ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ | ಅತ್ಯುತ್ತಮ ಪೋಷಕ ನಟ ರಂಗಾಯಣ ರಘು: ರಂಗಾಯಣದ ದೈತ್ಯನಿಗೆ ಪ್ರಶಸ್ತಿ

Published 4 ಜುಲೈ 2024, 23:34 IST
Last Updated 4 ಜುಲೈ 2024, 23:34 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ, ಪೋಷಕ ನಟನಾಗಿ ಮೂರುವರೆ ದಶಕಗಳನ್ನು ಪೂರೈಸಿರುವ ರಂಗಾಯಣ ರಘು ‘ಟಗರು ಪಲ್ಯ’ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ, ನಟ ದತ್ತಣ್ಣ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ರಂಗಾಯಣದ ಗೆಳೆಯ ಮಂಡ್ಯ ರಮೇಶ್‌ ಕೂಡ ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದರು. 

‘ಟಗರು ಪಲ್ಯದ ಒಟ್ಟು ತಂಡವೇ ನನಗೆ ವಿಶೇಷ. ಅದೆಲ್ಲ ನೆನಪಿಸಿಕೊಂಡರೆ ಖುಷಿಯಾಗುತ್ತದೆ. ನಿರ್ದೇಶಕ ಉಮೇಶ್ ಹೊಸಬರು. ಅವರ ಮೊದಲ ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕರಾದ ಧನಂಜಯ, ತಾರಾ, ನಾಗಭೂಷಣ ಅವರ ಹೊಸ ಪ್ರಯೋಗ ಸಾರ್ಥಕವಾಯಿತು. ಪ್ರಯೋಗ ಮತ್ತು ಪ್ರಯತ್ನದ ಹಾದಿಗೆ ಇಂದು ಜನಮನ್ನಣೆ ದೊರೆತಿದೆ. ಅಭಿನಯಕ್ಕೆ ಸಂಬಂಧಿಸಿದಂತೆ ನಮ್ಮ ಗುರು ಬಿ.ವಿ. ಕಾರಂತ ಅವರು ಯಾವಾಗಲೂ ಹೇಳುತ್ತಿದ್ದರು ಭಾಷೆಯನ್ನು ಸುಲಲಿತವಾಗಿ ಮಾತನಾಡಬೇಕು ಎಂದರೆ ಪ್ರಜಾವಾಣಿಯನ್ನು ಓದಬೇಕು ಅಂತ. ಪತ್ರಿಕೆ ಓದುವ ಮತ್ತು ಖರೀದಿಸುವ ಹುಚ್ಚನ್ನು ಹಚ್ಚಿದವರು ಕಾರಂತರು. ಪತ್ರಿಕೆ ಕೊಂಡುಕೊಳ್ಳುವ ಕನಸು ನನಸು ಮಾಡಿಕೊಂಡಿದ್ದು ಕಾರಂತರಿಂದಲೇ. ನಮ್ಮೂರು ಪಾವಗಡದಂತ ಹತ್ತಿರದ ಹಳ್ಳಿ. ಅಲ್ಲಿ ಇಂದಿಗೂ ಪೇಪರ್ ಬರೋದಿಲ್ಲ. ಹಾಗಾಗಿ, ನಾನು ಹಳೇ ಪೇಪರ್ ತಗೊಂಡು ಹೋಗಿ ಅದನ್ನೇ ತಿರುವಿ ಹಾಕುತ್ತಿದ್ದೆ. ಆಗ ಪ್ರಥಮ ಪ್ರಾಶಸ್ತ್ಯ ಇದ್ದದ್ದು ಪ್ರಜಾವಾಣಿಗೆ. ಈಗ ಇದೇ ಪ್ರಜಾವಾಣಿ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ’ ಎಂದು ಪ್ರಶಸ್ತಿ ಪಡೆದು ಭಾವುಕರಾದರು ರಂಗಾಯಣ ರಘು.

ಈ ಪ್ರಶಸ್ತಿ ಪೂರ್ತಿ ತಂಡಕ್ಕೇ ಹೋಗುತ್ತದೆ.  ಡಾಲಿ, ತಾರಾ, ನಾಗಭೂಷಣ ನಿರ್ಮಾಪಕರು.  ಮೊದಲ ಸಿನಿಮಾವಾದರೂ ನಿರ್ದೇಶಕ ಉಮೇಶ್ ಅವರು ಚೆನ್ನಾಗಿ ಮಾಡಿದ್ದಾರೆ. ವಿಶೇಷವಾಗಿ ‘ಪ್ರಜಾವಾಣಿ’ಗೆ ಧನ್ಯವಾದ. ಏಕೆಂದರೆ, ನನ್ನ ಗುರು ಬಿ.ವಿ. ಕಾರಂತ ಅವರು ಭಾಷೆ ಸುಧಾರಣೆಗೆ ಪ್ರಜಾವಾಣಿ ಓದಿ ಅಂತ ಹೇಳುತ್ತಿದ್ದರು.ಅಲ್ಲಿ ಒತ್ತು, ದೀರ್ಘ, ಕೊಂಬು ಎಲ್ಲ ಇರುತ್ತವೆ. ಆ ಪತ್ರಿಕೆಯನ್ನು ನಿಧಾನಕ್ಕೆ ಓದಿಕೊಳ್ಳಿ ಆಂತ ಹೇಳುತ್ತಿದ್ದರು. ಈ ಪೇಪರ್ ಓದೋದು, ಖರೀದಿಸುವುದನ್ನು ಕಾರಂತರು ಕಲಿಸಿದ್ದರು. ಪೇಪರ್‌ ಓದೋದನ್ನು ಕದ್ದಾದ್ದರೂ ಕಲಿಯಿರಿ ಅಂತ ಇದ್ದರು. ರಂಗಾಯಣದಲ್ಲಿ ನಾವು ಪೇಪರ್ ಕೊಂಡೊಕೊಳ್ಳಲು ಆಗಲ್ಲ ಅಂತ ಎಲ್ಲ ಪೇಪರ್ ತರಿಸುತ್ತಿದ್ದರು. ಪೇಪರ್ ಕೊಂಡುಕೊಳ್ಳಬೇಕೆಂಬ ನನ್ನ ಕನಸನ್ನು ನನಸು ಮಾಡಿದ್ದು ಪ್ರಜಾವಾಣಿ. ಏಕೆಂದರೆ ಪಾವಗಡದ ಹತ್ತಿರ ಸಣ್ಣ ಹಳ್ಳಿ ನನ್ನದು. ಅಲ್ಲಿ ಇವತ್ತಿಗೂ ಪೇಪರ್ ಬರಲ್ಲ. ಹಾಗಾಗಿ, ಒಂದಿಷ್ಟು ಹಳೇ ಪೇಪರ್‌ಗಳನ್ನು ತಗೊಂಡು ಹೋಗಿ ಅವನ್ನೇ ಹಿಂದಕ್ಕೆ ಮುಂದಕ್ಕೆ ತಿರುವಿ ಹಾಕುತ್ತಿದ್ದೆ. ಅದರಲ್ಲಿ ‘ಪ್ರಜಾವಾಣಿ’ ಮೊದಲನೆಯದ್ದು. ಹಾಗಾಗಿ, ಪ್ರಜಾವಾಣಿ ತಂಡಕ್ಕೆ ಧನ್ಯವಾದ ತಿಳಿಸುವೆ ಎಂದರು.

ಈತನಕ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, 1988 ರಿಂದ ಬಿ.ವಿ.ಕಾರಂತ್ ಅವರ ರಂಗತಂಡದಲ್ಲಿದ್ದರು. 1995ರಲ್ಲಿ ‘ಸುಗ್ಗಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 2007ರಲ್ಲಿ ‘ದುನಿಯಾ’ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡದ ಈಗಿನ ಎಲ್ಲ ಪ್ರಮುಖ ನಟರೊಂದಿಗೆ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ‘ರಂಗ ಸಮುದ್ರ’, ‘ಶಾಖಾಹಾರಿ’ ಮೊದಲಾದ ಚಿತ್ರಗಳಲ್ಲಿ ಇವರೇ ಕಥಾನಾಯಕನಾಗಿಯೂ ಅಭಿನಯಿಸಿ ಗಮನ ಸೆಳೆದಿದ್ದಾರೆ.

ನಾಮನಿರ್ದೇಶನಗೊಂಡಿದ್ದವರು...

ನಾಗಭೂಷಣ್‌ ಚಿತ್ರ: ಕೌಸಲ್ಯಾ ಸುಪ್ರಜಾ ರಾಮ

ಜೆ.ಪಿ.ತುಮ್ಮಿನಾಡು ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ

ಪೂರ್ಣಚಂದ್ರ ಮೈಸೂರು, ಶೋಭರಾಜ್‌ ಪಾವೂರು ಚಿತ್ರ: ಡೇರ್‌ ಡೆವಿಲ್‌ ಮುಸ್ತಾಫಾ

ರಮೇಶ್‌ ಇಂದಿರ ಚಿತ್ರ: ಸಪ್ತ ಸಾಗರದಾಚೆ ಎಲ್ಲೋ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT