ಲೂ ಕುಳಿತಿದೆ. ಮಗುವೊಂದು ಇಂತಹ ಮನಃಸ್ಥಿತಿ ಬೆಳೆಸಿಕೊಂಡರೆ ಹೇಗಿರುತ್ತದೆ ಎನ್ನುವ ಕಥೆಯ ಎಳೆ ಇಟ್ಟುಕೊಂಡು ಶಶಾಂಕ್ ಅವರು ಸಿನಿಮಾ ಹೆಣೆದಿದ್ದಾರೆ. ‘ರಾಮ’ ಎನ್ನುವ ಪುರುಷಾಭಿಮಾನಿ(ಮೇಲ್ ಷೋವಿನಿಷ್ಟ್) ಜೀವನದಲ್ಲಿ ಶಿವಾನಿ ಬಂದ ಬಳಿಕ ಏನಾಗುತ್ತದೆ ಎನ್ನುವುದೇ ಕಥೆ.
ನಾನು ಬೇರೊಂದು ಪ್ರಾಜೆಕ್ಟ್‌ಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಶೂಟಿಂಗ್ ಸ್ಥಳ ನೋಡಲು ಶಶಾಂಕ್ ಅವರು ಅಲ್ಲಿಗೆ ಬಂದಿದ್ದರು. ನನ್ನ ನಟನೆಯನ್ನು ನೋಡಿ ಅಲ್ಲಿಯೇ ‘ಶಿವಾನಿ’ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಆಗಲೇ ಚಿತ್ರದ ಒಂದು ಶೆಡ್ಯೂಲ್ ಮುಗಿದಿತ್ತಂತೆ.
ಮಾಡೆಲಿಂಗ್ ಕಡೆಗೆ ಹೋಗುವ ಲಕ್ಷಣಗಳಿವೆ..
ಸಿನಿಮಾ ಹಾಗೂ ಮಾಡೆಲಿಂಗ್ ಜೊತೆ ಜೊತೆಯಾಗಿ ಸಾಗುವ ಹೆಜ್ಜೆಗಳು. ಯಾವುದಾದರೂ ಅವಕಾಶಗಳು ಬಂದರೆ ಖಂಡಿತವಾಗಿಯೂ ಅತ್ತಲೂ ಗಮನಹರಿಸುತ್ತೇನೆ. ಮಾಡೆಲಿಂಗ್‌ನಿಂದ ಮತ್ತಷ್ಟು ಸಿನಿಮಾ ಅವಕಾಶಗಳೂ ಸಿಗಬಹುದೇನೋ!
ಬೃಂದಾ ಅವರ ಮುಂದಿನ ಪ್ರಾಜೆಕ್ಟ್‌ಗಳು..
ಸದ್ಯ ಎರಡು ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇದರಲ್ಲಿ ಒಂದು ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಜೊತೆಗೆ ಒಂದು ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ ವಿಎಫ್‌ಎಕ್ಸ್ ಭಾಗವೇ ಹೆಚ್ಚಿದ್ದು, ಹೀಗಾಗಿ ಕೊಂಚ ಸಮಯ ಹಿಡಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.