ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದಲ್ಲಾ ಎರಡಲ್ಲಾ’ ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಸಂದರ್ಶನ

Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಒಂದಲ್ಲಾ ಎರಡಲ್ಲಾ’ ಚಿತ್ರದ ಬಗ್ಗೆ ಹೇಳಿ.
ಪುಣ್ಯಕೋಟಿ ಕಥೆಯ ಮುಂದುವರಿದ ಭಾಗ ಇದು. ಆ ಕಥೆಯಲ್ಲಿ ಕಾಡಿತ್ತು. ಹುಲಿ, ಹಸುವಿನ ಕಥನವಿತ್ತು. ಕಥನದ ಕೊನೆಯಲ್ಲಿ ಸತ್ಯ ಗೆಲ್ಲುತ್ತದೆ. ಈಗ ಕಾಡು ಕಡಿದು ನಾವು ನಾಡು ಮಾಡಿಕೊಂಡಿದ್ದೇವೆ. ತಲೆಎತ್ತಿರುವ ಪೇಟೆಗಳಲ್ಲಿ ಹುಲಿಯ ಮನಃಸ್ಥಿತಿಯ ಜನರಿದ್ದಾರೆ. ನರಿ, ತೋಳಗಳ ಮನಃಸ್ಥಿತಿಯ ಜನರಿಗೂ ಬರವಿಲ್ಲ. ಇನ್ನೊಂದೆಡೆ ಹಸುವಿನಂತಹ ಮುಗ್ಧ ಜನರಿದ್ದಾರೆ. ಈ ಪಾತ್ರಗಳ ಮಧ್ಯೆ ಕಥೆ ಸಾಗುತ್ತದೆ. ಕಥೆಯಲ್ಲಿ ‘ಕಾಡು ನುಂಗಿದ ಕಳ್ಳ ಊರಿದು’ ಎಂಬ ವಾಕ್ಯ ಬಳಸಿದ್ದೇವೆ. ಮುಗ್ಧತೆ ಮತ್ತು ಕಾಡುಪ್ರಾಣಿಗಳಂತಹ ಮನಸ್ಸಿನ ಜನರ ನಡುವೆ ಕಥೆ ಸಾಗುತ್ತದೆ. ಚಿತ್ರದ ಕೊನೆಯಲ್ಲಿ ‘ಮುಗ್ಧತೆ’ ಗೆಲ್ಲುತ್ತದೆ. ಮುಗ್ಧ ಮನಸ್ಸಿನವರು ನೋಡಲೇಬೇಕಾದ ಸಿನಿಮಾ ಇದು. ಈ ಚಿತ್ರ ನೋಡಿದವರು ತಮ್ಮ ಮುಗ್ಧತೆಯನ್ನು ಮರಳಿ ಗಳಿಸಿಕೊಳ್ಳುವುದು ನಿಶ್ಚಿತ.

‘ರಾಮಾ ರಾಮಾ ರೇ...’ ಅಂತಹ ಹಿಟ್‌ ಚಿತ್ರದ ನಂತರ ಸ್ಟಾರ್‌ ನಟರ ಜತೆಗೆ ಚಿತ್ರ ಮಾಡುವುದು ಬಿಟ್ಟು ಇಂತಹ ಸಿನಿಮಾದತ್ತ ಹೊರಳಲು ಕಾರಣವೇನು?
ನನಗೆ ಸ್ಟಾರ್‌ ನಟರೊಟ್ಟಿಗೇ ಚಿತ್ರ ಮಾಡಬೇಕೆಂಬ ಬ್ಯಾರಿಕೇಡ್‌ ಇಲ್ಲ. ಒಳ್ಳೆಯ ವಿಷಯವಿಟ್ಟುಕೊಂಡು ಚಿತ್ರ ಮಾಡಬೇಕೆಂಬುದು ನನ್ನಾಸೆ. ‘ರಾಮಾ ರಾಮಾ ರೇ...’ ಚಿತ್ರದ ಇಮೇಜ್‌ನಿಂದ ಹೊರಬರಬೇಕೆಂಬ ಇಚ್ಛೆಯಿತ್ತು. ಫಿಲಾಸಫಿ, ಭಾವತೀವ್ರತೆಯ ಪರಿಧಿ ದಾಟಬೇಕೆಂಬ ತುಡಿತವಿತ್ತು. ಈ ಚಿತ್ರದಲ್ಲಿ ವೇದಾಂತ, ಸಿದ್ಧಾಂತ, ಫಿಲಾಸಫಿ ಇಲ್ಲ. ಯಾವುದೇ ಪ್ರೇಮ್‌ನಲ್ಲೂ ನನ್ನ ಹಿಂದಿನ ಚಿತ್ರದ ಚಹರೆ ಕಾಣಲು ಸಾಧ್ಯವಿಲ್ಲ. ನಗು ನಗುತ್ತಾ ಚಿತ್ರ ನೋಡಬಹುದು. ನನ್ನ ಮೊದಲ ಚಿತ್ರ ನೋಡಿದವರಿಗೆ ಅದೇ ತಂಡದವರು ಹೊಸ ಚಿತ್ರ ಮಾಡಿದ್ದಾರೆ ಎನಿಸುತ್ತದೆ. ಹೊಸದಾಗಿ ನೋಡಿದವರಿಗೆ ಇದು ಹೊಸ ನಿರ್ದೇಶಕನ ಸಿನಿಮಾ ಆಗಿ ಕಾಡುತ್ತದೆ.

ಈ ಚಿತ್ರದ ಕಥೆ ಹುಟ್ಟಿದ ಬಗೆಹೇಳಿ.
ಕಥೆಯ ಒಂದು ಎಳೆ ಮಾತ್ರ ಇತ್ತು. ಅದನ್ನೇ ವಿಸ್ತರಿಸಿ ದೃಶ್ಯರೂಪಕ್ಕಿಳಿದ್ದೇವೆ. ಪ್ರಸ್ತುತ ಸಮಾಜದಲ್ಲಿ ಸಾಧಕರು, ಬುದ್ಧಿವಂತರು, ಎಲ್ಲ ಸೌಲಭ್ಯ ಹೊಂದಿದವರು ಇದ್ದಾರೆ. ಆದರೆ, ಪ್ರತಿಯೊಬ್ಬರಲ್ಲೂ ಮುಗ್ಧತೆ ಕಳೆದುಹೋಗಿದೆ. ಈ ವಿಷಯವಿಟ್ಟುಕೊಂಡು ಚಿತ್ರ ಮಾಡಬೇಕೆಂಬ ಚಿಂತನೆ ಮೈದೆಳೆಯಿತು. ಮುಗ್ಧತೆ ಎಂದಾಕ್ಷಣ ಕಣ್ಮುಂದೆ ಮಕ್ಕಳು ಬರುತ್ತಾರೆ. ಆದರೆ, ಅವರಲ್ಲಿಯೂ ಮುಗ್ಧತೆ ಕಣ್ಮರೆಯಾಗಿದೆ. ಸಮೀರ ಎಂಬ ಬಾಲಕನೇ ಚಿತ್ರದ ಕೇಂದ್ರಬಿಂದು. ಆತ ಮುಗ್ಧತೆಯ ಪ್ರತಿರೂಪ. ಆತ ಪೇಟೆಗೆ ಬಂದಾಗ ಮುಗ್ಧತೆಯಿಂದ ಏನನ್ನು ಗೆಲ್ಲುತ್ತಾನೆ ಎನ್ನುವುದೇ ಕಥಾಹಂದರ.

ಇದು ಮಕ್ಕಳ ಚಿತ್ರವೇ?
ಇದು ಖಂಡಿತ ಮಕ್ಕಳ ಚಿತ್ರವಲ್ಲ. ಆದರೆ, ಮಕ್ಕಳು ನೋಡಲೇಬೇಕಾದ ಚಿತ್ರ ಇದು. ಮನುಷ್ಯನ ಸುಖ, ದುಃಖಕ್ಕೆ ಮತ್ತೊಬ್ಬ ಮನುಷ್ಯ ಮಾತ್ರವೇ ನೆರವಾಗುತ್ತಾನೆ. ಭಾವನೆಗಳ ಅಭಿವ್ಯಕ್ತಿ,‍ಪರಸ್ಪರ ವಿನಿಮಯಕ್ಕೆ ಮನುಷ್ಯ ಬೇಕೇ ಬೇಕು. ಜಾತಿ, ಆಸ್ತಿ, ಅಂತಸ್ತು ಎಲ್ಲವನ್ನೂ ಮೀರಿ ಮನುಷ್ಯಧರ್ಮ ಮುಖ್ಯ. ಇದನ್ನು ಚಿತ್ರದಲ್ಲಿ ಹೇಳಿದ್ದೇವೆ.

ಮಾಸ್ಟರ್‌ ಆರ್‌.ವಿ. ರೋಹಿತ್‌ನನ್ನು ಸಂಭಾಳಿಸಲು ತೊಡಕಾಗಲಿಲ್ಲವೇ?
ರೋಹಿತ್‌ನದು ಪಾಂಡವಪುರ. ಆತ ವಯಸ್ಸಿನಲ್ಲಿ ಚಿಕ್ಕವ. ಆದರೆ, ಮಾನಸಿಕವಾಗಿ ಸಾಕಷ್ಟು ಬೆಳೆದಿದ್ದಾನೆ. ಅವನಿಗೆ ಅಸಾಧಾರಣ ಗ್ರಹಿಕೆಯ ಶಕ್ತಿಯಿದೆ. ಆಡಿಶನ್‌ನಲ್ಲಿ ಆತ ನಮಗೆ ಸಿಕ್ಕಿದ್ದು ನಮ್ಮ ತಂಡದ ಅದೃಷ್ಟ. ಅವನನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ನನಗೂ ಮೊದಲಿಗೆ ಭಯವಿತ್ತು. ನಾನು ಹೇಳಿಕೊಟ್ಟ ನಟನೆಯನ್ನು ಆತ ಮಾಡುತ್ತಾನೆಯೇ ಎಂಬ ಅಳುಕು ಕಾಡಿದ್ದು ನಿಜ. ಅಪ್ಪ, ಅಮ್ಮನನ್ನು ಬಿಟ್ಟು ಮೂರು ತಿಂಗಳ ಕಾಲ ಚಿತ್ರೀಕರಣದಲ್ಲಿ ನಮ್ಮೊಂದಿಗಿದ್ದ. ಆತನ ಇಚ್ಛಾಶಕ್ತಿ ಅಸಾಧಾರಣ. ಅದು ಅವನ ಕುಟುಂಬದ ಬಳುವಳಿಯಿಂದ ಬಂದಿರಬಹುದು. ಆತನಿಗೆ ರಂಗಭೂಮಿಯ ನಂಟಿಲ್ಲ. ಈ ಮೊದಲು ನಟನೆ ಬಗ್ಗೆಯೂ ಗೊತ್ತಿಲ್ಲ. ಸಾಕಷ್ಟು ತರಬೇತಿ ನೀಡಿದೆವು. ನಮ್ಮ ನಿರೀಕ್ಷೆಗೂ ಮೀರಿ ನಟಿಸಿದ್ದಾನೆ.

‘ರಾಮಾ ರಾಮಾ ರೇ...’ ಚಿತ್ರದ ತಂತ್ರಜ್ಞರಷ್ಟೇ ಈ ಚಿತ್ರದಲ್ಲಿ ಕೆಲಸ ಮಾಡಿರುವ ಗುಟ್ಟೇನು?
ನನ್ನ ಹಿಂದಿನ ಚಿತ್ರದ ಕಲಾವಿದರು ಈ ಚಿತ್ರದಲ್ಲಿಲ್ಲ. ಆ ಸಿನಿಮಾದ ಕಲಾವಿದರನ್ನು ನಟಿಸಿದ್ದರೆ ಡೈಲಾಗ್‌ ಅಥವಾ ಅವರ ಪ್ರವೇಶದ ವೇಳೆ ‘ರಾಮಾ ರಾಮಾ ರೇ’ ಚಿತ್ರದ ಛಾಯೆ ಕಾಣುತ್ತಿತ್ತು. ಇದಕ್ಕೆ ಆಸ್ಪದ ನೀಡಬಾರದೆಂದು ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ರಾಯಚೂರು, ಮಂಗಳೂರು ರಂಗಭೂಮಿ ಮತ್ತು ನೀನಾಸಮ್‌ ಕಲಾವಿದರು ಇದ್ದಾರೆ. ಚಿತ್ರದಲ್ಲಿ ಹತ್ತು ಪಾತ್ರಗಳಿವೆ. ಒಂದು ಪಾತ್ರದ ಮೇಲೆ ಕಥೆ ನಿಲ್ಲುವುದಿಲ್ಲ. ಗಿರಕಿ ಹೊಡೆಯುತ್ತಲೇ ಇರುತ್ತದೆ. ಹೊಸ ಕಲಾವಿದರಿದ್ದರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಬಹುದು ಎಂಬ ಕಾರಣವೂ ಇದೆ.

ಚಿತ್ರೀಕರಣದ ಅನುಭವದ ಬಗ್ಗೆ ಹೇಳಿ.
ಮಂಗಳೂರಿನಲ್ಲಿ ಮೂವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಯಿತು. ಹೊಸಬರೊಟ್ಟಿಗೆ ಕೆಲಸ ಮಾಡುವುದು ಖುಷಿ ಕೊಡುತ್ತದೆ. ಏಕೆಂದರೆ ಅವರ ನಟನೆಯಲ್ಲಿ ಒಂದು ನಿರ್ದಿಷ್ಟ ಪ್ರೇಮ್‌ ಇರುವುದಿಲ್ಲ. ನಾವು ಬೇಕೆಂದಾಗ ಅವರನ್ನು ಅಳಿಸಬಹುದು; ಮತ್ತೊಮ್ಮೆ ನಗಿಸಬಹುದು. ಅವರಿಂದ ಹೊಸದನ್ನು ಹೆಕ್ಕಿ ಪ್ರೇಕ್ಷಕರಿಗೂ ಉಣಬಡಿಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT